ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ ಪಂದ್ಯ: ಮೊದಲ ಬಾರಿಗೆ ನೇರ ಪ್ರಸಾರಕ್ಕೆ ವಾಣಿಜ್ಯ ನಗರಿ ಸಜ್ಜು

ಹುಬ್ಬಳ್ಳಿಗೆ ಉತ್ತರ ಪ್ರದೇಶ ತಂಡ
Last Updated 14 ಡಿಸೆಂಬರ್ 2019, 10:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಮತ್ತು ಉತ್ತರ ಪ್ರದೇಶ ತಂಡಗಳ ನಡುವೆ ಡಿ. 17ರಿಂದ ನಾಲ್ಕು ದಿನ ಇಲ್ಲಿನ ರಾಜನಗರದ ಕ್ರೀಡಾಂಗಣದಲ್ಲಿ ರಣಜಿ ಪಂದ್ಯ ನಡೆಯಲಿದ್ದು, ಮೊದಲ ಬಾರಿಗೆ ವಾಣಿಜ್ಯ ನಗರಿಯಿಂದ ರಣಜಿ ಪಂದ್ಯವೊಂದು ನೇರ ಪ್ರಸಾರವಾಗಲಿದೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯು (ಕೆಎಸ್‌ಸಿಎ) ಇದಕ್ಕೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ. ಹುಬ್ಬಳ್ಳಿಯಲ್ಲಿ 1971–72ರಿಂದಲೇ ರಣಜಿ ಪಂದ್ಯ ಆಯೋಜನೆ ಮಾಡಲಾಗುತ್ತಿದೆ. ನಗರದಲ್ಲಿ ಇದುವರೆಗೆ ಎಂಟು ರಣಜಿ ಪಂದ್ಯಗಳು ನಡೆದರೂ ಯಾವ ಪಂದ್ಯವನ್ನೂ ನೇರ ಪ್ರಸಾರ ಮಾಡಿರಲಿಲ್ಲ. ಮೊದಲ ಬಾರಿಗೆ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ಈ ಪಂದ್ಯವನ್ನು ನೇರ ಪ್ರಸಾರ ಮಾಡಲಿದೆ. ಕೆಪಿಎಲ್‌ ಪಂದ್ಯಗಳಷ್ಟೇ ನೇರ ಪ್ರಸಾರವಾಗಿದ್ದವು.

ನೇರ ಪ್ರಸಾರದ ಸೌಲಭ್ಯಗಳನ್ನು ಅಳವಡಿಸುವ ಕಾರ್ಯ ವಾರದ ಹಿಂದಿನಿಂದಲೇ ಶುರುವಾಗಿದೆ. ನಗರಕ್ಕೆ ಬಂದಿರುವ ಬಿಸಿಸಿಐನ ಪಿಚ್‌ ಕ್ಯೂರೇಟರ್‌ ಅಶೋಕ ವರ್ಮಾ ಮತ್ತು ಕೆಎಸ್‌ಸಿಎ ಕ್ಯೂರೇಟರ್‌ ರಮೇಶ ಅವರು ಪಿಚ್‌ ಸಜ್ಜುಗೊಳಿಸುವ ಕೆಲಸ ಮಾಡುತ್ತಿದ್ದಾರೆ.‌

ದಿಂಡಿಗಲ್‌ನಲ್ಲಿ ಗುರುವಾರ ಮುಕ್ತಾಯವಾದ ರಣಜಿ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ಎದುರು 26 ರನ್‌ಗಳ ಗೆಲುವು ಪಡೆದಿದೆ. ಈ ಬಾರಿಯ ಟೂರ್ನಿಯಲ್ಲಿ ತವರಿನಲ್ಲಿ ಮೊದಲ ಪಂದ್ಯವಾಡಲು ರಾಜ್ಯ ತಂಡದ ಆಟಗಾರರು ಭಾನುವಾರ ನಗರಕ್ಕೆ ಬರಲಿದ್ದಾರೆ.

ಉತ್ತರ ಪ್ರದೇಶ ತಂಡ ಮೀರಟ್‌ನಲ್ಲಿ ಆಡಿದ ತನ್ನ ಹಿಂದಿನ ಪಂದ್ಯದಲ್ಲಿ ರೈಲ್ವೆ ತಂಡದ ಎದುರು ಡ್ರಾ ಮಾಡಿಕೊಂಡಿತ್ತು. ಈ ತಂಡದ ಆಟಗಾರರು ಶನಿವಾರ ಹೋಟೆಲ್‌ನಲ್ಲಿ ವಿಶ್ರಾಂತಿ ಪಡೆದು ಭಾನುವಾರ ಅಭ್ಯಾಸ ಆರಂಭಿಸಲಿದ್ದಾರೆ.

ಕೆಎಸ್‌ಸಿಎ ಕಾರ್ಯದರ್ಶಿ ಸಂತೋಷ ಮೆನನ್‌ ಮಾತನಾಡಿ ‘ಇಷ್ಟು ವರ್ಷ ಬೆಂಗಳೂರಿನಿಂದ ಮಾತ್ರ ರಣಜಿ ಪಂದ್ಯಗಳನ್ನು ನೇರ ಪ್ರಸಾರ ಮಾಡಲಾಗುತ್ತಿತ್ತು. ಬೆಂಗಳೂರಿನ ಹೊರಗಡೆಯೂ ಪಂದ್ಯಗಳು ನೇರ ಪ್ರಸಾರವಾಗಬೇಕು ಎನ್ನುವುದು ನಮ್ಮ ಆಸೆಯಾಗಿತ್ತು. ಇದಕ್ಕೆ ಬಿಸಿಸಿಐ ಹಾಗೂ ಸ್ಟಾರ್‌ ಸ್ಪೋರ್ಟ್ಸ್‌ ವಾಹಿನಿ ಸ್ಪಂದಿಸಿವೆ. ಈ ಪಂದ್ಯ ನೇರಪ್ರಸಾರವಾಗಲಿದೆ’ ಎಂದರು.

1500 ಆಸನ: ಪಂದ್ಯ ವೀಕ್ಷಿಸಲು ಬರುವವರಿಗೆ 1,500 ಆಸನ ವ್ಯವಸ್ಥೆ ಮಾಡಲಾಗಿದ್ದು, ಈ ಕೆಲಸಗಳು ಕೂಡ ಅಂತಿಮ ಘಟ್ಟ ತಲುಪಿವೆ. ಪಂದ್ಯ ನೋಡಲು ಕ್ರೀಡಾಂಗಣದ ಗೇಟ್ ಸಂಖ್ಯೆ ಮೂರರಿಂದ ಉಚಿತ ಪ್ರವೇಶವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT