ಸೋಮವಾರ, 15 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 3rd Test | ಭಾರತದ ಆತಂಕ ನಿವಾರಿಸಿದ ಜೊತೆಯಾಟ

ಮೂರನೇ ಟೆಸ್ಟ್: ಮಾರ್ಕ್‌ವುಡ್‌ಗೆ ಮೂರು ವಿಕೆಟ್; ತವರಿನಂಗಳದಲ್ಲಿ ಜಡೇಜ ಶತಕ, ರೋಹಿತ್ ಮಿಂಚು
Published 16 ಫೆಬ್ರುವರಿ 2024, 0:10 IST
Last Updated 16 ಫೆಬ್ರುವರಿ 2024, 0:10 IST
ಅಕ್ಷರ ಗಾತ್ರ

ರಾಜ್‌ಕೋಟ್: ಭಾರತ ತಂಡವು ಗುರುವಾರ ಇಲ್ಲಿ ಆರಂಭವಾದ ಟೆಸ್ಟ್ ಪಂದ್ಯದಲ್ಲಿ ಕಠಿಣ ಸವಾಲನ್ನು ಮೈಮೇಲೆಳೆದುಕೊಂಡಿತು. ನಂತರ ಅದರಿಂದ ಪಾರಾಯಿತು.

ನಿರಂಜನ್ ಶಾ ಕ್ರೀಡಾಂಗಣದ ಕಾಂಕ್ರಿಟ್‌ ಸ್ಲ್ಯಾಬ್‌ನಂತಹ ಪಿಚ್‌ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆತಿಥೇಯ ತಂಡವು 8.5 ಓವರ್‌ಗಳಲ್ಲಿ 33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತು.  ಅಲ್ಪಮೊತ್ತಕ್ಕೆ ಕುಸಿಯುವ ಆತಂಕ ಎದುರಿಸಿತು. ಆದರೆ ದಿನದಾಟದ ಮುಕ್ತಾಯಕ್ಕೆ ತಂಡವು 86 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 326 ರನ್ ಗಳಿಸಲು ಮೂವರು ಬ್ಯಾಟರ್‌ಗಳ ಆಟ ಕಾರಣವಾಯಿತು.

ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಮತ್ತು ರಜತ್ ಪಾಟೀದಾರ್ ಅವರ ನಿರ್ಗಮನವನ್ನು ಇನ್ನೊಂದು ಬದಿಯಲ್ಲಿ ನಿಂತು ನೋಡಿದ ನಾಯಕ ರೋಹಿತ್ ಶರ್ಮಾ ಅವರನ್ನು ಸೇರಿಕೊಂಡ ರವೀಂದ್ರ ಜಡೇಜ (ಬ್ಯಾಟಿಂಗ್ 110) ತಂಡವನ್ನು ಆತಂಕದಿಂದ ಪಾರು ಮಾಡಿದರು. ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 204 ರನ್ ಗಳಿಸಿದರು.

36 ವರ್ಷದ ರೋಹಿತ್ ಅವರು ಟೆಸ್ಟ್‌ ಕ್ರಿಕೆಟ್‌ನಲ್ಲಿ ಶತಕ ಹೊಡೆದ ಭಾರತದ ಅತ್ಯಂತ ಹಿರಿಯ ವಯಸ್ಸಿನ ನಾಯಕನಾದರು. 13ನೇ ಓವರ್‌ನಲ್ಲಿ ರೂಟ್ ಕೈಚೆಲ್ಲಿದ ಕ್ಯಾಚ್‌ನಿಂದ ಸಿಕ್ಕ ಅವಕಾಶವನ್ನು ರೋಹಿತ್ ಅಚ್ಚುಕಟ್ಟಾಗಿ ಬಳಸಿಕೊಂಡರು. ಇದು ಅವರ ವೃತ್ತಿಜೀವನದ 11ನೇ ಶತಕ.

ಜಡೇಜ ಅವರು ಸುಮಾರು ಎರಡು ವರ್ಷಗಳ ನಂತರ ಶತಕ ದಾಖಲಿಸಿದರು.  ಜಡೇಜ ತಮ್ಮ ನೈಜ ಶೈಲಿಯನ್ನು ಬದಲಿಸಿ ತಾಳ್ಮೆಯಿಂದ ಬ್ಯಾಟಿಂಗ್ ಮಾಡಿದರು. ದೊಡ್ಡ ಹೊಡೆತಗಳಿಗಿಂತ ರಕ್ಷಣಾತ್ಮಕ ಆಟಕ್ಕೆ ಒತ್ತು ಕೊಟ್ಟರು. ಬಲಗೈ ಬ್ಯಾಟರ್ ರೋಹಿತ್ ಮತ್ತು ಎಡಗೈ ಆಟಗಾರ ಜಡೇಜ ಅವರ ಹೊಂದಾಣಿಕೆಯ ಅಟವು ಬೌಲರ್‌ಗಳಿಗೆ ಕಠಿಣ ಸವಾಲಾಯಿತು.

ಇವರಿಬ್ಬರಷ್ಟೇ ಅಲ್ಲ. ತಮ್ಮ ವೃತ್ತಿಜೀವನದ ಚೊಚ್ಚಲ ಟೆಸ್ಟ್ ಪಂದ್ಯವಾಡಿದ ಸರ್ಫರಾಜ್ ಖಾನ್ ಭರ್ಜರಿ ಬ್ಯಾಟಿಂಗ್ ಮಾಡಿದರು. ದಿಗ್ಗಜ ಅನಿಲ್ ಕುಂಬ್ಳೆ ಅವರಿಂದ ಕ್ಯಾಪ್ ಪಡೆದ ಸಂತಸದಲ್ಲಿ ಚೆಂದದ ಬ್ಯಾಟಿಂಗ್ ಮಾಡಿದರು. ರೋಹಿತ್ ಔಟಾದ ನಂತರ ಕ್ರೀಸ್‌ಗೆ ಬಂದ ಸರ್ಫರಾಜ್  66 ಎಸೆತಗಳಲ್ಲಿ 62 ರನ್ ಗಳಿಸಿದರು. 

99 ರನ್ ಗಳಿಸಿದ್ದ ಜಡೇಜ, ಮಾರ್ಕ್ ವುಡ್ ಎಸೆತವನ್ನು ಮಿಡ್‌ ಆನ್‌ನತ್ತ ತಳ್ಳಿದರು. ಒಂದು ರನ್‌ಗಾಗಿ ಎರಡು ಹೆಜ್ಜೆ ಮುಂದೆ ಬಂದು ಮತ್ತೆ ಕ್ರೀಸ್‌ಗೆ ಮರಳಿದರು. ಆದರೆ ಚೆಂಡನ್ನು ಮಾರ್ಕ್ ಫೀಲ್ಡಿಂಗ್ ಮಾಡಿದ್ದನ್ನು ಗಮನಿಸದ ಸರ್ಫರಾಜ್ ನಾನ್‌ಸ್ಟ್ರೈಕರ್ ತುದಿಯಿಂದ ದೂರ ಬಂದಿದ್ದರು. ಅವರು ಮರಳುವಷ್ಟರಲ್ಲಿ ವುಡ್ ನೇರ ಥ್ರೋ ಮಾಡಿ ಸ್ಟಂಪ್ ಎಗರಿಸಿದರು.  ದೇಶಿ ಕ್ರಿಕೆಟ್‌ನ ‘ರನ್‌ ಯಂತ್ರ‘ ಸರ್ಫರಾಜ್ ಅವರ ಮೊದಲ ಟೆಸ್ಟ್‌ ಇನಿಂಗ್ಸ್‌ಗೆ ತೆರೆಬಿತ್ತು. ಇನ್ನೊಂದು ತುದಿಯಲ್ಲಿ ಜಡೇಜ ತಲೆತಗ್ಗಿಸಿದರು.

ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಜನರೂ ಮೌನವಾದರು. ಡ್ರೆಸ್ಸಿಂಗ್‌ ರೂಮ್‌ನಲ್ಲಿದ್ದವರು ಚಪ್ಪಾಳೆ ತಟ್ಟಿ, ಸರ್ಫರಾಜ್ ಬೆನ್ನುತಟ್ಟಿ ಸಂತೈಸಿದರು.

ರಾಜ್‌ಕೋಟ್‌ ಗುರುವಾರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಅವರು ತಮ್ಮ ಅಮ್ಮ ಮತ್ತು ಅಪ್ಪನನ್ನು ಅಪ್ಪಿಕೊಂಡರು  –ಪಿಟಿಐ ಚಿತ್ರ
ರಾಜ್‌ಕೋಟ್‌ ಗುರುವಾರ ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಸರ್ಫರಾಜ್ ಖಾನ್ ಅವರು ತಮ್ಮ ಅಮ್ಮ ಮತ್ತು ಅಪ್ಪನನ್ನು ಅಪ್ಪಿಕೊಂಡರು  –ಪಿಟಿಐ ಚಿತ್ರ

33 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದ ಭಾರತ ಸರ್ಫರಾಜ್ ಖಾನ್, ಧ್ರುವ ಜುರೇಲ್ ಪದಾರ್ಪಣೆ ಸೊನ್ನೆ ಸುತ್ತಿದ ಬ್ಯಾಟರ್ ಶುಭಮನ್ ಗಿಲ್

ಸರ್ಫರಾಜ್ ಖಾನ್ ರನ್‌ಔಟ್ ಆಗಲು ನನ್ನ ತಪ್ಪು ಕರೆಯೇ ಕಾರಣವಾಗಿದ್ದಕ್ಕೆ ವಿಷಾದಿಸುತ್ತೇನೆ. ತುಂಬಾ ಚೆನ್ನಾಗಿ ಆಡಿದ್ದಾರೆ.

–ರವೀಂದ್ರ ಜಡೆಜ ಭಾರತದ ಬ್ಯಾಟರ್

ಸರ್ಫರಾಜ್ 62 ಜಡೇಜ 15!

ರೋಹಿತ್ ಶರ್ಮಾ ಔಟಾದ ಮೇಲೆ ಸರ್ಫರಾಜ್ ಖಾನ್ ಕ್ರೀಸ್‌ಗೆ ಬಂದರು. ಆಗ ಇನ್ನೊಂದು ಬದಿಯಲ್ಲಿ ಇದ್ದ ರವೀಂದ್ರ ಜಡೆಜ 84 ರನ್‌ ಗಳಿಸಿದ್ದರು.  ಇವರಿಬ್ಬರ ಜೊತೆಯಾಟದಲ್ಲಿ 77 ರನ್‌ ಸೇರಿಸಿದರು. ಈ ಜೊತೆಯಾಟದಲ್ಲಿ ಜಡೇಜ ಗಳಿಸಿದ್ದು 15 ರನ್ ಮಾತ್ರ. ಚೊಚ್ಚಲ ಅರ್ಧಶತಕ ಗಳಿಸಿದ ಸರ್ಫರಾಜ್ 62 ರನ್‌ ಗಳಿಸಿ ಔಟಾದಾಗ ಜಡೇಜ 99 ರನ್‌ ಗಳಿಸಿದ್ದರು.  ಪದಾರ್ಪಣೆಯ ಇನಿಂಗ್ಸ್ ಆಡಿದ ಸರ್ಫರಾಜ್ ಅವರು ಉತ್ತಮ ಹೊಡೆತಗಳನ್ನು ಪ್ರಯೋಗಿಸುವುದನ್ನು ನೋಡಿದ ಅನುಭವಿ ಜಡೇಜ ತಾವು ಹೆಚ್ಚು ಎಸೆತಗಳನ್ನು ಎದುರಿಸದೇ ಮುಂಬೈ ಆಟಗಾರನಿಗೆ ಬಿಟ್ಟಕೊಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT