ಆರ್‌ಸಿಬಿಗೆ ಸಂಜಯ್ ಬಾಂಗರ್ ಮುಖ್ಯ ಕೋಚ್

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡಕ್ಕೆ ಸಂಜಯ್ ಬಾಂಗರ್ ಅವರನ್ನು ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿದೆ.
14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಕ್ರಿಕೆಟ್ ಟೂರ್ನಿಯ ಎರಡನೇ ಹಂತದಲ್ಲಿ ತಂಡದ ನಿರ್ದೇಶಕ ಮೈಕ್ ಹೇಸನ್ ಹಂಗಾಮಿ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಹೇಸನ್ ಅವರು ನಿರ್ದೇಶಕರಾಗಿ ಮುಂದುವರಿಯುವರು.
’ನವಪ್ರತಿಭೆಗಳನ್ನು ಪ್ರೋತ್ಸಾಹಿಸಿ ಬೆಳೆಸಲು ನಮ್ಮ ಫ್ರ್ಯಾಂಚೈಸಿಯು ಸದಾ ಬದ್ಧವಾಗಿದೆ. ಸಂಜಯ್ ಅವರು ಅನುಭವಿ ಮತ್ತು ಚಾಣಾಕ್ಷ ಕೋಚ್ ಆಗಿದ್ದಾರೆ. ಅವರು ಭಾರತ ತಂಡದ ಬ್ಯಾಟಿಂಗ್ ಕೋಚ್ ಆಗಿ ಉಪಯುಕ್ತ ಕಾಣಿಕೆ ನೀಡಿದವರು. ಹೋದ ಋತುವಿನಲ್ಲಿ ನಮ್ಮ ತಂಡಕ್ಕೂ ಅವರು ಬ್ಯಾಟಿಂಗ್ ಸಲಹೆಗಾರರಾಗಿದ್ದರು. ಅವರ ನೇಮಕದಿಂದ ತಂಡವು ಮತ್ತಷ್ಟು ಬಲಿಷ್ಠವಾಗಿ ಬೆಳೆಯಲಿದೆ‘ ಎಂದು ಫ್ರ್ಯಾಂಚೈಸಿಯ ಮುಖ್ಯಸ್ಥ ಪ್ರಥಮೇಶ್ ಮಿಶ್ರಾ ಹೇಳಿದ್ದಾರೆ.
ಆರ್‌ಸಿಬಿ ತಂಡವು 2008ರಲ್ಲಿ ಐಪಿಎಲ್ ಆರಂಭವಾದಾಗಿನಿಂದಲೂ ಇದೆ. ತಾರಾವರ್ಚಸ್ಸಿನ ಹಲವು ಆಟಗಾರರು ಈ ತಂಡದಲ್ಲಿ ಆಡಿದ್ದಾರೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಈ ತಂಡವನ್ನು ಕಳೆದ ಎಂಟು ವರ್ಷಗಳಿಂದ ಮುನ್ನಡೆಸಿದ್ದಾರೆ. ಮುಂದಿನ ಋತುವಿನಿಂದ ನಾಯಕರಾಗಿರುವುದಿಲ್ಲ ಆದರೆ ಆಟಗಾರನಾಗಿ ಮುಂದುವರಿಯುವುದಾಗಿ ಕೊಹ್ಲಿ ಈಚೆಗೆ ಘೋಷಿಸಿದ್ದರು.
’ಈ ಸ್ಥಾನ ಲಭಿಸಿರುವು ದೊಡ್ಡ ಗೌರವ ಮತ್ತು ಉತ್ತಮ ಅವಕಾಶವಾಗಿದೆ. ಅಮೋಘ ಪ್ರತಿಭಾನ್ವಿತ ಆಟಗಾರರು ಈ ತಂಡದಲ್ಲಿದ್ದಾರೆ. ಈ ತಂಡವನ್ನು ಇನ್ನಷ್ಟು ಉನ್ನತ ಸಾಧನೆಯತ್ತ ಕೊಂಡೊಯ್ಯಲು ಉತ್ಸುಕನಾಗಿದ್ದೇನೆ‘ ಎಂದು ಸಂಜಯ್ ಹೇಳಿದ್ದಾರೆ.
2022 ಐಪಿಎಲ್ ಟೂರ್ನಿಗಾಗಿ ಮೇಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಅದರಲ್ಲಿ ತಂಡವನ್ನು ಸದೃಢಗೊಳಿಸುವಂತಹ ಆಟಗಾರರನ್ನು ಆಯ್ಕೆ ಮಾಡುವಲ್ಲಿ ನಿರ್ದೇಶಕ ಹೇಸನ್ ಮತ್ತು ಸಂಜಯ್ ಅವರ ಪಾತ್ರ ಮಹತ್ವದ್ದಾಗಿದೆ. ಸಂಜಯ್ ಮುಂದಿರುವ ಮೊದಲ ಸವಾಲು ಕೂಡ ಇದಾಗಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.