ನವದೆಹಲಿ: ದಿಗ್ಗಜ ಸ್ಪಿನ್ ಬೌಲರ್ ಬಿಷನ್ ಸಿಂಗ್ ಬೇಡಿ ದಶಕಗಳ ಹಿಂದೆ ತಮ್ಮ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಸಿಂಹಸ್ವಪ್ನರಾಗಿದ್ದರು.
ಆದರೆ ಅದೇ ಬೇಡಿಯವರು ಪಾಕಿಸ್ತಾನದ ಆಟಗಾರರಿಗೆ ತಮ್ಮ ಕೈಯಾರೆ ರುಚಿಕಟ್ಟಾದ ಅಡುಗೆ ಮಾಡಿ ಊಟಕ್ಕೆ ಬಡಿಸಿ ಭೇಷ್ ಅನಿಸಿಕೊಂಡಿದ್ದು ಬಹಳ ಜನರಿಗೆ ಗೊತ್ತಿಲ್ಲ.
ಶನಿವಾರ 75ನೇ ವಸಂತಕ್ಕೆ ಕಾಲಿರಿಸಿದ ಬೇಡಿಯವರ ಕುರಿತು ಬಿಡುಗಡೆಯಾದ ‘ದ ಸರ್ದಾರ್ ಆಫ್ ಸ್ಪಿನ್; ಎ ಸೆಲಿಬ್ರೇಷನ್ ಆಫ್ ದ ಆರ್ಟ್ ಆಫ್ ಬಿಷನ್‌ಸಿಂಗ್ ಬೇಡಿ’ ವಿಶೇಷ ಪುಸ್ತಕದಲ್ಲಿ ಈ ಸ್ವಾರಸ್ಯಕರ ಘಟನೆಯ ಕಥೆ ಇದೆ.
ಅಡುಗೆಯ ಕಥೆಯನ್ನು ನೆನಪಿಸಿಕೊಂಡಿರುವ ಬೇಡಿಯವರ ಸಹ ಆಟಗಾರ ವೆಂಕಟ್ ಸುಂದರಂ, ‘ನಾನು ಆಸ್ಟ್ರೇಲಿಯಾದ ಟಾಸ್ಮೆನಿಯಾದಲ್ಲಿ ಇದ್ದ ದಿನ ಅದು. ಮಧ್ಯಾಹ್ನ ಫೋನ್ ರಿಂಗಾಯಿತು. ಕೈಗೆತ್ತಿಕೊಂಡ ನನ್ನ ಕುಶಲೋಪರಿ ವಿಚಾರಿಸಿದ ಬೇಡಿ, ಲಾನ್ಸೆಸೆಟನ್‌ನಲ್ಲಿರುವ ಗೆಳೆಯನ ಮನೆಗೆ ಬನ್ನಿ. ಪಾಕಿಸ್ತಾನ ತಂಡದ ಆಟಗಾರರೂ ಸೇರಿದಂತೆ 25 ಜನರಿಗೆ ಔತಣ ನೀಡುತ್ತಿದ್ದೇನೆ. ಪಾತ್ರೆ, ಅಡುಗೆ ಸಾಮಗ್ರಿಗಳು ಗೆಳೆಯನ ಮನೆಯಲ್ಲಿವೆ. ಅಡುಗೆ ನನ್ನದೇ ಎಂದರು. ಬಿಷನ್ ಅಡುಗೆ ರುಚಿಯನ್ನು ಹಲವು ಬಾರಿ ಸವಿದ ನನಗೆ ಅಚ್ಚರಿಯೇನಾಗಲಿಲ್ಲ. ಅವರು ಹೇಳಿದ ಸ್ಥಳಕ್ಕೆ ತೆರಳಿದೆ. ನಂತರದ್ದು ಅವಿಸ್ಮರಣೀಯ ಅನುಭವ’ ಎಂದರು.
ಪಾಕಿಸ್ತಾನ ತಂಡವು ಟಾಸ್ಮೆನಿಯಾ ವಿರುದ್ಧ ಲಾನ್ಸೆಸ್ಟನ್‌ನಲ್ಲಿ ಆಡಲು ಪ್ರವಾಸ ಮಾಡಿತ್ತು.
‘ಆ ಕರೆ ಮಾಡಿದಾಗ ಬಿಷನ್ ನಮ್ಮ ಸ್ಥಳದಿಂದ 70 ಕಿ.ಮೀ ದೂರದಲ್ಲಿರುವುದಾಗಿ ತಿಳಿಸಿದ್ದರು. ಅವರ ಗೆಳೆಯನ ಮನೆಯಲ್ಲಿ ಸೇರಿಕೊಂಡಿದ್ದೇವು. ಅಲ್ಲಿ ಮೂರು ಕುಟುಂಬಗಳಿದ್ದವು. ಸಂಜೆ ಅಡುಗೆ ಕಾರ್ಯ ನಡೆಯಿತು. ಪಾತ್ರೆ ತೊಳೆಯುವ, ಹುರಿಯುವ, ಕರಿಯುವ, ತರಕಾರಿಗಳನ್ನು ಕತ್ತರಿಸುವ ಮತ್ತು ಅಡುಗೆ ಮಾಡುವ ಸದ್ದು ಸಡಗರ ತುಂಬಿಹೋಯಿತು. ಲಭ್ಯವಿದ್ದ ಪಾತ್ರೆಗಳಲ್ಲಿಯೇ 25 ಜನರಿಗೆ ಒಮ್ಮೆಲೆ ಅಡುಗೆ ತಯಾರು ಮಾಡುವುದು ಸಾಧ್ಯವಿರಲಿಲ್ಲ. ಹೀಗಾಗಿ ಒಂದೇ ತಿನಿಸನ್ನು ಎರಡ–ಮೂರು ಪ್ರಮಾಣಗಳಲ್ಲಿ ಪ್ರತ್ಯೇಕವಾಗಿ ಮಾಡಬೇಕಾಯಿತು’ ಎಂದು ನೆನಪಿಸಿಕೊಂಡಿದ್ದಾರೆ.
‘ಮುಸ್ಸಂಜೆ 7ರ ಸುಮಾರಿಗೆ ಅಡುಗೆ ಮುಗಿದಿತ್ತು. ಪಾನಗೋಷ್ಠಿ ಶುರುವಾಯಿತು. ಪಾಕಿಸ್ತಾನದ ದಿಗ್ಗಜ ಆಟಗಾರರಾದ ಜಹೀರ್ ಅಬ್ಬಾಸ್, ಜಾವೇದ್ ಮಿಯಾಂದಾದ್, ಮುದಸ್ಸರ್ ನಜರ್, ಶಫಾಕತ್ ರಾಣಾ ಮತ್ತು ಇಕ್ಬಾಲ್ ಖಾಸೀಂ ಅವರು ಅಲ್ಲಿದ್ದರು. ರಂಗೇರಿದ ರಾತ್ರಿಯದು. ಹಲವಾರು ಕಥೆಗಳು, ಹಾಸ್ಯಚಟಾಕಿಗಳು, ಮಾತುಗಳು ಮುದ ನೀಡಿದ್ದವು. ಎಲ್ಲಕ್ಕಿಂತ ಹೆಚ್ಚಾಗಿ ಬಿಷನ್ ಆತಿಥ್ಯದ ಅಪ್ಯಾಯತೆ ಎಲ್ಲರ ಮನಗೆದ್ದಿತ್ತು’ ಎಂದು ಸುಂದರಂ ನೆನಪಿಸಿಕೊಂಡಿದ್ದಾರೆ.
ಭಾರತ ತಂಡದ ಮಾಜಿ ನಾಯಕ ಬೇಡಿ ಕುರಿತ ಈ ಪುಸ್ತಕಕ್ಕೆ ದಿಗ್ಗಜ ಕಪಿಲ್ ದೇವ್ ಮುನ್ನುಡಿ ಬರೆದಿದ್ದಾರೆ. ಸುನೀಲ್ ಗಾವಸ್ಕರ್, ಎ.ಎ.ಎಸ್. ಪ್ರಸನ್ನ, ಫಾರೂಕ್ ಎಂಜಿನಿಯರ್, ಬಿ.ಎಸ್. ಚಂದ್ರಶೇಖರ್, ಸಚಿನ್ ತೆಂಡೂಲ್ಕರ್, ವೆಂಕಟ ಸುಂದರಂ, ರಾಮಚಂದ್ರ ಗುಹಾ, ಗ್ರೇಗ್ ಚಾಪೆಲ್ ಮತ್ತು ನೇಹಾ ಬೇಡಿ (ಬಿಷನ್ ಸಿಂಗ್ ಅವರ ಮಗಳು) ಸೇರಿದಂತೆ ಬಹಳಷ್ಟು ದಿಗ್ಗಜರು ಸಂದೇಶಗಳನ್ನು ಬರೆದಿದ್ದಾರೆ.
ಈ ಪುಸ್ತಕವನ್ನು ರೊಲಿ ಬುಕ್ಸ್ ಪ್ರಕಟಿಸಿದೆ. ಸಚಿನ್ ಬಜಾಜ್ ಸಂಪಾದಿಸಿದ್ದಾರೆ.
ಕರ್ನಾಟಕದ ಕ್ರಿಕೆಟ್ ಅಂಕಿ ಸಂಖ್ಯೆ ಸಂಗ್ರಹಕಾರ ಎಚ್. ಆರ್. ಗೋಪಾಲಕೃಷ್ಣ ಈ ಕೃತಿಗೆ ಮಾಹಿತಿಗಳನ್ನು ಒದಗಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.