ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ದಿ ಹಂಡ್ರೆಡ್’ ಮೂಲಕ ಬಿಗ್‌ಬ್ಯಾಷ್‌ಗೆ ಶಫಾಲಿ ವರ್ಮಾ

Last Updated 10 ಮೇ 2021, 11:13 IST
ಅಕ್ಷರ ಗಾತ್ರ

ನವದೆಹಲಿ: ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಫೋಟಕ ಶೈಲಿಯ ಬ್ಯಾಟರ್ ಶಫಾಲಿ ವರ್ಮಾ ಅವರು ನೂರು ಎಸೆತಗಳ ಪಂದ್ಯದ ಟೂರ್ನಿ ‘ದಿ ಹಂಡ್ರೆಡ್‌’ನ ಉದ್ಘಾಟನಾ ಆವೃತ್ತಿಯಲ್ಲಿ ಆಡಲು ಸಜ್ಜಾಗಿದ್ದಾರೆ. ಬರ್ಮಿಂಗ್‌ಹ್ಯಾಂ ಫೀನಿಕ್ಸ್ ತಂಡದ ಪರವಾಗಿ ಕಣಕ್ಕೆ ಇಳಿಯಲಿರುವ ಅವರು ಆ ಮೂಲಕ ಮಹಿಳೆಯರ ಬಿಗ್ ಬ್ಯಾಷ್ ಟೂರ್ನಿಯ ಕಡೆಗೂ ದೃಷ್ಟಿ ನೆಟ್ಟಿದ್ದಾರೆ.

17 ವರ್ಷದ ಶಫಾಲಿ ಸದ್ಯ ಐಸಿಸಿ ಮಹಿಳೆಯರ ಟಿ20 ಕ್ರಿಕೆಟ್ ರ‍್ಯಾಂಕಿಂಗ್‌ ಪಟ್ಟಿಯ ಮೊದಲ ಸ್ಥಾನದಲ್ಲಿದ್ದಾರೆ. ಪುರುಷರ ಮತ್ತು ಮಹಿಳೆಯರ ಎಂಟು ತಂಡಗಳು ಪಾಲ್ಗೊಳ್ಳಲಿರುವ ‘ದಿ ಹಂಡ್ರೆಡ್‌’ನಲ್ಲಿ ಭಾರತದ ಹರ್ಮನ್‌ಪ್ರೀತ್ ಕೌರ್‌, ಸ್ಮೃತಿ ಮಂದಾನ, ಜೆಮಿಮಾ ರಾಡ್ರಿಗಸ್‌ ಮತ್ತು ದೀಪ್ತಿ ಶರ್ಮಾ ಆಡಲು ಈಗಾಗಲೇ ಒಪ್ಪಿಕೊಂಡಿದ್ದಾರೆ.

‘ಬರ್ಮಿಂಗ್‌ಹ್ಯಾಂ ಫ್ರಾಂಚೈಸ್ ಶಫಾಲಿ ಅವರನ್ನು ಸಂಪರ್ಕಿಸಿದೆ. ನ್ಯೂಜಿಲೆಂಡ್‌ನ ಸೋಫಿ ಡಿವೈನ್ ಬದಲಿಗೆ ಶಫಾಲಿ ಅವರು ತಂಡವನ್ನು ಸೇರಿಕೊಳ್ಳಲಿದ್ದಾರೆ. ಬಿಗ್ ಬ್ಯಾಷ್‌ನಲ್ಲಿ ಆಡುವ ಕುರಿತು ಸಿಡ್ನಿಯ ಪ್ರಾಂಚೈಸ್ ಜೊತೆಯೂ ಅವರ ಮಾತುಕತೆ ನಡೆದಿದೆ’ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ನಡೆಯಬೇಕಾಗಿದ್ದ ‘ದಿ ಹಂಡ್ರೆಡ್’ ಟೂರ್ನಿಯನ್ನು ಕೋವಿಡ್‌ನಿಂದಾಗಿ ಮುಂದೂಡಲಾಗಿತ್ತು. ಲಂಡನ್‌ನಲ್ಲಿ ಜುಲೈ 21ರಂದು ಟೂರ್ನಿ ಆರಂಭವಾಗಲಿದ್ದು ಮೊದಲ ಪಂದ್ಯದಲ್ಲಿ ಓವಲ್ ಇನ್ವಿಸಿಬಲ್ ಮತ್ತು ಮ್ಯಾಂಚೆಸ್ಟರ್ ಒರಿಜಿನಲ್ಸ್‌ ತಂಡಗಳು ಸೆಣಸಲಿವೆ. ಮಹಿಳೆಯರ ಬಿಗ್ ಬ್ಯಾಷ್ ವರ್ಷಾಂತ್ಯದಲ್ಲಿ ಆರಂಭಗೊಳ್ಳಲಿದೆ. ಈ ವರೆಗೆ 22 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಶಫಾಲಿ 617 ರನ್ ಕಲೆ ಹಾಕಿದ್ದಾರೆ.

ಜೂನ್‌–ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ

ಭಾರತ ಮಹಿಳಾ ತಂಡವು ಜೂನ್‌–ಜುಲೈನಲ್ಲಿ ಇಂಗ್ಲೆಂಡ್‌ ಪ್ರವಾಸ ಕೈಗೊಳ್ಳಲಿದೆ. ಆತಿಥೇಯ ತಂಡದ ಎದುರು ಒಂದು ಟೆಸ್ಟ್, ತಲಾ ಮೂರು ಟಿ20 ಹಾಗೂ ಏಕದಿನ ಪಂದ್ಯಗಳನ್ನು ಆಡಲಿದೆ. ಈ ಸರಣಿಗಳು ಮುಗಿದ ಬಳಿಕ ‘ಹಂಡ್ರೆಡ್‘ ಟೂರ್ನಿಯಲ್ಲಿ ಆಡುವವರು ಅಲ್ಲಿಯೇ ಉಳಿದುಕೊಳ್ಳಲಿದ್ದಾರೆ.

ಕೋಚ್ ಹುದ್ದೆಗೆ 35 ಆಕಾಂಕ್ಷಿಗಳು

ಭಾರತ ಮಹಿಳಾ ತಂಡದ ಮುಖ್ಯ ಕೋಚ್ ಆಯ್ಕೆ ಈ ವಾರ ನಡೆಯಲಿದ್ದು ಒಟ್ಟು 35 ಅರ್ಜಿಗಳು ಬಂದಿವೆ. ಮದನ್‌ಲಾಲ್ ಮುಖ್ಯಸ್ಥರಾಗಿರುವ ಕ್ರಿಕೆಟ್ ಸಲಹಾ ಸಮಿತಿಯು ಕೋಚ್ ಆಯ್ಕೆ ಮಾಡಲಿದೆ. ಅರ್ಜಿ ಸಲ್ಲಿಸಿದವರಲ್ಲಿ ಈಗಿನ ಕೋಚ್ ಡಬ್ಲ್ಯು.ವಿ.ರಾಮನ್ ಮತ್ತು ಐವರು ಮಹಿಳೆಯರು ಇದ್ದಾರೆ.

ಹೇಮಲತಾ ಕಲಾ, ಮಮತಾ ಮಾಬೆನ್‌, ಜಯಾ ಶರ್ಮಾ, ಸುಮನ್ ಶರ್ಮಾ ಮತ್ತು ನೂಶಿನ್ ಅಲ್‌ ಖಾದೀರ್, ಮಾಜಿ ಕೋಚ್‌ಗಳಾದ ರಮೇಶ್ ಪೊವಾರ್ ಮತ್ತು ತುಷಾರ್ ಅರೊಠೆ ಅವರೂ ಅರ್ಜಿ ಸಲ್ಲಿಸಿದವರ ಪಟ್ಟಿಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT