ಶನಿವಾರ, ಅಕ್ಟೋಬರ್ 16, 2021
22 °C
ಟಿ20 ವಿಶ್ವಕ‍ಪ್‌ ಟೂರ್ನಿಗೆ ಭಾರತ ತಂಡದ ಆಯ್ಕೆ ಪ್ರಕ್ರಿಯೆ ಪೂರ್ಣ; ಚಾಹಲ್‌ಗೆ ಇಲ್ಲ ಅವಕಾಶ

ಭಾರತ ತಂಡದಲ್ಲಿ ಅಕ್ಷರ್ ಬದಲಿಗೆ ಶಾರ್ದೂಲ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಧ್ಯಮ ವೇಗದ ಬೌಲರ್‌ ಹಾಗೂ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಅವರಿಗೆ ಟಿ20 ವಿಶ್ವಕಪ್‌ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಅವಕಾಶ ಲಭಿಸಿದೆ. ಅವರನ್ನು ಅಕ್ಷರ್ ಪಟೇಲ್ ಬದಲಿಗೆ ಸೇರಿಸಿಕೊಳ್ಳಲಾಗಿದೆ. ಅಕ್ಷರ್ ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್‌) ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿರುವ 29 ವರ್ಷದ ಶಾರ್ದೂಲ್ ಈ ಆವೃತ್ತಿಯಲ್ಲಿ 18 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಶಾರ್ದೂಲ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವುದರೊಂದಿಗೆ ಭಾರತದ ವಿಶ್ವಕಪ್ ಬಳಗದ ಆಯ್ಕೆ ಪೂರ್ಣಗೊಂಡಿದೆ. ಟೂರ್ನಿಗಾಗಿ ಘೋಷಿಸಿರುವ ತಂಡಗಳಲ್ಲಿ ಬದಲಾವಣೆ ಮಾಡಲು ಈ ತಿಂಗಳ 15ರ ವರೆಗೆ ಆಯೋಜಕರು ಅವಕಾಶ ನೀಡಿದ್ದಾರೆ.

‘ತಂಡದ ಆಡಳಿತದ ಜೊತೆ ನಡೆಸಿದ ಚರ್ಚೆಯ ನಂತರ ಶಾರ್ದೂಲ್ ಠಾಕೂರ್ ಅವರಿಗೆ ಮುಖ್ಯ ತಂಡದಲ್ಲಿ ಸ್ಥಾನ ನೀಡಲು ಆಯ್ಕೆ ಸಮಿತಿ ನಿರ್ಧರಿಸಿದೆ. 15 ಮಂದಿಯ ತಂಡದಲ್ಲಿದ್ದ ಅಕ್ಷರ್ ಪಟೇಲ್ ಅವರನ್ನು ಕಾಯ್ದಿರಿಸಿದ ಆಟಗಾರರ ಪಟ್ಟಿಗೆ ಸೇರಿಸಲಾಗಿದೆ’ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜಯ ಶಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

ಮಧ್ಯಮವೇಗಿ ಹಾರ್ದಿಕ್ ಪಾಂಡ್ಯ ಅವರು ಫಿಟ್‌ನೆಸ್ ಸಮಸ್ಯೆಯಿಂದಾಗಿ ಐಪಿಎಲ್‌ನಲ್ಲಿ ಬೌಲಿಂಗ್ ಮಾಡಿರಲಿಲ್ಲ. ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಡುತ್ತಿರುವ ಅವರ ಒತ್ತಡ ನಿರ್ವಹಣೆ ಮಾಡುವುದು ಬಿಸಿಸಿಐ ಆಯ್ಕೆ ಸಮಿತಿಗೆ ಸವಾಲಾಗಿದೆ. 

‘ಅಕ್ಷರ್ ಪಟೇಲ್ ಅವರು ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಇರುತ್ತಾರೆ. ರವೀಂದ್ರ ಜಡೇಜ ಅವರಿಗೆ ಆಡಲು ಸಾಧ್ಯವಾಗದ ಪರಿಸ್ಥಿತಿ ಎದುರಾದರೆ ಅಕ್ಷರ್ ಅವರಿಗೆ ಅವಕಾಶ ನೀಡಲಾಗುವುದು. ಜಡೇಜ ಆಡುತ್ತಿದ್ದರೆ ಅಕ್ಷರ್‌ಗೆ ಅವಕಾಶ ಸಿಗುವ ಸಾಧ್ಯತೆ ಇಲ್ಲ’ ಎಂದು  ತಿಳಿಸಲಾಗಿದೆ. ರೈಲ್ವೆ ತಂಡದ ಲೆಗ್ ಸ್ಪಿನ್ನರ್ ಕರ್ಣ ಶರ್ಮಾ ಅವರನ್ನು ಕಾಯ್ದಿರಿಸಿದ ಆಟಗಾರರ ಪಟ್ಟಿಯಲ್ಲಿ ಸೇರಿಸಿ ಬಿಸಿಸಿಐ ಅಚ್ಚರಿ ಮೂಡಿಸಿದೆ. ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಅವರಿಗೆ ಅವಕಾಶ ಸಿಗಲಿಲ್ಲ. ಐಪಿಎಲ್‌ನಲ್ಲಿ ಅವರು 15 ಪಂದ್ಯಗಳಲ್ಲಿ 18 ವಿಕೆಟ್ ಗಳಿಸಿದ್ದಾರೆ. 

ಹರ್ಷಲ್ ಪಟೇಲ್ ಅವರನ್ನು ನೆಟ್‌ಬೌಲರ್‌ಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಆವೇಶ್ ಖಾನ್‌, ಉಮ್ರಾನ್ ಮಲಿಕ್‌, ಹರ್ಷಲ್ ಪಟೇಲ್‌, ಲುಕ್ಮನ್ ಮೆರಿವಾಲ, ವೆಂಕಟೇಶ್ ಅಯ್ಯರ್‌, ಕರ್ಣ ಶರ್ಮಾ, ಶಹಬಾಜ್ ಅಹಮ್ಮದ್‌ ಮತ್ತು ಕೆ.ಗೌತಮ್ ಅವರು ತಂಡದ ಬಯೊಬಬಲ್‌ ಪ್ರವೇಶಿಸಲಿದ್ದು ವಿಶ್ವಕಪ್ ಸಿದ್ಧತೆಯಲ್ಲಿ ನೆರವಾಗಲಿದ್ದಾರೆ. 

ಅಕ್ಟೋಬರ್ 17ರಂದು ವಿಶ್ವಕಪ್‌ ಟೂರ್ನಿ ಆರಂಭವಾಗಲಿದ್ದು ಭಾರತದ ಮೊದಲ ಪಂದ್ಯ ಪಾಕಿಸ್ತಾನ ಎದುರು 24ರಂದು ನಡೆಯಲಿದೆ.

ಭಾರತ ತಂಡ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ (ಉಪನಾಯಕ), ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್ ಕೀಪರ್‌), ಇಶಾನ್ ಕಿಶನ್‌, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ರಾಹುಲ್ ಚಾಹರ್‌, ರವಿಚಂದ್ರನ್ ಅಶ್ವಿನ್, ಶಾರ್ದೂಲ್ ಠಾಕೂರ್‌, ವರುಣ್ ಚಕ್ರವರ್ತಿ, ಜಸ್‌ಪ್ರೀತ್ ಬೂಮ್ರಾ, ಭುವನೇಶ್ವರ್ ಕುಮಾರ್‌, ಮೊಹಮ್ಮದ್ ಶಮಿ. ಕಾಯ್ದಿರಿಸಿದ ಆಟಗಾರರು: ಶ್ರೇಯಸ್ ಅಯ್ಯರ್‌, ದೀಪಕ್ ಚಾಹರ್‌, ಅಕ್ಷರ್ ಪಟೇಲ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು