ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಐಪಿಎಲ್‌ ಫೈನಲ್‌ ವೇಳೆ ಮಳೆ ಬರಲು ಕಾರಣ ಶ್ರದ್ಧಾ ಕಪೂರ್‌! ಸಾಮಾಜಿಕ ಮಾಧ್ಯಮದಲ್ಲಿ ಕೀಟಲೆ

Published 29 ಮೇ 2023, 10:40 IST
Last Updated 29 ಮೇ 2023, 10:40 IST
ಅಕ್ಷರ ಗಾತ್ರ

ಚೆನೈ ಸೂಪರ್‌ ಕಿಂಗ್ಸ್‌ ಮತ್ತು ಗುಜರಾತ್‌ ಟೈಟನ್ಸ್‌ ನಡುವೆ ನಡೆಯಬೇಕಿದ್ದ ಐಪಿಎಲ್ ಫೈನಲ್‌ ಮ್ಯಾಚ್‌ ಮಳೆಯಿಂದ ನಿಂತು ಹೋಗಿದೆ. ನೆಚ್ಚಿನ ನಾಯಕ ಮಹೇಂದ್ರ ಸಿಂಗ್‌ ಧೋನಿಯ ರೋಚಕ ಆಟ ನೋಡಲು ಕಾತುರರಾಗಿದ್ದ ಅಭಿಮಾನಿಗಳಿಗೆ ಮಳೆ ನಿರಾಸೆಯುಂಟು ಮಾಡಿದೆ. ಈ ನಡುವೆ ಕೆಲವು ಅಭಿಮಾನಿಗಳು ಮಳೆ ಬರಲು ಕಾರಣ ‘ಶ್ರದ್ಧಾ ಕಪೂರ್‌‘ ಎಂದು ಕೀಟಲೆ ಮಾಡಿದ್ದಾರೆ. ಶ್ರದ್ಧಾ ಕಪೂರ್‌ಗೂ ಮಳೆಗೂ ಏನು ಸಂಬಂಧ ಎಂದು ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಐಪಿಎಲ್‌ ಫೈನಲ್‌ ಪಂದ್ಯ ಆರಂಭವಾಗುವುದಕ್ಕೂ ಮೊದಲು ಜಿಯೋ ಸಿನಿಮಾ ಪ್ರಿ–ಮ್ಯಾಚ್‌ ಶೋ ನಡೆಸಿದ್ದು, ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ ನಟಿ ಶ್ರದ್ಧಾ ಕಪೂರ್‌ ಭಾಗವಹಿಸಿದ್ದರು. ಶ್ರದ್ಧಾ ಕಪೂರ್‌ ನೋಡಿ ಕ್ರಿಕೆಟ್‌ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿದ್ದರು. ಆದರೆ, ಇದೀಗ ಪಂದ್ಯದ ವೇಳೆ ಮಳೆ ಬರಲು ಶ್ರದ್ಧಾ ಕಪೂರ್‌ ಕಾರಣ ಎಂದು ಪೋಸ್ಟ್‌ ಮಾಡಿ ಕಾಲೆಳೆದಿದ್ದಾರೆ. ಅಭಿಮಾನಿಗಳ ಪೋಸ್ಟ್‌ ಅನ್ನು ಶ್ರದ್ಧಾ ಕಪೂರ್‌ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಹಂಚಿಕೊಂಡಿದ್ದಾರೆ.

ತಮ್ಮ ವಿಭಿನ್ನ ಅಭಿನಯದ ಮೂಲಕ ಶ್ರದ್ಧಾ ಕಪೂರ್‌ ಬಾಲಿವುಡ್‌ ಚಿತ್ರರಂಗದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ‘ತುಮ್‌ ಹಿ ಹೋ‘, ‘ಬಾರೀಶ್‌‘, ‘ಚಮ್‌ ಚಮ್‌‘ ಎಂಬ ಜನಪ್ರಿಯ ಹಾಡುಗಳಲ್ಲಿ ಶ್ರದ್ಧಾ ಕಪೂರ್ ನಟಿಸಿದ್ದಾರೆ. ಈ ಮೂರು ಹಾಡುಗಳು ಬಾಲಿವುಡ್‌ನಲ್ಲಿ ಭಾರಿ ಜನಪ್ರಿಯತೆ ಗಳಿಸಿದ್ದು, ಮೂರು ಹಾಡುಗಳಲ್ಲಿ ಶ್ರದ್ಧಾ ಕಪೂರ್ ಮಳೆಯಲ್ಲಿಯೇ ನೃತ್ಯ (ನಟನೆ) ಮಾಡಿದ್ದಾರೆ.

ಐಪಿಎಲ್‌ ಫೈನಲ್‌ ಪಂದ್ಯದ ವೇಳೆ ಶ್ರದ್ಧಾ ಕಪೂರ್ ಕಾಣಿಸಿಕೊಂಡಿದ್ದಕ್ಕೂ, ಆ ದಿನ ಮಳೆ ಬಂದು ಪಂದ್ಯ ನಿಂತಿರುವುದಕ್ಕೂ ಅಭಿಮಾನಿಗಳು ಶ್ರದ್ಧಾ ಅವರನ್ನು ಕಿಚಾಯಿಸಿದ್ದಾರೆ. ‘ಮಳೆ ಹುಡುಗಿ‘ ಯಿಂದ ಮ್ಯಾಚ್‌ ನಿಂತಿದೆ ಎಂದು ಕಾಲೆಳೆದಿದ್ದಾರೆ.

ಭಾನುವಾರ ಅಹಮದಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಐಪಿಎಲ್‌ ಅಂತಿಮ ಹಣಾಹಣಿ ನಡೆಯಬೇಕಿತ್ತು. ಆದರೆ ಮಳೆಯಿಂದ ಪಂದ್ಯ ನಿಂತಿದೆ. ಭಾನುವಾರದ ಪಂದ್ಯ ಇಂದು ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT