ಸೋಮವಾರ, ಅಕ್ಟೋಬರ್ 14, 2019
23 °C

ಕ್ವಿಂಟನ್ ಪಡೆಯ ಜಯಭೇರಿ; ಸರಣಿ ಸಮ

Published:
Updated:

ಬೆಂಗಳೂರು: ಭಾನುವಾರ ಇಡೀ ದಿನ ಮಳೆಯ ವಾತಾವರಣವೇ ಇದ್ದ ಬೆಂಗಳೂರಿನಲ್ಲಿ ಭಾರತ ತಂಡದ ಬ್ಯಾಟ್ಸ್‌ಮನ್‌ಗಳಿಂದ ಸಿಡಿಲಬ್ಬರದ ಬ್ಯಾಟಿಂಗ್ ನಡೆಯಲಿಲ್ಲ. ಆದರೆ ಕ್ವಿಂಟನ್ ಡಿ ಕಾಕ್ ಅವರ ಅಮೋಘ ಆಟದ ನೆರವಿನಿಂದ ದಕ್ಷಿಣ ಆಫ್ರಿಕಾ ತಂಡವು ಜಯ ದಾಖಲಿಸಿತು.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾದ ಬೌಲರ್‌ಗಳ ನಿಧಾನಗತಿಯ ಎಸೆತಗಳನ್ನು ತಪ್ಪಾಗಿ ಅಂದಾಜಿಸಿದ ಆತಿಥೇಯ ಬ್ಯಾಟ್ಸ್‌ಮನ್‌ಗಳು ದಂಡ ತೆತ್ತರು.  ಆಡಿದ ಕೆಟ್ಟ ಹೊಡೆತಗಳಿಂದಾಗಿ ದೊಡ್ಡ ಮೊತ್ತ ಗಳಿಸಲಿಲ್ಲ. ಇದರಿಂದಾಗಿ ಭಾರತ ತಂಡವು 20 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 134 ರನ್‌ ಗಳಿಸಿತು.

ದಕ್ಷಿಣ ಆಫ್ರಿಕಾದ ವೇಗಿ ಕಗಿಸೊ ರಬಾಡ ( 39ಕ್ಕೆ3) ಮತ್ತು ಜಾನ್ ಫಾರ್ಟೂನ್ (19ಕ್ಕೆ2) ಅವರ ಮೊನಚಾದ ದಾಳಿಯಿಂದಾಗಿ ಭಾರತದ ಮಧ್ಯಮ ಕ್ರಮಾಂಕ ಕುಸಿಯಿತು. ಗುರಿ ಬೆನ್ನಟ್ಟಿದ ಪ್ರವಾಸಿ ಬಳಗವು ಕ್ವಿಂಟನ್ (ಔಟಾಗದೆ 79; 52ಎಸೆತ, 6ಬೌಂಡರಿ, 5ಸಿಕ್ಸರ್) ಅರ್ಧಶತಕದ ಆಟದಿಂದ 16.5 ಓವರ್‌ಗಳಲ್ಲಿ 1 ವಿಕೆಟ್‌ಗೆ 140 ರನ್ ಗಳಿಸಿತು. 9 ವಿಕೆಟ್‌ಗಳಿಂದ ಪಂದ್ಯ ಗೆದ್ದಿತು. ಇದರೊಂದಿಗೆ  ಸರಣಿಯ ಸೋಲಿನಿಂದ ತಪ್ಪಿಸಿಕೊಂಡ ಪ್ರವಾಸಿ ತಂಡವು 1–1ರ ಸಮಬಲ ಸಾಧಿಸಿತು. 

ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಪ್ರವಾಸಿ ಬಳಗದ ಎಡಗೈ ಸ್ಪಿನ್ನರ್ ಜಾನ್ ಫಾರ್ಟೂನ್ ಬೌಲಿಂಗ್ ಆರಂಭಿಸಿದರು.

ಶಿಖರ್ ಧವನ್ ಮೊದಲ ಎಸೆತವನ್ನೇ ಫೈನ್‌ಲೆಗ್‌ ಬೌಂಡರಿಗೆ ಹೊಡೆದು ಬೌಲರ್‌ಗಳಿಗೆ ಎಚ್ಚರಿಕೆಯ ಸಂದೇಶ ನೀಡಿದರು.  ಆದರೆ ಇನ್ನೊಂದು ಬದಿಯಲ್ಲಿದ್ದ ರೋಹಿತ್ ಶರ್ಮಾ ಅವರ ಆಟದಲ್ಲಿ ಆತ್ಮವಿಶ್ವಾಸ ಕಾಣಲಿಲ್ಲ. ಎರಡು ಬೌಂಡರಿ ಗಳಿಸಿ ಆಟಕ್ಕೆ ಕುದುರುವ ಪ್ರಯತ್ನ ಮಾಡಿದರು. ಆದರೆ ಮೂರನೇ ಓವರ್‌ನಲ್ಲಿ ಬೇರನ್ ಹೆನ್ರಿಕ್ಸ್‌ ಎಸೆತವನ್ನು ಹೊಡೆಯುವ ಯತ್ನದಲ್ಲಿ ಫೀಲ್ಡರ್ ರೀಜಾ ಹೆನ್ರಿಕ್ಸ್‌ಗೆ ಸುಲಭ ಕ್ಯಾಚಿತ್ತರು. ಈ ಹಂತದಲ್ಲಿ ಶಿಖರ್ ಜೊತೆಗೂಡಿದ ವಿರಾಟ್ ಕೊಹ್ಲಿ ದೊಡ್ಡ ಇನಿಂಗ್ಸ್ ಆಡುವರೆಂಬ ಕನಸು ಪ್ರೇಕ್ಷಕರ ಗ್ಯಾಲರಿಯಲ್ಲಿ ಗರಿಗೆದರಿತ್ತು.

ಶಿಖರ್ ಸಿಕ್ಸರ್; ತಬ್ರೇಜ್ ಬೂಟ್‌ಫೋನ್: ಎಡಗೈ ಬ್ಯಾಟ್ಸ್‌ಮನ್ ಬೀಸಾಟವಾಡಿದರು. ಅದರಲ್ಲೂ ಚೈನಾಮನ್ ಬೌಲರ್ ತಬ್ರೇಜ್ ಶಂಸಿ ಎಸೆತಗಳನ್ನು ಹೆಚ್ಚು ದಂಡಿಸಿದರು. ಶಿಖರ್ ಅವರನ್ನು ತಮ್ಮ ಕೆಳಮಟ್ಟದ ಎಸೆತಗಳ ಕಾಡಲು ಯತ್ನಿಸಿದ ಶಂಸಿ ಹಾಕಿದ ಆರನೇ ಓವರ್‌ನಲ್ಲಿ ಶಿಖರ್ ಸತತ ಎರಡು ಸಿಕ್ಸರ್ ಸಿಡಿಸಿದರು. ಅವರ ಎಸೆತಗಳನ್ನು ಆಡುವ ಸಿಕ್ಕಾಗಲೆಲ್ಲ ರನ್ ಗಳಿಸಿದರು. ಆದರೆ ಎಂಟನೇ ಓವರ್‌ನಲ್ಲಿ ಶಂಸಿ ಎಸೆತವನ್ನು ಸಿಕ್ಸರ್‌ಗೆ ಎತ್ತಲು ಯತ್ನಿಸಿದ ಶಿಖರ್, ಫೀಲ್ಡರ್ ತೆಂಬಾ ಬವುಮಾ ಪಡೆದ ಕ್ಯಾಚ್‌ಗೆ ಔಟಾದರು.ಆಗ ತಮ್ಮ ಬೂಟನ್ನು ಕೈಗೆ ತೆಗೆದುಕೊಂಡ ಶಂಸಿ, ಅದನ್ನು ಮೊಬೈಲ್‌ ಫೋನ್ ಮಾದರಿಯಲ್ಲಿ ಹಿಡಿದು ನಂಬರ್ ಡಯಲ್ ಮಾಡಿ ಕಿವಿಗೆ ಇಟ್ಟುಕೊಳ್ಳುವ ಅಣಕ ಮಾಡಿದರು.  ಆ ಮೂಲಕ ಶಿಖರ್‌ಗೆ ಬೀಳ್ಕೊಡುಗೆ ನೀಡಿದರು!

‘ಶಂಸಿ ಅವರಿಗೆ ಒಬ್ಬ ಗೆಳೆಯ ಇದ್ದಾನೆ. ಅವನೊಂದಿಗೆ ಇವರು ಬಹಳಷ್ಟು ಪಂದ್ಯಗಳನ್ನು ಆಡಿದ್ಧಾರೆ. ಶಿಖರ್ ಅವಂತಹ ದೊಡ್ಡ ಬ್ಯಾಟ್ಸ್‌ಮನ್ ವಿಕೆಟ್ ಪಡೆದ ಸಂತಸವನ್ನು ತಮ್ಮ ಆ ಸ್ನೇಹಿತನಿಗೆ ತಿಳಿಸಲು ಶಂಸಿ ಆ ರೀತಿ ಮಾಡಿದ್ದಾರೆ’ ಎಂದು ಪಂದ್ಯದ ನಂತರ ದಕ್ಷಿಣ ಆಫ್ರಿಕಾ ತಂಡದ ಉಪನಾಯಕ ವ್ಯಾನ್ ಡೆರ್ ರೆಸ್ಸಿ ಹೇಳಿದರು.

ಶಿಖರ್ ಔಟಾದ ನಂತರ ಕೊಹ್ಲಿ ಜೊತೆಗೂಡಿದ ರಿಷಭ್  ಇನಿಂಗ್ಸ್‌ಗೆ ಚೇತರಿಕೆ ನೀಡುವ ನಿರೀಕ್ಷೆ ಹುಸಿಯಾಯಿತು. 9ನೇ ಓವರ್‌ನಲ್ಲಿ ರಬಾಡ ಅವರು ಕೊಹ್ಲಿ ವಿಕೆಟ್ ಗಳಿಸುವ ಮೂಲಕ ಭಾರತ ತಂಡದ ರನ್‌ ಗಳಿಕೆಗೆ ಕುತ್ತು ತಂದರು.13ನೇ ಓವರ್‌ನಲ್ಲಿ ಫಾರ್ಟ್ಯೂನ್ ಎರಡು ವಿಕೆಟ್ (ರಿಷಭ್ ಪಂತ್ ಮತ್ತು ಶ್ರೇಯಸ್ ಅಯ್ಯರ್) ಕಬಳಿಸಿ ಮಿಂಚಿದರು.  ನಂತರ 42 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳು ಪತನವಾದವು. ಗುರಿ ಬೆನ್ನಟ್ಟಿದ ತಂಡವು ನಿರಾಯಾಸವಾಗಿ ಜಯಿಸಲು ಕ್ವಿಂಟನ್ ಕಾರಣರಾದರು.

ಧೋನಿ ದಾಖಲೆ ಸರಿಗಟ್ಟಿದ ರೋಹಿತ್

ಭಾನುವಾರ ತಮ್ಮ ವೃತ್ತಿಜೀವನದ 98ನೇ  ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯವನ್ನು ಆಡಿದ ರೋಹಿತ್ ಶರ್ಮಾ ಅವರು ಮಹೇಂದ್ರಸಿಂಗ್ ಧೋನಿ ದಾಖಲೆಯನ್ನು ಸರಿಗಟ್ಟಿದರು.  ಇದರೊಂದಿಗೆ ಭಾರತದ ಪರ ಅತಿ ಹೆಚ್ಚು ಚುಟುಕು ಪಂದ್ಯಗಳನ್ನು ಆಡಿದ ಶ್ರೇಯಕ್ಕೆ ಪಾತ್ರರಾದರು.

ಸುರೇಶ್ ರೈನಾ (78), ವಿರಾಟ್ ಕೊಹ್ಲಿ (72),  ಯುವರಾಜ್ ಸಿಂಗ್ (58), ಶಿಖರ್ ಧವನ್  (55) ಅವರು ನಂತರದ ಸ್ಥಾನಗಳಲ್ಲಿದ್ದಾರೆ. ಭಾರತ ತಂಡದ ಆರಂಭಿಕ ಆಟಗಾರ ಶಿಖರ್ ಧವನ್ ಅವರು ಟ್ವೆಂಟಿ–20 ಮಾದರಿ ಕ್ರಿಕೆಟ್‌ನಲ್ಲಿ ಏಳು ಸಾವಿರ ರನ್‌ ಗಡಿ ದಾಟಿದರು. ಭಾನುವಾರದ ಪಂದ್ಯದಲ್ಲಿ ಇನಿಂಗ್ಸ್‌ನ ಮೊದಲ ಎಸೆತವನ್ನು ಬೌಂಡರಿಗೆರೆ ದಾಟಿಸಿದ ಅವರು ಈ ಸಾಧನೆ ಮಾಡಿದರು.

Post Comments (+)