ಗುರುವಾರ , ಸೆಪ್ಟೆಂಬರ್ 19, 2019
21 °C
ಸೆ 14ರ ಬದಲಿಗೆ 28ರವರೆಗೆ ಸಮಯ;

ರಾಜ್ಯ ಕ್ರಿಕೆಟ್‌ ಸಂಸ್ಥೆಗಳ ಚುನಾವಣೆ ಗಡುವು ವಿಸ್ತರಣೆ

Published:
Updated:
Prajavani

ಮುಂಬೈ (ಪಿಟಿಐ): ರಾಜ್ಯ ಕ್ರಿಕೆಟ್ ಸಂಸ್ಥೆಗಳಲ್ಲಿ ಆಡಳಿತ ಮಂಡಳಿ ಆಯ್ಕೆಗಾಗಿ ನಡೆಯಬೇಕಿದ್ದ ಚುನಾವಣೆ ಪ್ರಕ್ರಿಯೆಯ ದಿನಾಂಕವನ್ನು ಸೆಪ್ಟೆಂಬರ್ 14ರಿಂದ 28ಕ್ಕೆ ವಿಸ್ತರಿಸಲಾಗಿದೆ.

ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಗೆ ಸುಪ್ರೀಂ ಕೋರ್ಟ್‌ ನೇಮಕ ಮಾಡಿರುವ ಕ್ರಿಕೆಟ್ ಆಡಳಿತಾಧಿಕಾರಿಗಳ ಸಮಿತಿ (ಸಿಒಎ)ಯು ಈ ಕುರಿತು ‍ಪ್ರಕಟಣೆ ನೀಡಿದೆ.

‘ರಾಜ್ಯ ಸಂಸ್ಥೆಗಳಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ತಿಗೊಳಿಸಲು  ಇದೇ 14ರವರೆಗೆ ಗಡುವು ನೀಡಲಾಗಿತ್ತು. ಆದರೆ ಕಾರಣಾಂತರಗಳಿಂದ ಇನ್ನೂ 14 ದಿನಗಳವರೆಗೆ ಮುಂದೂಡಲು ನಿರ್ಧರಿಸಲಾಗಿದೆ’ ಎಂದು ಇಲ್ಲಿ ನಡೆದ ಸಭೆಯ ನಂತರ ಸಿಒಎ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

‘ರಾಜ್ಯ ಸಂಸ್ಥೆಗಳು ಮತ್ತು ಚುನಾವಣೆ ಅಧಿಕಾರಿಗಳು ವಿನಂತಿ ಮಾಡಿದ್ದನ್ನು ಪರಿಗಣಿಸಲಾಗಿದೆ. ಅದಕ್ಕಾಗಿ ಈಗ ಒಂದು ಬಾರಿ ಮಾತ್ರ ದಿನಾಂಕ ವಿಸ್ತರಣೆ ಮಾಡುತ್ತಿದ್ದೇವೆ’ ಎಂದು ಸಿಒಎ ತಿಳಿಸಿದೆ.

‘ಇದೊಂದೇ ಬಾರಿ ದಿನಾಂಕ ವಿಸ್ತರಣೆ ಮಾಡಿರುವುದು. ಮುಂದಿನ ದಿನಗಳಲ್ಲಿ ಯಾವುದೇ ಬದಲಾವಣೆಗಳು ಆಗುವುದಿಲ್ಲ. ಅಕ್ಟೋಬರ್‌ 22ರಂದು ಬಿಸಿಸಿಐ ಚುನಾವಣೆ ಮುಗಿಯಬೇಕು. ಅದಕ್ಕೆ 21 ದಿನಗಳ ಮುಂಚೆ ಸರ್ವಸಾಧಾರಣ ಸಭೆ ನಡೆಸಬೇಕು. ಅದೂ ಕೂಡ ಸೆ. 30ರೊಳಗೆ ಆಗಬೇಕು. ಬಿಸಿಸಿಐನಲ್ಲಿ ಪ್ರತಿನಿಧಿಸುವ ರಾಜ್ಯ ಸಂಸ್ಥೆಗಳ ಸದಸ್ಯರ ಪಟ್ಟಿಯನ್ನು ಸೆ 28ರಂದು ಚುನಾವಣೆ ನಡೆಸಿದ ನಂತರ ಕಳಿಸಬೇಕು’ ಎಂದು  ತಿಳಿಸಿದೆ.

Post Comments (+)