ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌ | ಚೆಟ್ರಿ ಅರ್ಧಶತಕದ ದಾಖಲೆ; ಹೈದರಾಬಾದ್ ಎದುರು ಬಿಎಫ್‌ಸಿಗೆ ನಿರಾಶೆ

Last Updated 12 ಫೆಬ್ರುವರಿ 2022, 3:21 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ನಾಯಕ ಸುನಿಲ್ ಚೆಟ್ರಿ ಐತಿಹಾಸಿಕ ಗೋಲು ದಾಖಲಿಸಿದರು. ಆದರೆ, ಹೈದರಾಬಾದ್ ಎಫ್‌ಸಿಯು 2–1ರಿಂದ ಬೆಂಗಳೂರು ಎಫ್‌ಸಿ ತಂಡವನ್ನು ಪರಾಭವಗೊಳಿಸಿತು.

ಶುಕ್ರವಾರ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್) ಪಂದ್ಯದಲ್ಲಿ ಚೆಟ್ರಿ ಗೋಲು ಗಳಿಸಿದರು. ಇದರೊಂದಿಗೆ ಐಎಸ್‌ಎಲ್‌ನಲ್ಲಿ 50 ಗೋಲು ಗಳಿಸಿದ ದಾಖಲೆ ಬರೆದರು.

ಆದರೆ, ಅವರು ಗೋಲು ಹೊಡೆಯುವ ಮುನ್ನವೇ ಹೈದರಾಬಾದ್ ತಂಡವು 2–0 ಮುನ್ನಡೆ ಸಾಧಿಸಿತ್ತು. ಮೊದಲಾರ್ಧದಲ್ಲಿ ಝೇವಿಯರ್ ಸಿವಿರೊ (16ನೇ ನಿ) ಮತ್ತು ಜೊವಾ ವಿಕ್ಟರ್ (30ನೇ ನಿ) ಗೋಲಿನ ಕಾಣಿಕೆ ನೀಡಿ ಮುನ್ನಡೆಗೆ ಕಾರಣರಾಗಿದ್ದರು.

ಟೂರ್ನಿಯಲ್ಲಿ ಹೈದರಾಬಾದ್ ತಂಡವು 16 ಪಂದ್ಯಗಳಿಂದ 29 ಅಂಕಗಳನ್ನು ಗಳಿಸಿದೆ. ಅಷ್ಟೇ ಪಂದ್ಯಗಳನ್ನು ಆಡಿರುವ ಬೆಂಗಳೂರು ತಂಡವು 23 ಅಂಕಗಳನ್ನು ತನ್ನ ಖಾತೆಯಿಲ್ಲಿಟ್ಟುಕೊಂಡಿದೆ.

ಉಭಯ ತಂಡಗಳ ನಡುವಣ ಹಣಾಹಣಿಯು ಆರಂಭದಲ್ಲಿ ರೋಚಕವಾಗಿತ್ತು. ಮೊದಲ ಹದಿನೈದು ನಿಮಿಷಗಳಲ್ಲಿ ಉಭಯ ತಂಡಗಳ ಆಟಗಾರರು ಗೋಲು ಗಳಿಸಲು ಮಾಡಿದ ಪ್ರಯತ್ನ ಫಲ ಕೊಡಲಿಲ್ಲ. ಆದರೆ ನಂತರದ ಆಟದಲ್ಲಿ ಸಿವಿರೋ ಕಿಕ್ ಮಾಡಿದ ಚೆಂಡಿನ ವೇಗವನ್ನು ಅಂದಾಜಿಸುವಲ್ಲಿ ಬಿಎಫ್‌ಸಿ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ವಿಫಲರಾದರು. ಹೈದರಾಬಾದಿಗೆ ಮೊದಲ ಯಶಸ್ಸು ಲಭಿಸಿತು.

ಇದಾಗಿ 14 ನಿಮಿಷಗಳ ನಂತರ ಸೌವಿಕ್ ಚಕ್ರವರ್ತಿ ಮತ್ತು ಜೊವಾ ವಿಕ್ಟರ್ ಅವರು ಫ್ರೀ ಕಿಕ್‌ನಲ್ಲಿ ತೋರಿದ ಕಾಲ್ಚಳಕದಿಂದಾಗಿ ಮತ್ತೊಂದು ಗೋಲು ಒಲಿಯಿತು.

ನಂತರ ಬಿಎಫ್‌ಸಿ ತಂಡವು ಆಕ್ರಮಣಶೀಲವಾಯಿತು. ಆದರೆ ಎದುರಾಳಿ ರಕ್ಷಣಾ ಪಡೆಯು ಏಕಾಗ್ರತೆ ಮತ್ತು ಚುರುಕಿನಿಂದ ಗೋಲು ತಡೆದರು. ಕಡೆಗೂ ಚೇಟ್ರಿ ಒಂದು ಗೋಲು ಗಳಿಸುವಲ್ಲಿ ಸಫಲರಾದರು. ಆದರೆ ತಂಡದ ಸೋಲು ತಪ್ಪಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT