ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್‌ರೈಸರ್ಸ್‌ಗೆ ಮುಂಬೈ ಇಂಡಿಯನ್ಸ್‌ ಸವಾಲು

ಡೇವಿಡ್ ವಾರ್ನರ್–ಜಾನಿ ಬೇಸ್ಟೊ ಜೋಡಿಯ ಮೇಲೆ ಕಣ್ಣು; ಲಸಿತ್‌, ಸೂರ್ಯಕುಮಾರ್‌ ಮಿಂಚುವ ನಿರೀಕ್ಷೆ
Last Updated 5 ಏಪ್ರಿಲ್ 2019, 18:13 IST
ಅಕ್ಷರ ಗಾತ್ರ

ಹೈದರಾಬಾದ್‌: ಹ್ಯಾಟ್ರಿಕ್ ಜಯದೊಂದಿಗೆ ಪಾಯಿಂಟ್ ಪಟ್ಟಿಯ ಅಗ್ರಸ್ಥಾನಕ್ಕೇರಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡ ಜಯದ ನಾಗಾಲೋಟದ ಕನಸಿನೊಂದಿಗೆ ಶನಿವಾರ ತವರಿನ ಅಂಗಣದಲ್ಲಿ ಕಣಕ್ಕೆ ಇಳಿಯಲಿದೆ. ರಾತ್ರಿ ನಡೆಯಲಿರುವ ಪಂದ್ಯದಲ್ಲಿ ಆತಿಥೇಯರು ಮುಂಬೈ ಇಂಡಿಯನ್ಸ್‌ ತಂಡದ ಸವಾಲು ಎದುರಿಸಲಿದ್ದಾರೆ.

ಕಳೆದ ಬಾರಿಯ ರನ್ನರ್ ಅಪ್ ಸನ್‌ರೈಸರ್ಸ್‌ ಮೊದಲ ‍ಪ‍ಂದ್ಯದಲ್ಲಿ ಸೋತರೂ ನಂತರ ಪುಟಿದೆದ್ದಿದೆ. ಮುಂಬೈ ಇಂಡಿಯನ್ಸ್‌ ನಾಲ್ಕು ಪಂದ್ಯಗಳಲ್ಲಿ ಎರಡನ್ನು ಗೆದ್ದು ಎರಡನ್ನು ಸೋತಿದೆ. ಹೀಗಾಗಿ ಸನ್‌ರೈಸರ್ಸ್‌ ಗೆಲುವಿನ ಲಯ ಉಳಿಸಿಕೊಳ್ಳಲು ಮತ್ತು ಮುಂಬೈ ಇಂಡಿಯನ್ಸ್‌ ಲಯಕ್ಕೆ ಮರಳಲು ಪ್ರಯತ್ನಿಸಲಿದೆ. ಆದ್ದರಿಂದ ಪಂದ್ಯ ರೋಚಕವಾಗುವ ನಿರೀಕ್ಷೆ ಇದೆ.

ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಸೋಲಿಸಿ ಭರವಸೆಯಲ್ಲಿರುವ ಮುಂಬೈ ಇಂಡಿಯನ್ಸ್‌ನ ಆಟಗಾರರು ಫಿಟ್ ಆಗಿದ್ದಾರೆ. ಸನ್‌ರೈಸರ್ಸ್‌ ತಂಡ ನಾಯಕ ಕೇನ್ ವಿಲಿಯಮ್ಸನ್ ಅವರ ಅನುಪಸ್ಥಿತಿಯಲ್ಲಿ ಕಳೆದ ಪಂದ್ಯ ಆಡಿತ್ತು.

ಭುವನೇಶ್ವರ್ ಕುಮಾರ್ ತಂಡವನ್ನು ಮುನ್ನಡೆಸಿ ಗೆಲ್ಲಿಸಿದ್ದರು. ಭುವಿ ಜೊತೆಯಲ್ಲಿ ಸ್ಪಿನ್ನರ್ ಮೊಹಮ್ಮದ್ ನಬಿ ಮತ್ತು ವೇಗಿ ಸಿದ್ಧಾರ್ಥ್ ಕೌಲ್‌ ತಲಾ ಎರಡು ವಿಕೆಟ್ ಕಬಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಟ್ಟಿ ಹಾಕಿದ್ದರು. ನಂತರ ಜಾನಿ ಬೇಸ್ಟೊ ಸ್ಫೋಟಕ ಬ್ಯಾಟಿಂಗ್ ಮಾಡಿ ಸುಲಭ ಜಯ ಸಾಧಿಸಲು ನೆರವಾಗಿದ್ದರು.

ಶನಿವಾರದ ಪಂದ್ಯದಲ್ಲೂ ಇಂಗ್ಲೆಂಡ್‌ನ ಬೇಸ್ಟೊ ಮೇಲೆ ತಂಡ ಭರವಸೆ ಇರಿಸಿದ್ದು ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ ಕೂಡ ಮಿಂಚುವ ನಿರೀಕ್ಷೆ ಇದೆ. ಇವರಿಬ್ಬರು ಮುಂಬೈ ಬೌಲರ್‌ಗಳಿಗೆ ಕಠಿಣ ಸವಾಲಾಗಲಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಈ ಜೋಡಿ ಮೊದಲ ವಿಕೆಟ್‌ಗೆ ಕ್ರಮವಾಗಿ 118, 110 ಮತ್ತು 185 ರನ್‌ಗಳನ್ನು ಸೇರಿಸಿ ಟೂರ್ನಿಯ ಬಲಿಷ್ಠ ಆರಂಭಿಕ ಜೋಡಿ ಎಂದೆನಿಸಿಕೊಂಡಿದ್ದಾರೆ.

ಸೂರ್ಯಕುಮಾರ್ ಯಾದವ್ ಮೇಲೆ ಕಣ್ಣು: ಮುಂಬೈ ಬ್ಯಾಟಿಂಗ್ ಬಳಗಕ್ಕೆ ಸೂರ್ಯಕುಮಾರ್ ಯಾದವ್ ಶಕ್ತಿ ತುಂಬಿದ್ದಾರೆ. ಎಲ್ಲ ಪಂದ್ಯಗಳಲ್ಲೂ ಉತ್ತಮ ಸಾಮರ್ಥ್ಯ ಮೆರೆದಿರುವ ಅವರಿಗೆ ನಾಯಕ ರೋಹಿತ್ ಶರ್ಮಾ ಉತ್ತಮ ಜೊತೆ ನೀಡುತ್ತಿದ್ದಾರೆ. ಯುವರಾಜ್ ಸಿಂಗ್‌, ಕ್ವಿಂಟನ್ ಡಿ ಕಾಕ್‌, ಕೀರನ್‌ ಪೊಲಾರ್ಡ್‌ ಕೂಡ ಬ್ಯಾಟಿಂಗ್‌ನಲ್ಲಿ ಮಿಂಚುತ್ತಿದ್ದಾರೆ. ಪಾಂಡ್ಯ ಸಹೋದರರಾದ ಹಾರ್ದಿಕ್ ಮತ್ತು ಕೃಣಾಲ್‌ ಆಲ್‌ರೌಂಡ್ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಶ್ರೀಲಂಕಾದ ಲಸಿತ್ ಮಾಲಿಂಗ ತಂಡದ ಬೌಲಿಂಗ್‌ ವಿಭಾಗಕ್ಕೆ ಅಪಾರ ಬಲ ತುಂಬಿದ್ದಾರೆ.

ತಂಡಗಳು: ಸನ್‌ರೈಸರ್ಸ್ ಹೈದರಾಬಾದ್‌: ಕೇನ್‌ ವಿಲಿಯಮ್ಸನ್‌ (ನಾಯಕ), ಡೇವಿಡ್ ವಾರ್ನರ್‌, ಜಾನಿ ಬೇಸ್ಟೊ, ಮನೀಷ್ ಪಾಂಡೆ, ದೀಪಕ್ ಹೂಡಾ, ಶಕೀಬ್ ಅಲ್ ಹಸನ್‌, ವಿಜಯಶಂಕರ್‌, ಯೂಸುಫ್ ಪಠಾಣ್‌, ರಶೀದ್ ಖಾನ್‌, ಭುವನೇಶ್ವರ ಕುಮಾರ್‌, ಸಂದೀಪ್ ಶರ್ಮಾ, ಸಿದ್ಧಾರ್ಥ್ ಕೌಲ್‌, ಮಾರ್ಟಿನ್ ಗಪ್ಟಿಲ್‌, ರಿಕಿ ಭುಯಿ, ಶ್ರೀವತ್ಸ ಗೋಸ್ವಾಮಿ, ವೃದ್ಧಿಮಾನ್ ಸಹಾ, ಶಹಬಾಜ್ ನದೀಮ್‌, ಮೊಹಮ್ಮದ್ ನಬಿ, ಅಭಿಷೇಕ್‌ ಶರ್ಮಾ, ಬಾಸಿಲ್ ಥಂಪಿ, ಬಿಲಿ ಸ್ಟಾನ್‌ಲೇಕ್‌.

ಮುಂಬೈ ಇಂಡಿಯನ್ಸ್‌: ರೋಹಿತ್ ಶರ್ಮಾ (ನಾಯಕ), ಜಸ್‌ಪ್ರೀತ್ ಬೂಮ್ರಾ, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಯುವರಾಜ್ ಸಿಂಗ್‌, ಕೀರನ್ ಪೊಲಾರ್ಡ್‌, ಲಸಿತ್ ಮಾಲಿಂಗ, ರಾಹುಲ್ ಚಾಹರ್‌, ಬೆನ್ ಕಟಿಂಗ್‌, ಪಂಕಜ್‌ ಜೈಸ್ವಾಲ್‌, ಇಶಾನ್ ಕಿಶನ್‌, ಸಿದ್ದೇಶ್ ಲಾಡ್‌, ಎವಿನ್ ಲ್ಯೂವಿಸ್‌, ಮಯಂಕ್ ಮಾರ್ಕಂಡೆ, ಮಿಷೆಲ್‌ ಮೆಕ್‌ಲೆನಾಘನ್‌, ಅಲ್ಜರಿ ಜೋಸೆಫ್, ಜೇಸನ್‌ ಬೆಹ್ರಂಡಾರ್ಫ್‌, ಅನುಕೂಲ್ ರಾಯ್‌, ರಸಿಕ್‌ ಸಲಾಮ್‌, ಅನ್ಮೋಲ್ ಪ್ರೀತ್ ಸಿಂಗ್‌, ಬರಿಂದರ್‌ ಸ್ರಾನ್‌, ಆದಿತ್ಯ ತಾರೆ, ಸೂರ್ಯಕುಮಾರ್ ಯಾದವ್‌, ಜಯಂತ್ ಯಾದವ್‌, ಕ್ವಿಂಟನ್ ಡಿ ಕಾಕ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT