ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್: ಗೌತಮ್ ಕೈಚಳಕ; ಕರ್ನಾಟಕಕ್ಕೆ ನಾಲ್ಕನೇ ಜಯ

ಗುವಾಹಟಿ: ಮನೀಷ್ ಪಾಂಡೆ ನಾಯಕತ್ವದ ಕರ್ನಾಟಕ ತಂಡವು ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಸತತ ನಾಲ್ಕನೇ ಜಯ ಸಾಧಿಸಿತು.
ಸೋಮವಾರ ಬರ್ಸಾಪರ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಬರೋಡಾ ಎದುರು 7 ವಿಕೆಟ್‌ಗಳಿಂದ ಜಯಿಸಿದ ತಂಡವು ನಾಕೌಟ್ ಹಂತದ ಹೊಸ್ತಿಲಿಗೆ ಬಂದು ನಿಂತಿದೆ. ನಾಲ್ಕನೇ ಪಂದ್ಯದಲ್ಲಿ ಟಾಸ್ ಗೆದ್ದ ಬರೋಡಾ ತಂಡವು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು.
ಆಫ್‌ಸ್ಪಿನ್ನರ್ ಕೃಷ್ಣಪ್ಪ ಗೌತಮ್ (17ಕ್ಕೆ2) ಅವರ ಪರಿಣಾಮಕಾರಿ ದಾಳಿಯಿಂದಾಗಿ ಬರೋಡಾ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 134 ರನ್‌ಗಳ ಸಾಧಾರಣ ಮೊತ್ತ ಗಳಿಸಿತು. ಅದಕ್ಕುತ್ತರವಾಗಿ ಕರ್ನಾಟಕವು 19.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 137 ರನ್ ಗಳಿಸಿ ಗೆದ್ದಿತು. ಪಡಿಕ್ಕಲ್ (56; 47ಎಸೆತ, 5ಬೌಂಡರಿ, 1ಸಿಕ್ಸರ್) ಮತ್ತು ಕರುಣ್ ನಾಯರ್ (ಔಟಾಗದೆ 36; 25ಎಸೆತ, 4ಬೌಂಡರಿ, 1ಸಿಕ್ಸರ್) ಬ್ಯಾಟಿಂಗ್‌ನಿಂದಾಗಿ ತಂಡದ ಗೆಲುವು ಸುಲಭವಾಯಿತು.
ಕೃಣಾಲ್ ಪಾಂಡ್ಯ ನಾಯಕತ್ವದ ಬರೋಡಾ ತಂಡಕ್ಕೆ ಇದು ಮೂರನೇ ಸೋಲು. ಅದರಿಂದಾಗಿ ತಂಡವು ನಾಕೌಟ್ ಪ್ರವೇಶಿಸುವ ಹಾದಿ ಬಹುತೇಕ ಮುಚ್ಚಿದಂತಾಗಿದೆ. ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ವಿಫಲರಾಗಿದ್ದರಿಂದ ತಂಡವು ಸಾಧಾರಣ ಮೊತ್ತ ಗಳಿಸಲು ಕಾರಣವಾಯಿತು. ಇನಿಂಗ್ಸ್ ಮೂರನೇ ಓವರ್‌ನಲ್ಲಿಯೇ ಅನುಭವಿ ಬ್ಯಾಟ್ಸ್‌ಮನ್ ಕೇದಾರ್ ದೇವಧರ್ ವಿಕೆಟ್ ಗಳಿಸಿದ ಜೆ ಸುಚಿತ್ ಕರ್ನಾಟಕಕ್ಕೆ ಉತ್ತಮ ಆರಂಭ ಒದಗಿಸಿದರು. ವಿಷ್ಣು ಸೋಳಂಕಿ ಮತ್ತು ಕೃಣಾಲ್ ಪಾಂಡ್ಯ ವಿಕೆಟ್‌ಗಳನ್ನು ಗಳಿಸಿದ ಗೌತಮ್ ತಂಡಕ್ಕೆ ಮುನ್ನಡೆ ಒದಗಿಸಿದರು. ತುಸು ಹೋರಾಟ ಮಾಡಿದ ಧ್ರುವ ಪಟೇಲ್ (23 ರನ್) ವಿಕೆಟ್ ಗಳಿಸಿದ ವೈಶಾಖ ಬರೋಡಾ ತಂಡದ ರನ್ ಗಳಿಕೆಯ ವೇಗಕ್ಕೆ ತಡೆಯೊಡ್ಡಿದರು. ಮಧ್ಯಮ ಕ್ರಮಾಂಕದಲ್ಲಿ ಇನಿಂಗ್ಸ್‌ಗೆ ಬಲ ತುಂಬಲು ಯತ್ನಿಸಿದ ಭಾನು ಪೇನಿಯಾ (36; 38ಎಸೆತ) ಅವರು ರನೌಟ್ ಆಗಲು ವಿಕೆಟ್‌ಕೀಪರ್ ಬಿ.ಆರ್. ಶರತ್ ಕಾರಣದಾದರು.
ಅದಕ್ಕೂ ಮುನ್ನ ಪ್ರಸಿದ್ಧ ಕೃಷ್ಣ ಬೌಲಿಂಗ್‌ನಲ್ಲಿ ಶರತ್ ಪಡೆದ ಕ್ಯಾಚ್‌ಗೆ ಪಾರ್ಥ್ ಕೊಹ್ಲಿ (24 ರನ್) ನಿರ್ಗಮಿಸಿದರು.
ಕರ್ನಾಟಕ ತಂಡಕ್ಕೆ ಮಯಂಕ್ ಅಗರವಾಲ್ (28; 25ಎ) ಮತ್ತು ದೇವದತ್ತ ಪಡಿಕ್ಕಲ್ ಅವರು ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 73 ರನ್ ಗಳಿಸಿದರು. ಇನಿಂಗ್ಸ್‌ನ ಹತ್ತು ಮತ್ತು 12ನೇ ಓವರ್‌ನಲ್ಲಿ ನಿನಾದ್ ರಾತ್ವಾ ಅವರು ಕ್ರಮವಾಗಿ ಮಯಂಕ್ ಮತ್ತು ಪಡಿಕ್ಕಲ್ ವಿಕೆಟ್‌ಗಳನ್ನು ಗಳಿಸಿದರು. ಪಾಂಡೆ (3 ರನ್) ಅವರ ವಿಕೆಟ್ ಅನ್ನು ಮೆರಿವಾಲಾ ಪಡೆದರು.
ಆದರೆ, ಕರುಣ್ ನಾಯರ್ ಮತ್ತು ಅನಿರುದ್ಧ ಜೋಶಿ (ಔಟಾಗದೆ 11) ತಂಡದ ಆತಂಕವನ್ನು ದೂರ ಮಾಡಿ ಗೆಲುವಿನ ಗಡಿ ಮುಟ್ಟಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.