ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟ್ವೆಂಟಿ–20 ಕ್ರಿಕೆಟ್: ಕೃಣಾಲ್ ಕೈಚಳಕ; ರೋಹಿತ್ ದಾಖಲೆ ಪುಳಕ

1–1ರ ಸಮಬಲ ಸಾಧಿಸಿದ ಭಾರತ; ರಿಷಭ್‌ ಪಂತ್ ‘ಫಿನಿಷರ್‌’
Last Updated 8 ಫೆಬ್ರುವರಿ 2019, 19:27 IST
ಅಕ್ಷರ ಗಾತ್ರ

ಆಕ್ಲೆಂಡ್: ಎಡಗೈ ಸ್ಪಿನ್ನರ್ ಕೃಣಾಲ್ ಪಾಂಡ್ಯ ಕೈಚಳಕ ಮತ್ತು ‘ಹಿಟ್‌ಮ್ಯಾನ್ ’ ರೋಹಿತ್ ಶರ್ಮಾ ಅವರ ಸಿಕ್ಸರ್‌ಗಳ ಭರಾಟೆಯಲ್ಲಿ ನ್ಯೂಜಿಲೆಂಡ್ ತಂಡದ ಸರಣಿ ಗೆಲುವಿನ ಆಸೆಗೆ ಮಂಕು ಕವಿಯಿತು. ಭಾರತ ತಂಡದ ಕನಸು ಚಿಗುರಿತು.

ಶುಕ್ರವಾರ ಈಡನ್ ಪಾರ್ಕ್‌ನಲ್ಲಿ ನಡೆದ ಟ್ವೆಂಟಿ–20 ಪಂದ್ಯದಲ್ಲಿ ಏಳು ವಿಕೆಟ್‌ಗಳಿಂದ ಗೆದ್ದ ಭಾರತ ತಂಡ ಸರಣಿಯಲ್ಲಿ 1–1ರ ಸಮಬಲ ಸಾಧಿ ಸಿತು. ಮೊದಲ ಪಂದ್ಯದಲ್ಲಿ ಸೋತಿದ್ದ ರೋಹಿತ್ ಬಳಗವು ಪುಟಿದೆದ್ದಿತು. ಇದ ರಿಂದಾಗಿ ಭಾನುವಾರ ನಡೆಯಲಿರುವ ಸರಣಿಯ ಕೊನೆಯ ಪಂದ್ಯವು ಕುತೂಹಲದ ಕಣಜವಾಗಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆತಿಥೇಯ ತಂಡದ ಅಗ್ರಕ್ರಮಾಂಕದ ಬ್ಯಾಟ್ಸ್‌ಮನ್‌ಗಳಿಗೆ ಕೃಣಾಲ್ ಪಾಂಡ್ಯ (38ಕ್ಕೆ3) ಕಂಟಕ ವಾದರು. ಆದರೆ, ಮಧ್ಯಮಕ್ರಮಾಂಕದ ಬ್ಯಾಟ್ಟ್‌ಮನ್ ರಾಸ್ ಟೇಲರ್ (42; 36ಎಸೆತ, 3ಬೌಂಡರಿ) ಮತ್ತು ಕಾಲಿನ್ ಡಿ ಗ್ರ್ಯಾಂಡ್‌ಹೋಮ್ (50; 28ಎಸೆತ, 1ಬೌಂಡರಿ, 4ಸಿಕ್ಸರ್) ಅವರ ಅಬ್ಬರದ ಬ್ಯಾಟಿಂಗ್‌ನಿಂದ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 158 ರನ್‌ ಗಳಿಸಿತು.

ಗುರಿ ಬೆನ್ನಟ್ಟಿದ ಭಾರತದ ಆರಂಭಿಕ ಜೋಡಿ ರೋಹಿತ್ ಶರ್ಮಾ (50;29ಎ, 3ಬೌಂ,4ಸಿ) ಮತ್ತು ಶಿಖರ್ ಧವನ್ (30; 31ಎ,2ಬೌಂ) ಅಬ್ಬರದ ಆರಂಭ ನೀಡಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 79 ರನ್‌ಗಳನ್ನು ಸೇರಿಸಿದರು. ಆದರೆ, ಹತ್ತನೇ ಓವರ್‌ನಲ್ಲಿ ರೋಹಿತ್ ಮತ್ತು 11ನೇ ಓವರ್‌ನಲ್ಲಿ ಶಿಖರ್ ಔಟಾದರು. ವಿಜಯಶಂಕರ್ (14ರನ್) ಕೂಡ 14ನೇ ಓವರ್‌ನಲ್ಲಿ ನಿರ್ಗಮಿಸಿದ್ದರಿಂದ ಆತಂಕ ಎದುರಾಗಿತ್ತು.

ಆದರೆ, ರಿಷಭ್ ಪಂತ್ (ಔಟಾಗದೆ 40; 28ಎ,4ಬೌಂ, 1ಸಿ) ಮತ್ತು ಮಹೇಂದ್ರಸಿಂಗ್ ಧೋನಿ (ಔಟಾಗದೆ 20;17ಎ, 1ಬೌಂ) ತಂಡವನ್ನು ದಡ ಸೇರಿಸಿದರು. 19ನೇ ಓವರ್‌ನ ಐದನೇ ಎಸೆತದಲ್ಲಿ ವಿಜಯದ ರನ್ ಗಳಿಸಿ ಪಂದ್ಯದ ‘ಫಿನಿಷರ್‌’ ಆದ ರಿಷಭ್ ಅವರ ಆಟವನ್ನು ಧೋನಿ ಮೆಚ್ಚಿ ಬೆನ್ನುತಟ್ಟಿದರು. ಭಾರತ ತಂಡವು 18.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 162 ರನ್ ಗಳಿಸಿ ಗೆದ್ದಿತು.

ರೋಹಿತ್ ವಿಶ್ವದಾಖಲೆ: ರೋಹಿತ್ ಶರ್ಮಾ ಅವರು ಅಂತರರಾಷ್ಟ್ರೀಯ ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಆಟಗಾರರ ಪಟ್ಟಿಯ ಅಗ್ರಸ್ಥಾನಕ್ಕೇರಿದರು.

ಟ್ವೆಂಟಿ–20 ಕ್ರಿಕೆಟ್‌ನಲ್ಲಿ ಅವರು ಒಟ್ಟು 2288 ರನ್‌ ಗಳಿಸಿದರು. ಇದ ರೊಂದಿಗೆ ನ್ಯೂಜಿಲೆಂಡ್‌ನ ಮಾರ್ಟಿನ್ ಗಪ್ಟಿಲ್ (2272 ರನ್) ಅವರನ್ನು ಹಿಂದಿಕ್ಕಿದರು.

ರೋಹಿತ್ ಅವರು 2007ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಪದಾ ರ್ಪಣೆ ಮಾಡಿದ್ದರು. ಇಲ್ಲಿಯವರೆಗೆ ಒಟ್ಟು 92 ಪಂದ್ಯಗಳಲ್ಲಿ ಆಡಿದ್ದಾರೆ. ಅದರಲ್ಲಿ 16 ಅರ್ಧಶತಕಗಳು ಇವೆ. 138.41ರ ಸ್ಟ್ರೈಕ್‌ರೇಟ್‌ನಲ್ಲಿ ಅವರು ರನ್‌ ಗಳಿಸಿದ್ದಾರೆ.

ಪಾಕಿಸ್ತಾನದ ಶೋಯಬ್ ಮಲಿಕ್ (2263), ಭಾರತದ ವಿರಾಟ್ ಕೊಹ್ಲಿ (2167) ಮತ್ತು ನ್ಯೂಜಿಲೆಂಡ್‌ನ ಬ್ರೆಂಡನ್ ಮೆಕ್ಲಮ್ (2140) ಅವರು ನಂತರದ ಸ್ಥಾನದಲ್ಲಿದ್ದಾರೆ.

ಮಹಿಳೆಯರ ಟ್ವೆಂಟಿ–20 ಕ್ರಿಕೆಟ್‌ ನಲ್ಲಿ ಕಿವೀಸ್‌ ತಂಡದ ಸೂಝಿ ಬೇಟ್ಸ್‌ 3076 ರನ್‌ ಗಳಿಸಿದ್ದಾರೆ. ಅವರು 110 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT