ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup | ದಕ್ಷಿಣ ಆಫ್ರಿಕಾಕ್ಕೆ ಇಂದು ಇಂಗ್ಲೆಂಡ್ ಸವಾಲು

ಲಯ ಕಂಡುಕೊಂಡ ಇಂಗ್ಲೆಂಡ್ ಬ್ಯಾಟರ್‌ಗಳು
Published 21 ಜೂನ್ 2024, 1:09 IST
Last Updated 21 ಜೂನ್ 2024, 1:09 IST
ಅಕ್ಷರ ಗಾತ್ರ

ಗ್ರಾಸ್‌ ಐಲೆಟ್‌ (ಸೇಂಟ್‌ ಲೂಸಿಯಾ): ವೆಸ್ಟ್‌ ಇಂಡೀಸ್‌ ವಿರುದ್ಧ ಅಧಿಕಾರಯುತ ಜಯಗಳಿಸಿರುವ ಇಂಗ್ಲೆಂಡ್‌ ತಂಡ ಈಗ  ಆತ್ಮವಿಶ್ವಾಸದಲ್ಲಿದೆ. ಪ್ರಬಲ ಬೌಲಿಂಗ್ ದಾಳಿ ಹೊಂದಿರುವ ದಕ್ಷಿಣ ಆಫ್ರಿಕಾ ವಿರುದ್ಧ ಶುಕ್ರವಾರ ನಡೆಯುವ ಸೂಪರ್‌ ಎಂಟರ (ಎರಡನೇ ಗುಂಪು) ಪಂದ್ಯದಲ್ಲೂ ಇಂಗ್ಲೆಂಡ್‌ ಬ್ಯಾಟರ್‌ಗಳು ಅದೇ ಲಯದಲ್ಲಿ ಆಡುವ ವಿಶ್ವಾಸದಲ್ಲಿದ್ದಾರೆ.

ವೆಸ್ಟ್‌ ಇಂಡೀಸ್ ವಿರುದ್ಧ ಎಂಟು ವಿಕೆಟ್‌ ಜಯದ ಹಾದಿಯಲ್ಲಿ ಇಂಗ್ಲೆಂಡ್‌ನ ನೆಟ್‌ ರನ್‌ ರೇಟ್‌ (+1.34) ಸಹ ಸುಧಾರಿಸಿದ್ದು ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ. ದಕ್ಷಿಣ ಆಫ್ರಿಕಾದ ನೆಟ್‌ ರನ್‌ ರೇಟ್‌ +0.90 ಇದೆ. ಹೀಗಾಗಿ ಇಂಗ್ಲೆಡ್‌ ಒಳ್ಳೆಯ ಮನೋಬಲದಲ್ಲಿದೆ. ಈ ಪಂದ್ಯ ಗೆದ್ದವರು ಸೆಮಿಫೈನಲ್‌ಗೆ ಕಾಲಿಡುವುದು ಖಚಿತ.

ದಕ್ಷಿಣ ಆಫ್ರಿಕಾ ಇನ್ನೊಂದೆಡೆ ಸೂಪರ್‌ ಎಂಟರ ತನ್ನ ಮೊದಲ ಪಂದ್ಯದಲ್ಲಿ ಅಮೆರಿಕ ವಿರುದ್ಧ 18 ರನ್‌ಗಳಿಂದ ಗೆಲ್ಲುವ ಮೊದಲು ಆತಂಕದ ಕ್ಷಣಗಳನ್ನು ಎದುರಿಸಿತ್ತು.

ಇಂಗ್ಲೆಂಡ್‌ ಆರಂಭ ಆಟಗಾರ ಫಿಲ್ ಸಾಲ್ಟ್‌, ಟಿ20 ಬ್ಯಾಟರ್‌ಗಳ ಪಟ್ಟಿಯಲ್ಲಿ ತಮಗಿರುವ ಎರಡನೇ ಕ್ರಮಾಂಕಕ್ಕೆ ತಕ್ಕಂತೆ ಆಡಿದ್ದರು. 181 ರನ್‌ಗಳ ಸವಾಲಿನ ಮೊತ್ತ ಬೆನ್ನತ್ತುವಾಗ ಅಜೇಯ 87 ರನ್ ಬಾರಿಸಿದ್ದ ಅವರು ಎಚ್ಚರಿಕೆ ಮಿಶ್ರಿತ  ಆಕ್ರಮಣದ ಆಟವಾಡಿದ್ದರು. ಅವರ ಆರಂಭಿಕ ಜೊತೆಗಾರ ಜೋಸ್‌ ಬಟ್ಲರ್‌ ಉತ್ತಮ ಆರಂಭದ ಲಾಭ ಪಡೆಯಲು ವಿಫಲರಾಗಿದ್ದಾರೆ. 4 ಇನಿಂಗ್ಸ್‌ಗಳಿಂದ 91 ರನ್‌ಗಳನ್ನು ಗಳಿಸಿದ್ದಾರೆ. ಈ ಮಹತ್ವದ ಪಂದ್ಯದಲ್ಲಿ ಜಾನಿ ಬೇಸ್ಟೊ ಅಜೇಯ 48 ರನ್ ಗಳಿಸಿ, ಫಾರ್ಮ್ ಕಂಡುಕೊಂಡಿದ್ದು ಇಂಗ್ಲೆಂಡ್‌ಗೆ ಇನ್ನಷ್ಟು ಬಲ ನೀಡಿದೆ. ಆ ಪಂದ್ಯಕ್ಕೆ ಮೊದಲು ಅವರೂ ಪರದಾಡಿದ್ದರು.

ಹೀಗಾಗಿ ಕಗಿಸೊ ರಬಾಡ, ಕೇಶವ ಮಹಾರಾಜ್ ಅವರಿಗೆ ಇಂಗ್ಲೆಂಡ್‌ ಬ್ಯಾಟರ್‌ಗಳನ್ನು ಕಟ್ಟಿಹಾಕುವ ಸವಾಲು ಎದುರಾಗಿದೆ. ಇವರಿಬ್ಬರು ಮಧ್ಯಮ ಮತ್ತು ಕೊನೆಯ ಕೆಲವು ಓವರುಗಳಲ್ಲಿ ನಿಯಂತ್ರಣದ ಜೊತೆಗೆ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ್ದರಿಂದ ದಕ್ಷಿಣ ಆಫ್ರಿಕಾಕ್ಕೆ ಅಮೆರಿಕದ ಅನಿರೀಕ್ಷಿತ ಪ್ರತಿಹೋರಾಟ ಮೆಟ್ಟಿನಿಲ್ಲಲು ಸಾಧ್ಯವಾಗಿತ್ತು.

ಈ ಟೂರ್ನಿಯ ಲೀಗ್‌ ಪಂದ್ಯಗಳಲ್ಲಿ ಸತತವಾಗಿ ವಿಫಲರಾಗಿದ್ದ ಕ್ವಿಂಟನ್ ಡಿ ಕಾಕ್‌, ಅಮೆರಿಕ ವಿರುದ್ಧ 40 ಎಸೆತಗಳಲ್ಲಿ 74 ರನ್ ಗಳಿಸುವ ಮೂಲಕ ಲಯಕ್ಕೆ ಮರಳಿದ್ದಾರೆ.

ವಿಂಡೀಸ್ ವಿರುದ್ಧ ಇಂಗ್ಲೆಂಡ್‌ ಬೌಲರ್‌ಗಳ ನಿರ್ವಹಣೆ ಕಡಿಮೆಯೇನೂ ಆಗಿರಲಿಲ್ಲ. ಅವರು 52 ಡಾಟ್‌ ಬಾಲ್‌ಗಳನ್ನು ಮಾಡಿ ಆತಿಥೇಯರು 200ರ ಮೊತ್ತ ದಾಟದಂತೆ ಕಟ್ಟಿಹಾಕಿದರು. ಅದಿಲ್ ರಶೀದ್ ಇಕಾನಮಿ ದರ 5.25. ಅರ್ಚರ್ ಕೂಡ 12 ಡಾಟ್‌ ಬಾಲ್‌ಗಳನ್ನು ಮಾಡಿದ್ದರು. ಈಗ ಈ ಬೌಲರ್‌ಗಳಿಗೆ ಡಿ ಕಾಕ್ ಮತ್ತು ಹೆನ್ರಿಚ್‌ ಕ್ಲಾಸೆನ್‌ ಅವರನ್ನು ನಿಯಂತ್ರಿಸುವ ಸವಾಲು ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT