ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಮೆಲ್ಬರ್ನ್‌ ಮಣ್ಣಲ್ಲಿ ಮರಳಿ ಅರಳಿದ ಭಾರತ

ಅಡಿಲೇಡ್ ಆಘಾತ ತೊಡೆದು ಹಾಕಿದ ಅಜಿಂಕ್ಯ ರಹಾನೆಯ ನವೋತ್ಸಾಹಿ ಬಳಗ: ಸರಣಿಯಲ್ಲಿ 1–1ರಿಂದ ಸಮಬಲ
Last Updated 29 ಡಿಸೆಂಬರ್ 2020, 19:31 IST
ಅಕ್ಷರ ಗಾತ್ರ
ADVERTISEMENT
""
""

ಮೆಲ್ಬರ್ನ್: ಭಾರತ ಕ್ರಿಕೆಟ್ ತಂಡವು ಹತ್ತು ದಿನಗಳ ಹಿಂದೆ ಪಿಂಕ್ ಬಾಲ್ ಟೆಸ್ಟ್‌ನಲ್ಲಿ ಕಳೆದುಕೊಂಡಿದ್ದ ಗೌರವವನ್ನು ಕೆಂಪು ಚೆಂಡಿನ ಹೋರಾಟದಲ್ಲಿ ಮರಳಿ ಗಳಿಸಿತು.

ಆಸ್ಟ್ರೇಲಿಯಾ ತಂಡವನ್ನು ಅದರ ನೆಲದಲ್ಲಿಯೇ ನಡೆದ ಟೆಸ್ಟ್‌ನಲ್ಲಿ 8 ವಿಕೆಟ್‌ಗಳಿಂದ ಮಣಿಸಿ ಕೇಕೆ ಹಾಕಿತು. ಹಂಗಾಮಿ ನಾಯಕ ಅಜಿಂಕ್ಯ ರಹಾನೆ ಬಳಗವು ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ 1–1ರ ಸಮಬಲ ಸಾಧಿಸಿತು.

ಮಂಗಳವಾರ ಬೆಳಿಗ್ಗೆ 70 ರನ್‌ಗಳ ಗುರಿಯನ್ನು ಭಾರತವು ಬೆನ್ನಟ್ಟಿತು. 15.5 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು ಗುರಿ ಮುಟ್ಟಿತು. ಅಜಿಂಕ್ಯ ರಹಾನೆ (ಔಟಾಗದೆ 27; 40 ಎಸೆತ, 3ಬೌಂಡರಿ) ವಿಜಯದ ರನ್ ಗಳಿಸಿದರು. ಪದಾರ್ಪಣೆ ಪಂದ್ಯ ಆಡುತ್ತಿರುವ ಶುಭಮನ್ ಗಿಲ್ (ಔಟಾಗದೆ 35; 36ಎ, 7ಬೌಂ) ನಾಯಕನಿಗೆ ಜೊತೆ ನೀಡಿದರು. ಮಯಂಕ್ ಅಗರವಾಲ್ ಮತ್ತು ಚೇತೇಶ್ವರ್ ಪೂಜಾರ ಅವರ ವಿಕೆಟ್‌ಗಳು ಪತನವಾದಾಗ, ತಂಡದ ಮೊತ್ತವು 19 ರನ್‌ಗಳಾಗಿದ್ದವು. ಮತ್ತೊಮ್ಮೆ ಅಡಿಲೇಡ್‌ ಆಘಾತದ ನೆನಪು ಮರುಕಳಿಸಿತ್ತು. ಡಿಸೆಂಬರ್‌ 19ರಂದು ಎರಡನೇ ಇನಿಂಗ್ಸ್‌ನಲ್ಲಿ ಭಾರತ ತಂಡವು 36 ರನ್‌ಗಳಿಗೆ ಆಲೌಟ್ ಆದ ಕರಾಳ ಇತಿಹಾಸ ಮರುಕಳಿಸದಂತೆ ಅಜಿಂಕ್ಯ ನೋಡಿಕೊಂಡರು.

ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡವನ್ನು ಮುನ್ನಡೆಸಿದ ಅಜಿಂಕ್ಯ, ಅನುಭವಿ ಬೌಲರ್‌ಗಳಾದ ಇಶಾಂತ್ ಶರ್ಮಾ, ಮೊಹಮ್ಮದ್ ಶಮಿ, ಬ್ಯಾಟ್ಸ್‌ ಮನ್ ರೋಹಿತ್ ಶರ್ಮಾ ಅವರಿಲ್ಲದ ತಂಡಕ್ಕೆ ಭರ್ಜರಿ ಜಯದ ಕಾಣಿಕೆ ನೀಡಿದರು.

ಮೊದಲ ಇನಿಂಗ್ಸ್‌ನಲ್ಲಿ ಆಸ್ಟ್ರೇಲಿಯಾ ತಂಡವು ಗಳಿಸಿದ್ದ 195 ರನ್‌ಗಳಿಗೆ ಉತ್ತರವಾಗಿ ರಹಾನೆ ಬಳಗವು 326 ರನ್ ಗಳಿಸಿತ್ತು. 131 ರನ್‌ಗಳ ಮುನ್ನಡೆ ಗಳಿಸಿತ್ತು. ಸೋಮವಾರ ದಿನದಾಟದ ಮುಕ್ತಾಯಕ್ಕೆ ಆಸ್ಟ್ರೇಲಿಯಾ 66 ಓವರ್‌ ಗಳಲ್ಲಿ 6 ವಿಕೆಟ್‌ಗಳಿಗೆ 133 ರನ್‌ ಗಳಿಸಿತ್ತು.

ನಾಲ್ಕನೇ ದಿನ ಬೆಳಿಗ್ಗೆ ಈ ಮೊತ್ತಕ್ಕೆ 67 ರನ್‌ಗಳು ಸೇರುವಷ್ಟರಲ್ಲಿ ನಾಲ್ಕು ವಿಕೆಟ್‌ಗಳು ಪತನವಾದವು. ಚೊಚ್ಚಲ ಟೆಸ್ಟ್ ಆಡಿದ ಮೊಹಮ್ಮದ್ ಸಿರಾಜ್ ಮತ್ತು ಅಶ್ವಿನ್ ಅವರ ಅಮೋಘ ಬೌಲಿಂಗ್ ರಂಗೇರಿತು.

ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಎರಡೂ ಇನಿಂಗ್ಸ್‌ಗಳಲ್ಲಿ ಸೇರಿ 395 ರನ್‌ಗಳನ್ನು ಕೊಟ್ಟು 20 ವಿಕೆಟ್‌ಗಳನ್ನು ಉರುಳಿಸಿದರು. ಬೂಮ್ರಾ ಒಟ್ಟು ಆರು, ಸಿರಾಜ್ ಐದು, ಅಶ್ವಿನ್ ಐದು, ರವೀಂದ್ರ ಜಡೇಜ ಮೂರು ಮತ್ತು ಉಮೇಶ್ ಯಾದವ್ ಒಂದು ವಿಕೆಟ್ ಗಳಿಸಿದರು.

ಇದರಿಂದಾಗಿ ಅಲ್ಪಮೊತ್ತದ ಗುರಿ ಒಡ್ಡಲು ಮಾತ್ರ ಟಿಮ್ ಪೇನ್ ಬಳಗಕ್ಕೆ ಸಾಧ್ಯವಾಯಿತು.

ನಾಲ್ಕನೇ ಜಯ: ಮೆಲ್ಬರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತವು ಆಡಿರುವ 14 ಟೆಸ್ಟ್‌ಗಳಲ್ಲಿ ಇದು ನಾಲ್ಕನೇ ಜಯವಾಗಿದೆ. ವಿದೇಶಿ ಅಂಗಳದಲ್ಲಿ ಸಾಧಿಸಿದ ಅತಿ ಹೆಚ್ಚಿನ ಸಂಖ್ಯೆಯ ಸಾಧನೆಯೂ ಇದಾಗಿದೆ.

ರಹಾನೆ ನಾಯಕತ್ವದಲ್ಲಿ ಭಾರತವು ಜಯಿಸಿದ ಮೂರನೇ ಟೆಸ್ಟ್ ಇದು. 2016–17ರಲ್ಲಿ ಧರ್ಮಶಾಲಾದಲ್ಲಿ ಆಸ್ಟ್ರೇಲಿಯಾ ಎದುರು; 2018ರಲ್ಲಿ ಬೆಂಗಳೂರಿನಲ್ಲಿ ಅಫ್ಗಾನಿಸ್ತಾನ ವಿರುದ್ಧ ತಂಡವು ಗೆದ್ದಿತ್ತು.

ಮೂರನೇ ಟೆಸ್ಟ್ ಸಿಡ್ನಿಯಲ್ಲಿ
ಸಿಡ್ನಿ (ಪಿಟಿಐ):
ಬಾರ್ಡರ್‌–ಗಾವಸ್ಕರ್ ಟ್ರೋಫಿ ಟೆಸ್ಟ್ ಕ್ರಿಕೆಟ್ ಸರಣಿಯ ಮೂರನೇ ಪಂದ್ಯವು ಸಿಡ್ನಿಯಲ್ಲಿಯೇ ನಡೆಯಲಿದೆ ಎಂದು ಕ್ರಿಕೆಟ್ ಆಸ್ಟ್ರೇಲಿಯಾ ಖಚಿತಪಡಿಸಿದೆ.

ಸಿಡ್ನಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕೋವಿಡ್ –19 ಪ್ರಕರಣಗಳು ಹೆಚ್ಚುತ್ತಿದ್ದ ಕಾರಣಕ್ಕೆ ಜನವರಿ 7ರಿಂದ ನಡೆಯುವ ಪಂದ್ಯವನ್ನು ಮೆಲ್ಬರ್ನ್‌ಗೆ ಸ್ಥಳಾಂತರಿಸುವ ಕುರಿತು ಮಾತುಗಳು ಕೇಳಿಬಂದಿದ್ದವು.

ಹಲವು ಸವಾಲುಗಳ ನಡುವೆಯೂ ಕ್ರಿಕೆಟ್ ಆಸ್ಟ್ರೇಲಿಯಾವು ಮೂರನೇ ಪಂದ್ಯವನ್ನು ಸಿಡ್ನಿಯಲ್ಲಿ ನಡೆಸುವ ಅವಕಾಶವನ್ನು ಕೊಟ್ಟಿದೆ. ಪೂರ್ವನಿರ್ಧಾರದ ಮಾತನ್ನು ಉಳಿಸಿಕೊಂಡಿದೆ‘ ಎಂದು ಹಂಗಾಮಿ ಕಾರ್ಯನಿರ್ವಾಹಕ ಅಧಿಕಾರಿ ನಿಕ್ ಹಾಕ್ಲೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT