ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿರಾಟ್ ಬಳಗಕ್ಕೆ ಕಠಿಣ ಹಾದಿ

ಭಾರತ–ಇಂಗ್ಲೆಂಡ್‌ ಎರಡನೇ ಟೆಸ್ಟ್ ಇಂದಿನಿಂದ; ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಪ್ರವೇಶದ ಒತ್ತಡ
Last Updated 12 ಫೆಬ್ರುವರಿ 2021, 18:18 IST
ಅಕ್ಷರ ಗಾತ್ರ

ಚೆನ್ನೈ: ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ ಫೈನಲ್ ಪ್ರವೇಶಿಸಬೇಕಾದರೆ ಭಾರತ ಕ್ರಿಕೆಟ್ ತಂಡವು ಕಠಿಣ ಹಾದಿಯಲ್ಲಿ ಸಾಗುವ ಒತ್ತಡದಲ್ಲಿದೆ.

ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಉಳಿದಿರುವ ಮೂರು ಪಂದ್ಯಗಳಲ್ಲಿ ಎರಡರಲ್ಲಿ ಜಯಿಸಬೇಕು ಮತ್ತು ಒಂದೂ ಸೋಲುವಂತಿಲ್ಲ. ಈ ಕ್ಲಿಷ್ಟಕರ ಹಾದಿಯ ಮೊದಲ ಸವಾಲು ಶನಿವಾರ ಎದುರಾಗಲಿದೆ. ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ಎದುರು ಎರಡನೇ ಟೆಸ್ಟ್ ಪಂದ್ಯವನ್ನಾಡಲು ವಿರಾಟ್ ಬಳಗವು ಕಣಕ್ಕಿಳಿಯಲಿದೆ.

ಇಲ್ಲಿಯೇ ನಡೆದಿದ್ದ ಮೊದಲ ಟೆಸ್ಟ್‌ನಲ್ಲಿ227 ರನ್‌ಗಳಿಂದ ಭಾರತ ತಂಡವು ಸೋತಿತ್ತು. ಅದರಿಂದಾಗಿ ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಕುಸಿದಿತ್ತು. ಇಂಗ್ಲಂಡ್ ತಂಡವು ಅಗ್ರಸ್ಥಾನಕ್ಕೇರಿತ್ತು. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ರೂಟ್ ದ್ವಿಶತಕ ಬಾರಿಸಿದ್ದರು. ಬೆನ್ ಸ್ಟೋಕ್ಸ್‌, ಡಾಮ್ ಸಿಬ್ಲಿ ಕೂಡ ಮಿಂಚಿದ್ದರು. ಇಂಗ್ಲೆಂಡ್ ಸ್ಪಿನ್ನರ್‌ಗಳಾದ ಡಾಮ್ ಬೆಸ್ ಮತ್ತು ಜ್ಯಾಕ್ ಲೀಚ್ ತಮ್ಮ ನಾಯಕನ ಮನ ಗೆದ್ದಿದ್ದರು.

ಆದರೆ, ವಿರಾಟ್ ಕೊಹ್ಲಿ ವಿಷಯದಲ್ಲಿ ಈ ರೀತಿಯಾಗಲಿಲ್ಲ. ಸ್ಪಿನ್ನರ್ ಶಹಬಾಜ್ ನದೀಂ ದುಬಾರಿಯಾದರು. ವಾಷಿಂಗ್ಟನ್ ಸುಂದರ್ ಬ್ಯಾಟಿಂಗ್‌ನಲ್ಲಿ ಮಿಂಚಿದರು ಆದರೆ ಬೌಲಿಂಗ್‌ನಲ್ಲಿ ಎಡವಿದರು. ಆರ್. ಅಶ್ವಿನ್, ಜಸ್‌ಪ್ರೀತ್ ಬೂಮ್ರಾ ಮತ್ತು ಇಶಾಂತ್ ಶರ್ಮಾ ಮಾತ್ರ ತಮ್ಮ ಹೊಣೆಯನ್ನು ಅಚ್ಚುಕಟ್ಟಾಗಿ ನಿಭಾಯಿಸಿದರು.

ಎಲ್ಲಕ್ಕಿಂತ ದೊಡ್ಡ ಪೆಟ್ಟು ಬಿದ್ದಿದ್ದು ಬ್ಯಾಟಿಂಗ್‌ನಲ್ಲಿ. ಮೊದಲ ಇನಿಂಗ್ಸ್‌ನಲ್ಲಿ ಆರಂಭಿಕ ಜೋಡಿಯು ಮಂಕಾಯಿತು. ಚೇತೆಶ್ವರ್ ಪೂಜಾರ, ರಿಷಭ್ ಪಂತ್ ಮತ್ತು ವಾಷಿಂಗ್ಟನ್ ಮಾತ್ರ ಚೆ್ನ್ನಾಗಿ ಆಡಿದರು. ಆದರೂ ದೊಡ್ಡ ಅಂತರದ ಹಿನ್ನಡೆ ತಪ್ಪಿಸಲು ಸಾಧ್ಯವಾಗಲಿಲ್ಲ.

ಅನುಭವಿ ರೋಹಿತ್ ಶರ್ಮಾ, ಅಜಿಂಕ್ಯ ರಹಾನೆ ಎರಡೂ ಇನಿಂಗ್ಸ್‌ಗಳಲ್ಲಿ ರನ್‌ ಗಳಿಸದೇ ನಿರಾಶೆ ಮೂಡಿಸಿದರು. ವಿರಾಟ್ ಮೊದಲ ಇನಿಂಗ್ಸ್‌ನಲ್ಲಿ ಮಾಡಿದ ತಪ್ಪು ತಿದ್ದಿಕೊಂಡು ಎರಡನೇ ಇನಿಂಗ್ಸ್‌ನಲ್ಲಿ ಅರ್ಧಶತಕ ಗಳಿಸಿದರು. 14 ತಿಂಗಳ ನಂತರ ಶತಕ ಗಳಿಸುವ ಅವರ ಆಸೆ ಇನ್ನೂ ಕೈಗೂಡಿಲ್ಲ.

ಐದನೇ ದಿನದಾಟದಲ್ಲಿ ಯುವ ಬ್ಯಾಟ್ಸ್‌ಮನ್ ಶುಭಮನ್ ಗಿಲ್ ದಿಟ್ಟತನದಿಂದ ಅರ್ಧಶತಕ ಗಳಿಸಿದರು. ಆದರೆ, ದೊಡ್ಡ ಇನಿಂಗ್ಸ್‌ ಕಟ್ಟಲಿಲ್ಲ. ಇದರಿಂದಾಗಿ ಆರಂಭಿಕ ಶರ್ಮಾ ಬದಲಿಗೆ ಮಯಂಕ್ ಅಗರವಾಲ್ ಅಥವಾ ಕೆ.ಎಲ್. ರಾಹುಲ್ ಅವರಿಗೆ ಅವಕಾಶ ನೀಡಬೇಕೆಂಬ ಮಾತುಗಳೂ ಕೇಳಿಬಂದವು.

ಶಹಬಾಜ್ ನದೀಂ ಬದಲು ಸ್ಪಿನ್–ಆಲ್‌ರೌಂಡರ್‌ ಅಕ್ಷರ್ ಪಟೇಲ್ ಸ್ಥಾನ ಪಡೆಯುವುದು ಬಹುತೇಕ ಖಚಿತವಾಗಿದೆ. ರವೀಂದ್ರ ಜಡೇಜ ಇಡೀ ಸರಣಿಗೇ ಅಲಭ್ಯರಾಗಿರುವುದು ವಿರಾಟ್ ಚಿಂತೆ ಹೆಚ್ಚಿಸಿದೆ. ಅವರ ಸ್ಥಾನವನ್ನು ಪಟೇಲ್ ತುಂಬುವ ನಿರೀಕ್ಷೆ ಇದೆ.

ವಾಷಿಂಗ್ಟನ್ ಬದಲಿಗೆ ಹಾರ್ದಿಕ್ ಪಾಂಡ್ಯಗೆ ಸ್ಥಾನ ನೀಡುವ ಕುರಿತೂ ತಂಡದ ವ್ಯವಸ್ಥಾಪಕ ಮಂಡಳಿ ಚಿಂತನೆ ನಡೆಸಿದೆ. ಚೈನಾಮ್ಯಾನ್ ಬೌಲರ್‌ ಕುಲದೀಪ್ ಯಾದವ್ ಅವರಿಗೂ ಅವಕಾಶ ಕೊಡುವ ಸಾಧ್ಯತೆ ಇದೆ. ಮೊದಲ ದಿನದಿಂದಲೇ ಚೆಂಡು ಸ್ಪಿನ್ ಆಗುವ ಲಕ್ಷಣಗಳು ಪಿಚ್‌ನಲ್ಲಿ ಕಾಣುತ್ತಿವೆ. ಆದ್ದರಿಂದ ಮೂರು ಸ್ಪಿನ್ನರ್‌ಗಳನ್ನು ಕಣಕ್ಕಿ
ಳಿಸಿದರೆ ಅಚ್ಚರಿಯೇನೂ ಇಲ್ಲ. ಇದೆಲ್ಲದರ ಜೊತೆಗೆ ಫೀಲ್ಡಿಂಗ್‌ನಲ್ಲಿ ಬಿಗಿಯಾಗದಿದ್ದರೆ ಕ್ಯಾಚ್‌ಗಳ ಜೊತೆಗೆ ಜಯದ ಆಸೆಯೂ ಮಣ್ಣುಪಾಲಾ
ಗುವುದು ಖಚಿತ.

ಸಮರ್ಥ ನಾಯಕತ್ವ ಮತ್ತು ಅಂದಚೆಂದದ ಬ್ಯಾಟಿಂಗ್ ಮೂಲಕ ತಂಡವನ್ನು ಗೆಲುವಿನ ಹಾದಿಯಲ್ಲಿ ನಡೆಸಿದ ಜೋ ರೂಟ್ ಭರ್ತಿ ಆತ್ಮವಿಶ್ವಾ ಸದಲ್ಲಿದ್ದಾರೆ. ವಿಶ್ರಾಂತಿ ಪಡೆದಿರುವ ಜೇಮ್ಸ್‌ ಆ್ಯಂಡರ್ಸನ್ ಮತ್ತು ಜೋಸ್ ಬಟ್ಲರ್ ಬದಲಿಗೆ ಕ್ರಮವಾಗಿ ಸ್ಟುವರ್ಟ್ ಬ್ರಾಡ್ ಹಾಗೂ ಬೆನ್ ಫೋಕ್ಸ್‌ ಸ್ಥಾನ ಪಡೆದಿದ್ದಾರೆ. ಜೋಫ್ರಾ ಆರ್ಚರ್ ಬದಲಿಗೆ ಕ್ರಿಸ್ ವೋಕ್ಸ್ ಆಡುವ ಸಾಧ್ಯತೆ ಇದೆ.

ಭಾರತದ ಅಂಗಳದಲ್ಲಿ ಸ್ಪಿನ್ನರ್‌ಗಳ ಎಸೆತಗಳನ್ನು ’ಸ್ವೀಪ್‌‘ ಮಾಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ರೂಟ್ ಬಳಗದ ಜಯದ ಓಟಕ್ಕೆ ವಿರಾಟ್ ಬಳಗವು ತಡೆಯೊಡ್ಡುವುದೇ ಎಂಬ ಕುತೂಹಲ ಗರಿಗೆದರಿದೆ.

ತಂಡಗಳು:‌ ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶುಭಮನ್ ಗಿಲ್, ಚೇತೆಶ್ವರ್ ಪೂಜಾರ, ಅಜಿಂಕ್ಯ ರಹಾನೆ, ರಿಷಭ್ ಪಂತ್ (ವಿಕೆಟ್‌ಕೀಪರ್), ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಆರ್. ಅಶ್ವಿನ್, ಕುಲದೀಪ್ ಯಾದವ್, ಜಸ್‌ಪ್ರೀತ್ ಬೂಮ್ರಾ, ಇಶಾಂತ್ ಶರ್ಮಾ, ಹಾರ್ದಿಕ್ ಪಾಂಡ್ಯ, ಮಯಂಕ್ ಅಗರವಾಲ್.

ಇಂಗ್ಲೆಂಡ್: ಜೋ ರೂಟ್ (ನಾಯಕ), ರೋರಿ ಬರ್ನ್ಸ್, ಡಾಮ್ ಸಿಬ್ಲಿ, ಡ್ಯಾನ್ ಲಾರೆನ್ಸ್, ಬೆನ್ ಸ್ಟೋಕ್ಸ್‌, ಒಲಿ ಪೋಪ್,ಬೆನ್ ಫೋಕ್ಸ್‌ (ವಿಕೆಟ್‌ಕೀಪರ್), ಮೋಯಿನ್ ಅಲಿ, ಜ್ಯಾಕ್ ಲೀಚ್, ಕ್ರಿಸ್ ವೋಕ್ಸ್‌, ಸ್ಟುವರ್ಟ್ ಬ್ರಾಡ್, ಒಲಿ ಸ್ಟೋನ್.

ಪಂದ್ಯ ಆರಂಭ: ಬೆಳಿಗ್ಗೆ 9.30ರಿಂದ; ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್‌


ಐಪಿಎಲ್‌ನಿಂದ ಹೊರಗುಳಿಯುವ ನಿರ್ಧಾರ ಕಠಿಣ: ರೂಟ್

ಚೆನ್ನೈ (ಪಿಟಿಐ): ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯಿಂದ ಹೊರಗುಳಿಯುವ ನಿರ್ಧಾರ ಕೈಗೊಂಡಿದ್ದು ಅತ್ಯಂತ ಕಠಿಣ ಸವಾಲಾಗಿತ್ತು ಎಂದು ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಜೋ ರೂಟ್ ಹೇಳಿದರು.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ ಈ ವರ್ಷ ಇಂಗ್ಲೆಂಡ್ ತಂಡವು ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಲಿದೆ. ಆದ್ದರಿಂದ ಈ ನಿರ್ಧಾರ ಮಾಡಿದೆ‘ ಎಂದರು.

ರೂಟ್ ಸತತ ಮೂರನೇ ವರ್ಷದ ಐಪಿಎಲ್‌ನಿಂದ ಹೊರಗುಳಿಯುತ್ತಿದ್ದಾರೆ.

ಇದೇ 18ರಂದು ಐಪಿಎಲ್ ಆಟಗಾರರು ಹರಾಜು ಪ್ರಕ್ರಿಯೆ ನಡೆಯಲಿದೆ.

ಪ್ರೇಕ್ಕಕರಿಗೆ ಪ್ರವೇಶ

ಸುಮಾರು ಒಂದು ವರ್ಷದ ನಂತರ ಭಾರತದ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ಮೊದಲ ಬಾರಿ ಪ್ರೇಕ್ಷಕರ ಸಡಗರ ಅರಳಲಿದೆ.

ಚೆಪಾಕ್ ಕ್ರೀಡಾಂಗಣದಲ್ಲಿ ಶನಿವಾರ ಆರಂಭವಾಗಲಿರುವ ಭಾರತ–ಇಂಗ್ಲೆಂಡ್ ಸರಣಿಯ ಎರಡನೇ ಪಂದ್ಯವನ್ನು ವೀಕ್ಷಿಸಲು ಪ್ರೇಕ್ಷಕರಿಗೆ ಅವಕಾಶ ನೀಡಲಾಗಿದೆ. ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿ ಸಾಮರ್ಥ್ಯದ ಶೇ 50ರಷ್ಟು ಜನರಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ. ಆನ್‌ಲೈನ್ ಮೂಲಕ ಎಲ್ಲ ಟಿಕೆಟ್‌ಗಳೂ ಬಿಕರಿಯಾಗಿವೆ.

ಆನ್‌ಲೈನ್‌ನಲ್ಲಿ ಖರೀದಿಸಿದ ಟಿಕೆಟ್‌ಗಳ ಮುದ್ರಿತ ಪ್ರತಿಗಳನ್ನು ಪಡೆಯಲು ಶುಕ್ರವಾರ ಜನರು ಕ್ರೀಡಾಂಗಣದ ಮುಂದೆ ಸಾಲುಗಟ್ಟಿದ್ದರು. ಆದರೆ, ಪರಸ್ಪರ ಅಂತರ ನಿಯಮವನ್ನು ಪಾಲಿಸಿರಲಿಲ್ಲ.

ಪಂದ್ಯದ ವೇಳೆ ಕ್ರೀಡಾಂಗಣದಲ್ಲಿ ಕೊರೊನಾ ತಡೆ ಮಾರ್ಗಸೂಚಿಯನ್ನು ಪ್ರೇಕ್ಷಕರು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ತಮಿಳುನಾಡು ಕ್ರಿಕೆಟ್ ಸಂಸ್ಥೆ ಸೂಚಿಸಿದೆ.

ಕೊರೊನಾ ಸೃಷ್ಟಿಸಿದ ಬಿಕ್ಕಟ್ಟಿನಿಂದಾಗಿ ಕಳೆದೊಂದು ಭಾರತದಲ್ಲಿ ಸುಮಾರು 10 ತಿಂಗಳು ಕ್ರಿಕೆಟ್ ಚಟುವಟಿಕೆಗಳು ಸ್ಥಗಿತವಾಗಿದ್ದವು. ಕೊರೊನಾ ಕಾಲಘಟ್ಟದಲ್ಲಿ ಬಿಸಿಸಿಐ ಆಯೋಜಿಸಿರುವ ಮೊದಲ ಸರಣಿ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT