ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಟ್ಲರ್ ಶತಕ; ರಾಯಲ್ಸ್‌ಗೆ ಜಯದ ಪುಳಕ

ದೇವದತ್ತ, ಸಂಜು ಜೊತೆ ಉತ್ತಮ ಜೊತೆಯಾಟ; ಯಜುವೇಂದ್ರ ಚಾಹಲ್ ಹ್ಯಾಟ್ರಿಕ್
Last Updated 18 ಏಪ್ರಿಲ್ 2022, 19:25 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ):ಜೋಸ್ ಬಟ್ಲರ್ ಶತಕ ಸಿಡಿಸಿ ಸಂಭ್ರಮಿಸಿದ ಪಂದ್ಯದಲ್ಲಿ ಲೆಗ್ ಸ್ಪಿನ್ನರ್ ಯಜುವೇಂದ್ರ ಚಾಹಲ್ ಹ್ಯಾಟ್ರಿಕ್‌ ಮೂಲಕ ಮಿಂಚಿದರು. ಇವರಿಬ್ಬರ ಅಮೋಘ ಆಟದ ಬಲದಿಂದ ರಾಜಸ್ಥಾನ ರಾಯಲ್ಸ್ ತಂಡ ರೋಚಕ ಜಯ ಸಾಧಿಸಿತು.

ಬ್ರೆಬೊರ್ನ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ರಾಜಸ್ಥಾನ ತಂಡ 7 ರನ್‌ಗಳಿಂದ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಜಯ ಗಳಿಸಿತು. ಬಟ್ಲರ್ ಶತಕದ ಬಲದಿಂದ ರಾಜಸ್ಥಾನ 5ಕ್ಕೆ 217 ರನ್ ಗಳಿಸಿತ್ತು. ಗುರಿ ಬೆನ್ನತ್ತಿದ ಕೋಲ್ಕತ್ತ ತಂಡ ಆ್ಯರನ್ ಫಿಂಚ್ ಮತ್ತು ಶ್ರೇಯಸ್ ಅಯ್ಯರ್ ಅವರ ಅರ್ಧಶತಕಗಳ ಬಲದಿಂದ ಗೆಲುವಿನತ್ತ ಹೆಜ್ಜೆ ಹಾಕಿತ್ತು. ಆದರೆ 17ನೇ ಓವರ್‌ನಲ್ಲಿ ಹ್ಯಾಟ್ರಿಕ್ ಸೇರಿದಂತೆ ನಾಲ್ಕು ವಿಕೆಟ್ ಕಬಳಿಸಿದ ಚಾಹಲ್ ಪಂದ್ಯಕ್ಕೆ ತಿರುವು ನೀಡಿದರು.

ಗರಿಷ್ಠ ಮೊತ್ತ ದಾಖಲಿಸಿದ ರಾಯಲ್ಸ್

ಆರಂಭದಿಂದಲೇ ಸ್ಪೋಟಕ ಬ್ಯಾಟಿಂಗ್ ಮಾಡಿದ ಬಟ್ಲರ್ ಅವರ ಬಲದಿಂದ ರಾಜಸ್ಥಾನ ಈ ಆವೃತ್ತಿಯ ಗರಿಷ್ಠ ಮೊತ್ತ ದಾಖಲಿಸಿತು. ಬೆಂಗಳೂರು ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ 4ಕ್ಕೆ 216 ರನ್ ಗಳಿಸಿದ್ದು ಈ ವರೆಗಿನ ಗರಿಷ್ಠ ಸ್ಕೋರ್ ಆಗಿತ್ತು. ಕೋಲ್ಕತ್ತ ಎದುರು ಡೆಲ್ಲಿ ಕ್ಯಾಪಿಟಲ್ಸ್ 5ಕ್ಕೆ 215 ರನ್ ಗಳಿಸಿತ್ತು.

ಕೋಲ್ಕತ್ತ ಬೌಲರ್‌ಗಳನ್ನು ನಿರಾತಂಕವಾಗಿ ಎದುರಿಸಿದ ಜೋಸ್ ಬಟ್ಲರ್ ಲೀಲಾಜಾಲವಾಗಿ ಬೌಂಡರಿ ಮತ್ತು ಸಿಕ್ಸರ್‌ಗಳನ್ನು ಸಿಡಿಸಿದರು. 61 ಎಸೆತಗಳಲ್ಲಿ 103 ರನ್ ಗಳಿಸಿದ ಅವರ ಬ್ಯಾಟಿನಿಂದ 9 ಬೌಂಡರಿ ಮತ್ತು 5 ಸಿಕ್ಸರ್‌ಗಳು ಸಿಡಿದವು.

ದೇವದತ್ತ ಪಡಿಕ್ಕಲ್ ಜೊತೆ ಮೊದಲ ವಿಕೆಟ್‌ಗೆ 97 ರನ್ ಗಳಿಸಿದ ಅವರು ಇನಿಂಗ್ಸ್‌ಗೆ ಭದ್ರ ತಳಪಾಯ ಹಾಕಿಕೊಟ್ಟರು. ಉಮೇಶ್ ಯಾದವ್ ಅವರ ಎಸೆತವೊಂದರಲ್ಲಿ ಅವರು ಗಳಿಸಿದ ಸಿಕ್ಸರ್‌ನಲ್ಲಿ ಚೆಂಡು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದ ಟೆನಿಸ್ ಕೋರ್ಟ್‌ ಒಳಗೆ ಹೋಗಿ ಬಿದ್ದಿತು!

ದೇವದತ್ತ ಪಡಿಕ್ಕಲ್ ಔಟಾದ ನಂತರ ಕ್ರೀಸ್‌ಗೆ ಬಂದ ನಾಯಕ ಸಂಜು ಸ್ಯಾಮ್ಸನ್ ಕೂಡ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದರು. ಎರಡನೇ ವಿಕೆಟ್‌ಗೆ ಬಟ್ಲರ್ ಮತ್ತು ಸಂಜು 67 ರನ್‌ ಸೇರಿಸಿದರು. 34 ಎಸೆತಗಳಲ್ಲಿ ಈ ರನ್‌ಗಳು ಬಂದಿದ್ದವು.ಪ್ಯಾಟ್ ಕಮಿನ್ಸ್ ಎಸೆತವನ್ನು ಹುಕ್ ಮಾಡುವ ಪ್ರಯತ್ನದಲ್ಲಿ ವರುಣ್‌ ಚಕ್ರವರ್ತಿಗೆ ಕ್ಯಾಚ್ ಕೊಡುವ ಮೊದಲು ಬಟ್ಲರ್‌ ತಂಡದ ಮೊತ್ತವನ್ನು 180ರ ಗಡಿ ದಾಟಿಸಿದ್ದರು.

ಕೋಲ್ಕತ್ತದ ಯಾವ ಬೌಲರ್‌ಗೂ ಅವರನ್ನು ನಿಯಂತ್ರಿಸಲು ಆಗಲಿಲ್ಲ. ಪ್ಯಾಟ್ ಕಮಿನ್ಸ್ 4 ಓವರ್‌ಗಳಲ್ಲಿ 50 ರನ್ ನೀಡಿದರೆ ಉಮೇಶ್ ಯಾದವ್ 4 ಓವರ್‌ಗಳಲ್ಲಿ 44 ರನ್ ಕೊಟ್ಟರು. ಐದನೇ ಬೌಲರ್ ಆಗಿ ದಾಳಿಗೆ ಇಳಿದ ಆ್ಯಂಡ್ರೆ ರಸೆಲ್ 2 ಓವರ್‌ಗಳಲ್ಲಿ 29 ರನ್ ನೀಡಿ ಕೈಸುಟ್ಟುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT