ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಂಕಡಿಂಗ್‌’ ಕಹಿ ಮರೆಯುವ ಹಂಬಲ

ಹೈದರಾಬಾದ್‌ನಲ್ಲಿ ಇಂದು ಆತಿಥೇಯರಿಗೆ ರಾಜಸ್ಥಾನ್ ರಾಯಲ್ಸ್‌ ತಂಡದ ಚಾಲೆಂಜ್‌: ಉಭಯ ತಂಡಗಳಿಗೆ ಮೊದಲ ಜಯದ ಕನಸು
Last Updated 28 ಮಾರ್ಚ್ 2019, 19:21 IST
ಅಕ್ಷರ ಗಾತ್ರ

ಹೈದರಾಬಾದ್‌: ಎದುರಾಳಿ ತಂಡದ ನಾಯಕನಿಂದ ‘ಮಂಕಡಿಂಗ್‌’ಗೆ ಒಳಗಾಗಿ ಸೋಲಿನ ಕಹಿ ಅನುಭವಿಸಿದ ರಾಜಸ್ಥಾನ್ ರಾಯಲ್ಸ್‌ಗೆ ಈಗ ಗೆಲುವಿನ ತವಕ. ಶುಕ್ರವಾರ ಇಲ್ಲಿ ನಡೆಯಲಿರುವ ಐಪಿಎಲ್‌ ಪಂದ್ಯದಲ್ಲಿ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಸೆಣಸಲಿದೆ. ಸನ್‌ರೈಸರ್ಸ್‌ ಕೂಡ ಮೊದಲ ಪಂದ್ಯದಲ್ಲಿ ಸೋತಿರುವುದರಿಂದ ಗೆಲುವಿನ ಲಯಕ್ಕೆ ಮರಳಲು ಪ್ರಯತ್ನಿಸಲಿದೆ.

ರಾಯಲ್ಸ್, ಮೊದಲ ಪಂದ್ಯದಲ್ಲಿ ಕಿಂಗ್ಸ್ ಇಲೆವನ್ ಪಂಜಾಬ್ ಎದುರು ‘ನಾಟಕೀಯವಾಗಿ’ ಸೋತಿತ್ತು. 185 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ್ದ ತಂಡ 13 ಓವರ್‌ಗಳ ವರೆಗೆ ಜಯದ ಹಾದಿಯಲ್ಲೇ ಹೆಜ್ಜೆ ಹಾಕಿತ್ತು. ಆದರೆ ಉತ್ತಮ ಲಯದಲ್ಲಿದ್ದ ಜೋಸ್ ಬಟ್ಲರ್‌ ಔಟಾದ ನಂತರ ಸೋಲಿನ ಸುಳಿಯಲ್ಲಿ ಸಿಲುಕಿತ್ತು. ಬಟ್ಲರ್ ಅವರನ್ನು ಕಿಂಗ್ಸ್ ನಾಯಕ ರವಿಚಂದ್ರನ್ ಅಶ್ವಿನ್ ‘ಮಂಕಡಿಂಗ್’ ಮಾಡಿದ್ದು ವಿವಾದ ಸೃಷ್ಟಿಸಿತ್ತು. ಬಟ್ಲರ್‌, ಐಪಿಎಲ್‌ನಲ್ಲಿ ಹೀಗೆ ಔಟಾದ ಮೊದಲ ಬ್ಯಾಟ್ಸ್‌ಮನ್‌ ಆದರು.

ಮೊದಲ ಪಂದ್ಯದಲ್ಲಿ ನಾಯಕ ಅಜಿಂಕ್ಯ ರಹಾನೆ ಜೊತೆ ಇನಿಂಗ್ಸ್ ಆರಂಭಿಸಿದ್ದ ಬಟ್ಲರ್ ಮೊದಲ ವಿಕೆಟ್‌ಗೆ 78 ರನ್‌ ಸೇರಿಸಿದ್ದರು. ತಂಡದ ಇತರ ಬ್ಯಾಟ್ಸ್‌ಮನ್‌ಗಳು ನಿರೀಕ್ಷಿತ ಆಟ ಆಡಲಿಲ್ಲ. ಆದ್ದರಿಂದ ರಹಾನೆ, ಸಂಜು ಸ್ಯಾಮ್ಸನ್‌, ಸ್ಟೀವ್ ಸ್ಮಿತ್, ಬೆನ್‌ ಸ್ಟೋಕ್ಸ್ ಮುಂತಾದವರು ಶುಕ್ರವಾರ ತಮ್ಮ ಜವಾಬ್ದಾರಿ ನಿಭಾಯಿಸುವ ಒತ್ತಡದಲ್ಲಿದ್ದಾರೆ.

ಚೆಂಡು ವಿರೂಪ ಪ್ರಕರಣದಲ್ಲಿ ಸಿಲುಕಿ ಅಮಾನತಾಗಿದ್ದ ಸ್ಮಿತ್‌ ಮೊದಲ ಪಂದ್ಯದಲ್ಲಿ ಮಿಂಚಲು ವಿಫಲವಾಗಿದ್ದಾರೆ. ವಿಶ್ವಕಪ್ ಕ್ರಿಕೆಟ್‌ ಟೂರ್ನಿಯಲ್ಲಿ ಆಸ್ಟ್ರೇಲಿಯಾ ತಂಡದ ಭರವಸೆ ಎನಿಸಿರುವ ಅವರು ತಮ್ಮ ಸ್ಫೋಟಕ ಬ್ಯಾಟಿಂಗ್‌ ಶೈಲಿಗೆ ಮರಳುವ ಹುಮ್ಮಸ್ಸಿನಲ್ಲಿದ್ದಾರೆ.

ಕುಲಕರ್ಣಿ, ಗೌತಮ್ ಮೇಲೆ ಭರವಸೆ:ವೇಗಿ ಧವಳ್ ಕುಲಕರ್ಣಿ ಮತ್ತು ಆಫ್ ಸ್ಪಿನ್ನರ್‌ ಕೆ.ಗೌತಮ್‌ ಕಿಂಗ್ಸ್ ಎದುರಿನ ಪಂದ್ಯದಲ್ಲಿ ಉತ್ತಮ ಬೌಲಿಂಗ್ ಮಾಡಿದ್ದಾರೆ. ಆದರೆ ಬೆನ್ ಸ್ಟೋಕ್ಸ್ ಮತ್ತು ಜಯದೇವ ಉನದ್ಕತ್‌ ನಿರಾಸೆ ಮೂಡಿಸಿದ್ದಾರೆ. ವೇಗಿ ಜೊಫ್ರಾ ಆರ್ಚರ್‌, ನಾಲ್ಕು ಓವರ್‌ಗಳಲ್ಲಿ ಕೇವಲ 17 ರನ್‌ ನೀಡಿದ್ದಾರೆ. ಸನ್‌ರೈಸರ್ಸ್‌ ವಿರುದ್ಧವೂ ಅವರು ಮಿಂಚುವರೇ ಎಂಬುದನ್ನು ಕಾದುನೋಡಬೇಕು.

ಡೇವಿಡ್ ವಾರ್ನರ್‌ ಮೇಲೆ ಕಣ್ಣು: ಕೋಲ್ಕತ್ತ ನೈಟ್ ರೈಡರ್ಸ್‌ ವಿರುದ್ಧ ಆರು ವಿಕೆಟ್‌ಗಳಿಂದ ಸೋತಿರುವ ಸನ್‌ರೈಸರ್ಸ್‌ ತಂಡ ಡೇವಿಡ್‌ ವಾರ್ನರ್ ಮೇಲೆ ಭರವಸೆ ಇರಿಸಿಕೊಂಡಿದೆ. ಚೆಂಡು ವಿರೂಪ ಪ್ರಕರಣದಲ್ಲಿ ಸ್ಮಿತ್ ಜೊತೆ ಅಮಾನತಾಗಿದ್ದ ವಾರ್ನರ್‌ ಮೊದಲ ಪಂದ್ಯದಲ್ಲಿ 53 ಎಸೆತಗಳಲ್ಲಿ 85 ರನ್‌ ಗಳಿಸಿ ಮಿಂಚಿದ್ದರು. ಶುಕ್ರವಾರವೂ ಇದೇ ರೀತಿಯ ಸಾಮರ್ಥ್ಯ ಮುಂದುವರಿಸುವರೇ ಎಂಬುದು ಕುತೂಹಲ ಕೆರಳಿಸಿದೆ.

ನಾಯಕ ಕೇನ್ ವಿಲಿಯಮ್ಸನ್‌, ಇಂಗ್ಲೆಂಡ್‌ನ ಜಾನಿ ಬೇಸ್ಟೊ, ಆಲ್‌ರೌಂಡರ್ ವಿಜಯಶಂಕರ್‌, ಸ್ಫೋಟಕ ಬ್ಯಾಟ್ಸ್‌ಮನ್‌ ಮನೀಷ್ ಪಾಂಡೆ, ಯೂಸುಫ್ ಪಠಾಣ್‌ ಮತ್ತು ಶಕೀಬ್ ಅಲ್ ಹಸನ್‌ ಅವರನ್ನು ಒಳಗೊಂಡಿರುವ ತಂಡ ಯಾವುದೇ ಸವಾಲನ್ನು ಮೆಟ್ಟಿನಿಲ್ಲಲು ಸಮರ್ಥವಾಗಿದೆ.

ಮಂಕಡಿಂಗ್ ವಿವಾದ ವಿಷಾದಕರ

ನವದೆಹಲಿ: ರವಿಚಂದ್ರನ್ ಅವರಂಥ ಆಟಗಾರ ಮಂಕಡಿಂಗ್‌ ವಿವಾದಕ್ಕೆ ಒಳಗಾದದ್ದು ವಿಷಾದಕರ ಎಂದು ಹಿರಿಯ ಕ್ರಿಕೆಟಿಗ ಮದನ್‌ಲಾಲ್ ಅಭಿಪ್ರಾಯಪಟ್ಟರು.

‘ಅಶ್ವಿನ್ ಅವರು ಎದುರಾಳಿ ತಂಡದ ಬ್ಯಾಟ್ಸ್‌ಮನ್‌ನನ್ನು ಔಟ್ ಮಾಡಿದಾಗ ನಿಯಮವನ್ನು ಉಲ್ಲಂಘಿಸಿಲ್ಲ. ಆದರೂ ಅಶ್ವಿನ್ ಮಾಡಿದ್ದು ಸರಿಯಲ್ಲ. ಇದು, ದೊಡ್ಡ ಆಟಗಾರನೊಬ್ಬನ ಸಣ್ಣತನದಂತೆ ನನಗೆ ಕಂಡಿದೆ’ ಎಂದು ಮದನ್‌ಲಾಲ್ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT