ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ಪ್ರಶಸ್ತಿ ಬರ ನೀಗಿಸುವ ’ಟೆಸ್ಟ್‘

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ಇಂದಿನಿಂದ: ರೋಹಿತ್ ಶರ್ಮಾ ನಾಯಕತ್ವಕ್ಕೆ ಪ್ಯಾಟ್ ಕಮಿನ್ಸ್ ಬಳಗದ ಸವಾಲು
Published 6 ಜೂನ್ 2023, 23:36 IST
Last Updated 6 ಜೂನ್ 2023, 23:36 IST
ಅಕ್ಷರ ಗಾತ್ರ

ಲಂಡನ್ : ಭಾರತ ಮತ್ತು ಆಸ್ಟ್ರೇಲಿಯಾ ಕ್ರಿಕೆಟ್‌ ತಂಡಗಳು ಇದೇ ಮೊದಲ ಬಾರಿಗೆ ತಟಸ್ಥ ತಾಣದಲ್ಲಿ ಟೆಸ್ಟ್ ಪಂದ್ಯ ಆಡಲಿವೆ.

ಬುಧವಾರ ಇಲ್ಲಿ ಆರಂಭವಾಗಲಿರುವ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ (ಡಬ್ಲ್ಯುಟಿಸಿ) ರೋಹಿತ್ ಶರ್ಮಾ ನಾಯಕತ್ವದ ಭಾರತ ಹಾಗೂ ವೇಗಿ ಪ್ಯಾಟ್ ಕಮಿನ್ಸ್‌ ನೇತೃತ್ವದ ಆಸ್ಟ್ರೇಲಿಯಾ ಬಳಗಗಳು ಸಮಬಲದ ಹಣಾಹಣಿ ನಡೆಸುವ ನಿರೀಕ್ಷೆ ಇದೆ.

ಭಾರತವು ಕಳೆದ ಒಂದು ದಶಕದಿಂದ ಐಸಿಸಿ ಟ್ರೋಫಿ ಗೆಲುವಿನ ಬರ ಎದುರಿಸುತ್ತಿದೆ. 2013ರಲ್ಲಿ ಇಂಗ್ಲೆಂಡ್‌ನಲ್ಲಿ ಮಹೇಂದ್ರಸಿಂಗ್ ಧೋನಿ ಬಳಗವು ಚಾಂಪಿಯನ್ಸ್‌ ಟ್ರೋಫಿ ಗೆದ್ದಿತ್ತು. ಅದರ ನಂತರ ಮೂರು ಬಾರಿ ನಿಗದಿಯ ಓವರ್‌ಗಳ ಮಾದರಿಯ ವಿಶ್ವಕಪ್ ಟೂರ್ನಿಗಳಲ್ಲಿ ಫೈನಲ್‌ಗಳಲ್ಲಿ ಸೋತಿದೆ.  ಇನ್ನೂ ನಾಲ್ಕು ಟೂರ್ನಿಗಳ ಸೆಮಿಫೈನಲ್‌ಗಳಲ್ಲಿ ಮಣಿದಿತ್ತು. 2021ರ ಟಿ20 ವಿಶ್ವಕಪ್ ಟೂರ್ನಿಯ ಪ್ರಾಥಮಿಕ ಸುತ್ತಿನಲ್ಲಿಯೇ ಹೊರಬಿದ್ದಿತ್ತು.

ಮೊದಲ ಡಬ್ಲ್ಯುಟಿಸಿ ಫೈನಲ್‌ನಲ್ಲಿಯೂ ಫೈನಲ್‌ನಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಭಾರತ ತಂಡವು ಸೋತಿತ್ತು. ಈ ಬಾರಿ ರೋಹಿತ್ ನಾಯಕತ್ವದ ’ಟೆಸ್ಟ್‘ ಇದಾಗಲಿದೆ. ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಆರು ಸರಣಿಗಳನ್ನು ಭಾರತ ಆಡಿದೆ. ಅದರಲ್ಲಿ ದಕ್ಷಿಣ ಆಫ್ರಿಕಾ ಎದುರು ಮಾತ್ರ ಸೋತಿತ್ತು. ಅದರ ನಂತರ ವಿರಾಟ್ ನಾಯಕತ್ವದಿಂದ ಕೆಳಗಿಳಿದಿದ್ದರು.

ಹೋದ ಬಾರಿಯ ಫೈನಲ್‌ನಲ್ಲಿ ಪರಿಸ್ಥಿತಿಗೆ ತಕ್ಕ ತಂಡವನ್ನು ಕಣಕ್ಕಿಳಿಸುವಲ್ಲಿ ಭಾರತವು ಎಡವಿತ್ತು. ನ್ಯೂಜಿಲೆಂಡ್ ಎದುರು ಸೌತಾಂಪ್ಟನ್‌ನಲ್ಲಿ ನಡೆದಿದ್ದ ಫೈನಲ್‌ನಲ್ಲಿ ಇಬ್ಬರು ಸ್ಪಿನ್ನರ್‌ಗಳೊಂದಿಗೆ ಕಣಕ್ಕಿಳಿದಿದ್ದು ಫಲ ನೀಡಿರಲಿಲ್ಲ.

ಒವಲ್ ಕ್ರೀಡಾಂಗಣಕ್ಕೆ ಸುದೀರ್ಘ ಇತಿಹಾಸವಿದೆ. 143 ವರ್ಷಗಳ ಹಿಂದೆ ಇಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಿತ್ತು. ಇದೀಗ ಇಲ್ಲಿ ಬೇಸಿಗೆಯ ಆರಂಭವಾಗುತ್ತಿದೆ. ಪಿಚ್‌ಗಳು ಸತ್ವಯುತವಾಗಿ  ಕಂಗೊಳಿಸುತ್ತಿವೆ. ಆದ್ದರಿಂದ ನಾಲ್ಕನೇ ವೇಗಿಯನ್ನು ಕಣಕ್ಕಿಳಿಸುವುದು ಒಳ್ಳೆಯ ನಿರ್ಧಾರವಾಗಬಹುದು.

ಬ್ಯಾಟಿಂಗ್ ವಿಭಾಗದಲ್ಲಿ ರಿಷಭ್ ಪಂತ್ ಗೈರುಹಾಜರಿ ಎದ್ದುಕಾಣುತ್ತಿದೆ. ವಿದೇಶಿ ಪಿಚ್‌ಗಳಲ್ಲಿ ಅವರು ಭಾರತ ತಂಡವನ್ನು ಹಲವು ಬಾರಿ ಅವರು ಸೋಲಿನಿಂದ ಪಾರು ಮಾಡಿರುವ ದಾಖಲೆ ಇದೆ. ಅವರ ಬದಲಿಗೆ ಈಗ ವಿಕೆಟ್‌ಕೀಪಿಂಗ್ ಮತ್ತು ಮಧ್ಯಮಕ್ರಮಾಂಕದ ಬ್ಯಾಟಿಂಗ್ ಹೊಣೆ ಕೆ.ಎಸ್. ಭರತ್ ಅಥವಾ ಇಶಾನ್ ಕಿಶನ್ ಅವರ ಹೆಗಲಿಗೆ ಬೀಳುವ ಸಾಧ್ಯತೆ ಇದೆ.

ಇತ್ತೀಚೆಗೆ ಐಪಿಎಲ್‌ನಲ್ಲಿ ರನ್‌ಗಳ ಹೊಳೆ ಹರಿಸಿದ್ದ ಶುಭಮನ್ ಗಿಲ್, ವಿರಾಟ್ ಕೊಹ್ಲಿ ಹಾಗೂ ಟೆಸ್ಟ್ ಪರಿಣತ ಚೇತೇಶ್ವರ್ ಪೂಜಾರ ತಮ್ಮ ಸಾಮರ್ಥ್ಯಕ್ಕೆ  ತಕ್ಕಂತೆ ಆಡುವ ನಿರೀಕ್ಷೆ ಇದೆ. ರೋಹಿತ್ ಲಯಕ್ಕೆ ಮರಳಿದರೆ ತಂಡದ ಬಲ ಹೆಚ್ಚುವುದು ಖಚಿತ. ಮಧ್ಯಮ ಕ್ರಮಾಂಕದಲ್ಲಿ ಅಜಿಂಕ್ಯ ರಹಾನೆ ಅವಕಾಶ ಗಿಟ್ಟಿಸುವ ಸಾಧ್ಯತೆ ಇದೆ. ಪ್ಯಾಟ್ ಕಮಿನ್ಸ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೊಲಾಂಡ್ ಹಾಗೂ ಸ್ಪಿನ್ನರ್ ನೇಥನ್ ಲಯನ್ ಅವರ ಬೌಲಿಂಗ್ ಎದುರಿಸುವ ಸವಾಲು ಅವರ ಮುಂದಿದೆ.

ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಅನುಭವಿ ಉಮೇಶ್ ಯಾದವ್ ಹಾಗೂ ಆಲ್‌ರೌಂಡರ್ ಶಾರ್ದೂಲ್ ಠಾಕೂರ್ ಸಂಯೋಜನೆಯೊಂದಿಗೆ ತಂಡವು ಕಣಕ್ಕಿಳಿಯುವ ನಿರೀಕ್ಷೆ ಇದೆ. ಆಸ್ಟ್ರೇಲಿಯಾ ತಂಡಕ್ಕೆ ಉಸ್ಮಾನ್ ಖ್ವಾಜಾ, ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ಹಾಗೂ ಮಾರ್ನಸ್ ಲಾಬುಷೇನ್ ಬ್ಯಾಟಿಂಗ್ ಬಲವಿದೆ. 

ಐಪಿಎಲ್ ಮುಗಿಸಿ ಬಂದಿರುವ ಭಾರತದ ಬಹುತೇಕ ಆಟಗಾರರಿಗೆ ಕೆಂಪು ಚೆಂಡಿನ ಆಟದಲ್ಲಿ ಸಾಮರ್ಥ್ಯ ತೋರುವ ಸವಾಲೂ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT