ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

T20 World Cup: ಆ್ಯರನ್ ಮಿಂಚು- ಅಮೆರಿಕ ಶುಭಾರಂಭ

ಆ್ಯಂಡ್ರಿಸ್ ಗೌಸ್ ಅರ್ಧಶತಕ; ಗಮನ ಸೆಳೆದ ಶ್ರೇಯಸ್ ಮೊವ್ವಾ
Published 2 ಜೂನ್ 2024, 16:49 IST
Last Updated 2 ಜೂನ್ 2024, 16:49 IST
ಅಕ್ಷರ ಗಾತ್ರ

ಡಲ್ಲಾಸ್: ಆತಿಥೇಯ ಅಮೆರಿಕ ತಂಡವು ಆ್ಯರನ್ ಜೋನ್ಸ್ ಅವರ ಅಮೋಘ ಬ್ಯಾಟಿಂಗ್ ಬಲದಿಂದ ಭಾನುವಾರ ಆರಂಭವಾದ ಟಿ20 ಕ್ರಿಕೆಟ್ ವಿಶ್ವಕಪ್ ಟೂರ್ನಿಯ ಚೊಚ್ಚಲ ಪಂದ್ಯದಲ್ಲಿ ಜಯಭೇರಿ ಬಾರಿಸಿತು. 

ಗ್ರ್ಯಾಂಡ್ ಪ್ರಯರಿ ಕ್ರೀಡಾಂಗಣದಲ್ಲಿ ನಡೆದ ಎ ಗುಂಪಿನ ಪಂದ್ಯದಲ್ಲಿ ಅಮೆರಿಕ ತಂಡವು 7 ವಿಕೆಟ್‌ಗಳಿಂದ ಗೆದ್ದು 2 ಅಂಕಗಳನ್ನು ತನ್ನದಾಗಿಸಿಕೊಂಡಿತು. 

ಟಾಸ್ ಗೆದ್ದ ಅಮೆರಿಕ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಕೆನಡಾ ತಂಡವು 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 194 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಅಮೆರಿಕ ತಂಡವು ಆ್ಯರನ್ ಜೋನ್ಸ್ (ಔಟಾಗದೆ 94; 40ಎಸೆತ) ಅವರ ಬಲದಿಂದ ಇನಿಂಗ್ಸ್‌ನಲ್ಲಿ ಇನ್ನೂ 14 ಎಸೆತಗಳು ಬಾಕಿ ಇರುವಾಗಲೇ 3 ವಿಕೆಟ್‌ಗಳಿಗೆ 197 ರನ್ ಹೊಡೆದು ಜಯಿಸಿತು. 

ಸ್ಥಳೀಯ ಹೀರೊ ಆ್ಯರನ್ ಜೋನ್ಸ್‌ ಬ್ಯಾಟಿಂಗ್ ಗಮನ ಸೆಳೆಯಿತು. ಕ್ವೀನ್ಸ್‌ನಲ್ಲಿ ಜನಿಸಿ ನ್ಯೂಯಾರ್ಕ್‌ನಲ್ಲಿ ಬೆಳೆದ ಆಟಗಾರ ಅ್ಯರನ್ ಕೆನಡಾ ಬೌಲರ್‌ಗಳಿಗೆ ಬಿಸಿ ಮುಟ್ಟಿಸಿದರು. 10 ಸಿಕ್ಸರ್‌ ಹಾಗೂ 4 ಬೌಂಡರಿ ಸಿಡಿಸಿದ ಅವರು ಮಿಂಚಿದರು. 

ಅವರೊಂದಿಗೆ ಆ್ಡಂಡ್ರಿಸ್ ಗೌಸ್ ಕೂಡ ವಿಜೃಂಭಿಸಿದರು. ಅವರು 46 ಎಸೆತಗಳಲ್ಲಿ 65 ರನ್‌ ಗಳಿಸಿದರು. ಅವರ ಆಟದಲ್ಲಿ ಏಳು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳಿದ್ದವು. 

42 ರನ್‌ಗಳಿಗೆ ಎರಡು ವಿಕೆಟ್ ಕಳೆದುಕೊಂಡಿದ್ದ ಅಮೆರಿಕ ತಂಡ ಸಂಕಷ್ಟದಲ್ಲಿತ್ತು. ಕೆನಡಾದ ಖಲೀಂ ಸನಾ ಅವರು ಅಮೆರಿಕದ ಬ್ಯಾಟರ್ ಸ್ಟೀವ್ ಟೇಲರ್ ವಿಕೆಟ್ ಕಬಳಿಸಿದರು. ಟೇಲರ್ ಖಾತೆ ತೆರೆಯಲಿಲ್ಲ. 

16 ರನ್ ಗಳಿಸಿದ್ದ ನಾಯಕ ಮೊನಾಂಕ್ ಪಟೇಲ್ ಅವರ ವಿಕೆಟ್‌ ಗಳಿಸಿದ ದಿಲೊನ್ ಹೆಲಿಗರ್ ಮಿಂಚಿದರು. ಈ ಹಂತದಲ್ಲಿ ಜೊತೆಗೂಡಿದ ಜೋನ್ಸ್ ಮತ್ತು ಗೌಸ್ ಅವರು ಮೂರನೇ ವಿಕೆಟ್ ಜೊತೆಯಾಟದಲ್ಲಿ 131 ರನ್‌ ಸೇರಿಸಿ ತಂಡದ ಗೆಲುವಿಗೆ ನೆರವಾದರು. 

ಕೆನಡಾ ತಂಡದ ಬ್ಯಾಟಿಂಗ್ ಚೆನ್ನಾಗಿತ್ತು.  ಆ್ಯರನ್ ಜಾನ್ಸನ್ (23; 16ಎ) ಹಾಗೂ ನವನೀತ್ ಧಲಿವಾಲ್ (61; 44ಎ) ಮೊದಲ ವಿಕೆಟ್ ಜೊತೆಯಾಟದಲ್ಲಿ 43 ರನ್ ಸೇರಿಸಿ ಉತ್ತಮ ಆರಂಭ ನೀಡಿದರು. 

ಮಧ್ಯಮ ಕ್ರಮಾಂಕದಲ್ಲಿ ನಿಕೊಲಸ್ ಕಿರ್ಟನ್ (51; 31ಎ) ಹಾಗೂ ಕನ್ನಡಿಗ ಶ್ರೇಯಸ್ ಮೊವ್ವಾ (32; 16ಎ) ತಂಡದ ಮೊತ್ತ ಹೆಚ್ಚಿಸಿದರು. 

ಸಂಕ್ಷಿಪ್ತ ಸ್ಕೋರು: ಕೆನಡಾ: 20 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 194 (ಆ್ಯರನ್ ಜಾನ್ಸನ್ 23, ನವನೀತ್ ಧಲಿವಾಲ್ 61, ನಿಕೊಲಸ್ ಕಿರ್ಟನ್ 51, ಶ್ರೇಯಸ್ ಮೊವ್ವಾ ಔಟಾಗದೆ 32, ಅಲಿ ಖಾನ್ 41ಕ್ಕೆ1, ಹರ್ಮೀತ್ ಸಿಂಗ್ 27ಕ್ಕೆ1, ಕೋರಿ ಆ್ಯಂಡರ್ಸನ್ 29ಕ್ಕೆ1) ಅಮೆರಿಕ: 17.4 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 197 (ಆ್ಯಂಡ್ರಿಸ್ ಗೌಸ್ 65, ಆ್ಯರನ್ ಜೋನ್ಸ್ ಔಟಾಗದೆ 94, ಖಲೀಂ ಸನಾ 34ಕ್ಕೆ1, ದಿಲೊನ್ ಹೆಲಿಗರ್ 19ಕ್ಕೆ1) ಫಲಿತಾಂಶ: ಅಮೆರಿಕ ತಂಡಕ್ಕೆ 7 ವಿಕೆಟ್‌ಗಳ ಜಯ. ಪಂದ್ಯಶ್ರೇಷ್ಠ: ಆ್ಯರನ್ ಜೋನ್ಸ್. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT