ಬುಧವಾರ, ಏಪ್ರಿಲ್ 21, 2021
32 °C
ಒಡಿಶಾ ಎದುರು ಗೆದ್ದ ಕರ್ನಾಟಕ; ಸಮರ್ಥ್ ಅರ್ಧಶತಕ

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್: ದೇವದತ್ತ ಶತಕಕ್ಕೆ ಒಲಿದ ಜಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್ತ ಪಡಿಕ್ಕಲ್‌ ಬುಧವಾರ  ಶತಕದಂಚಿನಲ್ಲಿ ಎಡವಲಿಲ್ಲ. ಭರ್ಜರಿ ಬ್ಯಾಟಿಂಗ್‌ ಮೂಲಕ ನೂರರ ಗಡಿಯನ್ನೂ ದಾಟಿದರು, ತಂಡಕ್ಕೆ ಜಯದ ಕಾಣಿಕೆಯನ್ನೂ ನೀಡಿದರು. 

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಸಿ ಗುಂಪಿನ ಮೂರನೇ ಪಂದ್ಯದಲ್ಲಿ ಕರ್ನಾಟಕ ತಂಡವು 101 ರನ್‌ಗಳಿಂದ ಒಡಿಶಾ ವಿರುದ್ಧ ಜಯಿಸಿತು.  

ನಗರದ ಹೊರವಲಯದಲ್ಲಿರುವ ಆಲೂರಿನ ಕೆಎಸ್‌ಸಿಎ ಕ್ರೀಡಾಂಗಣದಲ್ಲಿ ಟಾಸ್ ಗೆದ್ದ ಒಡಿಶಾ ಫೀ್ಲ್ಡಿಂಗ್ ಆಯ್ಕೆ ಮಾಡಿಕೊಂಡಿತು.  ಆತಿಥೇಯ ತಂಡದ ಆರಂಭಿಕ ಜೋಡಿ ಆರ್. ಸಮರ್ಥ್ (60; 83ಎಸೆತ, 4ಬೌಂ) ಮತ್ತು ದೇವದತ್ತ (152; 140ಎ, 14ಬೌಂ, 5ಸಿ) ಮೊದಲ ವಿಕೆಟ್ ಜೊತೆಯಾಟದಲ್ಲಿ 140 ರನ್‌ಗಳನ್ನು ಸೇರಿಸಿದರು. ಈ ಅಡಿಪಾಯದ ಮೇಲೆ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 329 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಒಡಿಶಾ ತಂಡವು 44 ಓವರ್‌ಗಳಲ್ಲಿ 228 ರನ್‌ ಗಳಿಸಲಷ್ಟೇ ಶಕ್ತವಾಯಿತು. ಶುಭ್ರಾಂಶು ಸೆನಾಪತಿ (78; 92ಎ, 3ಬೌಂ, 2ಸಿ) ಮತ್ತು ಅಂಕಿತ್ ಯಾದವ್ (56; 63ಎ) ಅವರ ಅರ್ಧಶತಕಗಳು ತಂಡದ ಜಯಕ್ಕೆ ಸಾಕಾಗಲಿಲ್ಲ.

ಕರ್ನಾಟಕ ತಂಡದ ನಾಯಕ ಸಮರ್ಥ್ ಹೋದ ಪಂದ್ಯದಲ್ಲಿ ಬಿಹಾರ ವಿರುದ್ಧ ಶತಕ ಬಾರಿಸಿದ್ದರು. ಅದೇ ಪಂದ್ಯದಲ್ಲಿ ದೇವದತ್ತ ಮೂರು ರನ್‌ಗಳ ಅಂತರದಿಂದ ಶತಕ ತಪ್ಪಿಸಿಕೊಂಡಿದ್ದರು. ಆದರೆ ಇಲ್ಲಿ ಒಡಿಶಾ ಬೌಲರ್‌ಗಳಿಗೆ ಅವರನ್ನು ತಡೆಯಲು ಸಾಧ್ಯವಾಗಲಿಲ್ಲ. 108.17ರ ಸ್ಟ್ರೈಕ್‌ರೇಟ್‌ನಲ್ಲಿ ರನ್‌ ಸೂರೆ ಮಾಡಿದರು. ಹೋದ ವರ್ಷ ಐಪಿಎಲ್‌ನಲ್ಲಿ ಮಿಂಚಿದ್ದ ದೇವದತ್ತ ಇಲ್ಲಿಯೂ ಅದೇ ಸೊಗಸು ತೋರಿದರು.

ಸಮರ್ಥ್ ಔಟಾದ ನಂತರ, ಎರಡನೇ ವಿಕೆಟ್ ಜೊತೆಯಾಟದಲ್ಲಿ ದೇವದತ್ತ ಮತ್ತು ಕೆ.ವಿ. ಸಿದ್ಧಾರ್ಥ್ (41;32ಎ) 65 ರನ್‌ಗಳನ್ನು ಸೇರಿಸಿದರು. 46ನೇ ಓವರ್‌ನಲ್ಲಿ ಸೂರ್ಯಕಾಂತ್ ಪ್ರಧಾನ್ ಎಸೆತದಲ್ಲಿ ದೇವದತ್ತ ರಾಜೇಶ್ ಧೂಪರ್‌ಗೆ ಕ್ಯಾಚಿತ್ತರು. ಆರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಅಭಿಮನ್ಯು ಮಿಥುನ್ (ಔಟಾಗದೆ 40; 17ಎ) ಐದು ಸಿಕ್ಸರ್‌ಗಳನ್ನು ಸಿಡಿಸಿದರು. ಇದರಿಂದಾಗಿ ತಂಡವು ಮುನ್ನೂರರ ಗಡಿ ದಾಟಿತು.

ಬೌಲಿಂಗ್‌ನಲ್ಲಿ ಮಿಂಚಿದ ಪ್ರಸಿದ್ಧ ಕೃಷ್ಣ ಮತ್ತು ಶ್ರೇಯಸ್ ಗೋಪಾಲ್ ತಲಾ ಮೂರು ವಿಕೆಟ್ ಗಳಿಸಿ ಒಡಿಶಾ ತಂಡದ ಪತನಕ್ಕೆ ಕಾರಣರಾದರು.

ಈ ಜಯದೊಂದಿಗೆ ಹಾಲಿ ಚಾಂಪಿಯನ್ ಕರ್ನಾಟಕವು ಪಾಯಿಂಟ್ ಪಟ್ಟಿಯಲ್ಲಿ ಎಂಟು ಅಂಕಗಳೊಂದಿಗೆ ಎರಡನೇ ಸ್ಥಾನಕ್ಕೆ ತಲುಪಿದೆ. 12 ಪಾಯಿಂಟ್ ಗಳಿಸಿ ಅಗ್ರಸ್ಥಾನದಲ್ಲಿರುವ ಕೇರಳ ತಂಡವನ್ನು ಶುಕ್ರವಾರ ಎದುರಿಸಲಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು