ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್. ಕೌಶಿಕ್ ಬರಹ: ಐಸಿಸಿ ಟ್ರೋಫಿಗೆ ಕಣ್ಣಿಟ್ಟು ಕೊಹ್ಲಿ ಕೈಬಿಟ್ಟ ಬಿಸಿಸಿಐ

Last Updated 21 ಜನವರಿ 2022, 19:31 IST
ಅಕ್ಷರ ಗಾತ್ರ

ಭಾರತ ಕ್ರಿಕೆಟ್‌ ತಂಡದಲ್ಲಿ ಹೋದ ಸೆಪ್ಟೆಂಬರ್ ಮಧ್ಯದಿಂದ ಆರಂಭವಾದ ಮೈದಾನದಾಚೆಯ ಗೊಂದಲಮಯ ವಿಷಯ ಜನವರಿ 15ರಂದು ವಿರಾಟ್ ಕೊಹ್ಲಿ ದಿಢೀರ್ ಎಂದು ಟೆಸ್ಟ್ ತಂಡದ ನಾಯಕತ್ವ ಬಿಡುವ ಘೋಷಣೆಯೊಂದಿಗೆ ಉತ್ತುಂಗ ತಲುಪಿತು. ವಿರಾಟ್ ಕೊಹ್ಲಿಯ ಏಳು ವರ್ಷಗಳ ವರ್ಣರಂಜಿತ ನಾಯಕತ್ವದ ಅವಧಿಯಲ್ಲಿ ಭಾರತ ತಂಡವು ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಏಳನೇ ಸ್ಥಾನದಿಂದ ಅಗ್ರಸ್ಥಾನಕ್ಕೇರಿತು. ಸಾಗರೋತ್ತರ ಸರಣಿಗಳಲ್ಲಿ ಇತಿಹಾಸ ಬರೆಯಿತು. ಆಸ್ಟ್ರೇಲಿಯಾ, ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ಸರಣಿಗಳ ಜಯ, ಹೋದ ಬೇಸಿಗೆಯಲ್ಲಿ ಇಂಗ್ಲೆಂಡ್‌ನಲ್ಲಿ ಭಾರತ 2–1ರ ಮುನ್ನಡೆಯ ಸಾಧನೆ. ತಂಡದಲ್ಲಿ ಕೋವಿಡ್ ಪ್ರಕರಣ ವರದಿಯಾದ ಕಾರಣ ಕೊನೆಯ ಪಂದ್ಯ ಮುಂದೂಡಲಾಗಿತ್ತು.

ಆದರೆ ಸೆಪ್ಟೆಂಬರ್ 16ರಂದು ತಿಳಿಗೊಳದಲ್ಲಿ ಕಲ್ಲುಬಿತ್ತು. ಗೊಂದಲದ ಅಲೆ ಎದ್ದಿತು. ಅದಕ್ಕೆ ಕಾರಣ ವಿರಾಟ್ ಕೊಹ್ಲಿ ಟಿ20 ಕ್ರಿಕೆಟ್ ತಂಡದ ನಾಯಕತ್ವ ಬಿಡುವುದಾಗಿ ಮಾಡಿದ ಘೋಷಣೆ. ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ನಡೆಯಲಿದ್ದ ಟಿ20 ವಿಶ್ವಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಭಾರತ ತಂಡವು ಕಣಕ್ಕಿಳಿಯುವ ಐದು ವಾರಗಳ ಮುನ್ನ ಕೊಹ್ಲಿಯ ಈ ಹೇಳಿಕೆ ಸಂಚಲನ ಮೂಡಿಸಿತ್ತು. ಮೂರು ಮಾದರಿಗಳಲ್ಲಿಯೂ ತಂಡದ ನಾಯಕನಾಗಿ ಮತ್ತು ಪ್ರಮುಖ ಬ್ಯಾಟ್ಸ್‌ಮನ್ ಆಗಿ ಕೊಹ್ಲಿ ತಮ್ಮ ಕಾರ್ಯಭಾರವನ್ನು ಕಡಿಮೆ ಮಾಡಿಕೊಳ್ಳಲು ಈ ಹೆಜ್ಜೆಯಿಟ್ಟಿದ್ದರಲ್ಲಿ ಅಚ್ಚರಿಯೇನೂ ಇಲ್ಲ. 2017ರಿಂದ ಅವರು ಮೂರು ಮಾದರಿಗಳ ತಂಡದ ಮುಂದಾಳತ್ವ ವಹಿಸಿಕೊಂಡೂ ವೈಯಕ್ತಿಕ ಫಿಟ್‌ನೆಸ್ ಕಾಪಾಡಿಕೊಂಡವರು.

ಅವರು ಏಕದಿನ ಮತ್ತು ಟೆಸ್ಟ್‌ ತಂಡಗಳಿಗೆ ತಮ್ಮ ನಾಯಕತ್ವದ ಸಾಮರ್ಥ್ಯ ಧಾರೆಯೆರೆಯಲು ನಿರ್ಧರಿಸಿದ್ದರು. ಬಿಳಿಚೆಂಡಿನ ಮಾದರಿಯ ತಂಡಕ್ಕೆ ಇಬ್ಬರು ನಾಯಕರನ್ನು ನೇಮಕ ಮಾಡುವ ಅವಕಾಶಗಳು ಭಾರತದಲ್ಲಿ ಕಡಿಮೆ ಎನ್ನುವುದು ಬಹುಶಃ ಕೊಹ್ಲಿಗೆ ಅರಿವಿದ್ದಿರಬೇಕು. ಆದರೆ ಭಾರತ ಮಹಿಳಾ ಕ್ರಿಕೆಟ್ ತಂಡದಲ್ಲಿ ಮಿಥಾಲಿ ರಾಜ್ ಆ ರೀತಿ ಏಕದಿನ ಮತ್ತು ಟೆಸ್ಟ್ ಮಾದರಿಗಳಿಗೆ ನಾಯಕಿಯಾಗಿರುವುದು ನಿಜ. ಹೈದರಾಬಾದಿನ ಮಿಥಾಲಿ 2020ರ ಜೂನ್‌ನಲ್ಲಿ ಟಿ20 ಕ್ರಿಕೆಟ್‌ನಿಂದ ನಿವೃತ್ತಿ ಪಡೆಯುವ ಮುನ್ನವೂ ಈ ವ್ಯವಸ್ಥೆ ಇತ್ತು. ಆದರೆ ಈ ಸೂತ್ರವನ್ನು ಪುರುಷರ ತಂಡಕ್ಕೆ ಅನ್ವಯಿಸುವುದು ತುಸು ಕಠಿಣವೇ ಸರಿ.

ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯು ವಾಸ್ತವ ಸಂಗತಿಗಳತ್ತ ಚಿತ್ತ ಹರಿಸಿತು. ಮುಂಬರುವ 22 ತಿಂಗಳುಗಳ ಅವಧಿಯಲ್ಲಿ ಆಸ್ಟ್ರೇಲಿಯಾವು ಟಿ20 ವಿಶ್ವಕಪ್ ಮತ್ತು ಭಾರತವು 50 ಓವರ್‌ಗಳ ಮಾದರಿಯ ವಿಶ್ವಕಪ್ ಟೂರ್ನಿಗಳನ್ನು ಆಯೋಜಿಸಲಿವೆ. ಆ ಟೂರ್ನಿಗಳಲ್ಲಿ ಆಡುವ ಸೀಮಿತ ಓವರ್‌ಗಳ ಮಾದರಿಯ ತಂಡದ ಆಟಗಾರರನ್ನು ಸಿದ್ಧಗೊಳಿಸುವುದು ಮುಖ್ಯ. ಅದಕ್ಕಾಗಿ ಟೂರ್ನಿ ಮತ್ತು ಮಾದರಿಗಳ ಬ್ರ್ಯಾಂಡ್ ಕ್ರಿಕೆಟ್‌ಗೆ ತಕ್ಕ ಹೊಂದಾಣಿಕೆಯನ್ನು ರೂಢಿಗತಗೊಳಿಸಲು ಬಿಳಿಚೆಂಡಿನ ಮಾದರಿಯ ತಂಡಕ್ಕೆ ಏಕನಾಯಕತ್ವ ಸೂಕ್ತ ಎಂಬ ಸ್ಪಷ್ಟ ನಿರ್ಧಾರ ಕೈಗೊಂಡಿತು. ಅವರ ನಾಯಕತ್ವದಲ್ಲಿ 2019ರ ವಿಶ್ವಕಪ್ ಟೂರ್ನಿಗಳು ಮತ್ತು 2017ರ ಚಾಂಪಿಯನ್ಸ್‌ ಟ್ರೋಫಿ ಟೂರ್ನಿಗಳಲ್ಲಿ ಭಾರತವು ಪ್ರಶಸ್ತಿ ಜಯಿಸಿಲ್ಲ. ಆದ್ದರಿಂದ ಮುಂದಿನ ಟೂರ್ನಿಗಳಲ್ಲಿ ಚಾಂಪಿಯನ್‌ ಪಟ್ಟದ ಮೇಲೆ ಕಣ್ಣಿಟ್ಟಿದೆ.

ಇದರ ಪರಿಣಾಮವಾಗಿ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೈಬಿಡಲಾಯಿತು. ದ್ವಿಪಕ್ಷೀಯ ಸರಣಿಗಳಲ್ಲಿ ಕೊಹ್ಲಿ ದಾಖಲೆಗಳು ಅಮೋಘವಾಗಿವೆ. ಆದರೂ ಐಸಿಸಿ ಟ್ರೋಫಿ ವಿಜಯದ ಸಾಧನೆಗಳಿಗೆ ಅವು ಸರಿಸಮವಾಗುವುದಿಲ್ಲ. ಟಿ20 ನಾಯಕತ್ವ ಬಿಡದಂತೆ ಮನವೋಲಿಸಲು ತಾವು ಕೊಹ್ಲಿಯೊಂದಿಗೆ ಮಾತುಕತೆ ನಡೆಸಿದ್ದನ್ನು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದರು. ಒಪ್ಪದಿದ್ದ ಕೊಹ್ಲಿಯನ್ನು ಏಕದಿನ ತಂಡದ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಸದಾ ಅಧಿಕಾರದ ಸುತ್ತ ಸುಳಿದಾಡುವವರೇ ತುಂಬಿರುವ ಬಿಸಿಸಿಐನ ಕಾರಿಡಾರ್‌ನಲ್ಲಿ ಕೊಹ್ಲಿಯನ್ನು ಈ ವಿಷಯದಲ್ಲಿ ಬೆಂಬಲಿಸುವ ಸ್ನೇಹಿತರು ಹೆಚ್ಚಿರಲಿಲ್ಲ. ಹೋದ ತಿಂಗಳು ದಕ್ಷಿಣ ಆಫ್ರಿಕಾಕ್ಕೆ ತೆರಳುವ ಮುಂಚೆ ಮುಂಬೈನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನೀಡಿದ ಹೇಳಿಕೆಯು ಬಹಳಷ್ಟು ಸಂಚಲನಕ್ಕೆ ಕಾರಣವಾಯಿತು. ಆದರೆ ಅವರು ಆಗಲೇ ದಕ್ಷಿಣ ಆಫ್ರಿಕಾ ಸರಣಿಯ ನಂತರ ಟೆಸ್ಟ್ ನಾಯಕತ್ವ ಬಿಟ್ಟುಬಿಡಲು ಮಾನಸಿಕವಾಗಿ ನಿರ್ಧರಿಸಿರಬಹುದು. ಅದೇನೆ ಇರಲಿ; ಒಂದು ಕಾಲದ ವಿವಾದಾತೀತ ಮತ್ತು ಪ್ರಶ್ನಾತೀತ ನಾಯಕ ಕೊಹ್ಲಿಯ ಕೈಯಿಂದ ಸಮಯ ಕೈಜಾರುತ್ತಿರುವುದು ದಿಟವಾಗಿತ್ತು.

ತಂಡದ ಮುಖ್ಯ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ನಿರ್ಗಮನದ ಬಳಿಕ ರಾಹುಲ್ ದ್ರಾವಿಡ್ ನೇಮಕವಾದಾಗಲೇ ತಂಡದಲ್ಲಿ ನವನಾಯಕತ್ವದ ಜಟಿಲ ಸಮಸ್ಯೆಯನ್ನು ಬಿಡಿಸುವ ಹಗ್ಗಜಗ್ಗಾಟ ಆರಂಭವಾಗಿತ್ತು. ಇದೇ ಹೊತ್ತಿನಲ್ಲಿ ರೋಹಿತ್ ಶರ್ಮಾ ಗಾಯಗೊಂಡರು. ಆದ್ದರಿಂದ ದಕ್ಷಿಣ ಆಫ್ರಿಕಾದ ಏಕದಿನ ಸರಣಿಯಲ್ಲಿ ಕೆ.ಎಲ್. ರಾಹುಲ್‌ಗೆ ನಾಯಕತ್ವದ ಪರೀಕ್ಷೆಯೊಡ್ಡಲಾಯಿತು. ಆದರೆ ಅಂತರರಾಷ್ಟ್ರೀಯ ಕ್ರಿಕೆಟ್‌ ನಾಯಕತ್ವದಲ್ಲಿ ರಾಹುಲ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಅವರ ಮುಂದಾಳತ್ವದಲ್ಲಿ ಭಾರತವು ಎರಡನೇ ಟೆಸ್ಟ್ ಮತ್ತು ಮೊದಲ ಏಕದಿನ ಪಂದ್ಯಗಳಲ್ಲಿ ಸೋತಿತು. ಈ ಫಲಿತಾಂಶವಷ್ಟೇ ರಾಹುಲ್ ಸಾಮರ್ಥ್ಯದ ಅಳತೆಗೋಲು ಆಗಲಿಕ್ಕಿಲ್ಲ.

ಚೇತನ್ ಶರ್ಮಾ ಮತ್ತು ಇನ್ನೂ ನಾಲ್ವರು ಆಯ್ಕೆಗಾರರ ಮುಂದೆ ಹಲವು ಸವಾಲುಗಳಿವೆ; ಎಲ್ಲ ಮಾದರಿಗಳ ಹೊಣೆಯನ್ನೂ ರೋಹಿತ್ ಮಡಿಲಿಗೆ ಹಾಕುವುದೇ ಅಥವಾ ಸೀಮಿತ ಓವರ್‌ಗಳ ಹೊಣೆಯನ್ನು ಮಾತ್ರ ನೀಡುವುದೇ, ಟೆಸ್ಟ್ ನಾಯಕತ್ವಕ್ಕೆ ಮತ್ತೊಬ್ಬ ಆಟಗಾರನನ್ನು ನೇಮಕ ಮಾಡುವುದೇ ಎಂಬುದು ಅದರಲ್ಲಿ ಮುಖ್ಯವಾದವು. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ಟೆಸ್ಟ್ ತಂಡದ ಉಪನಾಯಕರಾಗಿದ್ದ ಅಜಿಂಕ್ಯ ರಹಾನೆಯನ್ನು ಕೈಬಿಟ್ಟು ಈ ಹೊಣೆಯನ್ನು ರೋಹಿತ್‌ಗೆ ನೀಡಲಾಗಿತ್ತು. ಈ ಆಧಾರದಲ್ಲಿ ರೋಹಿತ್ ಟೆಸ್ಟ್‌ ತಂಡದ ನಾಯಕತ್ವಕ್ಕೂ ಅರ್ಹರಾಗಬಹುದೇ? ಗೊತ್ತಿಲ್ಲ.

ಒಟ್ಟಾರೆ, ಈ ಆಯ್ಕೆ ಮಾಡುವುದು ಶರ್ಮಾ ಬಳಗಕ್ಕೆ ಸುಲಭವಲ್ಲ. ಈ ಹಿಂದೆ ಕೊಹ್ಲಿಗೆ ಲಭಿಸಿದ್ದಂತಹ ಮೂರು ಮಾದರಿಗಳ ನಾಯಕತ್ವದ ಅವಕಾಶವನ್ನು ರೋಹಿತ್‌ಗೆ ನೀಡುವುದು ಅಲ್ಪಕಾಲದವರೆಗೆ ಸಾಧನೆಯ ಮೇಲೆ ನಿಗಾ ಇಡುವುದು ಅಥವಾ ರಾಹುಲ್‌ ಅವರತ್ತ ದೃಷ್ಟಿ ಹೊರಳಿಸುವುದು ಒಂದು ದಾರಿ. ತಾಂತ್ರಿಕ ನೈಪುಣ್ಯ ಮತ್ತು ಪರಿಸ್ಥಿತಿ ನಿಭಾಯಿಸುವ ಸಾಮರ್ಥ್ಯದಲ್ಲಿ ರಾಹುಲ್ ಅವರು ಕೊಹ್ಲಿಯನ್ನು ಸರಿಗಟ್ಟುವ ವಿಶ್ವಾಸ ಮೂಡಿಸುವುದು ಅವಶ್ಯಕವಾಗಲಿದೆ. ಯುವ ವಿಕೆಟ್‌ಕೀಪರ್ –ಬ್ಯಾಟ್ಸ್‌ಮನ್ ರಿಷಭ್ ಪಂತ್ ಕಳೆದ ಕೆಲವು ಕಾಲದಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. 24 ವರ್ಷದ ಪಂತ್‌ಗೆ ಹೊಣೆ ನೀಡಿದರೆ ಅವರ ನಿರ್ಭೀತ ಶೈಲಿಯ ಆಟಕ್ಕೆ ತೊಡಕಾಗಬಹುದು. ಆದ್ದರಿಂದ ಕೆಲವು ಕಾಲ ರೋಹಿತ್ ಅಥವಾ ರಾಹುಲ್ ನಾಯಕತ್ವದಲ್ಲಿ ಪಳಗಲಿ ಎಂದೂ ಸಮಿತಿ ಯೋಚಿಸಬಹುದು.

ಮುಂದಿನ ಮೂರು ವಾರಗಳಲ್ಲಿ ಆಯ್ಕೆ ಸಮಿತಿಯು ಒಂದು ಸ್ಪಷ್ಟ ನಿರ್ಧಾರಕ್ಕೆ ಬರಬಹುದು. ಫೆಬ್ರುವರಿ 25ರಿಂದ ಭಾರತವು ಶ್ರೀಲಂಕಾ ಎದುರಿನ ಎರಡು ಟೆಸ್ಟ್‌ಗಳ ಸರಣಿಗೆ ಆತಿಥ್ಯ ವಹಿಸಲಿದೆ. ಕೊಹ್ಲಿಯ ವಾರಸುದಾರ ಯಾರೆಂಬುದಕ್ಕೆಈ ಸರಣಿಯಲ್ಲಿ ಸ್ಪಷ್ಟತೆ ದೊರಕಲಿದೆ. ಕೊಹ್ಲಿ ನಿರ್ಧಾರದಿಂದ ಸೃಷ್ಟಿಯಾಗಿರುವ ನಿರ್ವಾತವನ್ನು ತುಂಬುವ ವ್ಯಕ್ತಿ ಯಾರೆಂಬುದು ತಿಳಿಯಲಿದೆ. ಅದಕ್ಕಾಗಿ ಒಂದಿಷ್ಟು ಚರ್ಚೆಗಳು ನಡೆಯಬಹುದು. ಅಲ್ಲದೇ ಈ ಲೇಖನ ಬರೆದು ಮುಗಿಸುವ ಹೊತ್ತಿಗೆ ಐಸಿಸಿ ರ‍್ಯಾಂಕಿಂಗ್‌ನಲ್ಲಿ ಭಾರತವು ಮೂರನೇ ಸ್ಥಾನಕ್ಕೆ ಕುಸಿದಿದೆ. ಇದೂ ಚರ್ಚೆಯ ಕೇಂದ್ರಬಿಂದುವಾಗಬಹುದು.

ಲೇಖಕ: ಕ್ರೀಡಾ ಬರಹಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT