ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೋವಾ: 88 ಗಣಿಗಾರಿಕೆ ಗುತ್ತಿಗೆ ರದ್ದು

Last Updated 7 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ನವದೆಹಲಿ: 2014ರ ಡಿಸೆಂಬರ್‌ ಮತ್ತು 2015ರ ಜನವರಿ ನಡುವೆ ಗೋವಾದ ಬಿಜೆಪಿ ಸರ್ಕಾರ ನೀಡಿದ್ದ 88 ಗಣಿಗಾರಿಕೆ ಗುತ್ತಿಗೆಗಳನ್ನು ಸುಪ್ರೀಂ ಕೋರ್ಟ್‌ ಬುಧವಾರ ರದ್ದುಗೊಳಿಸಿದೆ.

ಗಣಿ ಹರಾಜನ್ನು ಕಡ್ಡಾಯಗೊಳಿಸುವ ತಿದ್ದುಪಡಿ ಕಾನೂನು ಜಾರಿಗೆ ಬರುವುದಕ್ಕಿಂತಲೂ ಮೊದಲು ‘ಯಾವುದೇ ಸಾಮಾಜಿಕ ಮತ್ತು ಸಾರ್ವಜನಿಕ ಉದ್ದೇಶವಿಲ್ಲದೇ’ ಕಬ್ಬಿಣ ಮತ್ತು ಮ್ಯಾಂಗನೀಸ್‌ ಅದಿರು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ ಎಂದು ಈ ಕ್ರಮದ ವಿರುದ್ಧ ಆರೋಪ ಕೇಳಿ ಬಂದಿತ್ತು.

‘ಗುತ್ತಿಗೆ ನೀಡಲು ರಾಜ್ಯ ಸರ್ಕಾರ ತೋರಿದ ತರಾತುರಿ ವರ್ತನೆಯನ್ನು ನೋಡಿದರೆ ಗಣಿಗಾರಿಕೆ ಗುತ್ತಿಗೆ ಪಡೆದಿರುವವರ ಮತ್ತು ಸಮಾಜದ ಕೆಲವು ವರ್ಗಗಳ ಅನುಕೂಲಕ್ಕಾಗಿ ನೆಲದ ಕಾನೂನನ್ನು ಬಲಿ ಕೊಡಲು ಅದು ಸಿದ್ಧವಿತ್ತು ಎಂಬ ಭಾವನೆಯನ್ನು ಹುಟ್ಟುಹಾಕುತ್ತದೆ’ ಎಂದು ನ್ಯಾಯಮೂರ್ತಿಗಳಾದ ಮದನ್‌ ಬಿ.ಲೋಕೂರ್‌ ಮತ್ತು ದೀಪಕ್‌ ಗುಪ್ತಾ ಅವರಿದ್ದ ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಎಲ್ಲ ಗುತ್ತಿಗೆಗಳನ್ನು ವಜಾ ಮಾಡಿರುವ ನ್ಯಾಯಪೀಠ, 1957ರ ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ ಅಡಿಯಲ್ಲಿ ಹೊಸದಾಗಿ ಗುತ್ತಿಗೆ ನೀಡುವಂತೆ ಸರ್ಕಾರಕ್ಕೆ ನಿರ್ದೇಶಿಸಿದೆ.

ಹೊಸ ಗಣಿ ಗುತ್ತಿಗೆ ಪಡೆಯುವವರಿಗೆ ಪರಿಸರ ಅನುಮತಿ ನೀಡುವುದಕ್ಕಾಗಿ ಎಲ್ಲ ಕ್ರಮ ಕೈಗೊಳ್ಳುವಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೂ ಅದು ಸೂಚಿಸಿದೆ.

ಗೋವಾ ಫೌಂಡೇಷನ್‌ ಎಂಬ ಸ್ವಯಂ ಸೇವಾ ಸಂಸ್ಥೆ (ಎನ್‌ಜಿಒ) ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ 2014ರ ಏಪ್ರಿಲ್‌ನಲ್ಲಿ ಆದೇಶ ಹೊರಡಿಸಿದ್ದ ಸುಪ್ರೀಂ ಕೋರ್ಟ್‌, 2007ರಲ್ಲಿ ನೀಡಿದ್ದ ಗುತ್ತಿಗೆ ಅವಧಿ ಮುಗಿದಿರುವುದರಿಂದ ಹೊಸದಾಗಿ ಗುತ್ತಿಗೆ ನೀಡಬೇಕು ಎಂದು ನಿರ್ದೇಶಿಸಿತ್ತು.

ಮಾರ್ಚ್‌ 15ರ ಗಡುವು

ಈಗ ಚಾಲ್ತಿಯಲ್ಲಿರುವ ಗುತ್ತಿಗೆಗಳು ಮಾರ್ಚ್‌ 15ರಿಂದ ಗಣಿಗಾರಿಕೆ ಸ್ಥಗಿತಗೊಳಿಸಬೇಕು ಎಂದು ಸೂಚಿಸಲಾಗಿದೆ. ಎಲ್ಲ ಗುತ್ತಿಗೆಗಳನ್ನು ಎರಡನೇ ಬಾರಿ ನವೀಕರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT