7ನೇ ಕ್ರಮಾಂಕದಲ್ಲಿ ಧೋನಿ ಆಡಿದ್ದೇಕೆ? ಉತ್ತರಿಸಿದ್ದಾರೆ ಕೋಚ್ ರವಿಶಾಸ್ತ್ರಿ

ಮಂಗಳವಾರ, ಜೂಲೈ 16, 2019
24 °C

7ನೇ ಕ್ರಮಾಂಕದಲ್ಲಿ ಧೋನಿ ಆಡಿದ್ದೇಕೆ? ಉತ್ತರಿಸಿದ್ದಾರೆ ಕೋಚ್ ರವಿಶಾಸ್ತ್ರಿ

Published:
Updated:

ನ್ಯೂಜಿಲೆಂಡ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಆಡಲು ಕಳಿಸಿದ ನಿರ್ಧಾರವನ್ನು ರವಿಶಾಸ್ತ್ರಿ ಇದೀಗ ಜಗತ್ತಿನ ಎದುರು ತೆರೆದಿಟ್ಟಿದ್ದಾರೆ. ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತ ತಂಡವು ಕೇನ್ ವಿಲಿಯಮ್ಸ್ ನಾಯಕತ್ವದ ನ್ಯೂಜಿಲೆಂಡ್ ತಂಡದ ವಿರುದ್ಧ 18 ರನ್‌ಗಳ ಅಂತರದಿಂದ ಸೋಲೊಪ್ಪಿಕೊಂಡಿತ್ತು.

ಸಚಿನ್ ತೆಂಡುಲ್ಕರ್, ಸೌರವ್ ಗಂಗೂಲಿ ಮತ್ತು ಸುನಿಲ್ ಗವಾಸ್ಕರ್ ಸೇರಿದಂತೆ ಹಲವು ಮಾಜಿ ಆಟಗಾರರು, ‘ಧೋನಿ ಅವರನ್ನು 5ನೇ ಕ್ರಮಾಂಕದಲ್ಲಿ ಆಡಲು ಕಳಿಸಿದ್ದರೆ ಅನುಕೂಲವಾಗುತ್ತಿತ್ತು. ವಿಕೆಟ್‌ಗಳ ಪತನ ನಿಲ್ಲುತ್ತಿತ್ತು. ಭಾರತದ ಭವಿಷ್ಯವೂ ಚೆನ್ನಾಗಿರುತ್ತಿತ್ತು’ ಎಂದು ಹೇಳಿದ್ದರು.

ಈಗ ಈ ಅಭಿಪ್ರಾಯಗಳಿಗೆ ಪ್ರತಿಕ್ರಿಯಿಸಿರುವ ಭಾರತ ತಂಡದ ಕೋಚ್ ರವಿಶಾಸ್ತ್ರಿ, ‘ಧೋನಿ ಅವರನ್ನು 7ನೇ ಕ್ರಮಾಂಕದಲ್ಲಿ ಆಡಲು ಕಳಿಸಿದ್ದು ತಂಡದ ನಿರ್ಧಾರವಾಗಿತ್ತು’ ಎಂದು ಹೇಳಿದ್ದಾರೆ. 

ನ್ಯೂಜಿಲೆಂಡ್ ತಂಡವನ್ನು ಭಾರತ 50 ಓವರ್‌ಗಳಲ್ಲಿ 239/8ಕ್ಕೆ ಕಟ್ಟಿಹಾಕಿತು. ಸಾಧಾರಣ ಮೊತ್ತ ಎನಿಸಿದ 240 ರನ್‌ಗಳನ್ನು ಬೆನ್ನೆತ್ತುವ ಸವಾಲು ಭಾರತದ ಎದುರು ಇತ್ತು. ಹೆನ್ರಿ ಅವರ ಬೆಂಕಿ ದಾಳಿಯ (3/37) ಎದುರು ಭಾರತದ ಆರಂಭಿಕ ಬ್ಯಾಟ್ಸ್‌ಮನ್‌ಗಳು ತತ್ತರಿಸಿದ್ದರು.

ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲ್.ರಾಹುಲ್ ಮತ್ತು ದಿನೇಶ್ ಕಾರ್ತಿಕ್ ಅವರು 10 ಓವರ್‌ ಮುಗಿಯುವುದರೊಳಗೆ ಒಟ್ಟು ರನ್ 24 ಮುಟ್ಟಿಸಿ ಔಟಾದರು. ಆಗ ಜೊತೆಯಾದ ರವೀಂದ್ರ ಜಡೇಜ (77) ಮತ್ತು ಧೋನಿ (50) ಜೋಡಿ ಏಳನೇ ವಿಕೆಟ್ ಜೊತೆಯಾಟದಲ್ಲಿ 116 ರನ್ ಪೇರಿಸಿತ್ತು. ಭಾರತ ಗೆಲ್ಲಬಹುದು ಎನ್ನುವ ನಿರೀಕ್ಷೆಯನ್ನೂ ಇದು ಅಭಿಮಾನಿಗಳಲ್ಲಿ ಹುಟ್ಟಿಹಾಕಿತ್ತು. ಆದರೆ ಗೆಲುವು ಮರೀಚಿಕೆಯಾಗಿಯೇ ಉಳಿದು ಕೊಹ್ಲಿ ಪಡೆ 18 ರನ್‌ಗಳ ಸೋಲೊಪ್ಪಬೇಕಾಯಿತು.

ವಿಶ್ವಕಪ್‌ನುದ್ದಕ್ಕೂ 5ನೇ ಕ್ರಮಾಂಕದಲ್ಲಿ ಆಡಿದ್ದ ಧೋನಿ ಅವರನ್ನು ಅಚ್ಚರಿ ಎನ್ನುವಂತೆ 7ನೇ ಕ್ರಮಾಂಕದಲ್ಲಿ, ದಿನೇಶ್ ಕಾರ್ತಿಕ್ ಮತ್ತು ಹಾರ್ದಿಕ್ ಪಾಂಡ್ಯ ನಂತರ ಆಡಲು ಕಳಿಸಲಾಗಿತ್ತು. 

‘ಧೋನಿಯನ್ನು 7ನೇ ಕ್ರಮಾಂಕದಲ್ಲಿ ಆಡಿಸುವುದು ತಂಡದ ನಿರ್ಧಾರ. ಇದೊಂದು ಸರಳ ನಿರ್ಧಾರವೂ ಹೌದು. ಧೋನಿ ಅವರ ಅನುಭವ ಆ ಸಂದರ್ಭದಲ್ಲಿ ತಂಡಕ್ಕೆ ಅಗತ್ಯವಿತ್ತು. ಅವರು ಅತ್ಯುತ್ತಮ ಫಿನಿಶರ್. ಅವರನ್ನು ಅಂದು ಹಾಗೆ ಬಳಸಿಕೊಳ್ಳದಿದ್ದರೆ ಅಪರಾಧವಾಗುತ್ತಿತ್ತು. ಇದನ್ನು ಇಡೀ ತಂಡ ಒಪ್ಪಿಕೊಂಡಿತ್ತು’ ಎಂದು ಶಾಸ್ತ್ರಿ ‘ಇಂಡಿಯನ್ ಎಕ್ಸ್‌ಪ್ರೆಸ್‌’ಗೆ ನೀಡಿರುವ ಹೇಳಿದ್ದಾರೆ.

 

 

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 1

  Sad
 • 0

  Frustrated
 • 22

  Angry

Comments:

0 comments

Write the first review for this !