ಶುರುವಾಗುವುದು ಯಾವಾಗ?

ಬುಧವಾರ, ಏಪ್ರಿಲ್ 24, 2019
28 °C

ಶುರುವಾಗುವುದು ಯಾವಾಗ?

Published:
Updated:
Prajavani

2017ರಲ್ಲಿ ಇಂಗ್ಲೆಂಡ್‌ ಮತ್ತು ವೇಲ್ಸ್‌ನಲ್ಲಿ ಆಯೋಜನೆಯಾಗಿದ್ದ ಮಹಿಳಾ ಕ್ರಿಕೆಟ್‌ ವಿಶ್ವಕಪ್‌ ಅನ್ನು ಒಮ್ಮೆ ನೆನಪಿಸಿಕೊಳ್ಳಿ. ಮಿಥಾಲಿ ರಾಜ್‌ ನೇತೃತ್ವದ ಭಾರತ ತಂಡ ಆ ಟೂರ್ನಿಯಲ್ಲಿ ಆಡಿದ ರೀತಿ, ಮಾಡಿದ ಸಾಧನೆ ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಸೆಮಿಫೈನಲ್‌ನಲ್ಲಿ ವಿಶ್ವ ಚಾಂಪಿಯನ್‌ ಆಸ್ಟ್ರೇಲಿಯಾವನ್ನು ಮಣಿಸಿದ್ದು, ಫೈನಲ್‌ನಲ್ಲಿ ಬಲಿಷ್ಠ ಇಂಗ್ಲೆಂಡ್‌ ಎದುರು ಛಲದಿಂದ ಹೋರಾಡಿದ್ದು... ಹೀಗೆ ನೆನಪುಗಳು ಒಂದೊಂದಾಗಿ ತೆರೆದುಕೊಳ್ಳುತ್ತವೆ.

ಭಾರತವು ಮಹಿಳಾ ಕ್ರಿಕೆಟ್‌ನ ಶಕ್ತಿಕೇಂದ್ರವಾಗಿ ಬೆಳೆಯುತ್ತಿದೆ ಎಂಬುದಕ್ಕೆ ವಿಶ್ವಕಪ್‌ನಲ್ಲಿ ವನಿತೆಯರಿಂದ ಮೂಡಿಬಂದ ಸಾಮರ್ಥ್ಯ ಸಾಕ್ಷಿಯಂತಿತ್ತು. ಮಹಿಳಾ ಕ್ರಿಕೆಟ್‌ ಅಂದಾಕ್ಷಣ ಮೂಗು ಮುರಿಯುತ್ತಿದ್ದವರೂ ಹರ್ಮನ್‌ಪ್ರೀತ್‌ ಕೌರ್‌ ಅವರ ಸ್ಫೋಟಕ ಆಟವನ್ನು (ಆಸ್ಟ್ರೇಲಿಯಾ ಎದುರಿನ ಸೆಮಿಫೈನಲ್‌ನಲ್ಲಿ 115 ಎಸೆತಗಳಲ್ಲಿ ಔಟಾಗದೆ 171 ರನ್‌ ಗಳಿಸಿದ್ದು) ಕಣ್ಣರಳಿಸಿ ನೋಡಿದ್ದರು. ಜೂಲನ್‌ ಗೋಸ್ವಾಮಿ, ಶಿಖಾ ಪಾಂಡೆ, ದೀಪ್ತಿ ಶರ್ಮಾ ಅವರ ಛಲದ ಬೌಲಿಂಗ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು.

ವಿಶ್ವಕಪ್‌ ನಂತರ ಭಾರತದಲ್ಲಿ ಮಹಿಳಾ ಕ್ರಿಕೆಟ್‌ ಅನ್ನು ನೋಡುವ ದೃಷ್ಟಿಕೋನ ಬದಲಾಯಿತು. ಅದಾಗಲೇ ಜನಪ್ರಿಯತೆಯ ಉತ್ತುಂಗದಲ್ಲಿದ್ದ ಪುರುಷರ ಐಪಿಎಲ್‌ನಂತೆ ಮಹಿಳಾ ಐ‍‍‍ಪಿಎಲ್‌ ನಡೆಸಬೇಕೆಂಬ ಧ್ವನಿ ಆಗ ಮತ್ತಷ್ಟು ಗಟ್ಟಿಯಾಗಿ ಕೇಳಿಬಂದಿತ್ತು. ಆ ಕೂಗು ಮತ್ತೆ ಮುನ್ನೆಲೆಗೆ ಬಂದಿದೆ.

ಮಹಿಳಾ ಕ್ರಿಕೆಟ್‌ನ ಅಭಿವೃದ್ಧಿಯ ವಿಚಾರದಲ್ಲಿ ಆಸ್ಟ್ರೇಲಿಯಾ, ಇಂಗ್ಲೆಂಡ್‌ ಮತ್ತು ನ್ಯೂಜಿಲೆಂಡ್‌ ದೇಶಗಳು ಭಾರತಕ್ಕಿಂತಲೂ ಒಂದು ಹೆಜ್ಜೆ ಮುಂದಿವೆ.

ಆಸ್ಟ್ರೇಲಿಯಾದಲ್ಲಿ 2015–16ರ ಋತುವಿನಲ್ಲಿ ಮಹಿಳಾ ಬಿಗ್‌ಬ್ಯಾಷ್‌ ಲೀಗ್‌ (ಡಬ್ಲ್ಯುಬಿಬಿಎಲ್‌) ಆರಂಭಿಸಲಾಗಿತ್ತು. ಈ ಲೀಗ್‌ ಶುರುವಾದ ನಂತರ ಆ ರಾಷ್ಟ್ರದಲ್ಲಿ ವನಿತೆಯರ ಕ್ರಿಕೆಟ್‌ಗೆ ಸಾಕಷ್ಟು ಮನ್ನಣೆ ಲಭಿಸಿತ್ತು. ಹೊಸ ಪ್ರತಿಭೆಗಳನ್ನು ಹೆಕ್ಕಿ ತೆಗೆಯಲು ಎಂಟು ತಂಡಗಳನ್ನೊಳಗೊಂಡ ಆ ಲೀಗ್‌ ವೇದಿಕೆಯನ್ನೂ ಕಲ್ಪಿಸಿತ್ತು. ಭಾರತದ ಸ್ಮೃತಿ ಮಂದಾನ, ಹರ್ಮನ್‌ಪ್ರೀತ್ ಕೌರ್‌ ಮತ್ತು ವೇದಾ ಕೃಷ್ಣಮೂರ್ತಿ ಅವರೂ ಬಿಗ್‌ಬ್ಯಾಷ್‌ನಲ್ಲಿ ಆಡಿ ಸೈ ಎನಿಸಿಕೊಂಡಿದ್ದಾರೆ.

ಇಂಗ್ಲೆಂಡ್‌ನ ಕಿಯಾ ಸೂಪರ್‌ ಲೀಗ್‌ ಕೂಡಾ ಈ ಹಾದಿಯಲ್ಲಿ ಸಾಗುತ್ತಿದೆ. ಇದರಲ್ಲಿ ಆರು ತಂಡಗಳು ಪಾಲ್ಗೊಳ್ಳುತ್ತವೆ. ಆದರೆ ಭಾರತದಲ್ಲಿ ಮಹಿಳಾ ಐಪಿಎಲ್‌ ಆರಂಭಕ್ಕೆ ಇನ್ನೂ ಕಾಲ ಕೂಡಿ ಬಂದಿಲ್ಲ. ಲೀಗ್‌ ನಡೆಸುವುದಾಗಿ ಭಾರತ ಕ್ರಿಕೆಟ್‌ ನಿಯಂತ್ರಣ ಮಂಡಳಿ (ಬಿಸಿಸಿಐ) ಈ ಹಿಂದೆಯೇ ಘೋಷಿಸಿತ್ತು. ಇದರ ಮೊದಲ ಹೆಜ್ಜೆಯಾಗಿ ಹೋದ ವರ್ಷ ಹರ್ಮನ್‌ಪ್ರೀತ್ ಕೌರ್‌ ಸಾರಥ್ಯದ ಸೂಪರ್‌ನೋವಾಸ್‌ ಮತ್ತು ಸ್ಮೃತಿ ಮಂದಾನ ಮುಂದಾಳತ್ವದ ಟ್ರಯಲ್‌ ಬ್ಲೇಜರ್ಸ್‌ ನಡುವೆ ಏಕೈಕ ಪ್ರಾಯೋಗಿಕ ಪಂದ್ಯವನ್ನೂ ಆಯೋಜಿಸಿತ್ತು.

ವಾಂಖೆಡೆ ಕ್ರೀಡಾಂಗಣದಲ್ಲಿ 2018ರ ಮೇ 22 ರಂದು ನಿಗದಿಯಾಗಿದ್ದ ಮೊದಲ ಕ್ವಾಲಿಫೈಯರ್‌ (ಪುರುಷರು)ಹೋರಾಟಕ್ಕೂ ಮುನ್ನ ಮಹಿಳಾ ಪಂದ್ಯ ನಡೆದಿತ್ತು. ಇದರಲ್ಲಿ ಆಸ್ಟ್ರೇಲಿಯಾ, ನ್ಯೂಜಿಲೆಂಡ್‌ ಮತ್ತು ಇಂಗ್ಲೆಂಡ್‌ನ ಪ್ರಮುಖ ಆಟಗಾರ್ತಿಯರಾದ ಮೆಗ್‌ ಲ್ಯಾನಿಂಗ್‌, ಎಲಿಸ್ ಪೆರಿ, ಎಲಿಸ್ ಹೀಲಿ, ಡೇನಿಯೆಲ್‌ ವೈಟ್, ಡೇನಿಯಲ್‌ ಹ್ಯಾಜಲ್‌, ಸೋಫಿ ಡಿವೈನ್‌ ಮತ್ತು ಲೀ ತಹುಹು ಆಡಿದ್ದರು. ಮಧ್ಯಾಹ್ನದ ಸುಡುಬಿಸಿಲಿನಲ್ಲಿ (ಎರಡು ಗಂಟೆ) ಪಂದ್ಯ ನಡೆದರೂ ಅಭಿಮಾನಿಗಳು ಕ್ರೀಡಾಂಗಣಕ್ಕೆ ಬಂದು ರೋಚಕ ಹೋರಾಟವನ್ನು ಕಣ್ತುಂಬಿಕೊಂಡಿದ್ದರು. ಆ ಪಂದ್ಯದಲ್ಲಿ ಸೂಪರ್‌ ನೋವಾಸ್‌ ಪ್ರಶಸ್ತಿಗೆ ಮುತ್ತಿಕ್ಕಿತ್ತು.

ಈ ಬಾರಿಯೂ ಬಿಸಿಸಿಐ ಅಂತಹದ್ದೇ ಪ್ರಯೋಗಕ್ಕೆ ಮುಂದಾಗಿದೆ. ಈ ಸಲ ತಂಡಗಳ ಸಂಖ್ಯೆಯನ್ನು ಮೂರಕ್ಕೆ ಹೆಚ್ಚಿಸಲು ಮುಂದಾಗಿದ್ದು, ಒಟ್ಟು ಏಳರಿಂದ ಹ‌ತ್ತು ದಿನ ಪಂದ್ಯಗಳನ್ನು ನಡೆಸಲು ಚಿಂತಿಸಿದೆ. ಬಿಸಿಸಿಐನ ‘ಪ್ರಯೋಗ’ ತಂತ್ರದ ಬಗ್ಗೆ ಟೀಕೆಗಳು ವ್ಯಕ್ತವಾಗಿವೆ. ಪ್ರದರ್ಶನ ಪಂದ್ಯಗಳ ಬದಲು ಪೂರ್ಣ ಪ್ರಮಾಣದ ಲೀಗ್‌ಗೆ ಅಧಿಕೃತ ಮುದ್ರೆ ಒತ್ತಲು ಮಂಡಳಿ ಮುಂದಾಗಲಿ ಎಂದು ಹಿರಿಯ ಆಟಗಾರ್ತಿಯರು ಒತ್ತಾಯಿಸಿದ್ದಾರೆ.

‘ಮಹಿಳಾ ಕ್ರಿಕೆಟ್‌ ವಿಷಯದಲ್ಲಿ ಬಿಸಿಸಿಐ ಮೊದಲಿನಿಂದಲೂ ತಾತ್ಸಾರ ಮನೋಭಾವ ತಳೆಯುತ್ತಾ ಬಂದಿದೆ. ಮಹಿಳಾ ಐಪಿಎಲ್‌ ನಡೆಸಬೇಕೆಂಬುದು ಬಹುಕಾಲದ ಬೇಡಿಕೆ. ಇದನ್ನು ಕಾರ್ಯಗತಗೊಳಿಸಲು ಮಂಡಳಿ ಇಚ್ಛಾಶಕ್ತಿ ತೋರಲಿ’ ಎಂದು ಕರ್ನಾಟಕದ ಹಿರಿಯ ಆಟಗಾರ್ತಿ ಶಾಂತಾ ರಂಗಸ್ವಾಮಿ ಆಗ್ರಹಿಸಿದ್ದಾರೆ.

‘ಮೂರು ವರ್ಷಗಳ ಹಿಂದೆಯೇ ಮಹಿಳಾ ಐಪಿಎಲ್‌ ಶುರು ಮಾಡಬೇಕಿತ್ತು. ಹಾಗಾಗಿದ್ದರೆ ನಾವು ಆಸ್ಟ್ರೇಲಿಯಾದ ಮಹಿಳಾ ಬಿಗ್‌ ಬ್ಯಾಷ್‌ ಲೀಗ್‌ ಅನ್ನು ಹಿಂದಿಕ್ಕಬಹುದಿತ್ತು. ಮಹಿಳಾ ಲೀಗ್‌ ನಡೆಸಲು ಹಣ ಇಲ್ಲ, ಫ್ರಾಂಚೈಸ್‌ಗಳು ನಿರಾಸಕ್ತಿ ತೋರುತ್ತಿವೆ ಎಂದು ಹೇಳುವುದು ಸರಿಯಲ್ಲ. ಬಿಸಿಸಿಐ ವಿಶ್ವದ ಶ್ರೀಮಂತ ಕ್ರಿಕೆಟ್‌ ಮಂಡಳಿ. ಅದರ ಖಜಾನೆಯಲ್ಲಿ ಸಾಕಷ್ಟು ಹಣ ಇದೆ. ಅದರಲ್ಲಿ ಸ್ವಲ್ಪ ಮೊತ್ತವನ್ನು ಮಹಿಳಾ ಲೀಗ್‌ ನಡೆಸಲು ವಿನಿಯೋಗಿಸಿದರೆ ನಷ್ಟವೇನೂ ಆಗುವುದಿಲ್ಲ. ಲೋಧಾ ಸಮಿತಿಯ ಶಿಫಾರಸುಗಳು ಅನುಷ್ಠಾನಗೊಂಡ ಬಳಿಕ ಈ ಬೇಡಿಕೆ ಖಂಡಿತಾ ಈಡೇರುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಭಾರತದಲ್ಲಿ ಉತ್ತಮ ಆಟಗಾರ್ತಿಯರಿಲ್ಲ ಎಂಬ ಮನೋಭಾವ ಬಿಸಿಸಿಐಗೆ ಇದ್ದಂತಿದೆ. ಆ ಧೋರಣೆಯಿಂದ ಮಂಡಳಿ ಹೊರಬರಬೇಕು. ನಾಲ್ಕು ತಂಡ ಕಟ್ಟುವಷ್ಟು ಪ್ರತಿಭಾನ್ವಿತರು ನಮ್ಮ ದೇಶದಲ್ಲಿ ಇದ್ದಾರೆ. ಮಹಿಳಾ ಕ್ರಿಕೆಟ್‌ ಬಗ್ಗೆ ಮಾತನಾಡಿದರೆ ಕೇಳಿಸಿಕೊಳ್ಳುವ ವ್ಯವಧಾನ ಆಡಳಿತ ನಡೆಸುವವರಿಗಿಲ್ಲ. ಮಗು ಹುಟ್ಟಿದಾಕ್ಷಣವೇ ನಡೆಯುವುದಿಲ್ಲ. ಐದು ವರ್ಷದ ಹಿಂದೆಯೇ ಲೀಗ್‌ ಆಯೋಜಿಸಿದ್ದರೆ ಇಷ್ಟೋತ್ತಿಗೆ ಪುರುಷರಂತೆ ಮಹಿಳಾ ಐಪಿಎಲ್‌ ಕೂಡಾ ಜನಪ್ರಿಯವಾಗುತ್ತಿತ್ತು. ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಈಗಾಗಲೇ ಮಹಿಳಾ ಲೀಗ್‌ ನಡೆಸುತ್ತಿದೆ. ಕೆಎಸ್‌ಸಿಎಗೆ ಇರುವಷ್ಟು ಇಚ್ಛಾಶಕ್ತಿ ಬಿಸಿಸಿಐಗೆ ಏಕಿಲ್ಲ. ಎಷ್ಟು ವರ್ಷ ಅಂತ ಪ್ರದರ್ಶನ ಪಂದ್ಯಗಳನ್ನು ಆಡಿಸುತ್ತಾ ಹೋಗುತ್ತಾರೆ. ಅದರಿಂದ ಯಾರಿಗೂ ಲಾಭವಾಗುವುದಿಲ್ಲ’ ಎನ್ನುತ್ತಾರೆ ಕರ್ನಾಟಕದ ಹಿರಿಯ ಆಟಗಾರ್ತಿ ಕಲ್ಪನಾ.

***

ಮಹಿಳಾ ಲೀಗ್‌ ನಡೆಸಬೇಕೆಂಬುದು ನಮ್ಮೆಲ್ಲರ ಬಯಕೆ. ಬಿಸಿಸಿಐ ಬಳಿ ಸಾಕಷ್ಟು ಹಣ ಇದೆ. ಅದರಲ್ಲಿ ಸ್ವಲ್ಪ ಮೊತ್ತವನ್ನು ವಿನಿಯೋಗಿಸಿ ಲೀಗ್‌ ನಡೆಸಲಿ. ಹಾಗಾದಾಗ ಮಾತ್ರ ಮಹಿಳಾ ಕ್ರಿಕೆಟ್‌ ಬೆಳವಣಿಗೆಯಾಗುತ್ತದೆ

–ಕರುಣಾ ಜೈನ್, ಕರ್ನಾಟಕದ ಹಿರಿಯ ಆಟಗಾರ್ತಿ

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !