ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಶುಭಾರಂಭದ ಕನಸಲ್ಲಿ ಮಿಥಾಲಿ ಪಡೆ

ಇಂದು ದಕ್ಷಿಣ ಆಫ್ರಿಕಾ ಎದುರು ಮೊದಲ ಏಕದಿನ ಪಂದ್ಯ
Last Updated 8 ಅಕ್ಟೋಬರ್ 2019, 16:22 IST
ಅಕ್ಷರ ಗಾತ್ರ

ವಡೋದರ : ಟ್ವೆಂಟಿ–20 ಕ್ರಿಕೆಟ್‌ ಸರಣಿ ಗೆದ್ದು ಬೀಗುತ್ತಿರುವ ಭಾರತದ ಮಹಿಳಾ ತಂಡದವರು ದಕ್ಷಿಣ ಆಫ್ರಿಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲೂ ಟ್ರೋಫಿ ಜಯಿಸಲು ಕಾತರರಾಗಿದ್ದಾರೆ.

ಉಭಯ ತಂಡಗಳ ನಡುವಣ ಮೊದಲ ಹಣಾಹಣಿಯು ಬುಧವಾರ ಇಲ್ಲಿನ ರಿಲಯನ್ಸ್‌ ಮೈದಾನದಲ್ಲಿ ನಡೆಯಲಿದ್ದು, ಮಿಥಾಲಿ ರಾಜ್‌ ಸಾರಥ್ಯದ ಭಾರತವು ಶುಭಾರಂಭ ಮಾಡುವ ನಿರೀಕ್ಷೆಯಲ್ಲಿದೆ.

ಆರಂಭಿಕ ಆಟಗಾರ್ತಿ ಸ್ಮೃತಿ ಮಂದಾನ ಅವರು ಈ ಸರಣಿಗೆ ಅಲಭ್ಯರಾಗಿದ್ದಾರೆ. ಹೀಗಾಗಿ ಆತಿಥೇಯರಿಗೆ ಅಲ್ಪ ಹಿನ್ನಡೆ ಉಂಟಾಗುವ ಸಾಧ್ಯತೆ ಇದೆ. 23 ವರ್ಷದ ಮಂದಾನ, ಭಾನುವಾರ ನೆಟ್ಸ್‌ನಲ್ಲಿ ಅಭ್ಯಾಸ ಮಾಡುವ ವೇಳೆ ಗಾಯಗೊಂಡಿದ್ದರು.

ಹರ್ಮನ್‌ಪ್ರೀತ್‌ ಕೌರ್‌, ಜೆಮಿಮಾ ರಾಡ್ರಿಗಸ್‌ ಮತ್ತು ಕರ್ನಾಟಕದ ವೇದಾ ಕೃಷ್ಣಮೂರ್ತಿ ಅವರು ಬ್ಯಾಟಿಂಗ್‌ನಲ್ಲಿ ಭಾರತದ ಬೆನ್ನೆಲುಬಾಗಿದ್ದಾರೆ. ಅನುಭವಿ ಆಟಗಾರ್ತಿ ಮಿಥಾಲಿ ಕೂಡ ಎದುರಾಳಿ ಬೌಲರ್‌ಗಳನ್ನು ಕಾಡಬಲ್ಲರು. ಪೂನಮ್‌ ರಾವುತ್‌, ತಾನಿಯಾ ಭಾಟಿಯಾ, ದಯಾಳನ್‌ ಹೇಮಲತಾ ಅವರ ಮೇಲೂ ಭರವಸೆ ಇಡಬಹುದಾಗಿದೆ.

ಬೌಲಿಂಗ್‌ನಲ್ಲಿ ಜೂಲನ್‌ ಗೋಸ್ವಾಮಿ ಅವರ ಬಲ ಭಾರತಕ್ಕಿದೆ. ಕನ್ನಡತಿ ರಾಜೇಶ್ವರಿ ಗಾಯಕವಾಡ, ಪೂನಮ್‌ ಯಾದವ್‌ ಮತ್ತು ಏಕ್ತಾ ಬಿಷ್ಠ್‌ ಅವರೂ ಪರಿಣಾಮಕಾರಿ ದಾಳಿ ನಡೆಸಿ ಆತಿಥೇಯರಿಗೆ ಗೆಲುವು ತಂದುಕೊಡುವ ಹುಮ್ಮಸ್ಸಿನಲ್ಲಿದ್ದಾರೆ.

ಅಂತಿಮ ಟ್ವೆಂಟಿ–20 ಪಂದ್ಯದಲ್ಲಿ ಗೆದ್ದು ವಿಶ್ವಾಸ ಮರಳಿ ಪಡೆದಿರುವ ದಕ್ಷಿಣ ಆಫ್ರಿಕಾದ ವನಿತೆಯರೂ ಕೂಡ ಗೆಲುವಿನ ಮೇಲೆ ಕಣ್ಣಿಟ್ಟಿದ್ದಾರೆ.

ಮರಿಜಾನ್‌ ಕಾಪ್‌, ಲಿಜೆಲ್‌ ಲೀ, ಆ್ಯಂಡ್ರಿಯಾ ಸ್ಟೇಯ್ನ್‌ ಅವರು ಬ್ಯಾಟಿಂಗ್‌ನಲ್ಲಿ ಪ್ರವಾಸಿ ಪಡೆಯ ಶಕ್ತಿಯಾಗಿದ್ದಾರೆ. ಇವರನ್ನು ಕಟ್ಟಿಹಾಕಲು ಭಾರತದ ಬೌಲರ್‌ಗಳು ಯಾವ ಬಗೆಯ ರಣನೀತಿ ಹೆಣೆದು ಕಣಕ್ಕಿಳಿಯಲಿದ್ದಾರೆ ಎಂಬುದು ಸದ್ಯದ ಕುತೂಹಲ.

ಪಂದ್ಯದ ಆರಂಭ: ಬೆಳಿಗ್ಗೆ 9ಕ್ಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT