ಶುಕ್ರವಾರ, ಸೆಪ್ಟೆಂಬರ್ 20, 2019
27 °C
ಇಂದು ವೆಲೋಸಿಟಿ ಎದುರು ಹೋರಾಟ

ಮತ್ತೊಂದು ಜಯದತ್ತ ಮಂದಾನ ಪಡೆಯ ಚಿತ್ತ

Published:
Updated:
Prajavani

ಜೈಪುರ: ಈ ಬಾರಿಯ ಮಹಿಳಾ ಟ್ವೆಂಟಿ–20 ಚಾಲೆಂಜ್‌ನ ಮೊದಲ ಪಂದ್ಯದಲ್ಲೇ ಗೆದ್ದು ವಿಶ್ವಾಸದಿಂದ ಬೀಗುತ್ತಿರುವ ಟ್ರಯಲ್‌ಬ್ಲೇಜರ್ಸ್‌ ತಂಡ ಈಗ ಮತ್ತೊಂದು ಜಯದತ್ತ ಚಿತ್ತ ನೆಟ್ಟಿದೆ.

ಸವಾಯಿ ಮಾನ್‌ಸಿಂಗ್ ಕ್ರೀಡಾಂಗಣದಲ್ಲಿ ಬುಧವಾರ ನಡೆಯುವ ತನ್ನ ಎರಡನೇ ಪೈಪೋಟಿಯಲ್ಲಿ ಸ್ಮೃತಿ ಮಂದಾನ ಬಳಗವು ಮಿಥಾಲಿ ರಾಜ್‌ ಮುಂದಾಳತ್ವದ ವೆಲೋಸಿಟಿ ಎದುರು ಸೆಣಸಲಿದೆ.

ಮೊದಲ ಪಂದ್ಯದಲ್ಲಿ ಮಂದಾನ ಪಡೆ ಹರ್ಮನ್‌ಪ್ರೀತ್‌ ಕೌರ್‌ ಸಾರಥ್ಯದ ಸೂ‍ಪರ್‌ನೋವಾಸ್‌ ಎದುರು ಎರಡು ರನ್‌ಗಳಿಂದ ಗೆದ್ದಿತ್ತು. ಈ ಹೋರಾಟದಲ್ಲಿ ಸ್ಮೃತಿ 90 ರನ್‌ ಗಳಿಸಿ ಮಿಂಚಿದ್ದರು. ಉತ್ತಮ ಲಯದಲ್ಲಿರುವ ಅವರು ವೆಲೋಸಿಟಿ ತಂಡದ ಬೌಲರ್‌ಗಳಿಗೂ ಸವಾಲಾಗುವ ಸಾಧ್ಯತೆ ಇದೆ.

ಹರ್ಲೀನ್‌ ಡಿಯೋಲ್‌ ಕೂಡಾ ಅಬ್ಬರಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಆರಂಭಿಕ ಹೋರಾಟದಲ್ಲಿ ಅವರು 39ರನ್‌ ಗಳಿಸಿ ತಂಡಕ್ಕೆ ಆಸರೆಯಾಗಿದ್ದರು.

ಆರಂಭಿಕ ಆಟಗಾರ್ತಿ ಸೂಸಿ ಬೇಟ್ಸ್‌, ಸ್ಟೆಫಾನಿ ಟೇಲರ್‌, ದೀಪ್ತಿ ಶರ್ಮಾ, ದಯಾಳನ್‌ ಹೇಮಲತಾ ಹಾಗೂ ವಿಕೆಟ್‌ ಕೀಪರ್‌ ರವಿ ಕಲ್ಪನಾ ಅವರು ಈ ಪಂದ್ಯದಲ್ಲಿ ಲಯ ಕಂಡುಕೊಳ್ಳಬೇಕಿದೆ.

ಜೂಲನ್ ಗೋಸ್ವಾಮಿ, ರಾಜೇಶ್ವರಿ ಗಾಯಕವಾಡ ಮತ್ತು ಸೋಫಿ ಎಕ್ಸಲ್‌ಸ್ಟೋನ್‌ ಅವರು ಬೌಲಿಂಗ್‌ನಲ್ಲಿ ಟ್ರಯಲ್‌ಬ್ಲೇಜರ್ಸ್‌ ತಂಡದ ಶಕ್ತಿಯಾಗಿದ್ದಾರೆ.

ಮಿಥಾಲಿ ರಾಜ್‌ ಬಳಗವೂ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ. ಡೇನಿಯಲ್‌ ವ್ಯಾಟ್‌, ದೇವಿಕಾ ವೈದ್ಯ, ವೇದಾ ಕೃಷ್ಣಮೂರ್ತಿ ಹಾಗೂ ಸುಷ್ಮಾ ವರ್ಮಾ ಅವರನ್ನು ಹೊಂದಿರುವ ಈ ತಂಡ ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದೆ. ಮಿಥಾಲಿ ಕೂಡಾ ರನ್‌ ಮಳೆ ಸುರಿಸುವ ಸಾಮರ್ಥ್ಯ ಹೊಂದಿದ್ದಾರೆ.

ಬೌಲರ್‌ಗಳಾದ ಶಿಖಾ ಪಾಂಡೆ, ಏಕ್ತಾ ಬಿಷ್ಠ್‌ ಮತ್ತು ಸುಶ್ರೀ ಪ್ರಧಾನ್‌ ಅವರ ಬಲವೂ ಈ ತಂಡಕ್ಕಿದೆ.

ಇಂದಿನ ಪಂದ್ಯ

ಟ್ರಯಲ್‌ಬ್ಲೇಜರ್ಸ್‌

ವೆಲೋಸಿಟಿ

ಸ್ಥಳ: ಜೈಪುರ

ಆರಂಭ: ಮಧ್ಯಾಹ್ನ 3.30

Post Comments (+)