ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಟ್ವೆಂಟಿ–20 ಕ್ರಿಕೆಟ್‌: ಮೈಸೂರು ವಾರಿಯರ್ಸ್‌ಗೆ ಜಯ

ಶಿವಮೊಗ್ಗ ಲಯನ್ಸ್‌ಗೆ ಸೋಲು
Last Updated 4 ಸೆಪ್ಟೆಂಬರ್ 2018, 12:59 IST
ಅಕ್ಷರ ಗಾತ್ರ

ಮೈಸೂರು: ಆಕಾಂಕ್ಷಾ ಕೊಹ್ಲಿ ಅವರ ಉತ್ತಮ ಆಟದ ನೆರವಿನಿಂದ ಮೈಸೂರು ವಾರಿಯರ್ಸ್‌ ತಂಡ ಮಹಿಳಾ ಟ್ವೆಂಟಿ–20 ಕ್ರಿಕೆಟ್‌ ಸೌಹಾರ್ದ ಪಂದ್ಯದಲ್ಲಿ ಶಿವಮೊಗ್ಗ ಲಯನ್ಸ್‌ ವಿರುದ್ಧ ನಾಲ್ಕು ವಿಕೆಟ್‌ಗಳ ಜಯ ಸಾಧಿಸಿತು.

ಗಂಗೋತ್ರಿ ಗ್ಲೇಡ್ಸ್‌ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಶಿವಮೊಗ್ಗ ಲಯನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 93 ರನ್‌ ಗಳಿಸಿದರೆ, ವಾರಿಯರ್ಸ್‌ ತಂಡ 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 94 ರನ್‌ ಗಳಿಸಿ ಗೆಲುವು ಪಡೆಯಿತು.

ಲಯನ್ಸ್‌ ತಂಡ ಚಂದು ಮತ್ತು ಆಕಾಂಕ್ಷಾ ಪ್ರಭಾವಿ ಬೌಲಿಂಗ್‌ ಮುಂದೆ ರನ್‌ ಗಳಿಸಲು ಪರದಾಟ ನಡೆಸಿತು. 18 ಎಸೆತಗಳಲ್ಲಿ 24 ರನ್‌ ಗಳಿಸಿದ ಕೆ.ಪ್ರತ್ಯೂಷಾ ಅವರು ಗರಿಷ್ಠ ಸ್ಕೋರರ್‌ ಎನಿಸಿದರು.

ಸುಲಭ ಗುರಿ ಬೆನ್ನಟ್ಟಿದ ವಾರಿಯರ್ಸ್‌ ಆರಂಭಿಕ ಆಘಾತ ಅನುಭವಿಸಿತು. ಮೊದಲ ಆರು ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು ಕೇವಲ 23 ರನ್‌ ಗಳಿಸಿದ್ದ ತಂಡ, 10 ಓವರ್‌ಗಳು ಕೊನೆಗೊಂಡಾಗ 5 ವಿಕೆಟ್‌ಗೆ 31 ರನ್‌ ಗಳಿಸಿ ಸೋಲಿನ ಹಾದಿ ಹಿಡಿದಿತ್ತು.

ಆದರೆ ಆಕಾಂಕ್ಷಾ (ಔಟಾಗದೆ 34) ಮತ್ತು ಅದಿತಿ ರಾಜೇಶ್ (ಔಟಾಗದೆ 24) ಅವರು ಮುರಿಯದ ಏಳನೇ ವಿಕೆಟ್‌ಗೆ 33 ಎಸೆತಗಳಲ್ಲಿ 55 ರನ್‌ ಗಳಿಸಿ ತಂಡಕ್ಕೆ ರೋಚಕ ಜಯ ತಂದಿತ್ತರು.

ವಾರಿಯರ್ಸ್‌ ಗೆಲುವಿಗೆ ಅಂತಿಮ ಓವರ್‌ನಲ್ಲಿ ಏಳು ರನ್‌ಗಳು ಬೇಕಿದ್ದವು. ಮೋನಿಕಾ ಪಟೇಲ್‌ ಬೌಲ್‌ ಮಾಡಿದ ಕೊನೆಯ ಓವರ್‌ನ ಮೊದಲ ಎಸೆತವನ್ನು ಸಿಕ್ಸರ್‌ಗೆ ಅಟ್ಟಿದ ಆಕಾಂಕ್ಷಾ ಅವರು ತಂಡದ ಗೆಲುವು ಖಚಿತಪಡಿಸಿಕೊಂಡರು. ಕೆಪಿಎಲ್‌ ಟೂರ್ನಿಯ ಅಂಗವಾಗಿ ಮಹಿಳೆಯರಿಗಾಗಿ ಈ ಪಂದ್ಯ ಆಯೋಜಿಸಲಾಗಿತ್ತು.

ಸಂಕ್ಷಿಪ್ತ ಸ್ಕೋರ್‌: ಶಿವಮೊಗ್ಗ ಲಯನ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ಗೆ 93 (ಸಿ.ಪ್ರತ್ಯೂಷಾ 24)

ಮೈಸೂರು ವಾರಿಯರ್ಸ್‌ 19.2 ಓವರ್‌ಗಳಲ್ಲಿ 6 ವಿಕೆಟ್‌ಗೆ 94 (ಆಕಾಂಕ್ಷಾ ಕೊಹ್ಲಿ ಔಟಾಗದೆ 34, ಅದಿತಿ ರಾಜೇಶ್ ಔಟಾಗದೆ 24)

ಫಲಿತಾಂಶ: ವಾರಿಯರ್ಸ್‌ಗೆ 4 ವಿಕೆಟ್‌ ಗೆಲುವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT