ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ತಲೆಗೇರಿದ ಕಿರೀಟ

Last Updated 8 ಮೇ 2019, 16:20 IST
ಅಕ್ಷರ ಗಾತ್ರ

ಜಗತ್ತಿಗೆ ಕ್ರಿಕೆಟ್ ಪರಿಚಯಿಸಿದ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ಸುವರ್ಣಾವಕಾಶವನ್ನು ಕೈಚೆಲ್ಲಿದ ದಿನ ಅದು. ನವೆಂಬರ್ 8ರಂದು ಕೋಲ್ಕತ್ತದ ಈಡನ್ ಗಾರ್ಡನ್‌ನಲ್ಲಿ ಆಸ್ಟ್ರೇಲಿಯಾ ತಂಡವು ಮೊದಲ ಬಾರಿ ವಿಶ್ವಕಪ್ ಗೆದ್ದು ಮೆರೆಯಿತು. ವೇಗದ ಬೌಲಿಂಗ್ ಮತ್ತು ಆಲ್‌ರೌಂಡರ್‌ಗಳ ಆಟದ ಮೂಲಕ ಜಯವನ್ನು ತನ್ನದಾಗಿಸಿಕೊಂಡ ಅಲನ್ ಬಾರ್ಡರ್‌ ಬಳಗ ರಸಗುಲ್ಲ ಸವಿದು ಸಂಭ್ರಮಿಸಿತು.

***

* ಟಾಸ್ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್ ಮಾಡಿತು. ಆ ವಿಶ್ವಕಪ್‌ನಲ್ಲಿ ಆರಂಭಿಕ ಬ್ಯಾಟಿಂಗ್‌ಗೆ ಹೊಸ ಭಾಷ್ಯ ಬರೆದ ಡೇವಿಡ್ ಬೂನ್ (75 ರನ್) ಮತ್ತು ಜೆಫ್ ಮಾರ್ಷ್ (24 ರನ್) ಉತ್ತಮ ಅಡಿಪಾಯ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ಡೀನ್ ಜೋನ್ಸ್‌ (33), ಮೈಕ್ ವೆಲ್ಲೆಟ್ಟಾ (46)ಮತ್ತು ಅಲನ್ ಬಾರ್ಡರ್‌ (31) ಮಹತ್ವದ ಕಾಣಿಕೆ ನೀಡಿದರು.

* ಆಸ್ಟ್ರೇಲಿಯಾ ತಂಡವು 50 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 253 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವನ್ನು 50 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 246 ರನ್‌ಗಳಿಗೆ ನಿಯಂತ್ರಿಸಲು ಆಸ್ಟ್ರೇಲಿಯಾ ಬಹಳಷ್ಟು ಶ್ರಮಪಟ್ಟಿತು. 7 ರನ್‌ಗಳಿಂದ ಐತಿಹಾಸಿಕ ಜಯ ಸಾಧಿಸಿತು.

* ಇಂಗ್ಲೆಂಡ್‌ನ ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿಯೇ ಬಲಿಷ್ಠ ತಂಡ ಎಂಬ ಹೆಗ್ಗಳಿಕೆ ಅಂದಿನ ಮೈಕ್‌ ಗ್ಯಾಟಿಂಗ್ ಬಳಗಕ್ಕೆ ಇತ್ತು. ತಂಡವು ಬಹುತೇಕ ಗೆಲುವಿನ ಸಮೀಪ ಬಂದಿತ್ತು. ಆದರೆ, ಅದೃಷ್ಟ ಕೈಕೊಟ್ಟಿತು. ತಂಡವು ಆರಂಭದಲ್ಲಿಯೇ ಟಿಮ್ ರಾಬಿನ್ಸನ್ ವಿಕೆಟ್ ಕಳೆದುಕೊಂಡಿತು. ಆದರೆ, ಗ್ರಹಾಂ ಗೂಚ್ (35 ರನ್) ಮತ್ತು ಬಿಲ್‌ ಆ್ಯಥಿ (58) ಅವರ ಅಮೋಘ ಅಟವು ಹೋರಾಕ್ಕೆ ಬಲ ತುಂಬಿತು. ನಾಯಕ ಗ್ಯಾಟಿಂಗ್ (41) ಮತ್ತು ಅಲನ್ ಲ್ಯಾಂಬ್‌ (45) ಕಾಣಿಕೆಯೂ ಇತ್ತು. ಆದರೆ, ಗ್ಯಾಟಿಂಗ್ ರಿವರ್ಸ್ ಸ್ವೀಪ್ ಯತ್ನದಲ್ಲಿ ಬಲಿಯಾದದ್ದು ಪಂದ್ಯಕ್ಕೆ ತಿರುವು ನೀಡಿತು.

* ಆಸ್ಟ್ರೇಲಿಯಾದ ಮ್ಯಾಕ್‌ಡರ್ಮಾಟ್ (10–1–51–1), ಸ್ಟೀವ್ ವಾ (9–0–37–2) ಮತ್ತು ನಾಯಕ ಬಾರ್ಡರ್‌ (7–0–38–2) ಅವರ ಚಾಣಾಕ್ಷ ಬೌಲಿಂಗ್ ಮುಂದೆ ಇಂಗ್ಲೆಂಡ್ ಕೊನೆಗೂ ಶರಣಾಗಲೇಬೇಕಾಯಿತು.

* ಇಡೀ ಟೂರ್ನಿಯಲ್ಲಿ ಆಸ್ಟ್ರೇಲಿಯಾದ ಯಶಸ್ಸಿಗೆ ಪ್ರಮುಖ ಕಾಣಿಕೆ ನೀಡಿದ್ದು ಆಲ್‌ರೌಂಡರ್‌ ಸ್ಟೀವ್ ವಾ ಅವರು. ಇಂದೋರ್ ನಲ್ಲಿ ನಡೆದಿದ್ದ ಲೀಗ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ತಂಡವು ಮೂರು ರನ್‌ಗಳ ರೋಚಕ ಜಯ ಸಾಧಿಸಲು ಸ್ಟೀವ್‌ ವಾ ಹಾಕಿದ ಕೊನೆಯ ಓವರ್ ಕಾರಣವಾಗಿತ್ತು. ಒಂದು ಓವರ್‌ನಲ್ಲಿ ಆರು ಅಗತ್ಯವಿದ್ದ ನ್ಯೂಜಿಲೆಂಡ್‌ಗೆ ಅವರು ಕೇವಲ ಮೂರು ರನ್ ನೀಡಿದ್ದರು.

* ಟೂರ್ನಿಯಲ್ಲಿ ಏಷ್ಯಾ ಖಂಡದ ಬಲಿಷ್ಠ ತಂಡಗಳಾದ ಭಾರತ ಮತ್ತು ಪಾಕಿಸ್ಥಾನಗಳ ಸವಾಲು ಎದುರಿಸುವಲ್ಲಿ ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ತಂಡಗಳು ಸಫಲವಾಗಿದ್ದವು. ಆದ್ದರಿಂದ ಇಬ್ಬರು ನಾಯಕರಾದ ಅಲನ್ ಬಾರ್ಡರ್ ಮತ್ತು ಮೈಕ್ ಗ್ಯಾಟಿಂಗ್ ಅವರ ನಡುವಣ ಪ್ರತಿಷ್ಠೆಯ ಹಣಾಹಣಿಯಂದೇ ಫೈನಲ್‌ ಪಂದ್ಯವನ್ನು ಬಿಂಬಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT