ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟಾರ್ಕ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್‌: ಆಸ್ಟ್ರೇಲಿಯಾ ಎದುರು ಹೀನಾಯ ಸೋಲು

ನ್ಯೂಜಿಲೆಂಡ್ ಎದುರು ಸಾಧಾರಣ ಮೊತ್ತ ಪೇರಿಸಿದ ಆಸ್ಟ್ರೇಲಿಯಾ
Last Updated 30 ಜೂನ್ 2019, 2:11 IST
ಅಕ್ಷರ ಗಾತ್ರ

ಲಾರ್ಡ್ಸ್‌, ಲಂಡನ್ (ಪಿಟಿಐ): ಆಸ್ಟ್ರೇಲಿಯದ ಮಾರಕ ಬೌಲಿಂಗ್‌ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್‌ ತಂಡ ಕೇವಲ 157ರನ್‌ಗಳಿಗೆ ಆಲೌಟ್‌ ಆಗುವ ಮೂಲಕ ಕಾಂಗರೂ ಪಡೆಗೆ ಹೀನಾಯವಾಗಿ ಶರಣಾಗಿದೆ.

ಕಾಂಗರೂ ಪಡೆ ನೀಡಿದ್ದ 243ರನ್‌ಗಳ ಸಾಧಾರಣ ಮೊತ್ತ ಬೆನ್ನುಹತ್ತಿದ ನ್ಯೂಜಿಲೆಂಡ್‌ ತಂಡಕ್ಕೆ ಮಾರಕವಾಗಿದ್ದು, ಬೌಲರ್‌ ಮಿಚೆಲ್‌ ಸ್ಟಾರ್ಕ್‌. 9.4 ಓವರ್‌ಗಳಲ್ಲಿ ಕೇವಲ 26ರನ್‌ ನೀಡಿದ ಮಿಚೆಲ್‌ ಸ್ಟಾರ್ಕ್‌ ಬರೋಬ್ಬರಿ 5 ವಿಕೆಟ್‌ ಪಡೆದು ಸಂಭ್ರಮಿಸಿದರು.

ನ್ಯೂಜಿಲೆಂಡ್‌ ಪರ ನಾಯಕ ಕೇನ್‌ ವಿಲಿಯಮ್ಸನ್‌ (40) ಹೊರತುಪಡಿಸಿದರೆ ಇನ್ಯಾರಿಂದಲೂ ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಹೀಗಾಗಿ ಆಸ್ಟ್ರೇಲಿಯಾ ವಿರುದ್ಧ ನ್ಯೂಜಿಲೆಂಡ್‌ ಮುಗ್ಗರಿಸಬೇಕಾಯಿತು. ಅಂತಿಮವಾಗಿ ಆಸ್ಟ್ರೇಲಿಯಾ 86ರನ್‌ಗಳ ಭರ್ಜರಿ ಜಯ ದಾಖಲಿಸಿತು. ಈ ಗೆಲವಿನೊಂದಿಗೆ ವಿಶ್ವಕಪ್‌ ಟೂರ್ನಿಯ ಪಾಯಿಂಟ್‌ ಪಟ್ಟಿಯಲ್ಲಿ 14 ಅಂಕಗಳೊಂದಿಗೆ ಆಸ್ಟ್ರೇಲಿಯಾ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದೆ.

ನ್ಯೂಜಿಲೆಂಡ್‌ ಟ್ರೆಂಟ್‌ ಬೌಲ್ಟ್‌ ದಾಳಿಗೆ ಕುಸಿಯುವ ಭೀತಿಯಲ್ಲಿದ್ದ ಹಾಲಿ ಚಾಂಪಿಯನ್ ಆಸ್ಟ್ರೆಲಿಯಾ ತಂಡಕ್ಕೆ ಉಸ್ಮಾನ್ ಖ್ವಾಜಾ ಮತ್ತು ಅಲೆಕ್ಸ್‌ ಕ್ಯಾರಿ ಆಸರೆಯಾದರು.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆಸ್ಟ್ರೇಲಿಯಾ ತಂಡವು ಉಸ್ಮಾನ್ (88; 129ಎಸೆತ, 5ಬೌಂಡರಿ) ಮತ್ತು ಅಲೆಕ್ಸ್‌ ಕ್ಯಾರಿ (71; 72ಎಸೆತ, 11ಬೌಂಡರಿ) ಅವರ ಅರ್ಧಶತಕಗಳ ಬಲದಿಂದ 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 243 ರನ್‌ ಗಳಿಸಿತು.

ಲಾರ್ಡ್ಸ್‌ ಅಂಗಳದಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡಕ್ಕೆ ಆರಂಭದಲ್ಲಿಯೇ ಪೆಟ್ಟುಬಿದ್ದಿತು. ಐದನೇ ಓವರ್‌ನಲ್ಲಿ ಟ್ರೆಂಟ್‌ ಬೌಲ್ಟ್ ಹಾಕಿದ ನೇರ ಎಸೆತವನ್ನು ಆಡಲು ಮುಂದಡಿಯಿಟ್ಟ ಫಿಂಚ್ ಎಲ್‌ಬಿಡಬ್ಲ್ಯು ಆದರು. ಮೂರು ಓವರ್‌ಗಳ ನಂತರ ಲಾಕಿ ಫರ್ಗ್ಯುಸನ್ ಅವರ ಎಸೆತದಲ್ಲಿ ಡೇವಿಡ್ ವಾರ್ನರ್ (16) ಔಟಾದರು.

ಇನ್ನೊಬ್ಬ ಪ್ರಮುಖ ಬ್ಯಾಟ್ಸ್‌ಮನ್ ಸ್ಟೀವನ್ ಸ್ಮಿತ್ ಕೂಡ ಫರ್ಗ್ಯುಸನ್ ಬೌಲಿಂಗ್‌ನಲ್ಲಿ ಔಟಾದರು. ಈ ಹಂತದಲ್ಲಿ ಉಸ್ಮಾನ್ ಖ್ವಾಜಾ ದಿಟ್ಟತನದ ಆಟವಾಡಿದರು. ಅವರಿಗೆ ಜೊತೆ ನೀಡಿದ ಮಾರ್ಕಸ್ (21 ರನ್) ಅವರಿಗೆ ನಿಶಾಮ್ ಅಡ್ಡಿಯಾದರು. ಗ್ಲೆನ್‌ ಮ್ಯಾಕ್ಸ್‌ವೆಲ್ ವಿಕೆಟ್‌ ಅನ್ನೂ ನಿಶಾಮ್ ಗಳಿಸಿದರು. ಅಲೆಕ್ಸ್ ಕ್ಯಾರಿ ಉತ್ತಮವಾಗಿ ಆಡಿದರು. ಅವರು ಉಸ್ಮನ್ ಜೊತೆಗೆ ಆರನೇ ವಿಕೆಟ್‌ಗೆ 107 ರನ್‌ ಸೇರಿಸಿದರು. ಸಾಂದರ್ಭಿಕ ಸ್ಪಿನ್ನರ್‌ ಆಗಿ ಕಣಕ್ಕಿಳಿದ ನಾಯಕ ಕೇನ್ ವಿಲಿಯಮ್ಸನ್ ಅಲೆಕ್ಸ್‌ ಕ್ಯಾರಿ ವಿಕೆಟ್ ಕಬಳಿಸಿದರು.

ಟ್ರೆಂಟ್ ಹ್ಯಾಟ್ರಿಕ್: ಕಿವೀಸ್‌ ಬೌಲರ್ ಟ್ರೆಂಟ್ ಬೌಲ್ಟ್‌ ಇನಿಂಗ್ಸ್‌ನ ಕೊನೆಯ ಓವರ್‌ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿ ದರು. ಓವರ್‌ ಮೂರನೇ ಎಸೆತದಲ್ಲಿ ಉಸ್ಮಾನ್ ವಿಕೆಟ್ ಉರುಳಿಸಿದ ಅವರು ನಾಲ್ಕು ಮತ್ತು ಐದನೇ ಎಸೆತಗಳಲ್ಲಿ ಕ್ರಮವಾಗಿ ಸ್ಟಾರ್ಕ್ ಮತ್ತು ಜೇಸನ್ ಬೆಹ್ರನ್‌ಡಾರ್ಫ್‌ ವಿಕೆಟ್‌ಗಳನ್ನು ಕಿತ್ತರು. ಇದರೊಂದಿಗೆ ಟೂರ್ನಿಯಲ್ಲಿ ಹ್ಯಾಟ್ರಿಕ್ ಸಾಧಿಸಿದ ಎರಡನೇ ಬೌಲರ್‌ ಆದರು.

ಭಾರತದ ಮೊಹಮ್ಮದ್ ಶಮಿ ಮೊದಲಿಗರು.

ಸಂಕ್ಷಿಪ್ತ ಸ್ಕೋರ್: ಆಸ್ಟ್ರೇಲಿಯಾ: 50 ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 243 (ಡೇವಿಡ್ ವಾರ್ನರ್ 16, ಉಸ್ಮಾನ್ ಖ್ವಾಜಾ 88, ಮಾರ್ಕಸ್ ಸ್ಟೊಯಿನಿಸ್ 21, ಅಲೆಕ್ಸ್‌ ಕ್ಯಾರಿ 71, ಪ್ಯಾಟ್ ಕಮಿನ್ಸ್‌ 23, ಟ್ರೆಂಟ್ ಬೌಲ್ಟ್ 51ಕ್ಕೆ4, ಲಾಕಿ ಫರ್ಗ್ಯುಸನ್ 49ಕ್ಕೆ2, ಜೇಮ್ಸ್‌ ನಿಶಾಂ 28ಕ್ಕೆ2) ವಿವರ ಅಪೂರ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT