ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚ್‌ ಕಂಡಂತೆ ‘ಯಶಸ್ವಿ’ ಮೆಟ್ಟಿಲುಗಳು...

Published 3 ಮಾರ್ಚ್ 2024, 0:39 IST
Last Updated 3 ಮಾರ್ಚ್ 2024, 0:39 IST
ಅಕ್ಷರ ಗಾತ್ರ

ಜ್ವಾಲಾ ಸಿಂಗ್, ತರಬೇತುದಾರ

2013ರ ಒಂದು ದಿನ ನಾನು ಆಜಾದ್‌ ಮೈದಾನದಲ್ಲಿ ಕೋಚ್ ಆಗಿರುವ ಸ್ನೇಹಿತನೊಬ್ಬನನ್ನು ಭೇಟಿಯಾಗಲು ಹೋಗಿದ್ದೆ. ಆತನ ಕ್ಲಬ್‌ನ ನೆಟ್ಸ್‌ನಲ್ಲಿ ಬ್ಯಾಟಿಂಗ್ ಅಭ್ಯಾಸ ಮಾಡುತ್ತಿದ್ದ ಹುಡುಗನನ್ನು ಗಮನಿಸಿದೆ. ಆತನ ಬಗ್ಗೆ ಸ್ನೇಹಿತನಿಗೆ ಕೇಳಿದೆ. ‘ಆ ಹುಡುಗ ಬಹಳ ತೊಂದರೆಯಲ್ಲಿದ್ದಾನೆ. ಉತ್ತರಪ್ರದೇಶದಿಂದ ಬಂದಿದ್ದಾನೆ. ಹಿಂದೆ, ಮುಂದೆ ಯಾರೂ ಇಲ್ಲ. ಟೆಂಟ್‌ನಲ್ಲಿ ಇರ್ತಾನೆ. ಸಂಜೆ, ಬೆಳಿಗ್ಗೆ ಬಂದು ಅಭ್ಯಾಸ ಮಾಡ್ತಾನೆ. ಊಟವೂ ಸರಿಯಾಗಿ ಸಿಕ್ಕಿಲ್ಲ’ ಎಂದು ಸ್ನೇಹಿತ ಹೇಳಿದ. ಆ ಹುಡುಗನನ್ನು ಕರೆದು ಹೆಸರು ಕೇಳಿದಾಗ ಯಶಸ್ವಿ ಜೈಸ್ವಾಲ್ ಎಂದ. ಕೃಶಕಾಯ, ಕಣ್ಣುಗಳಲ್ಲಿ ಭಯ, ಕೀಳರಿಮೆ ಛಾಯೆ ಇತ್ತು. ನಾನು ಕೇಳಿದ ಪ್ರಶ್ನೆಗಳಿಗೆ ನಿಧಾನವಾಗಿ ಉತ್ತರಿಸಿದ.

‘ನಮ್ಮದು ಉತ್ತರಪ್ರದೇಶದ ಬದೋಹಿ. ಹ್ಯಾರಿಸ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ದ್ವಿಶತಕ ಹೊಡೆದಿದ್ದೆ. ಆದರೆ, ಅಲ್ಲಿ ನನಗೆ ಹೆಚ್ಚು ಆಡಲಾಗಿಲ್ಲ. ಮುಂಬೈಗೆ ಬಂದೆ. ಇಲ್ಲಿ ಯಾರೂ ನನಗೆ ಆಡಲು ಬಿಡುವುದಿಲ್ಲ’ ಎಂದು ಹೇಳಿದ. ನನಗೆ ನನ್ನ ಜೀವನದ ಕಥೆ ನೆನಪಾಯಿತು.

ಗೋರಖಪುರದಿಂದ ಕ್ರಿಕೆಟ್ ಆಡಲು ಮುಂಬೈಗೆ ಬಂದಿದ್ದೆ. ಶಾರದಾದೇವಿ ಶಾಲೆ ಮೈದಾನದಲ್ಲಿ ಕಲಿತೆ. ಆದರೆ, ಕೆಲವು ವರ್ಷಗಳ ನಂತರ ಕೆಲವರು ತಪ್ಪು ವ್ಯಾಯಾಮ ಹೇಳಿಕೊಟ್ಟಿದ್ದರಿಂದ ನಾನು ಗಾಯಗೊಂಡು ಕ್ರಿಕೆಟ್ ಬಿಟ್ಟೆ. ನನ್ನ ತಂದೆ ಕ್ಯಾನ್ಸರ್‌ನಿಂದ ನಿಧನರಾದರು. ಅವರು ಕೊನೆಯುಸಿರೆಳೆಯುವ ಮುನ್ನ, ‘ನೀನು ಮುಂಬೈಗೆ ಹೋಗಿ ದೊಡ್ಡ ಹೆಸರು ಮಾಡ್ತಿ ಅಂದುಕೊಂಡಿದ್ದೆ. ಆದರೆ, ನನ್ನ ಕನಸು ಈಡೇರಲಿಲ್ಲ’ ಎಂದು ಹೇಳಿದ್ದರು. ಆ ಮಾತು ನನ್ನ ಮನದಲ್ಲಿ ಇರಿಯುತ್ತಿತ್ತು. ಬೇರೆ ಯಾರನ್ನಾದರೂ ದೊಡ್ಡ ಕ್ರಿಕೆಟಿಗನನ್ನಾಗಿ ಮಾಡಬೇಕು ಎಂಬ ಗುರಿ ಹರಳುಗಟ್ಟಿತು. ಮುಂದಿದ್ದ ‘ಯಶಸ್ವಿ’ಯೇ ಆ ಹುಡುಗ ಎನಿಸಿತು. 

ಹ್ಯಾರಿಸ್‌ ಶೀಲ್ಡ್‌ನಲ್ಲಿ ದ್ವಿಶತಕ ಗಳಿಸಿದ ಪುರಾವೆಯಾಗಿ ಪೇಪರ್ ಕಟಿಂಗ್ಸ್‌, ಪತ್ರಗಳು ಇದ್ದರೆ ತೆಗೆದುಕೊಂಡು ನನ್ನ ಮನೆಗೆ ಬಾ ಎಂದು ಹೇಳಿ ವಿಳಾಸ ಕೊಟ್ಟೆ. ಮರುದಿನ ಯಶಸ್ವಿ ಮನೆಗೆ ಬಂದು ಮಾತನಾಡಿದ. ಅವರ ತಂದೆ, ತಾಯಿಯನ್ನು ಸಂಪರ್ಕಿಸಿ ‘ನಿಮ್ಮ ಮಗನಿಗೆ ನಾನು ತರಬೇತಿ ಕೊಡುತ್ತೇನೆ’ ಎಂದೆ. ಅವರೂ ಒಪ್ಪಿದರು. ಆತನ ಬಳಿ ವಯಸ್ಸಿನ ಪ್ರಮಾಣಪತ್ರ ಸರಿಯಾಗಿ ಇರಲಿಲ್ಲ. ಊರಿನಲ್ಲಿದ್ದಾಗ ಕೆಲವರು ಸುಳ್ಳು ಪ್ರಮಾಣಪತ್ರ ಮಾಡಿ ಆಡಿಸಿಬಿಟ್ಟಿದ್ದರು. ನಾನು ಅವರ ತಂದೆಯನ್ನು ಕರೆಸಿ ಎಲ್ಲವನ್ನೂ ಸರಿಪಡಿಸಿದೆ. ಕಾನೂನಾತ್ಮಕವಾಗಿ ಸರಿಪಡಿಸಲು ಪದೇ ಪದೇ ಅವರ ಊರಿಗೆ ಹೋಗಿದ್ದೆ. ಆದರೆ ಸಮಯ ಬಹಳ ವ್ಯರ್ಥವಾಗುತ್ತಿತ್ತು. ಅವರ ತಂದೆಯಿಂದ ಪವರ್ ಆಫ್ ಅಟಾರ್ನಿ ಪಡೆದು ಯಶಸ್ವಿಯನ್ನು ನನ್ನ ದೊಡ್ಡ ಮಗನಂತೆ ನೋಡಿಕೊಂಡೆ.

ಒಂಬತ್ತು ವರ್ಷಗಳಲ್ಲಿ ನನ್ನ ಕಟ್ಟುನಿಟ್ಟಿನ ಸೂಚನೆಗಳನ್ನು ಪಾಲಿಸಿ, ಕ್ರಿಕೆಟ್ ಕಲಿತಿದ್ದಾನೆ. 2020ರಲ್ಲಿ 19 ವರ್ಷದೊಳಗಿನವರ ವಿಶ್ವಕಪ್‌ ಟೂರ್ನಿಗೆ ಅಯ್ಕೆಯಾಗಿರುವುದಾಗಿ ನನಗೆ ಕರೆ ಮಾಡಿದ. ನಾನು ಅದಕ್ಕೆ; ಆಯ್ಕೆ ಆಗಿರುವುದರಲ್ಲಿ ಏನೂ ಅಚ್ಚರಿಯಿಲ್ಲ. ಆದರೆ ಅಲ್ಲಿ ಏನು ಸಾಧನೆ ಮಾಡ್ತಿ ಎನ್ನುವುದೇ ಮುಖ್ಯ. ನೋಡೋಣ ಎಂದಿದ್ದೆ. ಆ ಟೂರ್ನಿಯಲ್ಲಿ ಯಶಸ್ವಿ ಟಾಪ್ ಸ್ಕೋರರ್ ಆಗಿ, ಸರಣಿ ಶ್ರೇಷ್ಠ ಗೌರವ ಗಳಿಸಿದ್ದು ಸಂತಸ ತಂದಿತ್ತು.

ಯಶಸ್ವಿ ಜೈಸ್ವಾಲ್‌  –ಎಎಫ್‌ಪಿ ಚಿತ್ರ
ಯಶಸ್ವಿ ಜೈಸ್ವಾಲ್‌  –ಎಎಫ್‌ಪಿ ಚಿತ್ರ

ಅದೇ ವರ್ಷ ಐಪಿಎಲ್‌ನಲ್ಲಿ ₹ 2.4 ಕೋಟಿಗೆ ಯಶಸ್ವಿಯನ್ನು ರಾಜಸ್ಥಾನ ರಾಯಲ್ಸ್ ತಂಡ ಖರೀದಿಸಿತು. ರಣಜಿ ಟೂರ್ನಿಯಲ್ಲಿಯೂ ಉತ್ತಮವಾಗಿ ಆಡಿದ ಯಶಸ್ವಿಗೆ ಅವಕಾಶಗಳು ಹೆಚ್ಚಿದವು. ಆದರೆ ಕೋವಿಡ್‌ನಿಂದಾಗಿ ಕ್ರಿಕೆಟ್‌ ನಿಂತಿತು. 2021ರಲ್ಲಿಯೂ ಯಶಸ್ವಿ ಸಾಮರ್ಥ್ಯ ಕುಸಿಯಿತು. ಆ ಸಂದರ್ಭದಲ್ಲಿ ನಾನು ಅವನನ್ನು ನಮ್ಮೂರು ಗೋರಖಪುರಕ್ಕೆ ಕರೆಸಿಕೊಂಡು 150–160 ಕಿ.ಮೀ ವೇಗದ ಎಸೆತಗಳನ್ನು ಎದುರಿಸುವ ತಾಲೀಮು ನೀಡಿದೆ. ಕೋವಿಡ್‌ ಸಂದರ್ಭದಲ್ಲಿ ಹೆಚ್ಚು ಟಿ20 ಟೂರ್ನಿಗಳು ನಡೆಯುತ್ತಿದ್ದವು. ಆದ್ದರಿಂದ ಆ ಮಾದರಿಯ ಮೇಲೆ ಹೆಚ್ಚು ಗಮನ ಕೇಂದ್ರಿಕರಿಸಿದ್ದು ಫಲ ನೀಡಿತು. 2023ರಲ್ಲಿ ಐಪಿಎಲ್‌ ಕೂಡ ಚೆನ್ನಾಗಿ ಆಡಿದ ಯಶಸ್ವಿ, ಭಾರತ ತಂಡಕ್ಕೂ ಪದಾರ್ಪಣೆ ಮಾಡಿದ. ಒಂಬತ್ತು ವರ್ಷಗಳವರೆಗೆ ನನ್ನ ತಾಯಿ ಮತ್ತು ಪತ್ನಿ ಕೂಡ ಯಶಸ್ವಿಯನ್ನು ಮನೆ ಮಗನಂತೆ ಬೆಳೆಸಿದರು. 

ಜೈಸ್ವಾಲ್ ಕುಟುಂಬದ ಈ ಹುಡುಗ ಕ್ರಿಕೆಟಿಗನಾಗಷ್ಟೇ ಅಲ್ಲ. ಮಾನವಿಯತೆ ಹಾಗೂ ಮೌಲ್ಯಗಳಿರುವ ವ್ಯಕ್ತಿಯಾಗಿಯೂ ಬೆಳೆದರೆ ಮತ್ತಷ್ಟು ಹೆಮ್ಮೆಪಡುತ್ತೇನೆ. 

ಪಾನಿಪುರಿ ಮಾರಿದ್ದು ನಿಜವೇ?

ಯಶಸ್ವಿ ಜೈಸ್ವಾಲ್‌ಗೆ ಬ್ಯಾಟಿಂಗ್ ಹೇಳಿಕೊಡುತ್ತಿರುವ ಜ್ವಾಲಾ ಸಿಂಗ್‌
ಯಶಸ್ವಿ ಜೈಸ್ವಾಲ್‌ಗೆ ಬ್ಯಾಟಿಂಗ್ ಹೇಳಿಕೊಡುತ್ತಿರುವ ಜ್ವಾಲಾ ಸಿಂಗ್‌

‘2013ರ ನಂತರ ಯಶಸ್ವಿ ಜೈಸ್ವಾಲ್ ಪಾನಿಪುರಿ ಮಾರಾಟ ಮಾಡಿಲ್ಲ. ಏಕೆಂದರೆ ನನ್ನ ಮನೆಯಲ್ಲಿಯೇ ಇದ್ದು ಕ್ರಿಕೆಟ್ ಕಲಿತ. ನನ್ನ ಕ್ರಿಕೆಟ್ ಗೆಳೆಯರಾದ ವಾಸೀಂ ಜಾಫರ್, ದಿಲೀಪ್ ವೆಂಗಸರ್ಕಾರ್ ಸೇರಿದಂತೆ ಎಲ್ಲರಿಂದಲೂ ಯಶಸ್ವಿಗೆ ಮಾರ್ಗದರ್ಶನ ಕೊಡಿಸಿದ್ದೆ’ ಎನ್ನುತ್ತಾರೆ ಜ್ವಾಲಾ ಸಿಂಗ್‌.

‘ನನ್ನ ಬಳಿ ಬರುವ ಮುನ್ನ ಆಜಾದ್ ಮೈದಾನದ ಸುತ್ತಮುತ್ತ ಇರುವ ಪಾನಿಪುರಿ ಅಂಗಡಿ, ಹಣ್ಣು, ಮಿಠಾಯಿ ಅಂಗಡಿಗಳಲ್ಲಿ ಯಶಸ್ವಿ ಹೋಗಿ ಇರುತ್ತಿದ್ದನೆಂದು ನೋಡಿದವರು ಹೇಳಿದ್ದರು. ಆದರೆ ಆತನೇ ಖುದ್ದು ಅಂಗಡಿಯಿಟ್ಟು ಮಾರಾಟ ಮಾಡಿರುವುದು ಅನುಮಾನ. ಟೆಂಟ್‌ನಲ್ಲಿ ಮಲಗುತ್ತಿದ್ದ ಹುಡುಗ ಸಣ್ಣಪುಟ್ಟ ಕೆಲಸ ಮಾಡಿರಬಹುದು. ಆದರೆ ಟಿ.ವಿ ವಾಹಿನಿ, ಮತ್ತಿತರ ಮಾಧ್ಯಮಗಳು ಅತಿರಂಜಿತವಾಗಿ ವರದಿ ಮಾಡಿವೆ’.

‘ಟಿ.ವಿ ವಾಹಿನಿಯೊಂದರ ವರದಿಗಾರನ ಒತ್ತಾಯಕ್ಕೆ ಕೆಲವರ್ಷಗಳ ಹಿಂದೆ ನಮ್ಮ ಮೈದಾನದ ಪಕ್ಕದ ಪಾನಿಪುರಿ ಅಂಗಡಿ ಮುಂದೆ ಯಶಸ್ವಿ ಪಾನಿಪುರಿ ಮಾರಾಟ ಮಾಡುವಂತಹ ವಿಡಿಯೊ ಚಿತ್ರೀಕರಣ ಮಾಡಲಾಗಿತ್ತು. ಈಗ ಅದೇ ವಿಡಿಯೊ ಮತ್ತು ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ’ ಎಂದರು.

ನಿರೂಪಣೆ: ಗಿರೀಶ ದೊಡ್ಡಮನಿ

ಯಶಸ್ವಿ ಜೈಸ್ವಾಲ್  ಮತ್ತು ಗೆಳೆಯರೊಂದಿಗೆ ಜ್ವಾಲಾ ಸಿಂಗ್
ಯಶಸ್ವಿ ಜೈಸ್ವಾಲ್  ಮತ್ತು ಗೆಳೆಯರೊಂದಿಗೆ ಜ್ವಾಲಾ ಸಿಂಗ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT