ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಫ್‌ಎಫ್‌ ಕಾರ್ಯದರ್ಶಿ ಸ್ಥಾನದಿಂದ ಶಾಜಿ ಪ್ರಭಾಕರನ್ ವಜಾ

ವಿಶ್ವಾಸ ದ್ರೋಹದ ಆರೋಪ
Published 8 ನವೆಂಬರ್ 2023, 14:24 IST
Last Updated 8 ನವೆಂಬರ್ 2023, 14:24 IST
ಅಕ್ಷರ ಗಾತ್ರ

ನವದೆಹಲಿ: ‘ವಿಶ್ವಾಸ ದ್ರೋಹ’ದ ಕಾರಣಕ್ಕಾಗಿ ಶಾಜಿ ಪ್ರಭಾಕರನ್ ಅವರನ್ನು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಪ್ರಧಾನ ಕಾರ್ಯದರ್ಶಿ ಸ್ಥಾನದಿಂದ ಕಿತ್ತುಹಾಕಲಾಗಿದೆ ಎಂದು ಫೆಡರೇಷನ್‌ ಬುಧವಾರ ಪ್ರಕಟಿಸಿದೆ.

14 ತಿಂಗಳ ಹಿಂದೆ (2022ರ ಸೆ. 3) ಈ ಗೌರವದ ಹುದ್ದೆಗೆ ಪ್ರಭಾಕರನ್ ಅವರನ್ನು ನೇಮಕ ಮಾಡಲಾಗಿತ್ತು. ಈ ಶಿಸ್ತುಕ್ರಮಕ್ಕೆ ಕಾರಣವಾದ ವಿಶ್ವಾಸ ದ್ರೋಹ ಏನು ಎಂಬುದನ್ನು ರಾಷ್ಟ್ರೀಯ ಫೆಡರೇಷನ್ ಉಲ್ಲೇಖಿಸಿಲ್ಲ.

‘ನಂಬಿಕೆ ದ್ರೋಹದ ಕಾರಣಕ್ಕಾಗಿ ಡಾ.ಶಾಜಿ ಪ್ರಭಾಕರನ್ ಅವರನ್ನು ನವೆಂಬರ್‌ 7ರಿಂದ ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ವಜಾಗೊಳಿಸಲಾಗಿದೆ’ ಎಂದು ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್ (ಎಐಎಫ್‌ಎಫ್‌) ಹೇಳಿಕೆಯಲ್ಲಿ ತಿಳಿಸಿದೆ. ಎಐಎಫ್‌ಎಫ್‌ ಉಪ ಕಾರ್ಯದರ್ಶಿ ಎಂ.ಸತ್ಯನಾರಾಯಣ ಅವರು ಹಂಗಾಮಿಯಾಗಿ ಈ ಹುದ್ದೆ ವಹಿಸಿಕೊಳ್ಳಲಿದ್ದಾರೆ ಎಂದು ಹೇಳಿಕೆ ತಿಳಿಸಿದೆ.

ಎಐಎಫ್‌ಎಫ್‌ ಅಧ್ಯಕ್ಷ ಕಲ್ಯಾಣ್ ಚೌಬೆ ಅವರು ವಜಾಗೊಳಿಸಿದ ಆದೇಶಪತ್ರವನ್ನು ಪ್ರಭಾಕರನ್ ಅವರಿಗೆ ಮಂಗಳವಾರ ಕಳುಹಿಸಿದ್ದಾರೆ. ಈ ಬಗ್ಗೆ ಇದುವರೆಗೆ ಪ್ರಭಾಕರನ್ ಪ್ರತಿಕ್ರಿಯೆ ನೀಡಿಲ್ಲ.

ಪ್ರಭಾಕರನ್ ಅವರ ಕಾರ್ಯನಿರ್ವಹಣೆ ಶೈಲಿಯ ಬಗ್ಗೆ ಫೆಡರೇಷನ್‌ನ ಕಾರ್ಯಕಾರಿ ಸಮಿತಿ ಸದಸ್ಯರು ಅತೃಪ್ತಿ ಹೊಂದಿದ್ದರು ಎಂದು ಫೆಡರೇಷನ್‌ನ ಉಪಾಧ್ಯಕ್ಷ ಎನ್‌.ಎ.ಹ್ಯಾರಿಸ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ಇದಕ್ಕೆ ಮೊದಲೇ ಪ್ರಭಾಕರನ್ ಅವರು ಸೋಮವಾರ ರಾತ್ರಿ ‘ಎಕ್ಸ್‌’ನಲ್ಲಿ ಪೋಸ್ಟ್‌ ಹಾಕಿ ‘ಎಐಎಫ್‌ಎಫ್‌ನಲ್ಲಿ ಎಲ್ಲವೂ ಸರಿಯಿಲ್ಲ’ ಎನ್ನುವ ಸುಳಿವನ್ನು ನೀಡಿದ್ದರು.

‘ನಾವು ನಮ್ಮ ಆಟಕ್ಕೆ ನಿಷ್ಠರಾಗಿರಬೇಕು. ನಾವು ಅಧಿಕಾರದ ಮತ್ತು ಪ್ರಭಾವಶಾಲಿ ಹುದ್ದೆಯಲ್ಲಿರುವಾಗ ನಿಷ್ಠೆ ಮತ್ತು ಶೃದ್ಧೆಯಿಂದ ಕೆಲಸ ಮಾಡುವ ನಿಟ್ಟಿನಲ್ಲಿ ನಮ್ಮ ಜವಾಬ್ದಾರಿ ಇನ್ನೂ ಹೆಚ್ಚು ಇರುತ್ತದೆ’ ಎಂದು ‘ಎಕ್ಸ್’ನಲ್ಲಿ ಬರೆದಿದ್ದಾರೆ.

ಫೆಡರೇಷನ್‌ನ ಕಾರ್ಯಕಾರಿ ಸಮಿತಿ ಸಭೆಯನ್ನು ಗುರುವಾರ ಕರೆಯಲಾಗಿದ್ದು, ಸದಸ್ಯರಿಗೆ ಇತರ ವಿಷಯಗಳ ಜೊತೆ ಈ ಬೆಳವಣಿಗೆಯ ಬಗ್ಗೆ ವಿವರಣೆ ನೀಡಲಾಗುವುದು.

ಅಧ್ಯಕ್ಷರ ನಿರ್ಧಾರವನ್ನು ಕಾರ್ಯಕಾರಿ ಸಮಿತಿ ಸ್ಥಿರೀಕರಿಸಬೇಕಾದ ಅಗತ್ಯವಿಲ್ಲ ಎಂದು ಹ್ಯಾರಿಸ್‌ ಹೇಳಿದರು.

‘ಪ್ರಧಾನ ಕಾರ್ಯದರ್ಶಿಯ ಹುದ್ದೆ ವೇತನದ ಹುದ್ದೆಯಾಗಿದೆ. ಅವರನ್ನು ಕಾರ್ಯಕಾರಿ ಸಮಿತಿ ನೇಮಕ ಮಾಡಿರಲಿಲ್ಲ. ಅಧ್ಯಕ್ಷರಿಗೆ ನೇಮಕದ ಮತ್ತು ತೆಗೆದುಹಾಕುವ ಅಧಿಕಾರವಿದೆ. ಹೀಗಾಗಿ ಅಧ್ಯಕ್ಷರೇ ವಜಾಗೊಳಿಸಿದ ಪತ್ರವನ್ನು ನೀಡಿದ್ದಾರೆ’ ಎಂದು ಹ್ಯಾರಿಸ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT