ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಐಎಫ್‌ಎಫ್‌: ಕಲ್ಯಾಣ್ ಚೌಬೆ ರಾಜೀನಾಮೆಗೆ ಬೈಚುಂಗ್ ಭುಟಿಯಾ ಆಗ್ರಹ

ಎಐಎಫ್‌ಎಫ್‌: ಎರಡನೇ ಬಾರಿಗೆ ‍ಪ್ರಧಾನ ಕಾರ್ಯದರ್ಶಿ ವಜಾ
Published 30 ಜನವರಿ 2024, 16:17 IST
Last Updated 30 ಜನವರಿ 2024, 16:17 IST
ಅಕ್ಷರ ಗಾತ್ರ

ನವದೆಹಲಿ:ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ (ಎಐಎಫ್‌ಎಫ್) ಅಧ್ಯಕ್ಷ ಕಲ್ಯಾಣ್ ಚೌಬೆ ರಾಜೀನಾಮೆ ನೀಡಬೇಕು ಎಂದು ಮಾಜಿ ನಾಯಕ ಬೈಚುಂಗ್ ಭುಟಿಯಾ ಮಂಗಳವಾರ  ಒತ್ತಾಯಿಸಿದ್ದಾರೆ.‌ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಶಾಜಿ ಪ್ರಭಾಕರನ್ ಅವರನ್ನು ಎರಡನೇ ಬಾರಿಗೆ  ವಜಾಗೊಳಿಸಲಾಗಿದ್ದು, ಸಂಸ್ಥೆಯ ಆಡಳಿತದಲ್ಲಿನ ಎಲ್ಲ ಗೊಂದಲಗಳಿಗೆ ಅಧ್ಯಕ್ಷರೇ ಹೊಣೆಗಾರ ಎಂದು ಭುಟಿಯಾ ಆರೋಪಿಸಿದ್ದಾರೆ.  

ಎಐಎಫ್ಎಫ್‌ನ ಕಾರ್ಯಕಾರಿ ಸಮಿತಿಯು ಮಂಗಳವಾರ ಪ್ರಭಾಕರನ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ತೆಗೆದುಹಾಕಿದೆ. ನವೆಂಬರ್ 7ರಂದು ಸಹ ತುರ್ತು ಸಮಿತಿಯು ನಂಬಿಕೆದ್ರೋಹ ಕಾರಣಕ್ಕೆ ಇದೇ ರೀತಿ ಮಾಡಿತ್ತು.

ದೆಹಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಡಿಸೆಂಬರ್ 8 ರಂದು ಅವರ ವಜಾಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತ್ತು.

ಪ್ರಭಾಕರನ್ ಅವರನ್ನು ತುರ್ತು ಸಮಿತಿಯು ವಜಾಗೊಳಿಸಿದೆ. ಆದರೆ ಫೆಡರೇಷನ್ ನಿಯಮಾವಳಿಗಳ ಪ್ರಕಾರ, ಕಾರ್ಯಕಾರಿ ಸಮಿತಿಗೆ ಮಾತ್ರ ಇಂಥ ಅಧಿಕಾರವಿದೆ ಎಂದು ಹೈಕೋರ್ಟ್‌ ಜನವರಿ 19ರ ಆದೇಶದಲ್ಲಿ ತಿಳಿಸಿತ್ತು.

ಆದಾಗ್ಯೂ, ಅರ್ಜಿದಾರರ (ಪ್ರಭಾಕರನ್) ಅಧಿಕಾರಾವಧಿ ಕೊನೆಗೊಳಿಸುವ ಉದ್ದೇಶದಿಂದ ಕಾರ್ಯಕಾರಿ ಸಮಿತಿಯ ಸಭೆಗಳನ್ನು ನಡೆಸಲು ಡಿಸೆಂಬರ್ 8ರ ತಡೆಯಾಜ್ಞೆಯು ಎಐಎಫ್ಎಫ್‌ಗೆ ಅಡ್ಡಿಪಡಿಸುವುದಿಲ್ಲ ಎಂದೂ ಹೈಕೋರ್ಟ್ ಹೇಳಿತ್ತು.

‘ಹೌದು, ಮಂಗಳವಾರ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಶಾಜಿ ಪ್ರಭಾಕರನ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ವಜಾಗೊಳಿಸಲಾಗಿದೆ’ ಎಂದು ಮೂಲಗಳು ಸುದ್ದಿಸಂಸ್ಥೆ ತಿಳಿಸಿವೆ.

ಪ್ರಭಾಕರನ್ ವಜಾಗೊಳಿಸುವ ಕುರಿತು ಚರ್ಚಿಸಲು ಮಂಗಳವಾರ ಎಐಎಫ್‌ಎಫ್‌ನ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಆನ್‌ಲೈನ್‌ ಮೂಲಕ ಭುಟಿಯಾ ಭಾಗವಹಿಸಿದ್ದರು. 

‘ಕಲ್ಯಾಣ ಚೌಬೆ ಮತ್ತು ಖಜಾಂಜಿ ಕಿಪಾ ಅಜಯ್ ಅವರು ರಾಜೀನಾಮೆ ನೀಡಬೇಕು ಎಂದು ಕಾರ್ಯಕಾರಿ ಸಮಿತಿಗೆ ತಿಳಿಸಿದ್ದೇನೆ. ಶಾಜಿ ಪ್ರಭಾಕರನ್ ಅವರನ್ನು ಹರಕೆಯ ಕುರಿ ಮಾಡಬಾರದು. ಕಾರ್ಯಕಾರಿ ಸಮಿತಿ ಅನುಮೋದನೆ ಇಲ್ಲದೆ ನಿರ್ಧಾರ ಕೈಗೊಂಡಿದಕ್ಕೆ ಮೂರು ಜನರು ಸಮಾನ ಹೊಣೆಗಾರರು’ ಎಂದು ಭುಟಿಯಾ ಹೇಳಿದರು. 

‘ಮೂರು ಜನರು ನಿರ್ಧಾರ ಕೈಗೊಳ್ಳುತ್ತಿದ್ದರು. ಶಾಜಿ ಅವರನ್ನು ತೆಗೆದು ಹಾಕುವುದಾದರೆ, ಅಧ್ಯಕ್ಷ ಮತ್ತು ಖಜಾಂಜಿ ಅವರನ್ನು ತೆಗೆದು ಹಾಕಬೇಕು. ಫುಟ್‌ಬಾಲ್‌ ಕ್ರೀಡೆಯಲ್ಲಿ ರಾಜಕೀಯವಿದೆ’ ಎಂದು ಬೇಸರ ವ್ಯಕ್ತಪಡಿಸಿದರು.  

ಮತ್ತೊಂದು ಮೂಲವು ‘ನಂಬಿಕೆ ದ್ರೋಹ’ ಎಂದರೇನು ಎಂಬುದನ್ನು ವಿವರಿಸಲು ಪ್ರಭಾಕರನ್ ಕಾರ್ಯಕಾರಿ ಸಮಿತಿ ಸದಸ್ಯರನ್ನು ಕೇಳಿದರು ಎಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT