ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಫ್‌ಸಿಗೆ ಭರ್ಜರಿ ಗೆಲುವು

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಮಿಂಚಿದ ಕ್ಲೀಟನ್‌, ಡ್ಯಾನಿಷ್‌ ಫಾರೂಕ್
Last Updated 21 ಫೆಬ್ರುವರಿ 2022, 20:24 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್: ಡ್ಯಾನಿಷ್ ಫಾರೂಕ್‌ ಮತ್ತು ಕ್ಲೀಟನ್ ಸಿಲ್ವಾ ಇಲ್ಲಿನ ಅಥ್ಲೆಟಿಕ್ ಕ್ರೀಡಾಂಗಣದಲ್ಲಿ ಸೋಮವಾರ ರಾತ್ರಿ ಮಿಂಚಿನ ಆಟವಾಡಿದರು. ಅವರು ತಂದುಕೊಟ್ಟ ಎರಡು ಗೋಲುಗಳ ನೆರವಿನಿಂದ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ಅಮೋಘ ಜಯ ಸಾಧಿಸಿತು.

ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಬೆಂಗಳೂರು ಎಫ್‌ಸಿ ಒಡಿಶಾ ಎಫ್‌ಸಿಯನ್ನು 2–1ರಿಂದ ಮಣಿಸಿತು. ಈ ಜಯದೊಂದಿಗೆ ತಂಡದ ಸೆಮಿಫೈನಲ್‌ ಆಸೆ ಜೀವಂತವಾಗಿ ಉಳಿದಿದೆ. ತಂಡಕ್ಕೆ ಇನ್ನು ಎರಡು ಪಂದ್ಯಗಳು ಉಳಿದಿದ್ದು ಅವೆರಡೂ ಪಂದ್ಯಗಳನ್ನು ಗೆದ್ದು, ಅಗ್ರ ನಾಲ್ಕರಲ್ಲಿರುವ ತಂಡಗಳು ಸೋತರೆ ಬಿಎಫ್‌ಸಿ ಕನಸು ನನಸಾಗಲಿದೆ.

ಸೋಮವಾರದ ಪಂದ್ಯದ ಎಂಟನೇ ನಿಮಿಷದಲ್ಲೇ ಒಡಿಶಾ ಗೋಲು ಗಳಿಸಿ ಮುನ್ನುಗ್ಗಿತು. ನಂದಾ ತಂದುಕೊಟ್ಟ ಗೋಲು ತಂಡದಲ್ಲಿ ಸಂಭ್ರಮ ಮೂಡಿಸಿತು. ಆದರೆ 31ನೇ ನಿಮಿಷದಲ್ಲಿ ಡ್ಯಾನಿಷ್ ಗಳಿಸಿದ ಗೋಲಿನ ಮೂಲಕ ಬಿಎಫ್‌ಸಿ ಸಮಬಲ ಸಾಧಿಸಿತು.

ದ್ವಿತೀಯಾರ್ಧದಲ್ಲಿ ಎದುರಾಳಿ ತಂಡದ ಮೇಲೆ ಸತತವಾಗಿ ಒತ್ತಡ ಹೇರುವಲ್ಲಿ ಬಿಎಫ್‌ಸಿ ಯಶಸ್ವಿಯಾಯಿತು. ಇದರ ಪರಿಣಾಮವಾಗಿ 49ನೇ ನಿಮಿಷದಲ್ಲಿ ತಂಡಕ್ಕೆ ಪೆನಾಲ್ಟಿ ಅವಕಾಶ ಲಭಿಸಿತು. ಉದಾಂತ ಸಿಂಗ್‌ ಅವರನ್ನು ಕೆಳಗೆ ಬೀಳಿಸಿ ಲಾಲ್‌ರುವತ್ತಾರ ಪ್ರಮಾದ ಎಸಗಿದರು. ಕ್ಲೀಟನ್ ಸಿಲ್ವಾ ಚೆಂಡನ್ನು ಗುರಿ
ಸೇರಿಸಿದರು.

ಮುಂಬೈಗೆ ಈಸ್ಟ್ ಬೆಂಗಾಲ್ ಸವಾಲು: ಫತೋರ್ಡದಲ್ಲಿ ಮಂಗಳವಾರ ನಡೆಯಲಿರುವ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ತಂಡ ಎಸ್‌ಸಿ ಈಸ್ಟ್ ಬೆಂಗಾಲ್ ವಿರುದ್ಧ ಸೆಣಸಲಿದೆ. ಸೆಮಿಫೈನಲ್ ಮೇಲೆ ಕಣ್ಣಿಟ್ಟಿರುವ ಮುಂಬೈ ಸಿಟಿ ಆ ಕನಸು ನನಸಾಗಬೇಕಾದರೆ ಈ ಪಂದ್ಯದಲ್ಲಿ ಜಯ ಗಳಿಸಬೇಕು. ಪಾಯಿಂಟ್ ಪಟ್ಟಿಯ ಕೊನೆಯಲ್ಲಿರುವ ಈಸ್ಟ್ ಬೆಂಗಾಲ್‌ ಮೇಲೆ ಪಂದ್ಯದ ಫಲಿತಾಂಶ ಪರಿಣಾಮ ಬೀರುವುದಿಲ್ಲ. ಆದರೂ ಗೌರವ ಉಳಿಸಿಕೊಳ್ಳುವುದಕ್ಕಾಗಿ ಆ ತಂಡ ಕೂಡ ಜಯದ ನಿರೀಕ್ಷೆಯೊಂದಿಗೆ ಕಣಕ್ಕೆ ಇಳಿಯಲಿದೆ.

ಇಂದಿನ ಪಂದ್ಯ: ಮುಂಬೈ ಸಿಟಿ ಎಫ್‌ಸಿ–ಎಸ್‌ಸಿ ಈಸ್ಟ್ ಬೆಂಗಾಲ್

ಆರಂಭ: ರಾತ್ರಿ 7.30

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT