ಬಿಎಫ್‌ಸಿಗೆ ಸುರೇಶ್‌, ಪ್ರಭ್‌ಶುಕನ್‌

ಸೋಮವಾರ, ಮೇ 27, 2019
29 °C

ಬಿಎಫ್‌ಸಿಗೆ ಸುರೇಶ್‌, ಪ್ರಭ್‌ಶುಕನ್‌

Published:
Updated:

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್‌ನಲ್ಲಿ ಆಡುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್‌ (ಬಿಎಫ್‌ಸಿ) ತಂಡವು ಗೋಲ್‌ಕೀಪರ್ ಪ್ರಭ್‌ಶುಕನ್‌ ಸಿಂಗ್‌ ಗಿಲ್‌ ಮತ್ತು ಮಿಡ್‌ಫೀಲ್ಡರ್‌ ಸುರೇಶ್‌ ಸಿಂಗ್‌ ವಾಂಗ್‌ಜಮ್‌ ಅವರೊಂದಿಗೆ ಎರಡು ವರ್ಷಗಳ ಅವಧಿಗೆ ಒಪ್ಪಂದ ಮಾಡಿಕೊಂಡಿದೆ.

‍ಪ್ರಭ್‌ಶುಕನ್‌ ಮತ್ತು ಸುರೇಶ್‌ ಅವರು ಐ ಲೀಗ್‌ ಫುಟ್‌ಬಾಲ್‌ನಲ್ಲಿ ಇಂಡಿಯನ್‌ ಆ್ಯರೋಸ್‌ ತಂಡದಲ್ಲಿ ಆಡಿದ್ದರು.

ಮಣಿಪುರದ 18 ವರ್ಷದ ಆಟಗಾರ ಸುರೇಶ್‌, 14ವರ್ಷದೊಳಗಿನವರ ಭಾರತ ತಂಡದಲ್ಲಿ ಆಡಿದ್ದರು. 2017ರ ಫಿಫಾ ವಿಶ್ವಕಪ್‌ನಲ್ಲಿ ಆಡಿದ್ದ 17 ವರ್ಷದೊಳಗಿನವರ ಭಾರತ ತಂಡದಲ್ಲೂ ಇದ್ದರು.

‘ಬಿಎಫ್‌ಸಿಯು ಭಾರತದ ಯಶಸ್ವಿ ಕ್ಲಬ್‌ ಎಂಬ ಹಿರಿಮೆ ಹೊಂದಿದೆ. ಈ ತಂಡದಲ್ಲಿ ಆಡುವ ಅವಕಾಶ ಸಿಕ್ಕಿದ್ದು ಅತೀವ ಖುಷಿ ನೀಡಿದೆ’ ಎಂದು ಸುರೇಶ್‌ ಸಂತಸ ವ್ಯಕ್ತಪಡಿಸಿದ್ದಾರೆ.

‘ಸುನಿಲ್‌ ಚೆಟ್ರಿ ಮತ್ತು ಗುರುಪ್ರೀತ್‌ ಸಿಂಗ್ ಸಂಧು ಅವರಂತಹ ಶ್ರೇಷ್ಠ ಆಟಗಾರರ ಜೊತೆ ಅಭ್ಯಾಸ ನಡೆಸುವ ಮತ್ತು ಆಡುವ ಅವಕಾಶ ಸಿಕ್ಕಿರುವುದು ಅದೃಷ್ಟ. ಅವರಿಂದ ಅಮೂಲ್ಯ ಸಲಹೆಗಳನ್ನು ಪಡೆದು ಅವುಗಳನ್ನು ಮೈಗೂಡಿಸಿಕೊಳ್ಳಲು ಪ್ರಯತ್ನಿಸುತ್ತೇನೆ’ ಎಂದು ಪ್ರಭ್‌ಶುಕನ್‌ ತಿಳಿಸಿದ್ದಾರೆ.

‘ಬಿಎಫ್‌ಸಿಯು ಮೊದಲಿನಿಂದಲೂ ಯುವ ಆಟಗಾರರಿಗೆ ಅವಕಾಶಗಳನ್ನು ನೀಡುತ್ತಾ ಅವರ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದೆ. ಈ ಪಟ್ಟಿಗೆ ಪ್ರಭ್‌ಶುಕನ್‌ ಮತ್ತು ಸುರೇಶ್‌ ಸೇರ್ಪಡೆಯಾಗಿದ್ದಾರೆ. ಇಬ್ಬರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲಿದ್ದಾರೆ’ ಎಂದು ಬಿಎಫ್‌ಸಿ ಮುಖ್ಯ ಕೋಚ್‌ ಕಾರ್ಲಸ್‌ ಕುದ್ರತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಎಫ್‌ಸಿ ತಂಡವು ಈ ಬಾರಿಯ ಐಎಸ್‌ಎಲ್‌ನಲ್ಲಿ ಪ್ರಶಸ್ತಿ ಗೆದ್ದಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !