ಮಂಗಳವಾರ, ನವೆಂಬರ್ 30, 2021
23 °C
ನಾಯಕನಿಗೆ ಸುರೇಶ್‌, ಸಮದ್ ಸಾಥ್‌

ಫುಟ್‌ಬಾಲ್‌: ಭಾರತಕ್ಕೆ ಮಣಿದ ನೇಪಾಳ; ಚೆಟ್ರಿ ಬಳಗ ಸ್ಯಾಫ್ ಚಾಂಪಿಯನ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮಾಲಿ (ಮಾಲ್ಡಿವ್ಸ್‌): ನಾಯಕ ಸುನಿಲ್ ಚೆಟ್ರಿ ಅಂತರರಾಷ್ಟ್ರೀಯ ಫುಟ್‌ಬಾಲ್‌ನಲ್ಲಿ 80ನೇ ಗೋಲು ಗಳಿಸಿ ಮಿಂಚಿದರು. ಈ ಮೂಲಕ ಲಯೊನೆಲ್ ಮೆಸ್ಸಿ ಸಾಧನೆಯನ್ನು ಸಮಗಟ್ಟಿದರು. ಚೆಟ್ರಿ (49ನೇ ನಿಮಿಷ), ಸುರೇಶ್ ಸಿಂಗ್ (50ನೇ ನಿ) ಮತ್ತು ಸಹಲ್ ಅಬ್ದುಲ್ ಸಮದ್ (90ನೇ ನಿ) ಅವರ ಗೋಲುಗಳ ನೆರವಿನಿಂದ ಭಾರತ ತಂಡ ಸ್ಯಾಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಇಲ್ಲಿನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಶನಿವಾರ ರಾತ್ರಿ ನಡೆದ ಫೈನಲ್ ಪಂದ್ಯದಲ್ಲಿ ನೇಪಾಳವನ್ನು ಭಾರತ 3–0 ಗೋಲುಗಳಿಂದ ಮಣಿಸಿತು. ಈ ಮೂಲಕ ಎಂಟನೇ ಬಾರಿ ಸ್ಯಾಫ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಗೆದ್ದುಕೊಂಡಿತು. ಮೊದಲ ಬಾರಿ ಫೈನಲ್ ಪ್ರವೇಶಿಸಿದ ನೇಪಾಳ ನಿರಾಸೆ ಕಂಡಿತು. 

37 ವರ್ಷದ ಸುನಿಲ್ ಚೆಟ್ರಿ ಅವರು ಮೆಸ್ಸಿ ಸಾಧನೆಯನ್ನು ಸಮಟ್ಟುವುದರೊಂದಿಗೆ ಸದ್ಯ ಆಡುತ್ತಿರುವವರ ಪೈಕಿ ಅತಿ ಹೆಚ್ಚು ಗೋಲು ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದರು.

ಪಂದ್ಯದ ಮೊದಲಾರ್ಧದಲ್ಲಿ ಭಾರತ ಪಾರಮ್ಯ ಮೆರೆದಿತ್ತು. ಆದರೆ ಚೆಂಡನ್ನು ಗುರಿ ಮುಟ್ಟಿಸಲು ಸಾಧ್ಯವಾಗಲಿಲ್ಲ. ದ್ವಿತೀಯಾರ್ಧ ಆರಂಭಗೊಂಡು ಸ್ವಲ್ಪ ಹೊತ್ತಿನಲ್ಲೇ ಚೆಟ್ರಿ ತಂಡಕ್ಕೆ ಮುನ್ನಡೆ ಗಳಿಸಿಕೊಟ್ಟರು. ಈ ಆಘಾತದಿಂದ ಚೇತರಿಸಿಕೊಳ್ಳುವ ಮೊದಲೇ ನೇಪಾಳಕ್ಕೆ ಸುರೇಶ್ ಸಿಂಗ್ ಮತ್ತೆ ಪೆಟ್ಟುಕೊಟ್ಟರು. ಬಲಭಾಗದಿಂದ ಪ್ರೀತಂ ಕೊತಾಲ್ ನೀಡಿದ ಚೆಂಡಿಗೆ ತಲೆಯೊಡ್ಡಿ ಸುನಿಲ್ ಚೆಟ್ರಿ ಮೊದಲ ಗೋಲು ಗಳಿಸಿದರು. ಯಾಸಿರ್ ಮೊಹಮ್ಮದ್ ನೀಡಿದ ಮೋಹಕ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿ ಸುರೇಶ್‌ ಗೋಲು ಗಳಿಸಿದರು. ಸಹಲ್ ಏಕಾಂಗಿಯಾಗಿ ಚೆಂಡನ್ನು ಡ್ರಿಬಲ್ ಮಾಡುತ್ತ ಬಂದು ಮೋಹಕ ಗೋಲು ಗಳಿಸುವುದರೊಂದಿಗೆ ಮುನ್ನಡೆ ಹೆಚ್ಚಿಸಿದರು. 

52ನೇ ನಿಮಿಷದಲ್ಲಿ ಮನ್ವೀರ್ ಸಿಂಗ್ ಅವರಿಗೆ ಗೋಲು ಗಳಿಸುವ ಅವಕಾಶ ಲಭಿಸಿತ್ತು. ಆದರೆ ಅವರು ಎಡಗಾಲಿನಿಂದ ಒದ್ದ ಚೆಂಡು ಗುರಿ ಸೇರಲಿಲ್ಲ. 79ನೇ ನಿಮಿಷದಲ್ಲಿ ಉದಾಂತ ಸಿಂಗ್ ಕೂಡ ಚೆಂಡಿನೊಂದಿಗೆ ಮುನ್ನಡೆದಿದ್ದರು. ಆದರೆ ರೋಹಿತ್ ಚಾಂದ್ ಅವರು ನೇಪಾಳದ ರಕ್ಷಣಗೆ ನಿಂತರು.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು