ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೂರೊ ಕಪ್ ಫುಟ್‌ಬಾಲ್‌: ಇಂಗ್ಲೆಂಡ್ ಫೈನಲ್ ಪ್ರವೇಶಕ್ಕೆ ದಾಖಲೆ ಮೆರುಗು

ವಿವಾದಕ್ಕೆ ಕಾರಣವಾದ ಪೆನಾಲ್ಟಿ; ಡೆನ್ಮಾರ್ಕ್‌ಗೆ ನಿರಾಸೆ
Last Updated 8 ಜುಲೈ 2021, 13:56 IST
ಅಕ್ಷರ ಗಾತ್ರ

ಲಂಡನ್: ದಾಖಲೆಗಳನ್ನು ಸೃಷ್ಟಿಸಿದ ಪಂದ್ಯದಲ್ಲಿ ವಿವಾದಕ್ಕೆ ಕಾರಣವಾದ ಪೆನಾಲ್ಟಿ ಗೋಲಿನ ಬಲದೊಂದಿಗೆ ಇಂಗ್ಲೆಂಡ್‌ ತಂಡ ಯೂರೊ ಕಪ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪ್ರಶಸ್ತಿ ಸುತ್ತು ಪ್ರವೇಶಿಸಿತು.

ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಡೆನ್ಮಾರ್ಕ್‌ ರಕ್ಷಣಾ ವಿಭಾಗದ ಬಲಿಷ್ಠ ‘ಗೋಡೆ’ಯನ್ನು ಕೆಡವಿ ಹ್ಯಾರಿ ಕೇನ್ ಬಳಗ 2–1ರಲ್ಲಿ ಜಯ ಗಳಿಸಿತು. ಜುಲೈ 11ರಂದು ನಡೆಯಲಿರುವ ಫೈನಲ್‌ನಲ್ಲಿ ಇಂಗ್ಲೆಂಡ್ ಮತ್ತು ಇಟಲಿ ಸೆಣಸಲಿವೆ.

ಹೆಚ್ಚುವರಿ ಅವಧಿಯಲ್ಲಿ ಇಂಗ್ಲೆಂಡ್‌ಗೆ ಒಲಿದ ಪೆನಾಲ್ಟಿ ವಿವಾದಕ್ಕೆ ಕಾರಣವಾಗಿದ್ದರೆ ಯೂರೊ ಕ‍ಪ್‌ ಇತಿಹಾಸದಲ್ಲಿ ಎದುರಾಳಿಗಳ ಆವರಣದಲ್ಲಿ ಅತಿ ಹೆಚ್ಚು ಬಾರಿ ಪ್ರವೇಶಿಸಿದ ದಾಖಲೆ ಇಂಗ್ಲೆಂಡ್ ಪಾಲಾಯಿತು. ಬ್ರಿಟಿಷ್ ಚಾನಲ್ ಒಂದರಲ್ಲಿ ಅತಿ ಹೆಚ್ಚು ಮಂದಿ ವೀಕ್ಷಿಸಿದ ಫುಟ್‌ಬಾಲ್ ಪಂದ್ಯ ಎಂಬ ದಾಖಲೆಯೂ ಈ ಹಣಾಹಣಿಯ ಸಂದರ್ಭದಲ್ಲಿ ನಿರ್ಮಾಣವಾಯಿತು.

ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ನಲ್ಲಿ ಡೆನ್ಮಾರ್ಕ್ ಪ್ರಬಲ ಪೈಪೋಟಿ ಒಡ್ಡಿ ಇಂಗ್ಲೆಂಡ್‌ ಆಟಗಾರರನ್ನು ಕಂಗೆಡಿಸಿತು. 30ನೇ ನಿಮಿಷದಲ್ಲಿ ದಾಮ್ಸ್‌ಗಾರ್ಡ್ ಗಳಿಸಿದ ಗೋಲಿನೊಂದಿಗೆ ಮುನ್ನಡೆಯನ್ನೂ ಸಾಧಿಸಿತು. ಆದರೆ 39ನೇ ನಿಮಿಷದಲ್ಲಿ ಜಯೇರ್ ‘ಉಡುಗೊರೆ’ ಗೋಲಿನ ಮೂಲಕ ಎದುರಾಳಿ ತಂಡ ಸಮಬಲ ಸಾಧಿಸಲು ನೆರವಾದರು. 104ನೇ ನಿಮಿಷದಲ್ಲಿ ಪ್ರಮಾದ ಎಸಗಿದ ಜೋಕಿಮ್ ಮ್ಯಾಲೆ ಪೆನಾಲ್ಟಿಗೆ ಕಾರಣರಾದರು. ಈ ಜಯದೊಂದಿಗೆ 1966ರ ನಂತರ ಇಂಗ್ಲೆಂಡ್ ಮೊದಲ ಬಾರಿ ಪ್ರಮುಖ ಟೂರ್ನಿಯೊಂದರ ಫೈನಲ್ ಪ್ರವೇಶಿಸಿತು. ‌

ನಿಗದಿತ ಅವಧಿಯಲ್ಲಿ ಉಭಯ ತಂಡಗಳು ತಲಾ ಒಂದೊಂದು ಗೋಲುಗಳೊಂದಿಗೆ ಸಮಬಲ ಸಾಧಿಸಿದ್ದವು. ಹೀಗಾಗಿ ಹೆಚ್ಚುವರಿ ಅವಧಿಯನ್ನು ನೀಡಲಾಯಿತು. 14ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿಯಲ್ಲಿ ಹ್ಯಾರಿ ಕೇನ್ ಗೋಲು ಗಳಿಸಿದರು. ಅವರು ಒದ್ದ ಚೆಂಡನ್ನು ಡೆನ್ಮಾರ್ಕ್ ಗೋಲ್‌ಕೀಪರ್ ‍ತಡೆದಿದ್ದರು. ಆದರೆ ಅವರ ಕೈಯಿಂದ ಚೆಂಡು ಚಿಮ್ಮಿತು. ತಕ್ಷಣ ಅತ್ತ ಧಾವಿಸಿದ ಕೇನ್ ಮತ್ತೊಮ್ಮೆ ಒದ್ದು ಚೆಂಡನ್ನು ಗುರಿ ಮುಟ್ಟಿಸಿದರು.

ಇಂಗ್ಲೆಂಡ್‌ನ ರಹೀಮ್ ಸ್ಟರ್ಲಿಂಗ್ ಅವರನ್ನು ಜೋಕಿಮ್ ಮ್ಯಾಲೆ ನೆಲಕ್ಕೆ ಬೀಳಿಸಿದ್ದ ಕಾರಣ ಪೆನಾಲ್ಟಿ ನೀಡಲಾಯಿತು. ರೆಫರಿಯ ನಿರ್ಧಾರವನ್ನು ಮರುಪರಿಶೀಲನೆಯ ನಂತರ ವಿಡಿಯೊ ಅಸಿಸ್ಟಂಡ್ ರೆಫರಿ ಎತ್ತಿಹಿಡಿದಿದ್ದರು. ಜೋಕಿಮ್ ದೊಡ್ಡ ಪ್ರಮಾದ ಎಸಗಲಿಲ್ಲ. ಆದರೂ ಅನ್ಯಾಯವಾಗಿ ಪೆನಾಲ್ಟಿ ನೀಡಲಾಗಿದೆ ಎಂದು ಡೆನ್ಮಾರ್ಕ್‌ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲಿನ ಮಾಧ್ಯಮಗಳಲ್ಲೂ ಈ ಕುರಿತು ಟೀಕೆಗಳು ವ್ಯಕ್ತವಾಗಿವೆ.

ದಾಖಲೆ ಆಕ್ರಮಣ

ಪಂದ್ಯದಲ್ಲಿ ಇಂಗ್ಲೆಂಡ್‌ 56 ಬಾರಿ ಎದುರಾಳಿಗಳ ಪೆನಾಲ್ಟಿ ಆವರಣಕ್ಕೆ ನುಗ್ಗಿತ್ತು. 1980ರ ನಂತರದ ಲಭ್ಯ ಮಾಹಿತಿಗಳ ಪ್ರಕಾರ ಇದು ದಾಖಲೆ ಎನ್ನಲಾಗಿದೆ. ಪಂದ್ಯದಲ್ಲಿ ರಹೀಮ್ ಸ್ಟರ್ಲಿಂಗ್ ಅತಿಹೆಚ್ಚು, 15 ಬಾರಿ ‌ಡೆನ್ಮಾರ್ಕ್‌ ಪೆನಾಲ್ಟಿ ಆವರಣದಲ್ಲಿ ಚೆಂಡನ್ನು ಒದ್ದಿದ್ದಾರೆ.

ಹ್ಯಾರಿ ಕೇನ್ ಮತ್ತು ಮಿಡ್‌ಫೀಲ್ಡರ್ ಮೇಸನ್ ಮೌಂಟ್ ಕ್ರಮವಾಗಿ ಒಂಬತ್ತು ಮತ್ತು ಏಳು ಬಾರಿ ಎದುರಾಳಿಗಳ ಆವರಣದಲ್ಲಿ ಚೆಂಡನ್ನು ಒದ್ದು ಗುರಿ ಮುಟ್ಟಿಸಲು ಪ್ರಯತ್ನಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT