ಶುಕ್ರವಾರ, ಏಪ್ರಿಲ್ 23, 2021
22 °C
ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಮೊದಲ ಲೆಗ್‌ ಸೆಮಿಫೈನಲ್‌ ಇಂದಿನಿಂದ

ಗೋವಾಗೆ ‘ಲೀಗ್‌ ವಿಜೇತರ’ ಸವಾಲು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಫತೋರ್ಡ, ಗೋವಾ: ಲೀಗ್ ವಿಜೇತ ಪಟ್ಟವನ್ನು ಅಲಂಕರಿಸಿದ ಖುಷಿಯಲ್ಲಿರುವ ಮುಂಬೈ ಸಿಟಿ ಎಫ್‌ಸಿ ಆತಿಥೇಯ ಎಫ್‌ಸಿ ಗೋವಾ ತಂಡವನ್ನು ಇಂಡಿಯನ್ ಸೂಪರ್ ಲೀಲ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ಮೊದಲ ಲೆಗ್‌ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ಎದುರಿಸಲಿದೆ. 

ಸತತ 13 ಪಂದ್ಯಗಳಲ್ಲಿ ಅಜೇಯವಾಗಿ ಉಳಿದು ಐಎಸ್‌ಎಲ್‌ನಲ್ಲಿ ದಾಖಲೆ ಬರೆದಿರುವ ಗೋವಾ ಕಳೆದ ವಾರ ಹೈದರಾಬಾದ್ ಎಫ್‌ಸಿಯ ಸವಾಲನ್ನು ಮೀರಿನಿಂತು ಅಂತಿಮ ನಾಲ್ಕರ ಘಟ್ಟ ಪ್ರವೇಶಿಸಿದೆ. ಬಲಿಷ್ಠ ಎಟಿಕೆ ಮೋಹನ್ ಬಾಗನ್ ತಂಡವನ್ನು ಅಂತಿಮ ಲೀಗ್ ಪಂದ್ಯದಲ್ಲಿ ಮಣಿಸಿ ಸೆಮಿಫೈನಲ್ ತಲುಪಿರುವ ಮುಂಬೈ ಎಎಫ್‌ಸಿ ಚಾಂಪಿಯನ್ಸ್ ಲೀಗ್‌ನಲ್ಲಿ ಆಡುವ ಅವಕಾಶ ಪಡೆದ ಹುಮ್ಮಸ್ಸಿನಲ್ಲಿದೆ.

2018-19ರಲ್ಲಿ ಸರ್ಜಿಯೊ ಲೊಬೆರಾ ಕೋಚ್ ಆಗಿದ್ದಾಗ ಎಫ್‌ಸಿ ಗೋವಾ ಸೆಮಿಫೈನಲ್‌ನಲ್ಲಿ 5–2ರಲ್ಲಿ ಮುಂಬೈ ಸಿಟಿಯನ್ನು ಮಣಿಸಿತ್ತು. ಆದರೆ ಈಗ ಎರಡೂ ತಂಡಗಳಲ್ಲಿ ಬದಲಾವಣೆಗಳು ಆಗಿವೆ. ಲೊಬೆರಾ ಮುಂಬೈ ತಂಡದ ಕೋಚ್ ಆಗಿದ್ದಾರೆ. ಅವರ ತರಬೇತಿಯಲ್ಲಿ ಆ ತಂಡ ಈ ಬಾರಿ ಅಮೋಘ ಸಾಮರ್ಥ್ಯ ತೋರಿದೆ. ಹೀಗಾಗಿ ಆತ್ಮವಿಶ್ವಾಸದಿಂದಲೇ ಶುಕ್ರವಾರ ಕಣಕ್ಕೆ ಇಳಿಯಲಿದೆ.

ಜುವಾನ್ ಫೆರಾಂಡೊ ಕೋಚ್ ಆಗಿರುವ ಗೋವಾ ಕೂಡ ಈ ಬಾರಿ ಸವಾಲುಗಳನ್ನು ದಿಟ್ಟವಾಗಿ ಎದುರಿಸಿ ಸೆಮಿಫೈನಲ್‌ಗೆ ಲಗ್ಗೆ ಇರಿಸಿದೆ. ಯಾವ ಹಂತದಲ್ಲೂ ಪಂದ್ಯವನ್ನು ಬಿಟ್ಟುಕೊಡದ ತಂಡ ಎಂಬ ಖ್ಯಾತಿ ಅದಕ್ಕಿದೆ. ಮುಂಬೈ ಎದುರಿನ ಪಂದ್ಯಕ್ಕೆ ಆಲ್ಬರ್ಟೊ ನೊಗುವೆರಾ ಮತ್ತು ಇವಾನ್ ಗೊಂಜಾಲೆಸ್ ಇಲ್ಲ ಎಂಬುದು ಆ ತಂಡದಲ್ಲಿ ಆತಂಕ ಉಂಟುಮಾಡಿದೆ. ಇವರಿಬ್ಬರೂ ಅಮಾನತುಗೊಂಡು ಹೊರಗೆ ಉಳಿದಿದ್ದಾರೆ. ಆದರೆ ಗಾಯಗೊಂಡಿದ್ದ ಜಾರ್ಜ್ ಒರ್ಟಿಜ್ ವಾ‍ಪಸಾಗಿರುವುದು ಭರವಸೆ ಮೂಡಿಸಿದೆ.

ಅಮಾನತುಗೊಂಡು ಹಿಂದಿನ ನಾಲ್ಕು ಪಂದ್ಯಗಳಲ್ಲಿ ಆಡದೇ ಇದ್ದ ಹ್ಯೂಗೊ ಬೌಮೋಸ್ ತಂಡಕ್ಕೆ ಮರಳಿರುವುದು ಮುಂಬೈ ಸಿಟಿ ಎಫ್‌ಸಿಯ ಬಲ ಹೆಚ್ಚಿಸಿದೆ. ಈ ವರೆಗೆ ಎರಡು ಗೋಲು ಗಳಿಸಿರುವ ಅವರು ಏಳು ಅಸಿಸ್ಟ್‌ಗಳ ಮೂಲಕ ಮಿಂಚಿದ್ದಾರೆ. ಎಫ್‌ಸಿ ಗೋವಾ ಎದುರು 3–3ರಲ್ಲಿ ಡ್ರಾಗೊಂಡ ಪಂದ್ಯದಲ್ಲಿ ಅವರು ಕೊನೆಯದಾಗಿ ಆಡಿದ್ದರು. ಆದರೆ ಬೌಮೋಸ್‌ಗಾಗಿ ಬಾರ್ತೊಲೊಮೆ ಒಗ್ಬೆಚೆ ಮತ್ತು ಆ್ಯಡಂ ಲೀ ಫಾಂಡ್ರೆ ಪೈಕಿ ಕೋಚ್‌ ಯಾರನ್ನು ಕೈಬಿಡುತ್ತಾರೆ ಎಂಬುದು ಕುತೂಹಲ ಕೆರಳಿಸಿದೆ. ಇವರಿಬ್ಬರು ಹಿಂದಿನ ಎರಡು ಪಂದ್ಯಗಳಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದಾರೆ. ಆ ಎರಡು ಪಂದ್ಯಗಳಲ್ಲಿ ತಂಡ ಒಟ್ಟು ಎಂಟು ಗೋಲು ಗಳಿಸಿದೆ. 

ಗೋವಾ ವಿರುದ್ಧ ಈ ಆವೃತ್ತಿಯಲ್ಲಿ ಮುಂಬೈ ಒಮ್ಮೆಯೂ ಸೋತಿಲ್ಲ. ಮೊದಲ ಲೆಗ್‌ನಲ್ಲಿ 1–‌0ಯಿಂದ ಗೆದ್ದಿದ್ದ ತಂಡ ಎರಡನೇ ಲೆಗ್‌ನಲ್ಲಿ ಡ್ರಾ ಮಾಡಿಕೊಂಡಿತ್ತು. ಎಫ್‌ಸಿ ಗೋವಾ ದಾಖಲೆಯ ಆರು ಬಾರಿ ಪ್ಲೇ ಆಫ್‌ ಪ್ರವೇಶಿಸಿದ್ದು ಎರಡು ಬಾರಿ ಪ್ರಶಸ್ತಿ ಸುತ್ತಿಗೆ ಲಗ್ಗೆ ಇರಿಸಿದೆ. ಆದರೆ ಒಮ್ಮೆಯೂ ಚಾಂಪಿಯನ್ ಆಗಿಲ್ಲ. ಈ ಬೇಸರ ಕಳೆಯಲು ಈಗ ಮತ್ತೊಂದು ಅವಕಾಶ ಲಭಿಸಿದೆ.

 

ಪಂದ್ಯ ಆರಂಭ: ಸಂಜೆ 7.30

ಸ್ಥಳ: ಫತೋರ್ಡ ಕ್ರೀಡಾಂಗಣ

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌

 

ಮುಖಾಮುಖಿ ಫಲಿತಾಂಶ

ಪಂದ್ಯಗಳು 16

ಗೋವಾ ಜಯ 7

ಮುಂಬೈ ಗೆಲುವು 5

ಡ್ರಾ 4

ಮುಖಾಮುಖಿ ಗೋಲುಗಳು

ಗೋವಾ 36

ಮುಂಬೈ 18

 

ಲೀಗ್‌ನಲ್ಲಿ ಉಭಯ ತಂಡಗಳ ಸಾಧನೆ

ತಂಡ;ಪಂದ್ಯ;ಜಯ;ಡ್ರಾ;ಸೋಲು;ಗೋಲು;ಕೊಟ್ಟ ಗೋಲು;ಸ್ಥಾನ

ಮುಂಬೈ;20;12;4;4;35;18;1

ಗೋವಾ;20;7;10;3;31;23;4

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು