ಫಿಫಾ ಕಣದಲ್ಲಿ ಏಷ್ಯಾ ಹೆಜ್ಜೆಗುರುತು

7

ಫಿಫಾ ಕಣದಲ್ಲಿ ಏಷ್ಯಾ ಹೆಜ್ಜೆಗುರುತು

Published:
Updated:

2014ರ ವಿಶ್ವಕಪ್‌ ಫುಟ್‌ಬಾಲ್‌ ಟೂರ್ನಿಯ ಫೈನಲ್‌ ಪಂದ್ಯವದು. ಜರ್ಮನಿ ತಂಡದ ಮಾರಿಯೊ ಗೊಟ್ಜೆ ತಮ್ಮ ಎದೆಯತ್ತರಕ್ಕೆ ಬಂದ ಚೆಂಡನ್ನು ಒದ್ದು ಗುರಿ ಸೇರಿಸಿದಾಗ ಬ್ರೆಜಿಲ್‌ನ ರಿಯೊ ಡಿ ಜನೈರೊದ ಮರಕಾನ ಕ್ರೀಡಾಂಗಣದಲ್ಲಿ ಸಂಭ್ರಮದ ಅಲೆ ಹರಿದಾಡಿತ್ತು. ಜರ್ಮನಿ ತಂಡ ಮಿರುಗುವ ಟ್ರೋಫಿ ಎತ್ತಿ ಹಿಡಿದಿತ್ತು. ಎದುರಾಳಿ ತಂಡ ಅರ್ಜೆಂಟೀನಾ ಪಾಳಯದಲ್ಲಿ ಶೋಕಸಾಗರ.

ಜರ್ಮನಿ ಟ್ರೋಫಿ ಗೆದ್ದಾಗ ಕ್ರೀಡಾಂಗಣದಲ್ಲಿದ್ದ ಸಂಭ್ರಮಕ್ಕಿಂತ ಅವರು ತಮ್ಮ ದೇಶಕ್ಕೆ ಹೋದಾಗ ಲಭಿಸಿದ ಸ್ವಾಗತವಿದೆಯಲ್ಲ, ಆ ಚಿತ್ರಣವನ್ನು ಫುಟ್‌ಬಾಲ್‌ ಪ್ರೇಮಿಗಳು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ಅಂದಾಜು ಐದು ಲಕ್ಷ ಜನ, ಚಾಂಪಿಯನ್‌ ತಂಡದ ಆಟಗಾರರನ್ನು ಸ್ವಾಗತಿಸಲು ಸೇರಿದ್ದರು!

ಹಾಲಿ ಚಾಂಪಿಯನ್‌ ಜರ್ಮನಿ ತಂಡ ಹೀಗೆ ಒಂದಲ್ಲ, ಎರಡಲ್ಲ ಒಟ್ಟು ನಾಲ್ಕು ಸಲ ವಿಶ್ವಕಪ್‌ ಟ್ರೋಫಿ ಎತ್ತಿ ಹಿಡಿದಿದೆ. ಹೆಚ್ಚು ಬಾರಿ ಟ್ರೋಫಿ ಗೆದ್ದವರ ಪಟ್ಟಿಯಲ್ಲಿ ಎರಡನೇ ಸ್ಥಾನ (ಮೊದಲ ಸ್ಥಾನ ಬ್ರೆಜಿಲ್‌) ಹೊಂದಿದೆ. ಆದ್ದರಿಂದ ಈ ತಂಡದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿತ್ತು. ಆದರೆ, ಏಷ್ಯಾ ಫುಟ್‌ಬಾಲ್‌ ವಲಯದ ಶಕ್ತಿ ಎನಿಸಿರುವ ದಕ್ಷಿಣ ಕೊರಿಯಾ ಎದುರು ಯುರೋಪಿನ ಬಲಿಷ್ಠ ತಂಡ ಈ ಬಾರಿ ಸೋತು ಲೀಗ್‌ ಹಂತದಿಂದಲೇ ಹೊರಬಿದ್ದಾಗ ಏಷ್ಯಾ ರಾಷ್ಟ್ರಗಳ ಫುಟ್‌ಬಾಲ್‌ ಪ್ರೇಮಿಗಳಿಗೆ ಆದ ಖುಷಿ ಅಷ್ಟಿಷ್ಟಲ್ಲ.

ದಕ್ಷಿಣ ಕೊರಿಯಾ ತಂಡ ವಿಶ್ವಕಪ್‌ನಲ್ಲಿ ಸಾಧಿಸಿದ ಶ್ರೇಷ್ಠ ಗೆಲುವು ಇದು. ಇದಕ್ಕಿಂತಲೂ ಮೊದಲು ಅನೇಕ ಪಂದ್ಯಗಳಲ್ಲಿ ಶ್ರೇಷ್ಠ ಆಟವಾಡಿದೆ. ಪಂದ್ಯ ಗೆಲ್ಲದಿದ್ದರೂ ಅಭಿಮಾನಿಗಳ ಮನಸ್ಸು ಗೆದ್ದಿದೆ. 2002ರ ವಿಶ್ವಕಪ್‌ನಲ್ಲಿ ಬಲಿಷ್ಠ ಪೋರ್ಚುಗಲ್ ತಂಡವನ್ನು ಸೋಲಿಸಿದ್ದು ಕೂಡ ಸವಿ ನೆನಪಾಗಿದೆ.

ಉತ್ತರ ಕೊರಿಯಾ 1966ರ ಟೂರ್ನಿಯಲ್ಲಿ ಪೋರ್ಚುಗಲ್‌ ಎದುರು ಅತ್ಯಂತ ಶ್ರೇಷ್ಠ ಆಟವಾಡಿತ್ತು. ಆ ಪಂದ್ಯದಲ್ಲಿ ಉತ್ತರ ಕೊರಿಯಾ ತಂಡ 3–5 ಗೋಲುಗಳಿಂದ ಸೋಲು ಕಂಡರೂ, ಅಂದು ನೀಡಿದ್ದ ಪ್ರದರ್ಶನ ಕೋಟ್ಯಂತರ ಫುಟ್‌ಬಾಲ್‌ ಪ್ರೇಮಿಗಳ ಮೆಚ್ಚುಗೆಗೆ ಕಾರಣವಾಗಿತ್ತು. ಪಂದ್ಯದ ಮೊದಲ 25 ನಿಮಿಷಗಳ ಆಟ ಮುಗಿಯುವಷ್ಟರಲ್ಲಿ ಉತ್ತರ ಕೊರಿಯಾದ ಪಾಕ್‌ ಸೇಯಿಂಗ್‌ ಜಿನ್‌, ಲೀ ಡೊಂಗ್‌ ವೂನ್‌ ಮತ್ತು ಯಾಂಗ್‌ ಸೇಯುಂಗ್‌ ಕುಕ್‌ ತಲಾ ಒಂದು ಗೋಲು ಗಳಿಸಿದ್ದು ಈಗಲೂ ಸಾರ್ವಕಾಲಿಕ ಶ್ರೇಷ್ಠ ಆಟವೆನಿಸಿದೆ. ಹೀಗೆ ಅನೇಕ ಪಂದ್ಯಗಳಲ್ಲಿ ಸದಾ ನೆನಪಿನಲ್ಲಿಟ್ಟುಕೊಳ್ಳುವಂತೆ ಆಡಿದರೂ ಏಷ್ಯಾದ ರಾಷ್ಟ್ರಗಳಿಗೆ ವಿಶ್ವ ವೇದಿಕೆಯಲ್ಲಿ ಟ್ರೋಫಿ ಎತ್ತಿ ಹಿಡಿಯಲು ಸಾಧ್ಯವಾಗಿಲ್ಲ. ದಕ್ಷಿಣ ಕೊರಿಯಾ ತಂಡ 2002ರ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದು, ಉತ್ತರ ಕೊರಿಯಾ 1966 ಮತ್ತು 2010ರ ಟೂರ್ನಿಗಳಲ್ಲಿ ಕ್ವಾರ್ಟರ್‌ ಫೈನಲ್‌ ತಲುಪಿದ್ದು ಇದುವರೆಗಿನ ಉತ್ತಮ ಸಾಧನೆ ಎನಿಸಿದೆ.

ಏಷ್ಯಾದ ಇನ್ನಿತರ ರಾಷ್ಟ್ರಗಳಾದ ಜಪಾನ್‌, ಇರಾನ್‌, ಸೌದಿ ಅರೇಬಿಯಾ, ಇಂಡೊನೇಷ್ಯಾ, ಇಸ್ರೇಲ್‌, ಕುವೈತ್‌, ಇರಾಕ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ಮತ್ತು ಚೀನಾ ತಂಡಗಳು ಇದುವರೆಗೆ ವಿಶ್ವಕಪ್‌ನಲ್ಲಿ ಆಡಿವೆ. 2022ರ ಟೂರ್ನಿಗೆ ಆತಿಥ್ಯ ವಹಿಸಿರುವ ಕಾರಣ ಕತಾರ್‌ ತಂಡಕ್ಕೆ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಸಿಗಲಿದೆ.

ಹೆಜ್ಜೆಗುರುತುಗಳ ಹಿನ್ನೋಟ
ಟೂರ್ನಿಯಲ್ಲಿ ಏಷ್ಯಾದ ತಂಡಗಳು ಆಡಲು ಆರಂಭಿಸಿದ ಬಳಿಕ ಒಂದೊಂದೇ ತಂಡಗಳಿಗೆ ಅರ್ಹತೆ ಲಭಿಸತೊಡಗಿತು. 1954ರ ಟೂರ್ನಿಯಲ್ಲಿ ದಕ್ಷಿಣ ಕೊರಿಯಾ ತಂಡ ಜಪಾನ್‌ ಎದುರು ಗೆದ್ದು ಟೂರ್ನಿಗೆ ಅರ್ಹತೆ ಪಡೆದುಕೊಂಡಿತು. ಆದರೆ, ಪ್ರಧಾನ ಸುತ್ತಿನಲ್ಲಿ ದಕ್ಷಿಣ ಕೊರಿಯಾ ಕ್ರಮವಾಗಿ ಹಂಗರಿ ಮತ್ತು ಟರ್ಕಿ ಎದುರು ಹೀನಾಯವಾಗಿ ಸೋತಿತ್ತು.

ನಂತರದ ಎರಡೂ ಟೂರ್ನಿಗಳಲ್ಲಿ ಏಷ್ಯಾದ ಒಂದೂ ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆದುಕೊಳ್ಳಲಿಲ್ಲ. ಆದ್ದರಿಂದ ಫಿಫಾ, ಏಷ್ಯಾದ ಒಂದು ರಾಷ್ಟ್ರಕ್ಕಾದರೂ ಅವಕಾಶ ಕೊಡಬೇಕೆಂದು ನಿರ್ಧರಿಸಿದ್ದರಿಂದ 1966ರ ಟೂರ್ನಿಯಲ್ಲಿ ಉತ್ತರ ಕೊರಿಯಾಕ್ಕೆ ಸ್ಥಾನ ಲಭಿಸಿತು. ಫಿಫಾದ ಈ ಐತಿಹಾಸಿಕ ನಿರ್ಧಾರ ಏಷ್ಯಾ ರಾಷ್ಟ್ರಗಳ ಉತ್ಸಾಹಕ್ಕೆ ಬಲ ತುಂಬಿತು. ಆ ಟೂರ್ನಿಯಲ್ಲಿ ಉತ್ತರ ಕೊರಿಯಾ ನೀಡಿದ ಶ್ರೇಷ್ಠ ಆಟವಾಡಿ ಇಸ್ರೇಲ್‌, ಇರಾನ್‌, ಕುವೈತ್‌, ಇರಾಕ್‌, ಯುನೈಟೆಡ್‌ ಅರಬ್‌ ಎಮಿರೇಟ್ಸ್‌, ಸೌದಿ ಅರೇಬಿಯಾ ತಂಡಗಳು ವಿಶ್ವಕಪ್‌ನಲ್ಲಿ ಕಾಣಿಸಿಕೊಳ್ಳಲು ಪ್ರೇರಣೆಯೂ ಆಯಿತು.

15 ದಿನಗಳ ಹಿಂದೆ ರಷ್ಯಾದಲ್ಲಿ ಆರಂಭವಾದ ಫುಟ್‌ಬಾಲ್‌ ವಿಶ್ವಕಪ್‌ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಆತಿಥೇಯ ದೇಶ ಸೌದಿ ಅರೇಬಿಯಾ ಎದುರು ಗೆದ್ದಿತು. ನಂತರದ ಪಂದ್ಯಗಳಲ್ಲಿ ಸೌದಿ ತಂಡ ಉರುಗ್ವೆ ಎದುರು ಸೋತು, ಈಜಿಪ್ಟ್‌ ಎದುರು ಜಯಿಸಿತು. ಪಂದ್ಯದ ಫಲಿತಾಂಶ ಏನೇ ಇದ್ದರೂ ಆ ತಂಡದವರು ನೀಡಿದ ಪ್ರದರ್ಶನ ಗಮನ ಸೆಳೆಯುವಂತಿತ್ತು. ಸೌದಿ ಅರೇಬಿಯಾ ತಂಡ ಎರಡು ವಿಶ್ವಕಪ್‌ಗಳ ಬಳಿಕ ಟೂರ್ನಿಯಲ್ಲಿ ಆಡುತ್ತಿದೆ. 1994ರ ಟೂರ್ನಿಯಲ್ಲಿ ಚೆನ್ನಾಗಿ ಆಡಿ ಒಟ್ಟಾರೆಯಾಗಿ 12 ಸ್ಥಾನ ಪಡೆದಿತ್ತು. ಆಗ ಮೊರಕ್ಕೊ, ಬೆಲ್ಜಿಯಂ ತಂಡಗಳನ್ನು ಸೋಲಿಸಿತ್ತು.

ಒಂದೂ ಗೆಲುವಿಲ್ಲದ ಟೂರ್ನಿ
ಬ್ರೆಜಿಲ್‌ನಲ್ಲಿ ನಡೆದ 2014ರ ಟೂರ್ನಿಯಲ್ಲಿ ಏಷ್ಯಾದ ತಂಡಗಳು ಒಂದೂ ಗೆಲುವಿಲ್ಲದೇ ಹೋರಾಟ ಮುಗಿಸಿದ್ದವು. ಇದೇ ರೀತಿ 1990ರ ಟೂರ್ನಿಯಲ್ಲಿಯೂ ಆಗಿತ್ತು. ಜಪಾನ್‌, ದಕ್ಷಿಣ ಕೊರಿಯಾ ತಂಡಗಳು ಆಗ ಏಷ್ಯಾದಿಂದ ಪಾಲ್ಗೊಂಡಿದ್ದವು.

ಆಫ್ರಿಕಾ, ಯುರೋಪ್‌, ಉತ್ತರ ಅಮೆರಿಕ, ದಕ್ಷಿಣ ಅಮೆರಿಕಕ್ಕೆ ಹೋಲಿಸಿದರೆ ಏಷ್ಯಾದ ರಾಷ್ಟ್ರಗಳು ವಿಶ್ವಕಪ್‌ನಲ್ಲಿ ಹೇಳಿಕೊಳ್ಳುವಂಥ ಆಟವಾಡಿಲ್ಲ. ಇದಕ್ಕೆ ಅನೇಕ ಕಾರಣಗಳೂ ಇವೆ.

ವಿಶ್ವಕಪ್‌ ಶಕ್ತಿ ಆಧಾರಿತ ಕ್ರೀಡೆ. ಹೆಚ್ಚು ದೈಹಿಕ ಸಾಮರ್ಥ್ಯ, ಬಲಿಷ್ಠ ಸ್ನಾಯುಗಳನ್ನು ಹೊಂದಿರಬೇಕಾಗುತ್ತದೆ. ಭೌಗೋಳಿಕವಾಗಿ ಪರಿಸರದಲ್ಲಿನ ಬದಲಾವಣೆ, ಆಹಾರ, ಟೂರ್ನಿ ನಡೆಯುವ ದೇಶದ ಸ್ಥಳೀಯ ವಾತಾವರಣ ಹೀಗೆ ಅನೇಕ ವಿಷಯಗಳು ಕೂಡ ತಂಡದ ಪ್ರದರ್ಶನದ ಮೇಲೆ ಪರಿಣಾಮ ಬೀರುತ್ತವೆ. ಅದೇನೆ ಇದ್ದರೂ, ಇತ್ತೀಚಿನ ಟೂರ್ನಿಗಳಲ್ಲಿ ಏಷ್ಯಾದ ರಾಷ್ಟ್ರಗಳ ಶಕ್ತಿ ಗಮನ ಸೆಳೆಯುತ್ತಿದೆ. ಇದೇ ರೀತಿ ಮುಂದುವರೆದರೆ ‘ವಿಶ್ವಕಪ್‌ ಟ್ರೋಫಿ ನಮ್ಮದು’ ಎಂದು ಹೇಳಿಕೊಳ್ಳುವ ಹೆಮ್ಮೆಯ ದಿನಗಳ ಕಾಲ ಬರುವುದು ಕಷ್ಟವೇನಲ್ಲ.

‘ಅದೃಷ್ಟದ ಅವಕಾಶ’ ತಪ್ಪಿಸಿಕೊಂಡಿದ್ದ ಭಾರತ
1950ರ ಟೂರ್ನಿಯಲ್ಲಿ ಮಯನ್ಮಾರ್‌, ಫಿಲಿಪ್ಪೀನ್ಸ್‌ ಮತ್ತು ಇಂಡೊನೇಷ್ಯಾ ತಂಡಗಳು ವಿಶ್ವಕಪ್‌ ಟೂರ್ನಿಯಿಂದ ಹಿಂದೆ ಸರಿದ ಕಾರಣ ಭಾರತಕ್ಕೆ ಅದೃಷ್ಟದ ಮೂಲಕ ಟೂರ್ನಿಯಲ್ಲಿ ಪಾಲ್ಗೊಳ್ಳಲು ಅವಕಾಶ ಲಭಿಸಿತ್ತು. ಆದ್ದರಿಂದ ಭಾರತ ಫುಟ್‌ಬಾಲ್‌ ಆಡಳಿತ ಸಂಭಾವ್ಯ ತಂಡವನ್ನು ಆಯ್ಕೆ ಮಾಡಿ ಈಶಾನ್ಯ ರಾಜ್ಯದಲ್ಲಿ ತರಬೇತಿಯನ್ನೂ ಕೊಡಿಸಿತ್ತು. ಆದರೆ, ಬ್ರೆಜಿಲ್‌ನಲ್ಲಿ ಟೂರ್ನಿ ಆಯೋಜನೆಯಾಗಿದ್ದರಿಂದ ಅಲ್ಲಿಗೆ ತಂಡವನ್ನು ಕಳುಹಿಸಲು ಬೇಕಾಗುವಷ್ಟು ಆರ್ಥಿಕ ಶಕ್ತಿ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ಗೆ ಇರಲಿಲ್ಲ. ಆದ್ದರಿಂದ ಟೂರ್ನಿಯಿಂದ ಭಾರತ ಹಿಂದೆ ಸರಿಯಬೇಕಾಯಿತು.

ಭಾರತ ಟೂರ್ನಿಯಿಂದ ಹೊರಗುಳಿಯಲು ಬೇರೆ ಕಾರಣಗಳೂ ಇವೆ ಎಂದು ಕೂಡ ಹೇಳಲಾಗುತ್ತಿದೆ. ವಿಶ್ವಕಪ್‌ನಲ್ಲಿ ಕಡ್ಡಾಯವಾಗಿ ಬೂಟು ಧರಿಸಿಯೇ ಆಡಬೇಕೆಂದು ಫಿಫಾ ಸೂಚಿಸಿತ್ತು. ಆದರೆ, ಭಾರತದ ಆಟಗಾರರು ಬೂಟು ಧರಿಸಿ ಆಡುವಷ್ಟು ಪರಿಣತಿ ಹೊಂದಿರಲಿಲ್ಲ. ಅಭ್ಯಾಸದ ಅವಧಿಯಲ್ಲಿ ಬರಿಗಾಲಿನಲ್ಲಿಯೇ ಆಡಿದ್ದರಿಂದ ಅನಿವಾರ್ಯವಾಗಿ ಟೂರ್ನಿಯಿಂದ ಹೊರಗುಳಿಯಬೇಕಾಯಿತು ಎನ್ನುವ ಕಾರಣವೂ ಇತ್ತು ಎನ್ನಲಾಗಿದೆ. ಆಗಿ ತಪ್ಪಿ ಹೋದ ಅವಕಾಶ ಇಲ್ಲಿಯವರೆಗೆ ಮತ್ತೆ ಲಭಿಸಿಲ್ಲ. ಆದ್ದರಿಂದ ಫುಟ್‌ಬಾಲ್‌ ವಿಶ್ವಕಪ್‌ ಭಾರತಕ್ಕೆ ಈಗಲೂ ಗಗನಕುಸುಮ.

ಏಷ್ಯಾ ರಾಷ್ಟ್ರಗಳಿಲ್ಲದ ಐದು ವಿಶ್ವಕಪ್‌
ಟೂರ್ನಿ 1930ರಲ್ಲಿ ಮೊದಲ ಬಾರಿಗೆ ನಡೆಯಿತು. ಐದು ಟೂರ್ನಿಗಳಲ್ಲಿ ಏಷ್ಯಾದ ಒಂದೂ ತಂಡಗಳು ಇರಲಿಲ್ಲ. ಆರಂಭದ ಎರಡು ಟೂರ್ನಿಗಳಲ್ಲಿ ಏಷ್ಯಾದ ಯಾವ ತಂಡಗಳಿಗೂ ಪಾಲ್ಗೊಳ್ಳಲು ಅವಕಾಶ ಸಿಗಲಿಲ್ಲ. ಫ್ರಾನ್ಸ್‌ನಲ್ಲಿ 1938ರಲ್ಲಿ ಜರುಗಿದ ಟೂರ್ನಿಯಲ್ಲಿ ಇಂಡೊನೇಷ್ಯಾ ಏಷ್ಯಾದ ಮೊದಲ ಫುಟ್‌ಬಾಲ್‌ ತಂಡವಾಗಿ ವಿಶ್ವಕಪ್‌ ಪ್ರವೇಶಿಸಿತು. ಜಪಾನ್ ತಂಡ ಟೂರ್ನಿಯಿಂದ ಹಿಂದೆ ಸರಿದ ಕಾರಣ ಇಂಡೊನೇಷ್ಯಾಕ್ಕೆ ಈ ಅವಕಾಶ ಲಭಿಸಿತು.

ನಂತರದ ವರ್ಷದಿಂದ 1954ರ ವರೆಗೆ ಏಷ್ಯಾದ ಒಂದಲ್ಲ ಒಂದು ರಾಷ್ಟ್ರಗಳು ಟೂರ್ನಿಗೆ ಅರ್ಹತೆ ಪಡೆದುಕೊಳ್ಳುತ್ತಲೇ ಬಂದವು. ಆದರೆ, 1958 ಮತ್ತು 1962 ಎರಡು ವಿಶ್ವಕಪ್‌ಗಳಲ್ಲಿ ಏಷ್ಯಾದ ಒಂದೂ ತಂಡಗಳು ಅರ್ಹತೆ ಪಡೆದುಕೊಳ್ಳಲಿಲ್ಲ. 1974ರ ಟೂರ್ನಿಯಲ್ಲಿಯೂ ಇದೇ ನಿರಾಸೆ ಕಾಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !