ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2027ರ ಏಷ್ಯಾಕಪ್‌ ಫುಟ್‌ಬಾಲ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿದ ಭಾರತ

Last Updated 1 ಜುಲೈ 2020, 9:10 IST
ಅಕ್ಷರ ಗಾತ್ರ

ನವದೆಹಲಿ: 2027ರ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿ ಆತಿಥ್ಯಕ್ಕಾಗಿಭಾರತ ಬಿಡ್‌ ಸಲ್ಲಿಸಿದೆ. ಒಟ್ಟು ಐದು ರಾಷ್ಟ್ರಗಳು ಟೂರ್ನಿ ಆಯೋಜನೆಗೆ ಆಸಕ್ತಿ ತೋರಿವೆ ಎಂದು ಏಷ್ಯನ್‌ ಫುಟ್‌ಬಾಲ್‌ ಫೆಡರೇಷನ್‌ (ಎಎಫ್‌ಸಿ) ಪ್ರಕಟಣೆಯಲ್ಲಿ ತಿಳಿಸಿದೆ.

ಬಿಡ್‌ ಸಲ್ಲಿಸಿದ ಇತರ ದೇಶಗಳೆಂದರೆ ಇರಾನ್‌, ಕತಾರ್‌, ಸೌದಿ ಅರೇಬಿಯಾ ಹಾಗೂ ಉಜ್ಬೆಕಿಸ್ತಾನ.

‘ಬಿಡ್ಡಿಂಗ್‌ ಪ್ರಕ್ರಿಯೆಗೆ ಅನುಗುಣವಾಗಿ ಅಗತ್ಯವಾದ ದಸ್ತಾವೇಜು ರೂಪಿಸುವ ಕುರಿತು ಬಿಡ್‌ ಸಲ್ಲಿಸಿರುವ ಎಲ್ಲ ಸದಸ್ಯ ಸಂಸ್ಥೆಗಳೊಂದಿಗೆ ಚರ್ಚಿಸಲಾಗುವುದು. ಬಳಿಕ 19ನೇ ಆವೃತ್ತಿಯ ಟೂರ್ನಿಗೆ ಆತಿಥೇಯ ದೇಶದ ಹೆಸರು ಪ್ರಕಟಿಸಲಾಗುವುದು’ ಎಂದು ಮಂಗಳವಾರ ಎಎಫ್‌ಸಿ ಹೇಳಿದೆ.

ಏಷ್ಯಾಕಪ್‌ ಟೂರ್ನಿ ಆಯೋಜನೆಗೆ ಆಸಕ್ತಿ ತೋರಿರುವ ಸದಸ್ಯ ಸಂಸ್ಥೆಗಳಿಗೆ ಎಎಫ್‌ಸಿ ಅಧ್ಯಕ್ಷ ಶೇಕ್‌ ಸಲ್ಮಾನ್‌ ಬಿನ್‌ ಇಬ್ರಾಹಿಂ ಅಲ್‌ ಖಲೀಫಾ ಕೃತಜ್ಞತೆ ಸಲ್ಲಿಸಿದ್ದಾರೆ.

1956ರಲ್ಲಿ ಏಷ್ಯಾಕಪ್‌ ಟೂರ್ನಿಯನ್ನು ಪರಿಚಯಿಸಲಾಗಿದೆ. ಸದ್ಯ ಆತಿಥ್ಯಕ್ಕೆ ಬಿಡ್‌ ಸಲ್ಲಿಸಿರುವ ಐದರ ಪೈಕಿ ಎರಡು ರಾಷ್ಟ್ರಗಳು ಈಗಾಗಲೇ ಎರಡೆರಡು ಬಾರಿ ಟೂರ್ನಿ ಆಯೋಜಿಸಿವೆ.

ಹಾಲಿ ಚಾಂಪಿಯನ್‌ ಕತಾರ್‌ 1988 ಹಾಗೂ 2011ರ ಟೂರ್ನಿಗಳಿಗೆ ಆತಿಥ್ಯ ವಹಿಸಿತ್ತು. 1968 ಹಾಗೂ 1976ರಲ್ಲಿ ಟೂರ್ನಿಯನ್ನು ಆಯೋಜಿಸಿದ್ದ ಇರಾನ್‌, ಆ ಎರಡು ಕೂಟಗಳಲ್ಲಿ ಚಾಂಪಿಯನ್‌ ಕೂಡ ಆಗಿತ್ತು. ಏಷ್ಯಾ ಫುಟ್‌ಬಾಲ್‌ ಇತಿಹಾಸದಲ್ಲಿ ತವರಿನ ನೆಲದಲ್ಲಿ ಎರಡು ಬಾರಿ ಟ್ರೋಫಿ ಗೆದ್ದುಕೊಂಡ ಏಕೈಕ ತಂಡವಾಗಿದೆ ಇರಾನ್.

ಮೂರು ಬಾರಿಯ ಚಾಂಪಿಯನ್‌ ಸೌದಿ ಅರೇಬಿಯಾ, 2022ರ ಮಹಿಳಾ ಏಷ್ಯಾಕಪ್‌ ಆತಿಥ್ಯ ಗೆದ್ದುಕೊಂಡಿರುವ ಭಾರತ ಹಾಗೂ ಉಜ್ಬೆಕಿಸ್ತಾನ ದೇಶಗಳು ಮೊದಲ ಬಾರಿ ಟೂರ್ನಿಯ ಆತಿಥ್ಯ ವಹಿಸಲು ಎದುರು ನೋಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT