ಮಂಗಳವಾರ, ನವೆಂಬರ್ 12, 2019
19 °C
ಬಾಂಗ್ಲಾದೇಶ ವಿರುದ್ಧ

ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ : ಭಾರತಕ್ಕೆ ಗೆಲುವಿನ ನಿರೀಕ್ಷೆ

Published:
Updated:

ಕೋಲ್ಕತ್ತ: ಏಷ್ಯನ್‌ ಚಾಂಪಿಯನ್ಸ್‌ ಕತಾರ್‌ ವಿರುದ್ಧ ಗೋಲಿಲ್ಲದೇ ‘ಡ್ರಾ’ ಮಾಡಿಕೊಂಡ ಹುಮ್ಮಸ್ಸಿನಲ್ಲಿರುವ ಭಾರತ ತಂಡ, ವಿಶ್ವ ಕಪ್‌ ಅರ್ಹತಾ ಸುತ್ತಿನ ‘ಇ’ ಗುಂಪಿನ ಎರಡನೇ ಸುತ್ತಿನ ಪಂದ್ಯದಲ್ಲಿ ಮಂಗಳವಾರ ಬಾಂಗ್ಲಾದೇಶ ತಂಡವನ್ನು ಎದುರಿಸಲಿದೆ. ಆತಿಥೇಯರು ಈಗ ಮೊದಲ ಗೆಲುವಿನ ತವಕದಲ್ಲಿದ್ದಾರೆ.

ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಒಮನ್‌ ವಿರುದ್ಧ ಸೋಲಿನಿಂದ ಗಾಸಿಗೊಂಡಿದ್ದ ಭಾರತ, ಪ್ರಬಲ ಕತಾರ್‌ ವಿರುದ್ಧ ಪಂದ್ಯದಲ್ಲಿ ಛಲದ ಆಟವಾಡಿ ‘ಡ್ರಾ’ ಮೂಲಕ ಮೊದಲ ಪಾಯಿಂಟ್‌ ಸಂಪಾದಿಸಿತ್ತು.

ಸಾಲ್ಟ್‌ಲೇಕ್‌ ಕ್ರೀಡಾಂಗಣದಲ್ಲಿ ಮಂಗಳವಾರದ ಪಂದ್ಯ ನಡೆಯಲಿದೆ. ಫುಟ್‌ಬಾಲ್‌ಪ್ರಿಯರ ನಾಡು ಕೋಲ್ಕತ್ತದಲ್ಲಿ 9 ವರ್ಷಗಳ ನಂತರ ಭಾರತ ತಂಡ ಪ್ರಮುಖ ಪಂದ್ಯವೊಂದನ್ನು ಆಡುತ್ತಿದೆ. ಇಗೊರ್‌ ಸ್ಟಿಮಾಕ್‌ ತರಬೇತಿಯ ತಂಡ, ವಿಶ್ವಕಪ್‌ನಲ್ಲಿ ಆಡುವ ದೂರದ ಆಸೆ ಜೀವಂತವಾಗಿಡಲು ಈ ಪಂದ್ಯ ಗೆದ್ದು ಮೂರು ಪಾಯಿಂಟ್‌ ಗಳಿಸಬೇಕಾಗಿದೆ.

ಡಿಫೆಂಡರ್‌ ಸಂದೇಶ್‌ ಜಿಂಗಾನ್‌ ಎಡ ಮೊಣಕಾಲಿನ ನೋವಿನಿಂದ ಅಲಭ್ಯರಾಗಿರುವುದು ಭಾರತ ತಂಡಕ್ಕೆ ಸ್ವಲ್ಪ  ಹಿನ್ನಡೆ. ಆದರೆ, ಕತಾರ್‌ ವಿರುದ್ಧ (ಸೆ.10ರ) ಪಂದ್ಯವನ್ನು ಕಳೆದುಕೊಂಡಿದ್ದ ಸುನಿಲ್‌ ಚೆಟ್ರಿ ಮರಳಿರುವುದು ತಂಡದಲ್ಲಿ ಸ್ಫೂರ್ತಿ ಮೂಡಿಸಿದೆ. ಚೆಟ್ರಿ ತಮ್ಮ ಹಿಂದಿನ ಪಂದ್ಯದಲ್ಲಿ ಭಾರತ ತಂಡದ ಪರ ಒಟ್ಟಾರೆ 72ನೇ ಗೋಲು ಹೊಡೆದಿದ್ದರು. ಆದರೆ ಭಾರತ, ಗುವಾಹಟಿಯಲ್ಲಿ ನಡೆದ ಆ ಪಂದ್ಯವನ್ನು ಮೊದಲಾರ್ಧದ ಪ್ರೇರಣಾದಾಯಕ ಪ್ರದರ್ಶನದ ನಂತರ 1–2  ಗೋಲುಗಳ ಅಂತರದಿಂದ ಸೋತಿತ್ತು.

ಚೆಟ್ರಿ ಅನುಪಸ್ಥಿತಿಯಲ್ಲಿ ಗೋಲ್‌ ಕೀಪರ್ ಗುರ್‌ಪ್ರೀತ್‌ ಸಿಂಗ್‌, ಕತಾರ್‌ ಫಾರ್ವರ್ಡ್‌ ಆಟಗಾರರ ಸತತ ದಾಳಿಗಳನ್ನು ಯಶಸ್ವಿಯಯಾಗಿ ತಡೆದಿದ್ದರು. 11 ಸಲ ಗೋಲು ಯತ್ನಗಳಿಗೆ ಗೋಡೆಯಾಗಿದ್ದರು.

ರಕ್ಷಣಾ ವಿಭಾಗದ ಉತ್ತಮ ನಿರ್ವಹಣೆ, ತಂತ್ರಗಾರಿಕೆ ಮತ್ತು ಶಿಸ್ತುಬದ್ಧ ಆಟ ಕತಾರ್‌ ಎದುರಿನ ಪಂದ್ಯದಲ್ಲಿ ಎದ್ದುಕಂಡಿದ್ದವು. ಕ್ರಮಾಂಕಪಟ್ಟಿಯಲ್ಲಿ ಭಾರತಕ್ಕಿಂತ 83 ಸ್ಥಾನ ಕೆಳಗಿರುವ ಬಾಂಗ್ಲಾದೇಶ ವಿರುದ್ಧ ಪಂದ್ಯದಲ್ಲಿ ಮುಂಚೂಣಿ ಆಟಗಾರರು ಉತ್ತಮ ಪ್ರದರ್ಶನ ನೀಡಬೇಕಾಗಿದೆ. ‘ಚೆಟ್ರಿ ಮಾತ್ರ ಈಗ ಆ ದಾಳಿಗಾರನ ಪಾತ್ರದಲ್ಲಿ ಸ್ಥಿರ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಬಲವಂತ್‌ ಸಿಂಗ್‌ ಮತ್ತು ಮನವೀರ್‌ ಸಿಂಗ್‌ ಕೂಡ ಪರಿಣಾಮ ಬೀರಬೇಕಾಗಿದೆ’ ಎಂದು ಭಾರತ ತಂಡದ ಮಾಜಿ ನಾಯಕ ಬೈಚುಂಗ್‌ ಭುಟಿಯಾ ಕೆಲದಿನಗಳ ಹಿಂದೆ ಹೇಳಿದ್ದರು.

ಜಿಂಗನ್‌ ಅವರ ಸ್ಥಾನದಲ್ಲಿ ಆಡಲಿರುವ ಅನಾಸ್‌ ಎಡತೊಡಿಕ ಅವರಿಗೆ ತಮ್ಮ ಸಾಮರ್ಥ್ಯ ತೋರಿಸಲು ಇದು ಉತ್ತಮ ಅವಕಾಶವಾಗಿದೆ.

ಬಾಂಗ್ಲಾದೇಶ ತಂಡದಲ್ಲಿ 23 ವರ್ಷದೊಳಗಿನವರ ಎಂಟು ಆಟಗಾರರಿದ್ದಾರೆ. ಎರಡು ಸತತ ಸೋಲುಗಳೊಂದಿಗೆ ಬಾಂಗ್ಲಾದೇಶ ಕಣಕ್ಕಿಳಿಯುತ್ತಿದೆ. ಈ ತಂಡ, ಅಫ್ಗಾನಿಸ್ತಾನ ಎದುರು ಸೋತ ನಂತರ 0–2 ರಿಂದ ಕತಾರ್‌ಗೆ ಮಣದಿತ್ತು. ಜಾಮಿ ಡೇ ತರಬೇತಿಯಲ್ಲಿರುವ ತಂಡ ಸೋತರೂ ಈ ಎರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದೆ. ಗೋಲಿನ ಕೆಲವು ಅವಕಾಶಗಳನ್ನು ವ್ಯರ್ಥಪಡಿಸಿತ್ತು.

ಪಂದ್ಯ ಆರಂಭ: ರಾತ್ರಿ 7.30, ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ಪ್ರತಿಕ್ರಿಯಿಸಿ (+)