ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ಎಲ್ಲ ಕ್ಷೇತ್ರ ಗೆಲ್ಲುವುದೇ ಸವಾಲು

ಫಲಿತಾಂಶದ ಹೊತ್ತಿಗೆ ಅಭಿಪ್ರಾಯ ಬದಲು: ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಪಿ.ಚನ್ನಬಸವನಗೌಡ ಮನದಾಳ
Last Updated 28 ಏಪ್ರಿಲ್ 2018, 6:41 IST
ಅಕ್ಷರ ಗಾತ್ರ

ಬಳ್ಳಾರಿ: ಜಿಲ್ಲೆಯಲ್ಲಿ ಬಿಜೆಪಿಯ ಪ್ರಮುಖ ನಾಯಕ, ಸಂಸದ ಬಿ.ಶ್ರೀರಾಮುಲು ಮೊಳಕಾಲ್ಮುರು ಮತ್ತು ಬಾದಾಮಿಯಲ್ಲಿ ಸ್ಪರ್ಧಿಸಿ ಎರಡೂ ಕಡೆ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿದ್ದಾರೆ. ಸದ್ಯಕ್ಕೆ ಅವರ ಅನುಪಸ್ಥಿತಿಯಲ್ಲೇ ಪಕ್ಷ ಸಂಘಟನೆ ಮಾಡುತ್ತಿರುವ ಜಿಲ್ಲಾ ಘಟಕದ ಅಧ್ಯಕ್ಷ ಎಲ್ಲ ಒಂಬತ್ತು ಕ್ಷೇತ್ರಗಳಲ್ಲೂ ಪಕ್ಷಕ್ಕೆ ಗೆಲುವು ತರುವ ಪ್ರಯತ್ನದಲ್ಲಿದ್ದಾರೆ, ತಮ್ಮ ಸಂಘಟಿತ ಪ್ರಯತ್ನ ಮತ್ತು ಪಕ್ಷದ ಪರಿಸ್ಥಿತಿ ಕುರಿತು ಅವರು ‘ಪ್ರಜಾವಾಣಿ’ಗೆ ನೀಡಿರುವ ಸಂದರ್ಶನದ ವಿವರ ಇಲ್ಲಿದೆ.

ಜಿಲ್ಲೆಯಲ್ಲಿ ಪಕ್ಷದ ಪರಿಸ್ಥಿತಿ ಹೇಗಿದೆ?

ಹಡಗಲಿ ಮತ್ತು ಸಂಡೂರಿನಲ್ಲಿ ಟಿಕೆಟ್‌ ವಂಚಿತರ ಬಂಡಾಯವನ್ನು ಶಮನಗೊಳಿಸಬೇಕು. ಸಂಡೂರಿನಲ್ಲಿ ಬಂಗಾರ ಹನುಮಂತು ಮತ್ತು ಹಡಗಲಿಯಲ್ಲಿ ಓದೋ ಗಂಗಪ್ಪ ಪಕ್ಷೇತರರಾಗಿ ಸ್ಪರ್ಧಿಸಿದ್ದು, ತಟಸ್ಥರಾಗಿ ಉಳಿಯುವಂತೆ ಅವರ ಮನವೊಲಿಸಲಾಗುವುದು. ಕೂಡ್ಲಿಗಿಯಲ್ಲಿ ಸ್ಪರ್ಧಿಸಿರುವ ಎನ್‌.ವೈ.ಗೋಪಾಲಕೃಷ್ಣ ಎದುರಿಗೆ ಜೆಡಿಎಸ್‌ನ ಎನ್‌.ಟಿ.ಬೊಮ್ಮಣ್ಣ ತೀವ್ರ ಪೈಪೋಟಿ ನೀಡುವ ಸೂಚನೆಗಳಿವೆ. ನಾಗೇಂದ್ರ ವಿರುದ್ಧ ಎದ್ದಿರುವ ಅಲೆಯಿಂದಲೂ ನಮಗೆ ಲಾಭವಾಗುವ ನಿರೀಕ್ಷೆ ಇದೆ. ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಎಸ್‌.ಪಕ್ಕೀರಪ್ಪ ಕಾಂಗ್ರೆಸ್‌ ಅಭ್ಯರ್ಥಿ ಬಿ.ನಾಗೇಂದ್ರ ವಿರುದ್ಧ ಸೆಣೆಸಾಡಬೇಕಾಗಿದೆ. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ ಮಾತ್ರ ನಮ್ಮ ಸಮರ್ಥ ಎದುರಾಳಿ. ಸಿರುಗುಪ್ಪದಲ್ಲಿ ಅನುಭವಿ ಎಂ.ಎಸ್‌.ಸೋಮಲಿಂಗಪ್ಪ ಎದುರು ಕಾಂಗ್ರೆಸ್‌ನ ಹೊಸ ಮುಖ ಮುರಳಿಕೃಷ್ಣ ಇದ್ದಾರೆ, ಕಂಪ್ಲಿಯಲ್ಲಿ ನಮಗೆ ಸುಲಭದ ಗೆಲುವು ದಕ್ಕಲಿದೆ. ವಿಜಯನಗರ ಮತ್ತು ಎಚ್‌ಬಿಹಳ್ಳಿಯಲ್ಲಿ ಪಕ್ಷ ಬಲವಾಗಿದೆ.

ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಹಡಗಲಿ ಮತ್ತು ಹಗರಿಬೊಮ್ಮನಹಳ್ಳಿಯಲ್ಲಿ ಮಾದಿಗರಿಗೆ ಟಿಕೆಟ್‌ ನೀಡದೇ ಇರುವುದರಿಂದ ಆ ಸಮುದಾಯದ ಸಿಟ್ಟು ಪರಿಣಾಮ ಬೀರಬಹುದೇ?

ಕಾಂಗ್ರೆಸ್‌ ಕೂಡ ಮಾದಿಗರಿಗೆ ಕೊಟ್ಟಿಲ್ಲ. ಹಡಗಲಿಯಲ್ಲಿ ಮಾತ್ರ ಜೆಡಿಎಸ್‌ ಕೊಟ್ಟಿದೆ. ಆದರೆ ಇದು ದೊಡ್ಡ ಮಟ್ಟದ ಪರಿಣಾಮ ಬೀರುವ ಸಾಧ್ಯತೆ ಇಲ್ಲ.

ಜಿಲ್ಲೆಯ ಮತದಾರರು ನಿಮ್ಮ ಪಕ್ಷಕ್ಕೆ ಏಕೆ ಮತ ಕೊಡಬೇಕು?

2008ರಲ್ಲಿ ಬಿಜೆಪಿ ಸರ್ಕಾರ ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಜನ ಇನ್ನೂ ಮರೆತಿಲ್ಲ, ಅಂಥ ಸರ್ಕಾರ ಮತ್ತೆ ಬರಬೇಕು ಎಂಬ ಕಾರಣಕ್ಕೆ ನಮ್ಮ ಪಕ್ಷಕ್ಕೆ ಮತ ಕೊಡಬೇಕು. ನಾವು ರೈತರ ಪರವಾಗಿ ಜಿಲ್ಲೆಯಲ್ಲಿ ಹಲವು ಬಾರಿ ದನಿ ಎತ್ತಿದ್ದೇವೆ.

ಆಗಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಆದಿಯಾಗಿ ಸಚಿವರು, ಶಾಸಕರು ಜೈಲು ಸೇರಿದ್ದರು. ಆ ನೆನಪೂ ಜನರಿಗೆ ಇರುತ್ತದೆಯಲ್ಲವೇ?

ಇರಬಹುದು. ಆದರೆ ಯಡಿಯೂರಪ್ಪನವರಿಗೆ ಕೆಲವು ಪ್ರಕರಣಗಳಲ್ಲಿ ಕ್ಲೀನ್‌ ಚಿಟ್‌ ಸಿಕ್ಕಿದೆ. ಈಗ ತನಿಖೆಯಲ್ಲಿರುವ ಪ್ರಕರಣಗಳಲ್ಲೂ ನಮ್ಮವರು ಆರೋಪಮುಕ್ತರಾಗುವ ಭರವಸೆ ಇದೆ.

ಗ್ರಾಮೀಣ ಕ್ಷೇತ್ರದಲ್ಲಿ ನಾಗೇಂದ್ರ ವಿರುದ್ಧ ಪಕ್ಕೀರಪ್ಪ ಪ್ರಬಲ ಪೈಪೋಟಿ ನೀಡಬಲ್ಲರೇ?

ನಾಗೇಂದ್ರ ಅವರ ಹಣಬಲದ ಮುಂದೆ ಪಕ್ಕೀರಪ್ಪ ಗೆಲುವು ಕಷ್ಟಕರ ಎಂಬ ಮಾತುಗಳು ಈಗ ಕೇಳಿಬರುತ್ತಿರಬಹುದು. ಆದರೆ ಫಲಿತಾಂಶದ ಹೊತ್ತಿಗೆ ಈ ಅಭಿಪ್ರಾಯ ಬದಲಾಗುವುದು ಖಂಡಿತ.

ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದ ಎನ್‌.ವೈ.ಗೋಪಾಲಕೃಷ್ಣ ಬಿಜೆಪಿ ಸೇರಿದ ಬಳಿಕ, ಕ್ಷೇತ್ರಕ್ಕೆ ಅನುದಾನ ಬಿಡುಗಡೆಯಾಗಿರಲಿಲ್ಲ ಎಂದಿದ್ದಾರೆ. ಇದು ಕಾಂಗ್ರೆಸ್‌ ಮೇಲೆ ಪ್ರತಿಕೂಲ ಪರಿಣಾಮ ಬೀರಬಹುದೇ?

ಅವರು ಸತ್ಯವನ್ನು ಹೇಳಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ಅದನ್ನು ಹೇಳಲು ಅವರಿಗೆ ಆಗಿರಲಿಲ್ಲ. ಅದು ಕಾಂಗ್ರೆಸ್‌ ಅಭ್ಯರ್ಥಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.

ಚುನಾವಣೆ ಘೋಷಣೆ ಬಳಿಕ ನಡೆದಿರುವ ಪಕ್ಷಾಂತರವು ನಿಮ್ಮ ಪಕ್ಷದ ಮೇಲೆ ಪರಿಣಾಮ ಬೀರಬಹುದೇ?

ಇಲ್ಲ. ಪಕ್ಷಾಂತರ ಏಕಪಕ್ಷೀಯವಾಗಿಲ್ಲ. ಕೊಡು–ತಗೋ ನಿಯಮದಂತೆ ನಡೆದಿದೆ. ಪ್ರಮುಖವಾಗಿ ಬಿಜೆಪಿಯಿಂದ ಕಾಂಗ್ರೆಸ್‌ಗೆ, ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರ ನಡೆದಿದೆ. ಪಕ್ಷಾಂತರಿಗಳ ಒಲವು–ನಿಲುವುಗಳ ಬಗ್ಗೆಯೂ ಜನ ಗಮನ ಹರಿಸುತ್ತಾರೆ. ಪಕ್ಷಾಂತರದ ಪರಿಣಾಮ ಎಲ್ಲ ಪಕ್ಷಗಳ ಮೇಲೂ ಆಗುತ್ತದೆ.

ಜಿಲ್ಲೆಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರ ಗುಂಪು–ಸಂಸದ ಶ್ರೀರಾಮುಲು ಗುಂಪು ಎಂಬುದು ಇದೆಯೇ?

ಇಲ್ಲ. ಇವೆಲ್ಲ ಊಹಾಪೋಹ. ಶ್ರೀರಾಮುಲು ನಮ್ಮ ನಾಯಕರು. ರಾಜಕೀಯ ವಿಷಯದಲ್ಲಿ ಅವರ ತೀರ್ಮಾನವೇ ಅಂತಿಮ. ಪಕ್ಷ ಸಂಘಟನೆ ವಿಷಯದಲ್ಲಿ ನನ್ನದೇ ನೇತೃತ್ವ, ಭಿನ್ನಾಭಿಪ್ರಾಯಗಳಿಗೆ ಅವಕಾಶವಿಲ್ಲ. ಎಲ್ಲರ ಸಹಯೋಗದಲ್ಲೇ ಪಕ್ಷ ಮುನ್ನಡೆದಿದೆ. ಚುನಾವಣೆಯನ್ನು ಒಟ್ಟಾಗಿಯೇ ಎದುರಿಸುತ್ತಿದ್ದೇವೆ.

ಜಿಲ್ಲಾ ಘಟಕದ ಅಧ್ಯಕ್ಷರಾಗಿ ನಿಮ್ಮ ಮುಂದಿರುವ ದೊಡ್ಡ ಸವಾಲು ಏನು?

ಎಲ್ಲ ಕ್ಷೇತ್ರಗಳಲ್ಲಿ ಪಕ್ಷವನ್ನು ಗೆಲ್ಲಿಸುವುದು. ಇಡೀ ಜಿಲ್ಲೆಯಲ್ಲಿ ಕಾಂಗ್ರೆಸ್‌ ಮಾತ್ರ ನಮ್ಮ ಪ್ರಬಲ ಎದುರಾಳಿ. ಜೆಡಿಎಸ್‌ ಅನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ.

ಪಕ್ಷದಲ್ಲಿ ಜಿ.ಜನಾರ್ದನರೆಡ್ಡಿಯವರ ಪಾತ್ರ ಏನು?

ಏನೂ ಇಲ್ಲ. ಅವರಿಗೆ ಪಕ್ಷದಲ್ಲಿ ಯಾವ ಸ್ಥಾನವನ್ನೂ ನೀಡಿಲ್ಲ. ಆದರೆ ಅವರು ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ. ಪಕ್ಷದ ಮೇಲ್ಮಟ್ಟದಲ್ಲಿ ಆ ಬಗ್ಗೆ ನಿರ್ಧಾರಗಳೇನಾದರೂ ಆಗಿರಬಹುದು. ಆದರೆ ಅದು ನನಗೆ ಗೊತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT