ಭುವನೇಶ್ವರ: ಭಾರತ ತಂಡದವರು ಮಂಗಳವಾರ ಇಲ್ಲಿನ ಕಳಿಂಗ ಕ್ರೀಡಾಂಗಣದಲ್ಲಿ ನಡೆಯಲಿರುವ ವಿಶ್ವಕಪ್ ಫುಟ್‌ಬಾಲ್ ಎರಡನೇ ಸುತ್ತಿನ ಅರ್ಹತಾ ಪಂದ್ಯದಲ್ಲಿ ಪ್ರಬಲ ಕತಾರ್ ತಂಡವನ್ನು ಎದುರಿಸಲಿದ್ದಾರೆ. ನಾಲ್ಕು ವರ್ಷಗಳ ಹಿಂದೆ, ಏಷ್ಯನ್ ಚಾಂಪಿಯನ್ಸ್ ಕತಾರ್ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡ ಸಾಧನೆ ಈಗ ಭಾರತ ತಂಡಕ್ಕೆ ಪಂದ್ಯಕ್ಕಿಳಿಯುವಾಗ ಸ್ಪೂರ್ತಿಯಾಗಲಿದೆ.
ಇದಕ್ಕೆ ಮೊದಲು, ನವೆಂಬರ್ 16ರಂದು ನಡೆದ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ 1–0 ಯಿಂದ ಕುವೈತ್ ತಂಡವನ್ನು ಅದರ ತವರಿನಲ್ಲೇ ಸೋಲಿಸಿದ್ದು, ತಂಡದ ವಿಶ್ವಾಸ ವೃದ್ಧಿಸಿದೆ.
ಕತಾರ್ ತಂಡವೇ ಗೆಲ್ಲುನ ನೆಚ್ಚಿನ ತಂಡದಂತೆ ಕಾಣಿಸಿದರೂ, ಭಾರತ ಪ್ರಬಲ ಪೈಪೋಟಿ ನೀಡುವ ನಿರೀಕ್ಷೆಯಲ್ಲಿದೆ.
2019ರ ಸೆಪ್ಟೆಂಬರ್ 10ರಂದು ನಡೆದಿದ್ದ 2022ರ ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಭಾರತ ತಂಡ, ಕತಾರ್ ವಿರುದ್ಧ ಗೋಲಿಲ್ಲದೇ ಡ್ರಾ ಮಾಡಿಕೊಂಡಿದ್ದು, ಕೊಲ್ಲಿ ರಾಷ್ಟ್ರದ ತಂಡವನ್ನು ಅಚ್ಚರಿಯಲ್ಲಿ ಕೆಡವಿತ್ತು. ಆ ವರ್ಷದ ಆರಂಭದಲ್ಲೇ ಏಷ್ಯನ್ ಚಾಂಪಿಯನ್ ಆಗಿದ್ದ ಕತಾರ್ ಆ ಪಂದ್ಯವನ್ನು ಸುಲಭವಾಗಿ ಗೆಲ್ಲಬಹುದೆಂಬ ನಿರೀಕ್ಷೆಯಿತ್ತು. ದೋಹಾದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಅನುಭವಿ ಸುನೀಲ್ ಚೆಟ್ರಿ ಅನಾರೋಗ್ಯದ ಕಾರಣ ಆಡಿರಲಿಲ್ಲ.
ಈಗ ಈ ಅನುಭವಿ ಆಟಗಾರ ಕಳಿಂಗ ಕ್ರೀಡಾಂಗಣದಲ್ಲಿ ತಮ್ಮ ಆಟವನ್ನು ತೋರಿಸಲು ಕಾತರದಲ್ಲಿದ್ದಾರೆ. ಅಂದಿನ ಪಂದ್ಯದಲ್ಲಿ ನಾಯಕರಾಗಿದ್ದ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಅವರಿಗೂ ಇಲ್ಲಿ ಪ್ರಬಲ ಎದುರಾಳಿಯಿಂದ ಪರೀಕ್ಷೆ ಎದುರಾಗಲಿದೆ.
ಕತಾರ್ ವಿಶ್ವಕ್ರಮಾಂಕದಲ್ಲಿ 61ನೇ ಸ್ಥಾನದಲ್ಲಿದೆ. ಈ ಹಿಂದಿನ ಪಂದ್ಯದಲ್ಲಿ (ನವೆಂಬರ್ 16) ಅದು ಅಫ್ಗಾನಿಸ್ತಾನ ತಂಡವನ್ನು 8–1 ಗೋಲುಗಳಿಂದ ಸದೆಬಡಿದಿರುವ ಕತಾರ್, 102ನೇ ಸ್ಥಾನದಲ್ಲಿರುವ ಆತಿಥೇಯ ತಂಡದ ಎದುರು ಪ್ರಾಬಲ್ಯ ಸಾಧಿಸಲು ಪ್ರಯತ್ನಿಸುವುದು ಖಚಿತ.
ಕತಾರ್‌ನ ತಾರಾ ಆಟಗಾರ ಅಲ್ಮೋಝ್ ಅಲಿ ಅವರು ಅಫ್ಗಾನಿಸ್ತಾನ ವಿರುದ್ಧ ನಾಲ್ಕು ಗೋಲುಗಳನ್ನು ಗಳಿಸಿದ್ದು, ಇಲ್ಲೂ ಅದೇ ಲಯವನ್ನು ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ. ಅವರ ಪ್ರದರ್ಶನದ ಮೇಲೆ ಗಮನ ನೆಟ್ಟಿದೆ.
ಭಾರತ ತಂಡದ ರಕ್ಷಣೆ ಆಟಗಾರರಾದ ಸಂದೇಶ್ ಜಿಂಗಾನ್ ಮತ್ತು ಅಲಿ ಅವರು ಗಾಯಾಳಾಗಿದ್ದ ಕಾರಣ ಕುವೈತ್ ವಿರುದ್ಧ ಪಂದ್ಯದಲ್ಲಿ ಆಡಿರಲಿಲ್ಲ. ಭಾರತ ಪಂದ್ಯ ಗೆದ್ದರೂ, ಕೋಚ್ ಇಗೊರ್ ಸ್ಟಿಮ್ಯಾಚ್ ಅವರ ತಂತ್ರಗಾರಿಕೆಗೆ ಹಿನ್ನಡೆ ಆಗಿತ್ತು. ಎಎಫ್‌ಸಿ ಪಂದ್ಯದಲ್ಲಿ ಮೋಹನ್ ಬಾಗನ್ ಪರ ಆಡುವಾಗ ಅಲಿ ಅವರಿಗೆ ಪಾದದ ಗಾಯವಾಗಿತ್ತು. ಸಂದೇಶ್ ಅವರು ಭುಜದ ನೋವಿನಿಂದ ಬಳಲುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.