ಮಂಗಳವಾರ, ಜನವರಿ 31, 2023
18 °C

ಐಎಸ್‌ಎಲ್‌: ಮೂರು ವರ್ಷದ ನಂತರ ಕಂಠೀರವದಲ್ಲಿ ಫುಟ್‌ಬಾಲ್ ಸಡಗರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ಹಬ್ಬದ ಸಂಭ್ರಮ ಗರಿಗೆದರಿತ್ತು. ಮೂರು ವರ್ಷಗಳ ನಂತರ ಇಲ್ಲಿ ನಡೆದ ಇಂಡಿಯನ್ ಸೂಪರ್ ಲೀಗ್ ಪಂದ್ಯ ನೋಡಲು ನೂರಾರು ಅಭಿಮಾನಿಗಳು ಲಗ್ಗೆಯಟ್ಟಿದ್ದರು. 

ಸ್ಥಳೀಯ ಅಭಿಮಾನಿಗಳ ಸಂತಸವನ್ನು ಸುನಿಲ್ ಚೆಟ್ರಿ ನಾಯಕತ್ವದ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ತಂಡವು ಇಮ್ಮಡಿಗೊಳಿಸಿತು. ಅಲನ್ ಕೊಸ್ತಾ ಗಳಿಸಿದ ಏಕೈಕ ಗೋಲಿನಿಂದ  ಬಿಎಫ್‌ಸಿಯು 1–0ಯಿಂದ ನಾರ್ತ್‌ಈಸ್ಟ್ ಯುನೈಟೆಡ್ ವಿರುದ್ಧ ಗೆದ್ದಿತು. ಇದರೊಂದಿಗೆ ಲೀಗ್‌ನಲ್ಲಿ ಶುಭಾರಂಭ ಮಾಡಿತು.

ಬೆಂಗಳೂರಿನಲ್ಲಿರುವ ಈಶಾನ್ಯ ರಾಜ್ಯಗಳ ಫುಟ್‌ಬಾಲ್ ಅಭಿಮಾನಿಗಳೂ ಕ್ರೀಡಾಂಗಣದಲ್ಲಿ ಸೇರಿದ್ದರು. ನಾರ್ತ್‌ಈಸ್ಟ್ ತಂಡದ ಜೊತೆಗೆ ಚೆಟ್ರಿಯನ್ನೂ ಅವರು ಹುರಿದುಂಬಿಸಿದ್ದು ವಿಶೇಷವಾಗಿತ್ತು. 

ಈ ವಾತಾವರಣದಲ್ಲಿ ಉಭಯ ತಂಡಗಳ ಆಟಗಾರರೂ ಜಿದ್ದಾಜಿದ್ದಿನ ಆಟವಾಡಿದರು. ಇದರ ಫಲವಾಗಿ 87 ನಿಮಿಷಗಳವರೆಗೆ ಯಾವ ತಂಡವೂ ಗೋಲು ಗಳಿಸಲಿಲ್ಲ. ಭಾರತದ ತಾರಾ ವರ್ಚಸ್ಸಿನ ಗೋಲ್‌ಕೀಪರ್ ಗುರುಪ್ರೀತ್ ಸಿಂಗ್ ಸಂಧು ಬಿಎಫ್‌ಸಿ ಗೋಲುವಲಯಕ್ಕೆ ಕಲ್ಲಿನ ಗೋಡೆಯಂತೆ ನಿಂತಿದ್ದರು. 

ಚೆಟ್ರಿಯೊಂದಿಗೆ ಸಂದೇಶ್ ಜಿಂಗಾನ್ ಮತ್ತು ಆರ್. ಕೃಷ್ಣ ಅವರೂ ತಂಡದ ಹೋರಾಟಕ್ಕೆ ಬಲ ತುಂಬಿದರು. 

87ನೇ ನಿಮಿಷದಲ್ಲಿ ಬ್ರೆಜಿಲ್  ದೇಶದ ಡಿಫೆಂಡರ್ ಅಲನ್ ಕೋಸ್ತಾ ಕಾಲ್ಚಳಕ ಮೆರೆದರು. ನಾರ್ತ್‌ ಈಸ್ಟ್ ತಂಡದ ರಕ್ಷಣಾಗೋಡೆಯನ್ನು ದಾಟಿ ಮುನ್ನುಗಿದರು. ಗೋಲ್‌ಕೀಪರ್ ಅರಿಂದಮ್ ಭಟ್ಟಾಚಾರ್ಯ ಅವರನ್ನು ವಂದಿಸಿದ ಕೋಸ್ತಾ ಗೋಲು ಗಳಿಸಿದರು. 

ಬೆಂಗಳೂರು ಅಭಿಮಾನಿಗಳ ಸಂಭ್ರಮ ಮುಗಿಲುಮುಟ್ಟಿತು. ನಂತರದ
ಆಟದಲ್ಲಿ ಚೆಟ್ರಿ ಬಳಗವು ರಕ್ಷಣೆಗೆ ಹೆಚ್ಚು ಒತ್ತು ನೀಡಿತು. ಇದರಿಂದಾಗಿ ಜಯ ಒಲಿಯಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು