ಬುಧವಾರ, 19 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ISL: ಆತ್ಮವಿಶ್ವಾಸದಲ್ಲಿ ಬಿಎಫ್‌ಸಿ; ಇಂದು ಹೈದರಾಬಾದ್‌ ವಿರುದ್ಧ ಪೈಪೋಟಿ

Last Updated 22 ಡಿಸೆಂಬರ್ 2022, 21:46 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಎಫ್‌ಸಿ ತಂಡದವರು ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಪಂದ್ಯದಲ್ಲಿ ಶುಕ್ರವಾರ ಹೈದರಾಬಾದ್‌ ಎಫ್‌ಸಿ ತಂಡವನ್ನು ಎದುರಿಸಲಿದ್ದು, ಗೆಲುವಿನ ಓಟ ಮುಂದುವರಿಸುವ ವಿಶ್ವಾಸದಲ್ಲಿದ್ದಾರೆ.

ಕಳೆದ ವಾರ ನಡೆದ ಪಂದ್ಯದಲ್ಲಿ ಜಮ್ಶೆಡ್‌ಪುರ ಎಫ್‌ಸಿ ತಂಡವನ್ನು ಮಣಿಸಿದ್ದ ಬಿಎಫ್‌ಸಿ, ತವರು ಅಂಗಳ ಕಂಠೀರವ ಕ್ರೀಡಾಂಗಣದಲ್ಲಿ ಸತತ ಎರಡನೇ ಗೆಲುವಿನ ಲೆಕ್ಕಾಚಾರದಲ್ಲಿದೆ.

‘ಕಳೆದ ವಾರದ ಫಲಿತಾಂಶ ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ತವರು ಅಂಗಳದಲ್ಲಿ ನಾವು ಹೆಚ್ಚಿನ ಪಂದ್ಯಗಳನ್ನು ಸೋತಿಲ್ಲ. ಕಂಠೀರವ ಕ್ರೀಡಾಂಗಣ ನಮ್ಮ ಭದ್ರ ಕೋಟೆಯಾಗಿಯೇ ಉಳಿದುಕೊಳ್ಳಬೇಕು’ ಎಂದು ಕೋಚ್‌ ಸೈಮನ್‌ ಗ್ರೇಸನ್‌ ಹೇಳಿದ್ದಾರೆ.

‘ಹೈದರಾಬಾದ್‌ ತಂಡ ಉತ್ತಮ ಫಾರ್ಮ್‌ನಲ್ಲಿದೆ. ಬಾರ್ತೊಲೊಮೆವ್‌ ಒಬಲೆಚೆ ಅವರಂತಹ ಶ್ರೇಷ್ಠ ಆಟಗಾರರು ಆ ತಂಡದಲ್ಲಿದ್ದಾರೆ. ಆದ್ದರಿಂದಲೇ ಅವರು ಪಾಯಿಂಟ್ಸ್‌ ಪಟ್ಟಿಯಲ್ಲಿ ಮೇಲಿನ ಸ್ಥಾನದಲ್ಲಿದ್ದಾರೆ’ ಎಂದು ತಿಳಿಸಿದರು.

‘ಪ್ಯಾಬ್ಲೊ ಪೆರೆಜ್‌ ಅವರು ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಉದಾಂತ ಸಿಂಗ್‌, ಅಲನ್‌ ಕೋಸ್ತಾ ಮತ್ತು ಬ್ರೂನೊ ರಮಿರೆಜ್‌ ಅವರು ಫಿಟ್‌ನೆಸ್‌ ಮರಳಿ ಪಡೆದುಕೊಂಡಿದ್ದು ಆಯ್ಕೆಗೆ ಲಭ್ಯರಿದ್ದಾರೆ’ ಎಂದು ಮಾಹಿತಿ ನೀಡಿದರು.

ಬಿಎಫ್‌ಸಿ ತಂಡ ಅಕ್ಟೋಬರ್‌ನಲ್ಲಿ ನಡೆದಿದ್ದ ‘ಅವೇ’ ಪಂದ್ಯದಲ್ಲಿ ಹೈದರಾಬಾದ್‌ ಎದುರು 0–1 ಗೋಲಿನಿಂದ ನಿರಾಸೆ ಅನುಭವಿಸಿತ್ತು. ಆ ಸೋಲಿಗೆ ಮುಯ್ಯಿ ತೀರಿಸುವ ಅವಕಾಶ ಲಭಿಸಿದೆ.

ಬೆಂಗಳೂರಿನ ತಂಡ 10 ಪಂದ್ಯಗಳಿಂದ ಅಷ್ಟೇ ಪಾಯಿಂಟ್ಸ್ ಹೊಂದಿದ್ದು, ಪಟ್ಟಿಯಲ್ಲಿ ಎಂಟನೇ ಸ್ಥಾನದಲ್ಲಿದೆ. ಹೈದರಾಬಾದ್‌ ತಂಡ 22 ಪಾಯಿಂಟ್ಸ್‌ಗಳೊಂದಿಗೆ ಎರಡನೇ ಸ್ಥಾನದಲ್ಲಿದೆ. ಆದ್ದರಿಂದ ಸುನಿಲ್‌ ಚೆಟ್ರಿ ಅವರನ್ನೊಳಗೊಂಡ ತಂಡಕ್ಕೆ ಗೆಲುವು ಪಡೆಯಲು ಕಠಿಣ ಪರಿಶ್ರಮ ನಡೆಸುವುದು ಅನಿವಾರ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT