ಗುರುವಾರ, 25 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿ: ಇಂಗ್ಲೆಂಡ್‌ ತಂಡದ ಶುಭಾರಂಭ

Published 17 ಜೂನ್ 2024, 16:30 IST
Last Updated 17 ಜೂನ್ 2024, 16:30 IST
ಅಕ್ಷರ ಗಾತ್ರ

ಗೆಲ್ಸೆನ್ಕಿರ್ಚೆನ್‌, ಜರ್ಮನಿ: ಜೂಡ್ ಬೆಲ್ಲಿಂಗ್‌ಹ್ಯಾಮ್ ಗಳಿಸಿದ ಗೋಲಿನ ನೆರವಿನಿಂದ ಇಂಗ್ಲೆಂಡ್‌ ತಂಡವು ಯುರೋ ಕಪ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಸೋಮವಾರ ಸರ್ಬಿಯಾ ತಂಡವನ್ನು 1–0ಯಿಂದ ಮಣಿಸಿ ಶುಭಾರಂಭ ಮಾಡಿತು.

ರಿಯಲ್ ಮ್ಯಾಡ್ರಿಡ್ ತಾರೆ, 20 ವರ್ಷದ ಬೆಲ್ಲಿಂಗ್‌ಹ್ಯಾಮ್ ಅವರು 13ನೇ ನಿಮಿಷ ಇಂಗ್ಲೆಂಡ್‌ ತಂಡಕ್ಕೆ ಮುನ್ನಡೆ ಒದಗಿಸಿದರು. ಸಮಬಲ ಸಾಧಿಸಲು ಸರ್ಬಿಯಾ ಆಟಗಾರರು ಕೊನೆಯವರೆಗೆ ಪ್ರಯತ್ನಿಸಿದರೂ ಸಫಲವಾಗಲಿಲ್ಲ.

ಇದೇ ವೇಳೆ ನಾಯಕ ಹ್ಯಾರಿ ಕೇನ್‌ ಅವರು ಪ್ರಮುಖ ಟೂರ್ನಿಗಳಲ್ಲಿ 23ನೇ ಪಂದ್ಯವನ್ನು ಆಡುವ ಮೂಲಕ ಇಂಗ್ಲೆಂಡ್‌ ಪರ ದಾಖಲೆ ನಿರ್ಮಿಸಿದರು.

‘ಇಂದಿನ ಆಟ ಕಠಿಣವಾಗಿತ್ತು. ಎದುರಾಳಿ ತಂಡವು ಬಲಿಷ್ಠ ಆಟಗಾರರನ್ನು ಹೊಂದಿತ್ತು. ನಾವು ಸಾಂಘಿಕ ಪ್ರಯತ್ನದಿಂದ ಗೆಲುವು ಸಾಧಿಸಿದ್ದೇವೆ’ ಎಂದು 30 ವರ್ಷದ ಕೇನ್‌ ಪಂದ್ಯದ ಬಳಿಕ ಪ್ರತಿಕ್ರಿಯಿಸಿದರು.

ಈ ಗೆಲುವಿನೊಂದಿಗೆ ‘ಸಿ’ ಗುಂಪಿನಲ್ಲಿ ಇಂಗ್ಲೆಂಡ್‌ 3 ಅಂಕದೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಭಾನುವಾರ ನಡೆದ ಡೆನ್ಮಾರ್ಕ್‌ ಮತ್ತು ಸ್ಲೋವೆನಿಯಾ ತಂಡಗಳ ನಡುವಿನ ಪಂದ್ಯ 1–1ರಿಂದ ಡ್ರಾ ಗೊಂಡಿತ್ತು. ಇಂಗ್ಲೆಂಡ್‌ ತನ್ನ ಮುಂದಿನ ಪಂದ್ಯವನ್ನು  ಗುರುವಾರ ಫ್ರಾಂಕ್‌ಫರ್ಟ್‌ನಲ್ಲಿ ಡೆನ್ಮಾರ್ಕ್ ವಿರುದ್ಧ ಸೆಣಸಲಿದೆ.

ಇಂಗ್ಲೆಂಡ್‌ ತಂಡವು ಕಳೆದ ಆವೃತ್ತಿಯ ಫೈನಲ್‌ನಲ್ಲಿ ಇಟಲಿಗೆ ಸೋತು, ರನ್ನರ್‌ ಅಪ್‌ ಆಗಿತ್ತು. ನಿಗದಿತ ಅವಧಿಯಲ್ಲಿ 1–1ರಿಂದ ಸಮಬಲ ಸಾಧಿಸಿದ್ದರಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಇಟಲಿಯು 3–2ರಿಂದ ಜಯ ಸಾಧಿಸಿತ್ತು.

2000ರ ನಂತರ ಇದೇ ಮೊದಲ ಬಾರಿ ಸರ್ಬಿಯಾ ತಂಡವು ಯುರೋ ಕಪ್‌ ಟೂರ್ನಿಯಲ್ಲಿ ಆಡುತ್ತಿದೆ.

ರುಮೇನಿಯಾಗೆ ಸುಲಭ ಗೆಲುವು:

ರುಮೇನಿಯಾ ತಂಡವು ‘ಇ’ ಗುಂಪಿನ ಪಂದ್ಯದಲ್ಲಿ 3–0 ಗೋಲುಗಳಿಂದ ಉಕ್ರೇನ್‌ ತಂಡವನ್ನು ಸುಲಭವಾಗಿ ಮಣಿಸಿತು. ಈ ಮೂಲಕ 24 ವರ್ಷಗಳಲ್ಲಿ ಮೊದಲ ಬಾರಿಗೆ ಪ್ರಮುಖ ಅಂತರರಾಷ್ಟ್ರೀಯ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

‌ಉಕ್ರೇನ್‌ ತಂಡದ ಗೋಲ್‌ಕೀಪರ್ ಆಂಡ್ರಿ ಲುನಿನ್ ಎಸಗಿದ ತಪ್ಪುಗಳು ರುಮೇನಿಯಾ ತಂಡಕ್ಕೆ ವರದಾನವಾದವು. ನಿಕೋಲ್ ಸ್ಟಾನ್ಸಿಯು (29ನೇ ನಿಮಿಷ), ರಜ್ವಾನ್ ಮರಿನ್ (53ನೇ ನಿ) ಮತ್ತು ಡೆನಿಸ್ ಡ್ರಾಗಸ್ (57ನೇ ನಿ) ಅವರು ರುಮೇನಿಯಾ ಪರ ಚೆಂಡನ್ನು ಗುರಿ ಸೇರಿಸಿದರು. 

2022ರ ಫೆಬ್ರುವರಿಯಲ್ಲಿ ರಷ್ಯಾದ ಆಕ್ರಮಣದ ನಂತರ ಉಕ್ರೇನ್‌ ತಂಡವು ಪ್ರಮುಖ ಟೂರ್ನಿಯೊಂದರಲ್ಲಿ ರಾಷ್ಟ್ರಧ್ವಜದೊಂದಿಗೆ ಮೊದಲ ಬಾರಿ ಕಣಕ್ಕೆ ಇಳಿಯಿತು. ಎರಡು ವರ್ಷಗಳ ಹಿಂದೆ ವಿಶ್ವಕಪ್‌ಗೆ ಅರ್ಹತೆ ಪಡೆಯುವ ಅವಕಾಶವನ್ನು ಅದು ತಪ್ಪಿಸಿಕೊಂಡಿತ್ತು. ಮೂರು ವರ್ಷಗಳ ಹಿಂದೆ ಆ್ಯಂಡ್ರಿ ಶೆವ್ಚೆಂಕೊ ನೇತೃತ್ವದಲ್ಲಿ ಉಕ್ರೇನ್ ತಂಡವು ಯುರೋ ಕಪ್‌ನಲ್ಲಿ ಕ್ವಾರ್ಟರ್ ಫೈನಲ್ ತಲುಪಿತ್ತು.

ಇಂದಿನ ಪಂದ್ಯಗಳು

ಜಾರ್ಜಿಯಾ- ಟರ್ಕಿ (ರಾತ್ರಿ 9.30)

ಪೋರ್ಚುಗಲ್‌– ಝೆಕ್‌ ಗಣರಾಜ್ಯ (ರಾತ್ರಿ 12.30)

ನೇರಪ್ರಸಾರ: ಸೋನಿ ಸ್ಪೋರ್ಟ್ಸ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT