ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಗೆಲುವಿನ ಒತ್ತಡದಲ್ಲಿ ಬೆಂಗಳೂರು ಎಫ್‌ಸಿ

Last Updated 14 ಫೆಬ್ರುವರಿ 2021, 16:06 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್, ಗೋವಾ: ಏಳು–ಬೀಳುಗಳನ್ನು ಕಂಡು ಮುನ್ನುಗ್ಗುತ್ತಿರುವ ಬೆಂಗಳೂರು ಫುಟ್‌ಬಾಲ್ ಕ್ಲಬ್ (ಬಿಎಫ್‌ಸಿ) ತಂಡ ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯ ನಿರ್ಣಾಯಕ ಹಂತಕ್ಕೆ ತಲುಪಿದ್ದು ಸೋಮವಾರ ಮುಂಬೈ ಸಿಟಿ ಎಫ್‌ಸಿ ವಿರುದ್ಧ ನಡೆಯಲಿರುವ ಪಂದ್ಯ ಸೇರಿದಂತೆ ಲೀಗ್‌ ಹಂತದಲ್ಲಿ ಉಳಿದಿರುವ ಮೂರು ಪಂದ್ಯಗಳನ್ನು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.

‍ಪಾಯಿಂಟ್ ಪಟ್ಟಿಯ ಅಗ್ರ ಸ್ಥಾನದಲ್ಲಿರುವ ಮುಂಬೈ ಸಿಟಿ ಎಫ್‌ಸಿ ತಂಡ ಈಗಾಗಲೇ ಪ್ಲೇ ಆಫ್ ಹಂತ ತಲುಪಿದೆ. ಇತ್ತೀಚಿನ ಪಂದ್ಯಗಳಲ್ಲಿ ಅಮೂಲ್ಯ ಪಾಯಿಂಟ್‌ಗಳನ್ನು ಕಳೆದುಕೊಂಡಿರುವುದರಿಂದ ತಂಡ ಅಗ್ರಸ್ಥಾನ ಬಿಟ್ಟುಕೊಡುವ ಆತಂಕದಲ್ಲಿದೆ. ಬಿಎಫ್‌ಸಿ ವಿರುದ್ಧ ಗೆದ್ದರೆ ಆ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆ. ಹೀಗಾಗಿ ಈ ಪಂದ್ಯದಲ್ಲಿ ಜಯ ಗಳಿಸಲು ಶತಪ್ರಯತ್ನ ನಡೆಸಲಿದೆ.

ಹಿಂದಿನ ನಾಲ್ಕು ಪಂದ್ಯಗಳಲ್ಲಿ ಮುಂಬೈ ಕಳಪೆ ಆಟವಾಡಿದೆ. ಆ ನಾಲ್ಕು ಪಂದ್ಯಗಳ ಪೈಕಿ ಒಂದರಲ್ಲೂ ಕ್ಲೀನ್ ಶೀಟ್ ಸಾಧನೆ ಮಾಡದೇ ಇರುವ ತಂಡ ಏಳು ಗೋಲು ಬಿಟ್ಟುಕೊಟ್ಟಿದೆ. ಅದಕ್ಕಿಂತ ಹಿಂದಿನ 12 ಪಂದ್ಯಗಳಲ್ಲಿ ತಂಡ ಕೇವಲ ಏಳು ಗೋಲುಗಳನ್ನು ನೀಡಿತ್ತು.

ಅಮಾನತುಗೊಂಡಿರುವ ಹ್ಯೂಗೊ ಬೌಮೊಸ್ ಅನುಪಸ್ಥಿತಿಯಲ್ಲಿ ಮುಂಬೈ ಸೋಮವಾರ ಕಣಕ್ಕೆ ಇಳಿಯಲಿದೆ. ಒಂಬತ್ತು ಗೋಲು ಗಳಿಸಿರುವ ಫ್ರಾನ್ಸ್‌ನ ಈ ಆಟಗಾರ ತಂಡಕ್ಕಾಗಿ ಒಟ್ಟಾರೆ 38 ಅವಕಾಶಗಳನ್ನು ಸೃಷ್ಟಿಸಿದ್ದರು. ಹೀಗಾಗಿ ಅವರ ಅನುಪಸ್ಥಿತಿ ತಂಡವನ್ನು ಕಾಡಲಿದೆ. ಮುಂಬೈ ವಿರುದ್ಧ ಬೆಂಗಳೂರು ಎಫ್‌ಸಿಯ ಹಿಂದಿನ ದಾಖಲೆಗಳು ಉತ್ತಮವಾಗಿಲ್ಲ. ಈ ಹಿಂದೆ ಐದು ಬಾರಿ ಉಭಯ ತಂಡಗಳು ಮುಖಾಮುಖಿಯಾಗಿದ್ದು ಬಿಎಫ್‌ಸಿ ನಾಲ್ಕರಲ್ಲಿ ಸೋತಿದೆ. ಒಂದು ಪಂದ್ಯ ಡ್ರಾ ಆಗಿದೆ.

ಮೂರನೇ ಸ್ಥಾನಕ್ಕೇರಿದ ನಾರ್ತ್ ಈಸ್ಟ್

ಲೂಯಿಸ್ ಮಚಾದೊ (9, 24ನೇ ನಿಮಿಷ) ಮತ್ತು ದೇಶಾನ್ ಬ್ರೌನ್ (19ನೇ ನಿ) ಗಳಿಸಿದ ಗೋಲುಗಳ ನೆರವಿನಿಂದ ಒಡಿಶಾ ಎಫ್‌ಸಿ ವಿರುದ್ಧ 3-1 ಅಂತರದ ಜಯ ಗಳಿಸಿದ ನಾರ್ತ್‌ ಈಸ್ಟ್‌ ಯುನೈಟೆಡ್ ಪಾಯಿಂಟ್‌ ಪಟ್ಟಿಯ ಮೂರನೇ ಸ್ಥಾನಕ್ಕೇರಿ ಪ್ಲೇಆಫ್ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿತು.

ಒಡಿಶಾ ಪರ ಬ್ರಾಡಿನ್ ಇನ್ಮಾನ್ (45ನೇ ನಿ) ಗೋಲು ಗಳಿಸಿ ಸೋಲಿನ ಅಂತರ ಕಡಿಮೆ ಮಾಡಿದರು. ಈ ಜಯದೊಂದಿಗೆ ನಾರ್ತ್‌ ಈಸ್ಟ್‌ ತಂಡ ಹೈದರಾಬಾದ್ ಎಫ್‌ಸಿ ಹಾಗೂ ಎಫ್‌ಸಿ ಗೋವಾವನ್ನು ಕ್ರಮವಾಗಿ ನಾಲ್ಕು ಮತ್ತು ಐದನೇ ಸ್ಥಾನಕ್ಕೆ ತಳ್ಳಿತು.

ಮತ್ತೊಂದು ಪಂದ್ಯದಲ್ಲಿ ಎಟಿಕೆ ಮೋಹನ್ ಬಾಗನ್ ತಂಡ 1–0 ಅಂತರದಲ್ಲಿ ಜೆಮ್ಶೆಡ್‌ಪುರ ಎಫ್‌ಸಿಯನ್ನು ಮಣಿಸಿತು. ರಾಯ್ ಕೃಷ್ಣ 85ನೇ ನಿಮಿಷದಲ್ಲಿ ಗೋಲು ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT