ಸೋಮವಾರ, ಆಗಸ್ಟ್ 2, 2021
28 °C

ಆಲ್ವಸ್‌ಗೆ ಸೋಲುಣಿಸಿ ಪ್ರಶಸ್ತಿಯತ್ತ ಹೆಜ್ಜೆ ಇರಿಸಿದ ರಿಯಲ್ ಮ್ಯಾಡ್ರಿಡ್

ಎಪಿ Updated:

ಅಕ್ಷರ ಗಾತ್ರ : | |

Prajavani

ಬಾರ್ಸಿಲೋನ: ಬಲಿಷ್ಠ ಆಲ್ವಸ್ ತಂಡದ ಸವಾಲನ್ನು ಮೆಟ್ಟಿನಿಂತ ರಿಯಲ್ ಮ್ಯಾಡ್ರಿಡ್, ಶುಕ್ರವಾರ ರಾತ್ರಿ ನಡೆದ ಲಾ ಲಿಗಾ ಫುಟ್‌ಬಾಲ್ ಟೂರ್ನಿಯ ಪಂದ್ಯದಲ್ಲಿ ಏಕಪಕ್ಷೀಯ ಜಯ ಸಾಧಿಸಿತು. ಈ ಮೂಲಕ ಲಯೊನೆಲ್ ಮೆಸ್ಸಿ ಅವರ ಬಾರ್ಸಿಲೋನಾ ತಂಡವನ್ನು ಹಿಂದಿಕ್ಕಿ ಪ್ರಶಸ್ತಿ ಗಳಿಸುವತ್ತ ಹೆಜ್ಜೆ ಹಾಕಿತು.

ಪ್ರೇಕ್ಷಕರಿಲ್ಲದೆ ಆಲ್ಫ್ರೆಡೊ ಡಿ ಸ್ಟೆಫಾನೊ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕರೀಂ ಬೆನ್ಜೆಮಾ ಕಾಲ್ಜಳಕ ತೋರಿದರು. ಅವರ ಆಟದ ಬಲದಿಂದ ರಿಯಲ್ ಮ್ಯಾಡ್ರಿಡ್ 2–0 ಗೋಲುಗಳಿಂದ ಗೆಲುವು ಸಾಧಿಸಿತು. ಇದು ಪಾಯಿಂಟ್ ಪಟ್ಟಿಯಲ್ಲಿ ಬಾರ್ಸಿಲೋನಾಗಿಂತ ನಾಲ್ಕು ಪಾಯಿಂಟ್‌ಗಳ ಮುನ್ನಡೆ ಗಳಿಸಲು ತಂಡಕ್ಕೆ ನೆರವಾಯಿತು. ಟೂರ್ನಿಯಲ್ಲಿ ಇನ್ನು ಮೂರು ಸುತ್ತುಗಳ ಹಣಾಹಣಿ ಬಾಕಿ ಇದೆ.

11ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಕಿಕ್ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಬೆನ್ಜೆಮಾ 50ನೇ ನಿಮಿಷದಲ್ಲಿ ಮಾರ್ಕೊ ಅಸೆನ್ಸಿಯೊ ಗಳಿಸಿದ ಗೋಲಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಕೊರೊನಾ ಹಾವಳಿಯಿಂದಾಗಿ ಸ್ಥಗಿತತೊಂಡಿದ್ದ ಟೂರ್ನಿ ಪುನರಾರಂಭಗೊಂಡ ನಂತರ ತಂಡ ಗಳಿಸಿದ ಸತತ ಎಂಟನೇ ಜಯ ಇದು. ಗ್ರೆನೆಡಾ, ವಿಲಾರಿಯಲ್ ಮತ್ತು ಲೆಗನೀಸ್ ತಂಡಗಳ ಎದುರಿನ ಪಂದ್ಯಗಳು ಮ್ಯಾಡ್ರಿಡ್‌ಗೆ ಬಾಕಿ ಉಳಿದಿವೆ. ಇದೇ 19ರಂದು ಟೂರ್ನಿ ಮುಕ್ತಾಯಗೊಳ್ಳಲಿದೆ.

‘ಈ ಪಂದ್ಯದ ಫಲಿತಾಂಶ ಖುಷಿ ತಂದಿದೆ. ಇನ್ನೂ ಮೂರು ಪಂದ್ಯಗಳು ಬಾಕಿ ಇದ್ದು ಟೂರ್ನಿಯಲ್ಲಿ ಯಾರು ಅಗ್ರ ಸ್ಥಾನ ಗಳಿಸುತ್ತಾರೆ ಎಂಬ ಕುತೂಹಲ ಉಳಿದಿದೆ. ಅಂತಿಮ ದಿನದ ವರೆಗೆ ಯಾವುದನ್ನೂ ಹೇಳಲಾಗದು’ ಎಂದು ರಿಯಲ್ ಮ್ಯಾಡ್ರಿಡ್ ಕೋಚ್ ಜಿನೆದಿನ್ ಜಿಡಾನ್ ಅಭಿಪ್ರಾಯಪಟ್ಟರು. 

ರಕ್ಷಣಾ ವಿಭಾಗದಲ್ಲಿ ಹೊಸ ಪ್ರಯೋಗ

ಸರ್ಜಿಯೊ ರಾಮೋಸ್ ಮತ್ತು ಡ್ಯಾನಿ ಕರ್ವಾಜಲ್ ಅಮಾನತು ಶಿಕ್ಷೆಗೆ ಒಳಗಾಗಿರುವ ಕಾರಣ ಮತ್ತು ಮಾರ್ಸೆಲೊ–ನಚೊ ಫರ್ನಾಂಡಸ್ ಗಾಯಗೊಂಡಿರುವ ಕಾರಣ ಶುಕ್ರವಾರದ ಪಂದ್ಯದಲ್ಲಿ ಕೋಚ್‌ ರಕ್ಷಣಾ ವಿಭಾಗದಲ್ಲಿ ಹೊಸ ಪ್ರಯೋಗಗಳಿಗೆ ಕೈಹಾಕಬೇಕಾಗಿ ಬಂದಿತ್ತು.  

ಎಡಭಾಗದಲ್ಲಿ ಅನುಭವಿ ರಾಫೆಲ್ ವರಾನೆ ಅವರನ್ನು ಇಳಿಸಿದ ಕೋಚ್ ಬಲಭಾಗದ ಜವಾಬ್ದಾರಿಯನ್ನು ಎಡರ್ ಮಿಲಿಟಾವೊಗೆ ವಹಿಸಿದರು. ಅವರ ತಂತ್ರಗಳು ಫಲಿಸಿದವು. ಎದುರಾಳಿಗಳಿಗೆ ಒಂದು ಗೋಲು ಕೂಡ ಬಿಟ್ಟುಕೊಡದ ತಂಡ ಒಂಬತ್ತನೇ ಬಾರಿ ‘ಕ್ಲೀನ್‌ ಶೀಟ್’ ಗಳಿಸಿತು.

ಮೂರನೇ ನಿಮಿಷದಲ್ಲೇ ಎದುರಾಳಿ ತಂಡ ಆಕ್ರಮಣಕಾರಿ ಆಟವಾಡಿ ಮ್ಯಾಡ್ರಿಡ್ ವಲಯದಲ್ಲಿ ನಡುಕ ಹುಟ್ಟಿಸಿತು. ಆದರೆ ಅಮೋಘ ಅವಕಾಶವನ್ನು ಗೋಲಾಗಿ ಪರಿವರ್ತಿಸಲು ಸಾಧ್ಯವಾಗಲಿಲ್ಲ. ಎಡ್ಗರ್ ಮೆಂಡೆಜ್ ಡ್ರಿಬಲ್ ಮಾಡಿಕೊಂಡು ಬಂದ ಚೆಂಡನ್ನು ಕ್ರಾಸ್ ಮಾಡಿ ಜೊಸೆಲು ಸನ್ಮಾರ್ಟಿನ್ ಬಳಿಗೆ ಕಳುಹಿಸಿದರು. ಅವರು ಹೆಡ್ ಮಾಡಿದ ಚೆಂಡು ಕ್ರಾಸ್ ಬಾರ್‌ಗೆ ತಾಗಿ ಹೊರಚಿಮ್ಮಿತು. ವಾಪಸ್ ಬಂದ ಚೆಂಡನ್ನು ಬಲೆಗೆ ಸೇರಿಸಲು ಲೂಕಾಸ್ ಪೆರೆಜ್ ಶ್ರಮಿಸಿದರೂ ಕಸೆಮಿರೊ ಅವರ ಚಾಕಚಕ್ಯತೆಯಿಂದಾಗಿ ಮ್ಯಾಡ್ರಿಡ್ ಆತಂಕದಿಂದ ಪಾರಾಯಿತು. 

ವಿರಾಮದ ನಂತರ ಮ್ಯಾಡ್ರಿಡ್ ಶಕ್ತಿಶಾಲಿ ಆಕ್ರಮಣಕ್ಕೆ ಮುಂದಾಯಿತು. ರಾಡ್ರಿಗೋಸ್ ನೀಡಿದ ಪಾಸ್‌ನಲ್ಲಿ ಚೆಂಡನ್ನು ನಿಯಂತ್ರಿಸಿದ ಬೆನ್ಜೆಮಾ ಎದುರಾಳಿಗಳ ತಂತ್ರವನ್ನು ಮೆಟ್ಟಿನಿಂತು ಚೆಂಡನ್ನು ಗುರಿ ಮುಟ್ಟಿಸಿದರು. ಲೈನ್ ಅಂಪೈರ್ ಆಫ್‌ಸೈಡ್ ಎಂದು ತೀರ್ಪು ನೀಡಿದರೂ ಮರುಪರಿಶೀಲನೆಯಲ್ಲಿ ಮ್ಯಾಡ್ರಿಡ್ ಪರವಾಗಿ ತೀರ್ಪು ಬಂತು. 

ಸತತ ಐದು ಪಂದ್ಯಗಳನ್ನು ಸೋತಿದ್ದ ಆಲ್ವಸ್ ತಂಡ ಕೋಚ್ ಅಸಿಯರ್ ಗರಿಟಾನೊ ಅವರನ್ನು ವಜಾಗೊಳಿಸಿ ಮುಫಿಜ್‌ಗೆ ಅವರನ್ನು ನೇಮಕ ಮಾಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು