ದೋಹಾ: ಕತಾರ್‌ನಲ್ಲಿ ಭಾನುವಾರ ನಡೆಯಲಿರುವ ಫಿಫಾ ವಿಶ್ವಕಪ್ ಫೈನಲ್‌ನಲ್ಲಿ ತಮ್ಮ ನೇತೃತ್ವದ ಅರ್ಜೆಂಟಿನಾ ತಂಡ, ಫ್ರಾನ್ಸ್ ಅಥವಾ ಮೊರಕ್ಕೊವನ್ನು ಎದುರಿಸುವಾಗ ತಮ್ಮ ಕೊನೆಯ ವಿಶ್ವಕಪ್ ಪಂದ್ಯವನ್ನು ಆಡುವುದಾಗಿ ಖ್ಯಾತ ಫುಟ್‌ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಖಚಿತಪಡಿಸಿದ್ದಾರೆ.
ಮಂಗಳವಾರ ರಾತ್ರಿ ನಡೆದ ಫಿಫಾ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ 3-0 ಗೋಲುಗಳಿಂದ ಕ್ರೊವೇಷಿಯಾವನ್ನು ಮಣಿಸಿದ ಅರ್ಜೆಂಟಿನಾ ತಂಡವನ್ನು ಮೆಸ್ಸಿ ಮುನ್ನಡೆಸಿದರು. ವಾರಾಂತ್ಯದಲ್ಲಿ ಅವರು 1986 ರ ನಂತರ ದೇಶಕ್ಕೆ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ತರಲು ಪ್ರಯತ್ನಿಸಲಿದ್ದಾರೆ.
‘ಫೈನಲ್‌ನಲ್ಲಿ ನನ್ನ ಕೊನೆಯ ಪಂದ್ಯ ಆಡುವ ಮೂಲಕ ನನ್ನ ವಿಶ್ವಕಪ್ ಪಯಣವನ್ನು ಮುಗಿಸುತ್ತಿರುವುದು ಅತ್ಯಂತ ಸಂತೋಷವಾಗಿದೆ. ಈ ಸಾಧನೆ ನನಗೆ ಖುಷಿ ತಂದಿದೆ’ಎಂದು ಮೆಸ್ಸಿ ಅರ್ಜೆಂಟಿನಾದ ಮಾಧ್ಯಮ ಡಿಯಾರಿಯೊ ಡಿಪೋರ್ಟಿವೊ ಓಲೆಗೆ ತಿಳಿಸಿದರು.
ಹಲವು ವರ್ಷಗಳ ಬಳಿಕ ಮುಂದಿನ ವಿಶ್ವಕಪ್ ನಡೆಯುತ್ತದೆ. ಅಲ್ಲಿ ಇಂತಹ ಸಾಧನೆ ಮಾಡಲಾಗುತ್ತದೆ ಎಂದು ನನಗೆ ಅನ್ನಿಸುತ್ತಿಲ್ಲ. ಈ ರೀತಿ ವಿದಾಯ ಹೇಳುವುದು ಅತ್ಯುತ್ತಮ ಎನಿಸುತ್ತದೆ ಎಂದು ಮೆಸ್ಸಿ ಹೇಳಿದ್ಧಾರೆ.
‘ದಾಖಲೆಗಳನ್ನು ಮಾಡುವುದು ಓಕೆ. ಆದರೆ, ಒಂದು ತಂಡವಾಗಿ ಸಾಧಿಸುವುದು ಅತ್ಯಂತ ಪ್ರಮುಖ. ತಂಡದ ಎಲ್ಲರಿಗೂ ಅದೊಂದು ಸುಂದರವಾದ ವಿಷಯ. ಸತತ ಪರಿಶ್ರಮದ ಬಳಿಕ ನಾವು ದೊಡ್ಡ ಸಾಧನೆಗೆ ಇನ್ನೊಂದು ಹೆಜ್ಜೆ ದೂರದಲ್ಲಿದ್ದೇವೆ. ಅದಕ್ಕಾಗಿ ಎಲ್ಲ ಪ್ರಯತ್ನ ಮಾಡುತ್ತೇವೆ’ಎಂದು ಅವರು ಹೇಳಿದರು.