ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಎಸ್‌ಎಲ್‌: ಒಡಿಶಾ ವಿರುದ್ಧ ಕೇರಳಕ್ಕೆ ಗೆಲುವಿನ ನಿರೀಕ್ಷೆ

Last Updated 6 ಜನವರಿ 2021, 12:09 IST
ಅಕ್ಷರ ಗಾತ್ರ

ಬ್ಯಾಂಬೊಲಿಮ್, ಗೋವಾ: ಎಂಟು ಪಂದ್ಯಗಳಲ್ಲಿ ಏಕೈಕ ಗೆಲುವು ಕಂಡಿರುವ ಕೇರಳ ಬ್ಲಾಸ್ಟರ್ಸ್ ಮತ್ತು ಏಳನೇ ಆವೃತ್ತಿಯಲ್ಲಿ ಈ ವರೆಗೆ ಜಯವನ್ನೇ ಕಾಣಲು ಸಾಧ್ಯವಾಗದ ಒಡಿಶಾ ಎಫ್‌ಸಿ ತಂಡಗಳು ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಫುಟ್‌ಬಾಲ್ ಟೂರ್ನಿಯಲ್ಲಿ ಗುರುವಾರ ಮುಖಾಮುಖಿಯಾಗಲಿವೆ. ಪಂದ್ಯ ಇಲ್ಲಿನ ಜಿಎಂಸಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಮೂರು ಡ್ರಾ ಮತ್ತು ನಾಲ್ಕು ಸೋಲು ಕಂಡಿರುವ ಕೇರಳ ಬ್ಲಾಸ್ಟರ್ಸ್‌ ಈ ವರೆಗೆ ಗಳಿಸಿರುವುದು ಎಂಟು ಗೋಲು ಮಾತ್ರ. 13 ಗೋಲುಗಳನ್ನು ತಂಡ ಬಿಟ್ಟುಕೊಟ್ಟಿದೆ. ಆದ್ದರಿಂದ ಹೆಚ್ಚು ಗೋಲು ಗಳಿಸಿ ತಂಡವನ್ನು ಜಯದ ಹಾದಿಯಲ್ಲಿ ಮುನ್ನಡೆಸುವ ಬಗ್ಗೆ ಕೋಚ್ ಕಿಬು ವಿಕುನಾ ಚಿಂತಿಸತೊಡಗಿದ್ದಾರೆ. ಪಾಯಿಂಟ್ ಪಟ್ಟಿಯ ಕೊನೆಯ ಸ್ಥಾನದಲ್ಲಿರುವ ಒಡಿಶಾ ಈ ವರೆಗೆ ಎಲ್ಲ ಪಂದ್ಯಗಳಲ್ಲೂ ಗೋಲು ಬಿಟ್ಟುಕೊಟ್ಟಿದೆ. ಹೀಗಾಗಿ ಆ ತಂಡದ ವಿರುದ್ಧ ಗೆಲುವು ಸಾಧಿಸುವ ಭರವಸೆಯಲ್ಲಿದೆ ಬ್ಲಾಸ್ಟರ್ಸ್.

ಸೆಟ್‌ಪೀಸ್ ಹೊರತುಪಡಿಸಿ, ಓಪನ್‌ ಪ್ಲೇನಲ್ಲಿ ಮೂರು ಗೋಲು ಗಳಿಸಲಷ್ಟೇ ಬ್ಲಾಸ್ಟರ್ಸ್‌ಗೆ ಸಾಧ್ಯವಾಗಿದೆ. ಚೆಂಡನ್ನು ನಿಖರವಾಗಿ ಗುರಿಯತ್ತ ಒದೆಯುವುದರಲ್ಲೂ ಬ್ಲಾಸ್ಟರ್ಸ್ ಸತತ ವೈಫಲ್ಯ ಕಂಡಿದೆ. ಈ ವರೆಗೆ ತಂಡಕ್ಕಾಗಿ ಏಳು ಮಂದಿ ಗೋಲು ಗಳಿಸಿದ್ದಾರೆ. ಈ ಬೆಳವಣಿಗೆ ಒಂದರ್ಥದಲ್ಲಿ ತಂಡದಲ್ಲಿ ಭರವಸೆ ತುಂಬಿದ್ದರೂ ಫಾರ್ವರ್ಡ್ ವಿಭಾಗದವರು ಹಿನ್ನಡೆ ಅನುಭವಿಸಿದ್ದಾರೆ ಎಂಬುದನ್ನೂ ಸೂಚಿಸುತ್ತದೆ.

‘ನಮಗೆ ಎಲ್ಲ ಪಂದ್ಯಗಳಲ್ಲೂ ಅವಕಾಶಗಳನ್ನು ಸೃಷ್ಟಿಸಲು ಸಾಧ್ಯವಾಗಿದೆ. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ಆಗಲಿಲ್ಲ ಎಂಬುದು ಬೇಸರದ ವಿಷಯ. ಈ ದೌರ್ಬಲ್ಯದಿಂದ ಹೊರಬರಲು ಪ್ರತಿ ಪಂದ್ಯದಲ್ಲೂ ಪ್ರಯತ್ನಿಸುತ್ತಿರುತ್ತೇವೆ. ಒಡಿಶಾ ಅತ್ಯುತ್ತಮ ತಂಡ ಎಂಬುದರಲ್ಲಿ ಸಂದೇಹ ಇಲ್ಲ. ಹಿಂದಿನ ಪಂದ್ಯದಲ್ಲಿ ಆ ತಂಡ ಗೆಲುವಿನ ಸನಿಹ ಮುಗ್ಗರಿಸಿತ್ತು. ಆದ್ದರಿಂದ ಗುರುವಾರದ ಪಂದ್ಯದಲ್ಲಿ ಎಚ್ಚರಿಕೆಯ ಆಟವಾಡಲು ನಮ್ಮ ಆಟಗಾರರು ಮುಂದಾಗಿದ್ದಾರೆ’ ಎಂದು ವಿಕುನಾ ಹೇಳಿದರು.

ಒಡಿಶಾ ಆರು ಪಂದ್ಯಗಳನ್ನು ಸೋತಿದ್ದು ಆರು ಗೋಲುಗಳನ್ನು ಮಾತ್ರ ಬಾರಿಸಿದೆ. ಇದು, ಈ ಬಾರಿಯ ಟೂರ್ನಿಯಲ್ಲಿ ತಂಡವೊಂದು ಗಳಿಸಿರುವ ಕನಿಷ್ಠ ಗೋಲುಗಳು. 14 ಗೋಲುಗಳನ್ನು ಬಿಟ್ಟುಕೊಟ್ಟಿರುವ ತಂಡ ಹೆಚ್ಚು ಗೋಲು ನೀಡಿರುವ ತಂಡಗಳ ಸಾಲಿನಲ್ಲಿ ಜಂಟಿ ಕೊನೆಯ ಸ್ಥಾನದಲ್ಲಿದೆ. ಈಸ್ಟ್ ಬೆಂಗಾಲ್ ಕೂಡ 14 ಗೋಲುಗಳನ್ನು ನೀಡಿದೆ.

ಹಿಂದಿನ ಪಂದ್ಯಗಳ ಫಲಿತಾಂಶಕ್ಕೂ ತಂಡದ ನಿಜವಾದ ಸಾಮರ್ಥ್ಯಕ್ಕೂ ವ್ಯತ್ಯಾಸವಿದೆ. ಆದರೆ ಆರು ಪಂದ್ಯಗಳಲ್ಲಿ ಸೋತಿರುವುದಂತೂ ನಿಜ ಎಂದು ಹೇಳಿರುವ ಒಡಿಶಾ ಕೋಚ್ ಸ್ಟುವರ್ಟ್‌ ಬಾಕ್ಸಟರ್ ‘ಉತ್ತಮ ಆಟವಾಡಿದರೂ ಜಯ ಗಳಿಸಲು ಸಾಧ್ಯವಾಗುತ್ತಿಲ್ಲ ಎಂಬುದು ತಂಡದ ಸದ್ಯದ ಸಮಸ್ಯೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT